ಅಂತರ್ಜಾತಿ ದಂಪತಿ ಕೊಲೆ ಪ್ರಕರಣ; ವರದಿ ನೀಡದ ಸರ್ಕಾರದ ವಿರುದ್ಧ ಆಯೋಗ ಗರಂ, ಇಲಾಖೆಗೆ ಎಚ್ಚರಿಕೆ

ಬೆಂಗಳೂರು; ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಕುರಿತು ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿಲ್ಲ.

 

ಸಮಾಜ ಕಲ್ಯಾಣ ಇಲಾಖೆಯ ಈ ದಿವ್ಯ ನಿರ್ಲಕ್ಷ್ಯವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಮಾನವ ಹಕ್ಕುಗಳ ಕಾಯ್ದೆ 1993ರ ಸೆಕ್ಷನ್‌ 18(ಇ)ಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಯೋಗದ ರಿಜಿಸ್ಟ್ರಾರ್‍‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮಣಿವಣ್ಣನ್‌ ಅವರಿಗೆ ಎಚ್ಚರಿಕೆಯನ್ನೂ ನೀಡಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ರಿಜಿಸ್ಟ್ರಾರ್ ಅವರು 2024ರ ಡಿಸೆಂಬರ್ 6ರಂದೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಅಂತರ್ಜಾತಿ ವಿವಾಹವಾಗಿದ್ದ ರಮೇಶ್ ಮಾದರ್ ಮತ್ತು ಗಂಗಮ್ಮ ರಾಠೋಡ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ವರದಿ ಮತ್ತು ಶಿಫಾರಸ್ಸುಗಳನ್ನು ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿ ಮೇಲೆ ಕೈಗೊಂಡ ಕ್ರಮದ ಕುರಿತು ವರದಿಯನ್ನು ಬಯಸಿ ಪತ್ರ ಬರೆದಿತ್ತು. ಈ ಬಗ್ಗೆ 2019ರಿಂದಲೂ ಹಲವಾರು ಬಾರಿ ನೆನಪೋಲೆಗಳನ್ನು ಕಳಿಸಿತ್ತು.

 

ಆದರೆ ಈ ಪ್ರಕರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಸಮಾಜ ಕಲ್ಯಾಣ ಇಲಾಖೆಯು ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ 2024ರ ಡಿಸೆಂಬರ್‍‌ 31ರೊಳಗೆ ವರದಿಯನ್ನು ಆದ್ಯತೆ ಮೇಲೆ ಸಲ್ಲಿಸಬೇಕು ಎಂದು ಆಯೋಗವು ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಪ್ರಕರಣದ ವಿವರ

 

ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ನಿವಾಸಿ ರಮೇಶ್ ಮಾದರ್ (29) ಮತ್ತು ಗಂಗಮ್ಮ ರಾಠೋಡ್‌ (23) ಅಂತರ್ಜಾತಿ ವಿವಾಹವಾಗಿದ್ದರು. ಇದು ಇಬ್ಬರ ಕುಟುಂಬಸ್ಥರದಲ್ಲಿ ತೀವ್ರ ಅಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ದಂಪತಿಗಳಿಬ್ಬರು ಶಿವಮೊಗ್ಗದಲ್ಲಿ ಜೀವನ ಸಾಗಿಸಿದ್ದರು.

 

 

ಗ್ರಾಮದಲ್ಲಿದ್ದ ರಮೇಶ ಅವರ ಮನೆಗೆ ಗಂಗಮ್ಮ ಅವರ ಸೋದರರು ಏಕಾಏಕೀ ನುಗ್ಗಿ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದಿದ್ದರು. ಇವರಿಬ್ಬರಿಗೆ 3 ವರ್ಷದ ಅನಿಲ್‌ ಮತ್ತು 2 ತಿಂಗಳ ಮಗುವಿತ್ತು. ಈ ಘಟನೆ ಕುರಿತು ಪರಿಶೀಲನೆ ನಡೆಸಿದ್ದ ಅಂದಿನ ಎಸ್ಪಿ ಶ್ರೀನಾಥ ಜೋಶಿ, ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ವಿರುದ್ಧ (Cr. No: 116/2019 u/s 449, 302, 506 (2) R/w 34 I.P.C) ಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದರು. ಈ ಸಂಬಂಧ ಆಯೋಗವು ಪ್ರಕರಣವನ್ನು ದಾಖಲಿಸಿಕೊಂಡಿತ್ತು. 2019ರಿಂದಲೂ ಹಲವು ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಆದರೆ ಇದುವರೆಗೂ ಕ್ರಮವನ್ನು ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

 

 

ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದ ಆಯೋಗವು  ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗದಗ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮತ್ತು ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿತ್ತು. ಮಾನವೀಯ ಆಧಾರದ ಮೇಲೆ ಮಕ್ಕಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿ ಮತ್ತೊಂದು ಪತ್ರ ಬರೆದಿದ್ದರು.

 

 

ಮಕ್ಕಳ ಚಿಕ್ಕಪ್ಪಂದಿರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು. ಅಂಬೇಡ್ಕರ್ ಆವಾಜ್ ಯೋಜನೆಯಡಿಯಲ್ಲಿ ಮೃತರ ಪೋಷಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಅವರ ಜೀವನೋಪಾಯಕ್ಕಾಗಿ ಹಾಲಿನ ಡೈರಿಯನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದರು.

 

ಪೋಷಕರ ಹತ್ಯೆಯಿಂದಾಗಿ ಇಬ್ಬರು ಅನಾಥ ಮಕ್ಕಳ ಸ್ಥಿತಿ ಮತ್ತು ಸ್ಥಳದ ಬಗ್ಗೆ ವರದಿ ಮಾಡಲು ಮತ್ತು ಸ್ಥಳೀಯ ಪೊಲೀಸರಿಂದ ಅಂತಹ ಅಪರಾಧಗಳನ್ನು ತಡೆಯಬಹುದೇ ಮತ್ತು ಬದುಕುಳಿದ ಮಕ್ಕಳ ಮಾನವ ಹಕ್ಕುಗಳನ್ನು ರಕ್ಷಿಸಲಾಗಿದೆಯೇ ಮತ್ತು ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಲು ಆಯೋಗವು ನೋಟಿಸ್ ನೀಡಿತ್ತು.

 

 

ಅದರಲ್ಲಿ ಭವಿಷ್ಯದಲ್ಲಿ ಅನಾಥ ಮಕ್ಕಳ ಜೀವನಕ್ಕೆ ಯಾವುದೇ ಆರೈಕೆ ಅಥವಾ ರಕ್ಷಣೆ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಮಾಹಿತಿ ನೀಡಿದ್ದರು. ದಂಪತಿಗಳ ಹತ್ಯೆಯನ್ನು ತಡೆಯದಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಏಕೆ ಹೊಣೆಗಾರರನ್ನಾಗಿ ಮಾಡಬಾರದು ಎಂದು ಆಯೋಗವು ಜಿಲ್ಲಾ ಎಸ್‌ಪಿಗೆ ನೋಟೀಸ್‌ ಕೂಡ ಜಾರಿಗೊಳಿಸಿತ್ತು. ಹಾಗೂ ಅನಾಥ ಮಕ್ಕಳ ಜೀವನ ಮತ್ತು ಶಿಕ್ಷಣದ ಹಕ್ಕನ್ನು ರಕ್ಷಿಸಲು ಪೊಲೀಸ್‌ ಇಲಾಖೆಯಲ್ಲಿ ಅಸ್ತಿತ್ವದಲ್ಲಿ ಯೋಜನೆಗಳಿವೆಯೇ ಎಂಬ ಮಾಹಿತಿಯನ್ನೂ ಬಯಸಿತ್ತು ಎಂದು ಗೊತ್ತಾಗಿದೆ.

 

ಆಯೋಗವು ಹಲವಾರು ಬಾರಿ ಈ ಸಂಬಂಧ ವರದಿ ನೀಡಲು ಕೋರಿದ್ದರೂ ಇಲಾಖೆಯು ವರದಿಯನ್ನು ನೀಡಿರಲಿಲ್ಲ. ಹೀಗಾಗಿ ಆಯೋಗವು ಈ ಪ್ರಕರಣದ ಕುರಿತು ವಿಚಾರಣೆಯನ್ನು 2025ರ ಫೆ.5ಕ್ಕೆ ಮುಂದೂಡಿದೆ.

 

 

ಅಲ್ಲದೇ 2024ರ ಫೆ.8ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

 

 

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ನೋಟೀಸ್‌ ಜಾರಿಗೊಳಿಸಿತ್ತು.

 

 

ಕೊಲೆಯಾದ ದಂಪತಿಗಳ ಚಿಕ್ಕ ಮಕ್ಕಳಿಗೆ ಅಗತ್ಯ ನೆರವು, ಪರಿಹಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಅನ್ವಯವಾಗುವ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ನೀಡಲಾಗುವುದು ಮತ್ತು ಅವರ ಶಿಕ್ಷಣದ ಹಕ್ಕನ್ನು ಕಾನೂನಿನ ಪ್ರಕಾರ ರಕ್ಷಿಸಲಾಗುತ್ತದೆ ಮತ್ತು ಜಾರಿಗೊಳಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಆಯೋಗಕ್ಕೆ ವಿವರ ನೀಡಿದ್ದರು. ಈ ಸಂಬಂಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts