ಜೀವ ಬೆದರಿಕೆ ಆರೋಪ; ಪ್ರಿಯಾಂಕ ಖರ್ಗೆ ಅವರ ಮತ್ತೊಬ್ಬ ಆಪ್ತನ ವಿರುದ್ಧವೂ ಎಫ್‌ಐಆರ್

ಬೆಂಗಳೂರು; ಮಾರಕಾಸ್ತ್ರದಿಂದ ಹಲ್ಲೆ ಮತ್ತು ಜೀವ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಎನ್ನಲಾಗಿರುವ ರಾಜೀವ್‌ ಜ್ಯಾನೆ ಸೇರಿದಂತೆ ಮೂವರ ವಿರುದ್ಧ ಕಲ್ಬುರ್ಗಿ ಸ್ಟೇಷನ್‌ ಬಜಾರ್‍‌ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿದೆ.

 

ಗುತ್ತಿಗೆದಾರ ಸಚಿನ್ ಪಾಂಚಾಳ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಎಂದು ಹೇಳಲಾಗಿದ್ದ ರಾಜು ಕಪನೂರು ಎಂಬುವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿತ್ತು. ಇದೀಗ ಅವರ ಮತ್ತೊಬ್ಬ ಆಪ್ತ ಎಂದು ಹೇಳಲಾಗಿರುವ ರಾಜೀವ್‌ ಜ್ಯಾನೆ ವಿರುದ್ಧ ದಾಖಲಾಗಿರುವ ಎಫ್‌ಐಆರ್‍‌ ಮುನ್ನೆಲೆಗೆ ಬಂದಿದೆ.

 

ಗುತ್ತಿಗೆದಾರ ಎಂದು ಹೇಳಲಾಗಿರುವ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿಗೆ, ರಾಜೀವ್‌ ಜ್ಯಾನೆ ವಿರುದ್ಧ ದಾಖಲಾಗಿರುವ ಎಫ್‌ಐಆರ್‍‌ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

 

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 126 (2), 3(5), 351(2) 352, 49 ಅಡಿಯಲ್ಲಿ ಮೊಕದ್ದಮೆ ದಾಖಲಿಸಿದೆ. ಎಫ್‌ಐಆರ್‍‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಈ ಪ್ರಕರಣದಲ್ಲಿ ದೂರುದಾರನಾದ ಕಲ್ಬುರ್ಗಿಯ ಸಿದ್ರಾಮಯ್ಯ ಹಿರೇಮಠ ಎಂಬುವರು ಸ್ಟೇಷನ್‌ ಬಜಾರ್‍‌ ಪೊಲೀಸ್‌ ಠಾಣೆ ಮತ್ತು ಕಲ್ಬುರ್ಗಿ ದಕ್ಷಿಣ ವಿಭಾಗದ ಪೊಲೀಸ್‌ ಸಹಾಯಕ ಆಯುಕ್ತರಿಗೆ ವಿಡಿಯೋ ದಾಖಲಾತಿ ಸಮೇತ ಮೂರು ಬಾರಿ ದೂರು ನೀಡಿದ್ದರು. ಆದರೆ ಇವರ ವಿರುದ್ಧ ಎಫ್‌ಐಆರ್‍‌ ದಾಖಲಾಗಿರಲಿಲ್ಲ.

 

ಹೀಗಾಗಿ ಸಿದ್ರಾಮಯ್ಯ ಹಿರೇಮಠ್‌ ಅವರು ಹೈಕೋರ್ಟ್‌ನ ಕಲ್ಬುರ್ಗಿ ಪೀಠದಲ್ಲಿ ರಿಟ್‌ ಆಫ್‌ ಮ್ಯಾಂಡ್‌ಮಸ್‌ ದಾಖಲಿಸಿದ್ದರು.

 

 

ಇದೀಗ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸ್ಟೇಷನ್ ಬಜಾರ್‍‌ ಪೊಲೀಸ್‌ ಠಾಣೆಯಲ್ಲಿ ರಾಜೀವ್‌ ಜ್ಯಾನೆ ಅವರು ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‍‌ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

 

ಎಫ್‌ಐಆರ್‍‌ನಲ್ಲೇನಿದೆ?

 

ಹಳೇ ಜೇವರ್ಗಿ ರಸ್ತೆಯ ಮಹಿಳಾ ಪದವಿ ಕಾಲೇಜು ಎದುರುಗಡೆ ರಸ್ತೆಯಲ್ಲಿ ಸಿದ್ರಾಮಯ್ಯ ಹಿರೇಮಠ್‌ ಎಂಬುವರು 2024ರ ನವೆಂಬರ್‍‌ 15ರಂದು ಹೋಗುತ್ತಿರುವಾಗ ಅನಾಮಧೇಯ ವ್ಯಕ್ತಿಗಳು ಬೈಕ್‌ ಮೇಲೆ ಬಂದು ಕಾರಿನ ಗ್ಲಾಸ್‌ ಒಡೆದು ಹಾಕಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

 

 

‘ಕಾರಿನ ಬಾಗಿಲು ಮತ್ತು ಗಾಜು ತೆರೆದಿದ್ದರೆ ನನ್ನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡುವ ಉದ್ದೇಶದಿಂದ ಅವರು ಬಂದಿದ್ದಾರೆ ಎಂದು ತಿಳಿಯಿತು. ಇವರು ಪೂರ್ವ ತಯಾರಿ ನಡೆಸಿಕೊಂಡು ಬಂದಿದ್ದರು. ನನ್ನ ಮೇಲೆ ಅಟ್ಯಾಕ್‌ ಮಾಡಲು ನಾನು ಕಾರು ತೆಗೆದುಕೊಂಡು ಬರುವುದನ್ನು ನೋಡುತ್ತಿದ್ದರು. ಕಾರಿನ ಕಿಟಕಿ, ಬಾಗಿಲು ತೆಗೆಯದೇ ಇದ್ದಾಗ ನೋಡುತ್ತೇನೆ ಎಂದು ಎರಡು ವ್ಯಕ್ತಿಗಳು ಮುಂದೆ ಬನ್ನಿ ಎಂದು ಕರೆದರು. ಬೈಕ್‌ ಮೇಲೆ ಬಂದ ಅವರು ನನಗೆ ಖಲಾಸ ಕರತಾ ಹೂ ಎಂದು ಹೇಳಿ ಹೋಗಿದ್ದಾರೆ,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

‘ಇವರಿಗೆ ನನ್ನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಬಂದಿದ್ದರು ಎಂಬುದು ಅವರು ಮಾಡಿದ ಕೃತ್ಯದಿಂದ ತಿಳಿಯುತ್ತದೆ. ಇವರು ನನಗೆ ಪರಿಚಯ ಸಹ ಇರುವುದಿಲ್ಲ. ನನ್ನ ಹತ್ಯೆಗೆ ಇವರನ್ನು ಕಳಿಸಿ ಪ್ರಚೋದನೆ ನೀಡಿದ ರಾಜೀವ್ ಜಾನೆ ಮತ್ತು ಪಬ್ಲಿಕ್‌ ಟಿವಿ ವರದಿಗಾರ ಪ್ರವೀಣ್ ರೆಡ್ಡಿ, ಸಂಜಯ ಪಾಟೀಲ್ ಅವರನ್ನು ಬೈಕ್‌ ಮೆಲೆ ಕಳಿಸಿದ್ದರು. ಇದು ನನ್ನ ಕೊಲೆಗೆ ಮಾಡಿರುವ ಸಂಚು. ಆದ್ದರಿಂದ ನನಗೆ ಜೀವ ಬೆದರಿಕೆ ಇದೆ. ಸಾಕಷ್ಟು ಬಾರಿ ರಾಜೀವ್‌ ಜಾನೆ ಮತ್ತು ಪ್ರವೀಣ್ ರೆಡ್ಡಿ ನನ್ನನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದರು,’ ಎಂದೂ ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಹಲ್ಲೆ ಮಾಡಲು ಬಂದಿದ್ದ ಸಂಜಯ್ ಪಾಟೀಲ್ ಎಂಬಾತನ ಮೆಲೆ 11 ಕ್ರಿಮಿನಲ್ ಪ್ರಕರಣ ಪ್ರಕರಣಗಳು ಬ್ರಹ್ಮಪೂರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ. ( ಸಿಸಿ ನಂ 17111/2022, , 17099/2022/ 15174/2022, 15173/2022, 15151/2022, 15035/2022, 15032/2022, 15031/2022, 14998/2022, 11644/2022) ಇಂತಹ ಭಯಾನಕ ಕೃತ್ಯಗಳನ್ನು ಎಸಗಿರುವ ಕೃತ್ಯಗಳನ್ನು ಎಸಗಿರುವ ವ್ಯಕ್ತಿಗಳನ್ನು ನನ್ನ ಮೇಲೆ ಬಿಟ್ಟು ಕೊಲೆಗೆ ಯತ್ನ ಮಾಡಿದ ಇವರ ಹಿಂದಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಸಿದ್ರಾಮಯ್ಯ ಹಿರೇಮಠ್‌ ಎಂಬುವರು ಕೋರಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

 

ರಾಜೀವ್ ಜಾನೆ, ಪ್ರವೀಣ ರೆಡ್ಡಿ, ಹಾಗೂ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದ ಸಂಜಯ ಪಾಟೀಲ್‌ ಅವರ ಮೊಬೈಲ್, ಸಿಡಿಆರ್‍‌, ಪರಿಶೀಲನೆಗೆ ಒಳಪಡಿಸಬೇಕು.

 

 

ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ನನ್ನಜೀವಕ್ಕೆ ಏನಾದರೂ ಹಾನಿಯಾದರೆ ಇವರುಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ವಿವರಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts