ಪರಿಶಿಷ್ಟ ಉಪ ಯೋಜನೆ; ಸಾಮಾನ್ಯರ ಕಾಲೋನಿಗಳಲ್ಲೇ ಬಹುಕೋಟಿ ವೆಚ್ಚ, ಮಾರ್ಗಸೂಚಿ ಉಲ್ಲಂಘನೆ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಖರ್ಚು ಮಾಡಲಾಗುತ್ತಿದೆ. ಪರಿಶಿಷ್ಟರು ವಾಸ ಮಾಡದೇ ಇರುವ ಮತ್ತು ಜನ ವಸತಿ ಕಡಿಮೆ ಇರುವ ಮತ್ತು ಸಾಮಾನ್ಯ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಲೋನಿಗಳಿಗೆ ಕೋಟ್ಯಂತರ ರು ವೆಚ್ಚದಲ್ಲಿ ಕಾಮಗಾರಿ ನಡೆಸಿರುವುದು ಇದೀಗ ಬಹಿರಂಗವಾಗಿದೆ.

 

ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2024ರ ಅಕ್ಟೋಬರ್‍‌ 25ರಂದು ನಡೆದಿದ್ದ ಎಸ್‌ಸಿಎಸ್‌ಪಿ , ಟಿಎಸ್‌ಪಿ ನೋಡಲ್‌ ಏಜೆನ್ಸಿ ಸಭೆಯ ವೇಳೆಯಲ್ಲಿ ಉಪ ಯೋಜನೆಗಳ ಅನುದಾನವು ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.

 

ಬಹುತೇಕ ಇಲಾಖೆಗಳಲ್ಲಿಯೂ ಅನುದಾನ ದುರುಪಯೋಗವಾಗಿದ್ದರೂ ಸಹ ಇದುವರೆಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ. ಬದಲಿಗೆ ಇಲಾಖೆ ವಿಚಾರಣೆ ಮತ್ತು ತನಿಖಾ ತಂಡ ರಚಿಸುವುದರಲ್ಲೇ ಕಾಲಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಈ ಸಭೆಯ ಸಂಪೂರ್ಣ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಮೈಸೂರು ಜಿಲ್ಲೆಯ ಬೆಲವತ್ತ ಗ್ರಾಮದಲ್ಲಿ 15ನೇ ಹಣಕಾಸು ಆಯೋಗದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ದುರುಪಯೋಗ ಆಗಿದೆ. ಹಿಂದಿನ ನೋಡಲ್‌ ಏಜೆನ್ಸಿ ಸಭೆಗಳ ನಿರ್ಣಯದಂತೆ ಇಲಾಖೆ ವಿಚಾರಣೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಿದ್ದರೂ ಸಹ ಇನ್ನೂ ವರದಿ ಸಲ್ಲಿಕೆಯಾಗಿಲ್ಲ ಎಂದು ಸಭೆ ನಡವಳಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಮೈಸೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ 2024ರ ಅಕ್ಟೋಬರ್‍‌ 1ರಂದು ತನಿಖಾ ತಂಡ ರಚಿಸಲು ಸೂಚಿಸಿದೆ.

 

 

ಹಾಸನ ಜಿಲ್ಲೆ ಅರಸೀಕೆರೆ ಗಂಡಸಿ ಹೋಬಳಿ ಬಾಗಿವಾಳು ಗ್ರಾಮದಲ್ಲಿ ಕೆಆರ್‍‌ಐಡಿಎಲ್‌ನಿಂದ ಅನುಷ್ಠಾನವಾದ ಡಾ ಬಿ ಆರ್‍‌ ಅಂಬೇಡ್ಕರ್‍‌ ಭವನದ ಕಾಮಗಾರಿ ಕಳಪೆಯಾಗಿದೆ. ಭವನವನ್ನು ಪೂರ್ಣಗೊಳಿಸದೇ ಕಾಮಗಾರಿ ಹಣ ದುರುಪಯೋಗವಾಗಿದೆ. ಇದಕ್ಕೆ ಸಂಬಂಧಿಸಿದ ಹೊಣೆಗಾರಿಕೆ ಇದ್ದ ಅಧಿಕಾರಿಗಳು ನಿವೃತ್ತಿಯಾಗಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಾನೂನು ಸಲಹೆ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿಂದಿನ ನೋಡಲ್‌ ಏಜೆನ್ಸಿ ಸಭೆಯಲ್ಲಿಯೇ ತೀರ್ಮಾನವಾಗಿತ್ತು. ಆದರೆ ಇದುವರೆಗೂ ವರದಿ ಬಂದಿಲ್ಲ ಎಂದು ನಡವಳಿಯಲ್ಲಿ ವಿವರಿಸಲಾಗಿದೆ.

 

ಈ ಬಗ್ಗೆ ಅಧಿಕಾರಿಗಳು ‘ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಕೆಲವು ಭಾಗಗಳಲ್ಲಿ ಸಂಪೂರ್ಣ ದುರಸ್ತಿ ಮತ್ತು ಪುನರ್‍‌ ನಿರ್ಮಾಣ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಇಲಾಖೆಯು ಹಸ್ತಾಂತರ ಮಾಡಿಕೊಂಡಿರುವುದಿಲ್ಲ,’ ಎಂದು ಆರ್‍‌ಡಿಪಿಆರ್‍‌ ಇಲಾಖೆ ಅಧಿಕಾರಿಗಳು ಹೇಳಿರುವುದು ಗೊತ್ತಾಗಿದೆ.

 

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಮಾವಿನಬಾವಿ ಕೆರೆದಂಡೆಯ ಮುಬೀನ್‌ ವಕೀಲ್‌ ಸಾಬ್‌ ಅವರ ಹೊಲದವರೆಗೆ ಅಂದಾಜು ವೆಚ್ಚ 50.00 ಲಕ್ಷದಲ್ಲಿ ರಸ್ತೆ ಕಾಮಗಾರಿಯನ್ನು ಕೆಆರ್‍‌ಐಡಿಎಲ್‌ ಮಾಡಿದೆ. ಆದರೆ ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನವಸತಿಯೇ ಇಲ್ಲ ಎಂದು ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕರು ತನಿಖೆ ಮಾಡಿ ವರದಿ ನೀಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಸೂಚಿಸಿದೆ. ಆದರೆ ಇದುವರೆಗೂ ತನಿಖಾ ವರದಿ ಬಂದಿಲ್ಲ.

 

2018-19ನೇ ಸಾಲಿನ ಎತ್ತಿನ ಹೊಳೆ ಯೋಜನೆಯ ಮಧುಗಿರಿ ವಿಭಾಗ ವ್ಯಾಪ್ತಿಯ ಟಿಎಸ್‌ಪಿ ಅನುದಾನವನ್ನು ಕೋಲಾರ ತಾಲೂಕು ಅರಾಭಿಕಕೊತ್ತನೂರು ಕೆರೆಗೆ ಹೋಗುವ ಕಾಲುವೆಗೆ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಸಾಮಾನ್ಯ ಜನರ ಜಮೀನಿನಲ್ಲಿ ಅನುಷ್ಠಾನ ಮಾಡಲಾಗಿದೆ.

 

 

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ 23 ಲಕ್ಷ ರು. ವೆಚ್ಚದಲ್ಲಿ 10 ಕಾಮಗಾರಿಗಳನ್ನು ಎಸ್‌ ಸಿ ಎಸ್‌ ಟಿ ಜನರು ಇಲ್ಲದೇ ಇರುವ ಕಡೆ ಅನುಷ್ಠಾನ ಮಾಡಲಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಎಸ್‌ ಸಿ ಎಸ್‌ ಪಿ ಟಿ ಎಸ್‌ಪಿ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆಯೂ ಇಲಾಖೆ ವಿಚಾರಣೆ ನಡೆಸಬೇಕಿತ್ತು. ಆದರೆ ವರದಿ ಸಲ್ಲಿಕೆಯಾಗಿಲ್ಲ ಎಂದು ಗೊತ್ತಾಗಿದೆ.

 

 

ಗ್ರಾಮೀಣ ರಸ್ತೆಗಳು ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ (5054-03-337-0-75) ರ ಆಬ್ಜೆಟಿವ್‌ ಕೋಡ್‌ 423 (ಟಿಎಸ್‌ಪಿ) 2022-23ನೇ ಸಾಲಿನ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಜಾನುಕೊಂಡ ಗ್ರಾಮ ಪಂಚಾಯ್ತಿಯ ಸೊಲ್ಲಾಪುರ ಗ್ರಾಮದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ಉಡುಸಲಮ್ಮ ಖಾಸಗಿ ದೇವಸ್ಥಾನದ ಹತ್ತಿರ ಇರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ನಿರ್ವಹಿಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿಲ್ಲ.

 

 

ಬಾಗಲಕೋಟೆ ಜಿಲ್ಲೆ ಕುಂಚನೂರು ಗ್ರಾಮದಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲಿ ಎಸ್‌ ಸಿ ಎಸ್‌ ಪಿ, ಟಿ ಎಸ್‌ ಪಿ ಅನುದಾನ ದುರ್ಬಳಕೆ ಯಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಡಿಸಿಆರ್‍‌ಇಯಿಂದ ತನಿಖೆ ನಡೆಸಿ ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲು 2024ರ ಆಗಸ್ಟ್‌ 29ರಂದು ಆರ್‍‌ಡಿಪಿರ್‍‌ನ ಇಂಜಿನಿಯರಿಂಗ್‌ ವಿಭಾಗದ ಮುಖ್ಯ ಇಂಜಿನಿಯರ್‍‌ಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.

 

ಬೆಳಗಾವಿಯ ಖಾನಾಪುರ ತಾಲೂಕು ವ್ಯಾಪ್ತಿಯಲ್ಲಿ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಹಿರೇಮುನಹಳ್ಳಿ, ಚಿಕ್ಕಮುನಹಳ್ಳಿ ಮತ್ತು ಕರುವಿನಕೊಪ್ಪ ಗ್ರಾಮಗಳಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿರಲಿಲ್ಲ. ಈ ಕುರಿತು ಡಿಸಿಆರ್‍‌ಯಿಂದ ತನಿಖೆ ನಡೆದಿದೆ. ವರದಿ ಸಲ್ಲಿಸಲು 2024ರ ಮೇ 9ರಂದು ಪತ್ರ ಬರೆದಿದೆ.

 

2021-22ನೇ ಸಾಲಿನಲ್ಲಿಯೂ ಅನುದಾನ ದುರ್ಬಳಕೆ ಆಗಿದೆ. ಸುಮಾರು 20-30 ಲಕ್ಷ ರು. ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಲ್ಲ. ಅನ್ಯ ಉದ್ದೇಶಕ್ಕೆ ಬಳಸಿ ಅನುದಾನ ದುರ್ಬಳಕೆ ಆಗಿದೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ.

 

2021-22 ಮತ್ತು 2022-23ನೇ ಸಾಲಿನವರೆಗೆ ಸಿರವಾರ ತಾಲೂಕಿನಲ್ಲಿ ಪ ಜಾತಿ ಮತ್ತು ಪ ಪಂಗಡದ ಎಸ್‌ ಸಿ ಎಸ್‌ ಸಿ ಪಿ ಮತ್ತು ಟಿ ಎಸ್‌ ಪಿ ಅನುದಾನ ಬಳಕೆ ಮಾಡದೇ ದುರುಪಯೋಗವಾಗಿದೆ. ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಕರ್ತವ್ಯಲೋಪ ಎಸಗಿರುವುದು ಗೊತ್ತಾಗಿದೆ.

 

ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಹಲವು ದೂರುಗಳಿವೆ.

 

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯತ್‌ನಲ್ಲಿ ನಗರೋತ್ಥಾನ ಯೋಜನೆಯ ಎಸ್‌ ಸಿ ಎಸ್‌ ಪಿ ಟಿ ಎಸ್‌ ಪಿ ಅನುದಾನ ದುರುಪಯೋಗವಾಗಿದೆ. ರಾಯಚೂರು ಜಿಲ್ಲೆಯಲ್ಲಿಯೂ ಇದೇ ಯೋಜನೆಯಡಿಯಲ್ಲಿ ಅನುದಾನ ದುರ್ಬಳಕೆ ಆಗಿದೆ. ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿ ನಗರದ ವಾರ್ಡ್‌ ನಂ 196, 194, 184ರಲ್ಲಿ ಹಾಗೂ 198, 130, 72ರಲ್ಲಿ ಎಸ್‌ ಸಿ ಎಸ್‌ ಟಿ ಜನರು ಇಲ್ಲದೇ ಇರುವ ಕಡೆ ಕಾಮಗಾರಿ ಅನುಷ್ಠಾನವಾಗಿರುವುದು ತಿಳಿದು ಬಂದಿದೆ.

 

ಹಾಗೆಯೇ ಲೋಕೋಪಯೋಗಿ ಇಲಾಖೆಯಲ್ಲಿಯೂ ಇದೇ ಕಥೆ. ಬಾಗಲಕೋಟೆ ತಾಲೂಕು ಹಳೆ ಕದಾಂಪುರ ಗ್ರಾಮದಲ್ಲಿ ಅನುಷ್ಠಾನವಾಗಿರುವ ಕಾಮಗಾರಿಯೂ ಕಳಪೆ ಆಗಿದೆ. ಕಲ್ಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಬೆಳಮಗಿ ಗ್ರಾಮ, ಹಾಸನ ಜಿಲ್ಲೆಯಹ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಮತ್ತು ಇತರೆ ಗ್ರಾಮಗಳಲ್ಲಿಯೂ ಈ ಎರಡೂ ಉಪ ಯೋಜನೆಗಳ ಅನುದಾನ ದುರುಪಯೋಗವಾಗಿದೆ.

 

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಮಣಿಚೆಂಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಾಂಕ್ರಿಟ್‌ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ ನಿರ್ವಹಿಸದೇ ಹಣ ಸೆಳೆಯಲಾಗಿದೆ. ರಾಯಚೂರು ನಗರದಲ್ಲಿ 2020-21ನೇ ಸಾಲಿನಲ್ಲಿ ಕೆಕೆಆರ್‍‌ಡಿಬಿ ಮೈಕ್ರೋ ಎಸ್‌ ಸಿ ಪಿ ಯೋಜನೆಯಡಿಯಲ್ಲಿ ಆರ್‍‌ಟಿಒ ವೃತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಇಲ್ಲಿ ಎಸ್‌ ಸಿ ಎಸ್‌ ಟಿ ಜನರು ಇಲ್ಲ. ಅವರು ಇಲ್ಲದೇ ಇರುವ ಕಡೆ ಸ್ಥಳಗಳಲ್ಲಿ ಕಾಮಗಾರಿ ಅನುಷ್ಠಾನ ಮಾಡಿರುವುದು ಗೊತ್ತಾಗಿದೆ.
ಭಾರೀ ನೀರಾವರಿ ಇಲಾಖೆಯಲ್ಲಿಯೂ ಅಕ್ರಮಗಳು ನಡೆದಿವೆ.

 

ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಆಚೇನಹಳ್ಳಿ ಗ್ರಾಮದ ಎಸ್‌ ಸಿ ಗೆ ಸೇರಿದ ಪುಟ್ಟಮ್ಮ ಅವರ ಜಮೀನಿಗೆ ನೆರವಾಗುವಂತೆ ಚೆಕ್‌ ಡ್ಯಾಂ ನಿರ್ಮಾಣ ಮಾಡಿಲ್ಲ. ಬದಲಿಗೆ ಸಾಮಾನ್ಯ ವರ್ಗಕ್ಕೆ ಸೇರಿರುವ ಮಹದೇವಪ್ಪ ಅವರ ಜಮೀನಿನ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಈ ಕಾಮಗಾರಿಯೂ ಕಳಪೆಯಾಗಿದೆ. ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ತಪಾಸಣೆ ನಡೆಸಬೇಕಿದೆ. ಅನುದಾನ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ.

 

ಎಸ್‌ಸಿಎಸ್‌ಪಿ ಮತ್ತು ಟಿ ಎಸ್‌ ಪಿ ಅನುದಾನದಿಂದ ಕರ್ನಾಟಕ ನೀರಾವರಿ ನಿಗಮದಿಂದ ಶಿವಮೊಗ್ಗ ನಗರದ ವಾರ್ಡ್‌ 34ರಲ್ಲಿ ಖಾಸಗಿ ಬಡಾವಣೆಗೆ ರಸ್ತೆ ನಿರ್ಮಾಣ ಮತ್ತು ಚರಂಡಿ ಕಾಮಗಾರಿಗೆ 1.50 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ.

 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ, ನುಗ್ಗೇಹಳ್ಳಿ ಗ್ರಾಮಗಳಲ್ಲಿಯೂ ಅನುದಾನ ದುರುಪಯೋಗವಾಗಿದೆ. ಹಾಗೆಯೆ ಕರ್ನಾಟಕ ನೀರಾವರಿ ನಿಗಮದಿಂದ 2021-22ನೇ ಸಾಲಿನ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ನಾಗರಾಳಿ ಗ್ರಾಮದಲ್ಲಿ ಟಿಎಸ್‌ಪಿ ಅಡಿ ಶೆ.50ಕ್ಕಿಂತ ಕಡಿಮೆ ಎಸ್ಟಿ ಜನರು ವಾಸವಾಗಿರುವ ಸ್ಥಳದಲ್ಲಿ 12.50 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಮಂಜೂರಾಗಿದೆ. ಆದರೆ ಕಾಮಗಾರಿ ಅನುಷ್ಠಾನಗೊಂಡಿಲ್ಲದಿರುವುದು ಗೊತ್ತಾಗಿದೆ.

 

 

2017-18ನೇ ಸಾಲಿನಲ್ಲಿ ಕೃಷ್ಣ ಭಾಗ್ಯ ಜಲ ನಿಗಮದಿಂದ ಮುಳವಾಡ ಏತನೀರಾವರಿ ವಿಬಾಗದಿಂದ ಬಸವನಬಾಗೇವಾಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ 08 ರೈತರಿಲ್ಲಿ ಇದುವರೆಗೆ 07 ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲಾಗಿದೆ.

 

01 ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆದಿರುವುದಿಲ್ಲ. ಬಾಕಿ ಉಳಿದಿರುವ ಕಾಮಗಾರಿಗಳಾದ ಸಬ್‌ ಮರ್ಸಿಬಲ್‌ ಪಂಪ್‌ ಮತ್ತು ವಿದ್ಯುದ್ದೀಕರಣ ಕಾಮಘಾರಿಯನ್ನು ಹೊಸದಾಗಿ ಟೆಂಡರ್‍‌ ಕರೆಯಲು ಸೂಚಿಸಲಾಗಿದೆ. ಲಭ್ಯವಿರುವ 45.56 ಲಕ್ಷಗಳೊಂದಿಗೆ ಹೆಚ್ಚುವರಿಯಾಗಿ 15.54 ಲಕ್ಷ ಅಗತ್ಯವಿದೆ. ಈ ಮೊತ್ತವನ್ನು ಹಿಂದನ ಸಾಲುಗಳ ಕಾಮಗಾರಿಗಳಲ್ಲಿ ಉಳಿಕೆಯಾಗಿರುವ ಅನುದಾನದಲ್ಲಿ ಭರಿಸಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇಕ್ರಮ ಕೈಗೊಂಡಿಲ್ಲ.

 

 

ಶಿವಮೊಗ್ಗ ಜಿಲ್ಲೆಯಲ್ಲಿ ಕಿಯೋನಿಕ್ಸ್ಸ್ ಮೂಲಕ ಹೈಮಾಸ್ಕ್‌ ದೀಪಗಳನ್ನು ಪ ಜಾತಿ ಕಾಲೋನಿಗಳಲ್ಲಿ ಅಳವಡಿಸಿಲು ಕಾರ್ಯಾದೇಶವಿತ್ತು. ಆದರೆ ಸಾಮಾನ್ಯ ಜನರು ವಾಸಿಸುವ 11 ಕಾಲೋನಿಗಳಲ್ಲಿ ಅಳವಡಿಸಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts