ಬೆಂಗಳೂರು; ವಕ್ಫ್‌ಗೆ ಸೇರಿರುವ ಜಮೀನಿನಲ್ಲಿ ಏಷ್ಯನ್ ಮಾಲ್ ನಿರ್ಮಾಣ ಮಾಡಿರುವ ಪ್ರಕರಣದಲ್ಲಿ ಭೂ ನ್ಯಾಯಾಧಿಕರಣದ ಆದೇಶಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಪ್ರಶ್ನಿಸಿರಲಿಲ್ಲ ಎಂಬ ಸಂಗತಿಯನ್ನು ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರ ನೇತೃತ್ವದ ತನಿಖಾ ತಂಡವು ವರದಿಯಲ್ಲಿ ಬಹಿರಂಗಗೊಳಿಸಿದೆ.
2016ರಲ್ಲಿಯೇ ಉಪ ಲೋಕಾಯುಕ್ತರು ಸಲ್ಲಿಸಿದ್ದ ಈ ತನಿಖಾ ವರದಿಯನ್ನು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸರ್ಕಾರದ ದಾಖಲೆಯನ್ನಾಗಿ ಮಾಡಿರಲಿಲ್ಲ. ಈ ತನಿಖಾ ವರದಿಯನ್ನು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ವಕ್ಫ್ ಆಸ್ತಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಏಷ್ಯನ್ ಮಾಲ್ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ ಅವರ ಹೆಸರನ್ನು ಉಪ ಲೋಕಾಯುಕ್ತರ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ ಇದೇ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿಯೂ ಇಕ್ಬಾಲ್ ಅಹಮದ್ ಸರಡಗಿ ಹೆಸರನ್ನೂ ಉಲ್ಲೇಖಿಸಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಒಳಸಂಚು ನಡೆದಿದೆ ಎಂದು ವಿವರಿಸಿತ್ತು. ಇದೇ ಪ್ರಕರಣವನ್ನು ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ವಿಸ್ತೃತವಾಗಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.
ವರದಿಯಲ್ಲೇನಿದೆ?
ಕಲ್ಬುರ್ಗಿಯ ಬ್ರಹ್ಮಾಪುರದ ಸರ್ವೆ ನಂಬರ್ 33ರಲ್ಲಿನ ವಕ್ಫ್ ಜಮೀನಿಗೆ ಸಂಬಂಧಿಸಿದಂತೆ ಭೂ ಸುಧಾರಣೆಯ ವಿಶೇಷ ತಹಶೀಲ್ದಾರ್ ಅವರು ಅನುಭೋಗದಾರರ ಪರವಾಗಿ ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ರ ಕಲಂ 55 (1) ಅಡಿಯಲ್ಲಿ ಹಿಡುವಳಿದಾರರ ನೋಂದಣಿ ಪ್ರಮಾಣಪತ್ರಗಳನ್ನು ನೀಡಿದ್ದರು.
ಈ ಪೈಕಿ ಸಿದ್ದಪ್ಪ ಎಂಬುವರ ಕಾನೂನು ವಾರಸುದಾರರು ಎಂದು ಹೇಳಲಾಗಿದ್ದ ಕಾನೂನು ವಾರಸುದಾರರು 31 ಗುಂಟೆ ಅಳತೆಯ ಸರ್ವೆ ನಂಬರ್ 33/4 ರಲ್ಲಿನ ಆಸ್ತಿಯನ್ನು ಮಾಜಿ ಶಾಸಕರಾಗಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಅವರಿಗೆ ಮಾರಾಟ ಮಾಡಿದ್ದರು. ಅಲ್ಲದೇ ಇದೇ ಸರ್ವೇ ನಂಬರ್ ನಲ್ಲಿನ 33 ಗುಂಟೆ ಜಮೀನನ್ನು ನಾಗಪ್ಪ ದಾದಪ್ಪಗೋಳ್ ಅವರ ಕಾನೂನು ವಾರಸುದಾರರು ಇಕ್ಬಾಲ್ ಅಹಮ್ಮದ್ ಸರಡಗಿ ಅವರಿಗೆ ನೋಂದಾಯಿತ ಮಾರಾಟ ಪತ್ರದ ಅಡಿಯಲ್ಲಿ ಮಾರಾಟ ಮಾಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇಕ್ಬಾಲ್ ಅಹಮದ್ ಸರಡಗಿ ಅವರು ಈ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು. ಮತ್ತು ಇದೇ ಜಮೀನನ್ನು ಕಲ್ಬುರ್ಗಿಯಲ್ಲಿರುವ ಅದೇ ಅಲ್-ಬದರ್ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್,ಗೆ ಉಡುಗೊರೆಯಾಗಿ ನೀಡಿದ್ದರು.
ನಂತರ ಇದೇ ಅಲ್-ಬದರ್ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್, ಭೂ ಪರಿವರ್ತಿತ ಭೂಮಿಯನ್ನು ಸರ್ವೆ ಸಂಖ್ಯೆ 33/4 ರಲ್ಲಿ 31 ಗುಂಟೆ ಮತ್ತು ಸರ್ವೆ ಸಂಖ್ಯೆ 33/5 ರಲ್ಲಿ 33 ಗುಂಟೆ ವಿಸ್ತೀರ್ಣದ ಜಮೀನುಗಳನ್ನು ಏಷ್ಯನ್ ಬಿಲ್ಡರ್ಸ್ ಅಂಡ್ ಕನ್ಸ್‌ಲ್ಟೆಂಟ್‌ಗೆ ಮಾರಾಟ ಮಾಡಿತ್ತು. ಇದರ ತರುವಾಯ, ಈ ಬಿಲ್ಡರ್‌ಗಳು ಈ ಆಸ್ತಿಯಲ್ಲಿ ಮಾಲ್ ಅನ್ನು ನಿರ್ಮಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಿದೆ.
ಇದಾದ ನಂತರ ಕಲ್ಬುರ್ಗಿಯ ಅಂದಿನ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು 2010ರ ಜನವರಿ 4ರಂದೇ ಸುತ್ತೋಲೆ ಹೊರಡಿಸಿದ್ದರು. ಇದರ ಪ್ರಕಾರ ವಕ್ಫ್ ಆಸ್ತಿಗಳನ್ನು ಕಂದಾಯ ದಾಖಲೆಗಳಾದ ಆರ್‍ಟಿಸಿ ಸೇರಿದಂತೆ ಇನ್ನಿತರೆ ದಾಖಲೆಗಳಲ್ಲಿ ನವೀಕರಿಸಬೇಕಿತ್ತು. ಈ ಆದೇಶವನ್ನು ಆರಿಫ್ ಆಲಿ ಮತ್ತು ಏಷ್ಯನ್ ಬಿಲ್ಡರ್ಸ್ ಸಮೂಹವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮೂಲಕ ಪ್ರಶ್ನಿಸಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಬಾಧಿತರಿಗೆ ಅಹವಾಲು ಹೇಳಿಕೊಳ್ಳಳು ಅವಕಾಶ ನೀಡಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿತ್ತು. ನಂತರ ಕಲ್ಬುರ್ಗಿಯ ತಹಶೀಲ್ದಾರ್ ಅವರು ಇದು ಮೂಲತಃ ಸಿವಿಲ್ ದಾವೆ ಆಗಿರುವ ಕಾರಣ ತಮ್ಮ ಹಕ್ಕುಗಳನ್ನು ಸಿವಿಲ್ ನ್ಯಾಯಾಲಯದಲ್ಲಿ ಮಂಡಿಸಬೇಕು ಎಂದು ಅರ್ಜಿದಾರ ಕಕ್ಷಿದಾರರಿಗೆ ಸೂಚಿಸಿದ್ದರು.
‘ಭೂ ನ್ಯಾಯಮಂಡಳಿಯ ಈ ಮೇಲಿನ ಆದೇಶಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಥವಾ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಪ್ರಶ್ನಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಮೇಲಿನ ವ್ಯಕ್ತಿಗಳ ಪರವಾಗಿ ಹಿಡುವಳಿ ಹೇಗೆ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ,’ ಎಂದು ಉಪ ಲೋಕಾಯುಕ್ತರು ತಮ್ಮ ವರದಿಯಲ್ಲಿ ಅವಲೋಕಿಸಿರುವುದು ತಿಳಿದು ಬಂದಿದೆ.
ಕ್ರಮಕ್ಕೆ ಶಿಫಾರಸ್ಸು
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಭೂ ನ್ಯಾಯಾಧಿಕರಣದ ಆದೇಶಗಳನ್ನು ಪ್ರಶ್ನಿಸಿಲ್ಲ. ಇದಕ್ಕೆ ಕಾರಣಕ್ಕೆ ಜವಾಬ್ದಾರರಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ವಕ್ಫ್ ಆಸ್ತಿಗಳನ್ನು ಮರು ಸ್ವಾಧೀನಪಡಿಸಿಕೊಳ್ಳಲು ಸಿವಿಲ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಇದೇ ಪ್ರಕರಣದಲ್ಲಿ ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ, ಅಲ್ ಬದಾ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಡಾ ಸೈಯದ್ ಷಾ ಮಹಮದ್, ಗೇಸುದರಾಜ್, ಖುಸ್ರೋ ಹುಸೇನಿ, ಸಜ್ಜದಾ ನಶೀನ್, ಏಷ್ಯನ್ ಬಿಲ್ಡರ್ಸ್ , ಅಬ್ದುಲ್ ಕರೀಂ ಮುಚಾಲಿ ಮತ್ತು ಬೇನಾಮಿ ಷೇರುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಇದೇ ಪ್ರಕರಣದಲ್ಲಿ ಅಂದು ಕೇಂದ್ರ ಮಂತ್ರಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಮಗ್, ಕಮರುಲ್ ಇಸ್ಲಾಂ, ಸಿ ಎಂ ಇಬ್ರಾಹಿಂ, ಅಲ್ಹಜ್ ಸೈಯದ್ ಯಾಸೀನ್, ಅಷ್ಪಕ್ ಅಹ್ಮದ್ ಅವರು ಭಾಗಿಯಾಗಿದ್ದಾರೆ ಎಂದೂ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.