ಮಡ್‌ಪೈಪ್‌ ಕೆಫೆ ಅಗ್ನಿ ದುರಂತ; ಇಬ್ಬರು ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ, ಹೊರಬಿದ್ದ ಆದೇಶ

ಬೆಂಗಳೂರು; ಇಲ್ಲಿನ ಕೋರಮಂಗಲದ ಫೋರಂಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಸಂಭವಿಸಿದ್ದ ಭಾರೀ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ವೈದ್ಯಾಧಿಕಾರಿ ಡಾ ಕೋಮಲ ಕೆ ಅರ್‍‌  ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕ  ಮಲ್ಲಿಕಾರ್ಜುನ ಎಂಬುವರನ್ನು ಜಂಟಿ ಇಲಾಖೆ ವಿಚಾರಣೆಗೆ ಗುರಿಪಡಿಸಿದೆ.

 

ಮಡ್‌ಪೈಪ್‌ ಕೆಫೆ ಎಂಬ ಹೆಸರಿನ ಹುಕ್ಕಾ ಬಾರ್‍‌ ಬಿಬಿಎಂಪಿಯಿಂದ ಪರವಾನಿಗೆಯನ್ನೇ ಪಡೆಯದೇ ನಡೆಯುತ್ತಿತ್ತು. ಇದನ್ನು ಸ್ಥಗಿತಗೊಳಿಬೇಕಿದ್ದ ಬಿಟಿಎಂ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ ಕೆ ಆರ್‍‌ ಕೋಮಲ ಕರ್ತವ್ಯಲೋಪ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೋಮಲ ಅವರನ್ನು ಜಂಟಿ ಇಲಾಖೆಗೆ ಗುರಿಪಡಿಸಲು ಸರ್ಕಾರವು ಇದೀಗ ಆದೇಶ ಹೊರಡಿಸಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಅಗಿರುವ ಡಿ ಕೆ ಶಿವಕುಮಾರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

2025ರ ಜನವರಿ 10ರಂದು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಇಲಾಖೆ ವಿಚಾರಣೆಗೆ ಗುರಿ ಮಾಡುವ ಮುನ್ನ ಬಿಬಿಎಂಪಿಯು ಕೋಮಲ ಅವರಿಗೆ ನೋಟೀಸ್‌ ಜಾರಿಗೊಳಿಸಿತ್ತು. ಇದಕ್ಕೆ ಕೋಮಲ ಅವರು ಲಿಖಿತ ಸಮಜಾಯಿಷಿ ನೀಡಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕುವ ಬಗ್ಗೆ ಯಾವುದೇ ಸ್ಪಷ್ಟ ಪೂರಕ ದಾಖಲೆಗಳನ್ನು ಕೋಮಲ ಅವರು ಒದಗಿಸಿರಲಿಲ್ಲ. ಅಲ್ಲದೇ ಅವರು ನೀಡಿದ್ದ ದಾಖಲೆಗಳು ಒಪ್ಪಿಗೆಗೆ ಅರ್ಹವಾಗಿರಲಿಲ್ಲ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಈ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಕಂಡುಹಿಡಿಯುವ ಸಲುವಾಗಿ ವಿವರವಾದ ಜಂಟಿ ಇಲಾಖೆ ವಿಚಾರಣೆ ನಡೆಸಲು ತೀರ್ಮಾನಿಸಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶ ಟಿ ಎಂ ನಾಗರಾಜ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ,’ ಎಂದು ಆದೇಶದಲ್ಲಿ ಹೇಳಲಾಗಿದೆ.

 

 

ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿನ ಮಡ್‌ ಪೈಪ್‌ ಕೆಫೆ ಎಂಬ ಹೆಸರಿನ ಹುಕ್ಕಾ ಬಾರ್‍‌ ಉದ್ದಿಮೆ ನಡೆಸುತ್ತಿತ್ತು. ಈ ಕಟ್ಟಡದಲ್ಲಿ 2023ರ ಅಕ್ಟೋಬರ್ 18ರಂದು ಬೆಳಿಗ್ಗೆ 11.45ಕ್ಕೆ ಅಗ್ನಿ ಅವಘಢ ನಡೆದಿತ್ತು. ಈ ಸಂದರ್ಭದಲ್ಲಿ ಉದ್ಯೋಗಿಯೊಬ್ಬರು ಕಟ್ಟಡದಿಂದ ಹೊರಬರಲಾರದೇ 4ನೇ ಮಹಡಿಯಿಂದಲೇ ಪ್ರಾಣ ರಕ್ಷಣೆಗಾಗಿ ಜಿಗಿದಿದ್ದರು.

 

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಉದ್ಯೋಗಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಉದ್ದಿಮೆಯು ಪಾಲಿಕೆಯಿಂದ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ನಡೆಯುತ್ತಿತ್ತು. ಆದರೂ ಬಿಟಿಎಂ ವಲಯದ ಆರೋಗ್ಯ ಅಧಿಕಾರಿ ಕೋಮಲ ಅವರು ಇದನ್ನು ಸ್ಥಗಿತಗೊಳಿಸಿರಲಿಲ್ಲ.

 

ಈ ಸಂಬಂಧ ಬಿಬಿಎಂಪಿಯು ಕೋಮಲ ಅವರ ವಿರುದ್ಧ ಎರಡು ಕರಡು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಿತ್ತು.ಇದಕ್ಕೆ ಕೋಮಲ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕ ಮಲ್ಲಿಕಾರ್ಜುನ್‌  ಅವರು ಲಿಖಿತ ಸಮಜಾಯಿಷಿ ನೀಡಿದ್ದರು. ಆದರೆ ಬಿಬಿಎಂಪಿಯು ಇದನ್ನು ಒಪ್ಪಿರಲಿಲ್ಲ.

 

‘ಕೋಮಲ ಮತ್ತು ಮಲ್ಲಿಕಾರ್ಜುನ್‌ ಅವರು ನೀಡಿದ್ದ ಸಮಜಾಯಿಷಿಯಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕುವ ಬಗ್ಗೆ ಯಾವುದೇ ಸ್ಪಷ್ಟವಾದ ಪೂರಕ ದಾಖಲೆಗಳನ್ನು ಒದಗಿಸಿರುವುದಿಲ್ಲ. ಹಾಗೂ ಒಪ್ಪಿಗೆ ಅರ್ಹವಾಗಿರುವುದಿಲ್ಲವಾದ್ದರಿಂದ ಸಮಗ್ರ ಪರಾಮರ್ಶೆಯ ಆಧಾರದಲ್ಲಿ ಪ್ರಕರಣದ ಬಗ್ಗೆ ಸತ್ಯಾಸತ್ಯತೆಯನ್ನು ಕಂಡುಹಿಡಿಯುವ ಸಲುವಾಗಿ ವಿವರವಾದ ಇಲಾಖೆ ವಿಚಾರಣೆಯನ್ನು ಜಂಟಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಕಟ್ಟಡದ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ ಕೆಲ ಹೊತ್ತಲ್ಲೇ ಭಾರೀ ಪ್ರಮಾಣದ ಸದ್ದಿನೊಂದಿಗೆ ಅಡುಗೆ ಅನಿಲದ 4 ಸಿಲಿಂಡರ್‌ಗಳು ಸ್ಫೋಟಗೊಂಡಿದ್ದವು. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರು.

 

ಹುಕ್ಕಾ ಬಾರ್ ಸಂಜೆ ನಂತರ ಶುರುವಾಗಿರುವುದರಿಂದ ಸಿಬ್ಬಂದಿಗಳು ಮಾತ್ರ ಇದ್ದು ಯಾವುದೇ ಗ್ರಾಹಕರು ಇರಲಿಲ್ಲ. ಜೊತೆಗೆ ಅದೇ ಕಟ್ಟದ ಮಹಡಿಯಲ್ಲಿದ್ದ ಕಲ್ಟ್ ಫಿಟ್ ಖಾಲಿ ಇತ್ತು. ಶೋರೂಂ ಹಾಗೂ ಅಕಾಡೆಮಿಯಲ್ಲಿದ್ದ ಸಿಬ್ಬಂದಿಗಳು ಹೊರಗೆ ಓಡಿ ಬಂದಿದ್ದಾರೆ. ಜನರಿಗೆ ಹೆಚ್ಚು ಅಪಾಯ ಆಗಿರಲಿಲ್ಲ. ಈ ಪ್ರಕರಣದಲ್ಲಿ ಮಡ್ ಕೆಫೆ ಮಾಲೀಕ ಕರಣ್ ಜೈನ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು.

SUPPORT THE FILE

Latest News

Related Posts