ಆಯುಕ್ತರ ಹೆಸರಿನಲ್ಲಿದ್ದ ಚೆಕ್‌ಗಳಿಗೆ ಫೋರ್ಜರಿ ಸಹಿ; ಕೋಟಿ ರು ಅಕ್ರಮ ಜಮೆ, ಪ್ರಿಯಾಂಕ್‌ ತವರಲ್ಲೇ ವಂಚನೆ

ಬೆಂಗಳೂರು; ಕಲ್ಬುರ್ಗಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿರುವ ಚೆಕ್‌ಗಳನ್ನು ಲಪಟಾಯಿಸಿದ್ದ ವಾಜೀದ್‌ ಇಮ್ರಾನ್‌ ಮತ್ತಿತರರ  ವಂಚಕರ ತಂಡವೊಂದು ಆಯುಕ್ತರ ಸಹಿಯನ್ನೇ ಫೋರ್ಜರಿ ಮಾಡಿತ್ತು. ಈ ಮೂಲಕ  1 ಕೋಟಿ ರು. ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿತ್ತು.

 

ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಲ್ಲಿದ್ದ ಕೋಟ್ಯಂತರ ರುಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆಯ ಮಹಾನಗರಪಾಲಿಕೆಯಲ್ಲಿನ ಒಂದು ಕೋಟಿ ರು., ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಆಗಿರುವ ಪ್ರಕರಣವು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ಕೊಟ್ಟಂತಾಗಿದೆ.

 

ವಿಶೇಷವೆಂದರೇ ಈ ಪ್ರಕರಣವು 2024ರ ಜುಲೈ – ನವೆಂಬರ್‌ ಮಧ್ಯೆ ನಡೆದಿತ್ತು. ಆದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಆದರೀಗ ಪಾಲಿಕೆಯ ಪ್ರಭಾರ ಮುಖ್ಯ ಲೆಕ್ಕಾಧಿಕಾರಿಯವರು ತಡವಾಗಿ ದೂರು ದಾಖಲಿಸಿದ್ದಾರೆ. ಈ ದೂರನ್ನಾಧರಿಸಿ 2024ರ ಡಿಸೆಂಬರ್‌ 31ರಂದು ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

 

ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಪಾಲಿಕೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮತ್ತೊಂದು ವಿಶೇಷವೆಂದರೇ ಪಾಲಿಕೆಯ ಮೊಹರು ಮತ್ತು ಆಯುಕ್ತರ ಸಹಿಯನ್ನೇ ನಕಲು ಮಾಡಿದ್ದ ಆರೋಪಿಗಳು ಚೆನ್ನೈನಲ್ಲಿ ಹೊಂದಿದ್ದ ಬ್ಯಾಂಕ್‌ ಶಾಖೆಯಲ್ಲಿ ಚೆಕ್‌ ಸಲ್ಲಿಸಿ ಹಣವನ್ನು ಡ್ರಾ ಮಾಡಿಕೊಂಡಿದ್ದರು. ಇಷ್ಟೆಲ್ಲಾ ವಹಿವಾಟು ನಡೆದಿದ್ದರೂ ಸಹ ಅಧಿಕಾರಿಗಳು ಮುಗುಮ್ಮಾಗಿದ್ದರು.

 

ಅದೇ ರೀತಿ ಭಾರತಿ ಏರ್‌ಟೆಲ್‌ ಲಿಮಿಟೆಡ್‌ನ ಹೆಸರಿನಲ್ಲಿದ್ದ ಡಿಡಿ ಬಳಸಿ 2024ರ ಜುಲೈ 4, ಅಕ್ಟೊಬರ್‌ 29, ನವೆಂಬರ್‌ 12, 21ರಂದು ಒಟ್ಟಾರೆ 1,86,15,663 ರು.ಗಳು ಆಯುಕ್ತರ ಖಾತೆಗೆ ಜಮಾ ಆಗಿತ್ತು. ಈ ವಿಚಾರವು ಪಾಲಿಕೆಯ ಅಧಿಕಾರಿ ವರ್ಗದಲ್ಲಿ ಗುಸುಗುಸು  ಚರ್ಚೆಯಾಗುತ್ತಿದ್ದಂತೆ ಈ ಕುರಿತು ದೂರು ಸಲ್ಲಿಕೆಯಾಗಿದೆ.

 

 

 

 

 

ಈ ದೂರನ್ನಾಧರಿಸಿ ಕಲ್ಬುರ್ಗಿ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ   2024ರ ಡಿಸೆಂಬರ್‌ 31ರಂದು ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

 

 

 

ಪ್ರಕರಣದ ವಿವರ

 

ಕಲ್ಬುರ್ಗಿ ನಗರದ ಸೂಪರ್‌ ಮಾರ್ಕೆಟ್‌ನ ಇಂಡಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರ ಹೆಸರಿನಲ್ಲಿ ಖಾತೆ ಇದೆ. ಈ ಖಾತೆಯ ಹಣದ ವ್ಯವಹಾರ ಮಾಡುವ ಸಲುವಾಗಿ ಒಟ್ಟು 20 ಚೆಕ್‌ಗಳನ್ನು ಬ್ಯಾಂಕ್‌ ನೀಡಿತ್ತು. ಈ ಚೆಕ್‌ಗಳನ್ನು ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧ ಬಾಬ್ತುಗಳಿಗಾಗಿ ಬಳಸಲಾಗುತ್ತಿತ್ತು.

 

ಪಾಲಿಕೆಯ ಲೆಕ್ಕ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಾಯಿನಾಥ್ ಅವರ ಹೆಸರಿನಲ್ಲಿ ಈ ಚೆಕ್‌ ಬುಕ್‌ಗಳಿದ್ದವು. ಇವರು 2021ರ ಆಗಸ್ಟ್‌ನಿಂದ 2023ರ ಜೂನ್‌ 21ರವರೆಗೆ ಸಾಯಿನಾಥ್‌ ಅವರು ಕರ್ತವ್ಯ ನಿರ್ವಹಿಸಿದ್ದರು. ನಂತರ ಈ ಶಾಖೆಯ ಪ್ರಭಾರವನ್ನು ಮಲ್ಲಿಕಾರ್ಜುನ್ ಎಂಬುವರು 2023ರ ಜೂನ್‌ 1ರಿಂದ ನಿರ್ವಹಿಸುತ್ತಿದ್ದರು.

 

ಈ ಅವಧಿಯಲ್ಲಿ ಎರಡು ಚೆಕ್‌ಗಳ ಮೂಲಕ (ಚೆಕ್‌ ನಂ 351904 ರಲ್ಲಿ( 46,32,157 ರು ಮತ್ತು (ಚೆಕ್‌ ನಂ 351905ರಲ್ಲಿ) 49,47,511 ರು. ಗಳನ್ನು ಡ್ರಾ ಮಾಡಲು ಇಂಡಿಯನ್‌ ಬ್ಯಾಂಕ್‌ಗೆ ಸಲ್ಲಿಕೆಯಾಗಿತ್ತು. ಈ ಕುರಿತು ಬ್ಯಾಂಕ್‌ನ ವ್ಯವಸ್ಥಾಪಕರು ಪಾಲಿಕೆಯ ಆಡಿಟರ್‌/ ಪ್ರಥಮ ದರ್ಜೆ ಸಹಾಯಕರಾದ ಮಹಾದೇವ ರಾಠೋಡ್‌ ಅವರಿಗೆ ಮಾಹಿತಿ ನೀಡಿದ್ದರು. ನಂತರ ಪ್ರಭಾರಿ ಮುಖ್ಯ ಲೆಕ್ಕಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಈ ಚೆಕ್‌ಗಳನ್ನು ತಡೆ ಹಿಡಿಯಲು ಸೂಚಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

 

 

ನಂತರ ಈ ಚೆಕ್‌ಗಳ ಬಗ್ಗೆ ಲೆಕ್ಕ ಖಾತೆಯ ಶಾಖೆ ನಿರ್ವಹಣೆ ಮಾಡುವ ಮಲ್ಲಿಕಾರ್ಜುನ ಅವರನ್ನು ವಿಚಾರಣೆ ಮಾಡಲಾಗಿತ್ತು. ಈ ಹೊತ್ತಿಗಾಗಲೇ ವಾಜೀದ್‌ ಇಮ್ರಾನ್‌ ಹೆಸರಿನ ಖಾಸಗಿ ವ್ಯಕ್ತಿ ಇಂಡಿಯನ್‌ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಗೆ (ಸಂಖ್ಯೆ 6326378009) (ಚೆಕ್‌ ಸಂಖ್ಯೆ; 351903) 36,56,640 ರು.ಗಳು ಜಮಾ ಆಗಿತ್ತು.

 

ಅಲ್ಲದೇ ಅಬ್ದುಲ್‌ ಸೈಯದ್‌ ರಿಜ್ವಾನ್‌ ಎಂಬ ಮತ್ತೊಬ್ಬ ಖಾಸಗಿ ವ್ಯಕ್ತಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಗೆ 46,32,157 ರು (ಚೆಕ್‌ ನಂ 351904) 46,32,157 ರು., ಇನ್ನೊಬ್ಬ ಖಾಸಗಿ ವ್ಯಕ್ತಿ ಮಿರ್ಜಾ ಆರೀಫ್‌ ಬೇಗ್‌ ಅವರು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಗೆ (ಚೆಕ್‌ ನಂ 351905) 49,47,511 ರು ಜಮಾ ಆಗಿತ್ತು.

 

ಈ ಪೈಕಿ ಒಂದು ಚೆಕ್‌ (351903) ಕಲ್ಬುರ್ಗಿ ಶಾಖೆಯಲ್ಲಿ ಸಲ್ಲಿಕೆಯಾಗಿದ್ದರೇ ಇನ್ನೆರಡು ಚೆಕ್‌ಗಳು (351904, 351905) ಚೆನ್ನೈನಲ್ಲಿರುವ ಶಾಖೆಯಲ್ಲಿ ಸಲ್ಲಿಕೆಯಾಗಿತ್ತು. ಈ ಎಲ್ಲಾ ವಹಿವಾಟುಗಳು 2024ರ ಸೆ.13, ನವೆಂಬರ್‌ 30, ಡಿಸೆಂಬರ್‌ 2ರಂದು ನಡೆದಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

 

‘ಈ ಆರೋಪಿಗಳು ಮಹಾನಗರಪಾಲಿಕೆ ಆಯುಕ್ತರ ಹೆಸರಿನಲ್ಲಿ ಇಂಡಿಯನ್‌ ಬ್ಯಾಂಕ್‌ (ಖಾತೆ ಸಂಖ್ಯೆ 749448292)ನ ಚೆಕ್‌ಗಳನ್ನು ಯಾವುದೋ ರೂಪದಲ್ಲಿ ತೆಗೆದುಕೊಂಡು ಚೆಕ್‌ಗಳ ಮೇಲೆ ಆಯುಕ್ತರ ಖೊಟ್ಟಿ ರುಜು ಮಾಡಿ ನಂತರ ಮಹಾನಗರಪಾಲಿಕೆ ಮೊಹರು ಹಾಕಿ ಹಣ ಡ್ರಾ ಮಾಡಲಾಗಿದೆ. ಅದರಲ್ಲಿ ಚೆಕ್‌ ನಂ 351903ರಲ್ಲಿ 36,56,640 ರು ಗಳನ್ನು ಡ್ರಾ ಮಾಡಿಕೊಂಡಿದ್ದ ವ್ಯಕ್ತಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದ,’ ಎಂದು ದೂರುದಾರರಾದ ಪ್ರಭಾರ ಮುಖ್ಯ ಲೆಕ್ಕಾಧಿಕಾರಿಯವರು ದೂರಿದ್ದರು. ಈ ಅಂಶವನ್ನು ಎಫ್‌ಐಆರ್‌ನಲ್ಲಿಯೂ ಉಲ್ಲೇಖಿಸಲಾಗಿದೆ.

 

ಅಲ್ಲದೇ ಚೆಕ್‌ ಸಂಖ್ಯೆ 351904 ಬಳಸಿಕೊಂಡು 46,32,157 ರು. ಮತ್ತು351905ರ ಚೆಕ್‌ನ್ನು ಉಪಯೋಗಿಸಿ ಡ್ರಾ ಮಾಡಿಕೊಂಡಿದ್ದ 49,47,511 ರು. ಸೇರಿದಂತೆ ಒಟ್ಟಾರೆ 95,79,668 ರು.ಗಳನ್ನು ಆಯುಕ್ತರ ಖಾತೆಗೆ ಮರು ಜಮಾ ಮಾಡಿಕೊಳ್ಳಲಾಗಿತ್ತು.

SUPPORT THE FILE

Latest News

Related Posts