ಬೆಂಗಳೂರು; ಕಲ್ಬುರ್ಗಿ ತಾಲೂಕಿನ ಬಡೇಪುರ ಗ್ರಾಮದ ಸರ್ವೆ ನಂಬರ್ 12 ರಲ್ಲಿ 8.34 ಎಕರೆ ವಿಸ್ತೀರ್ಣದ ವಕ್ಫ್ ಆಸ್ತಿಯನ್ನು ಪ್ಲಾಟ್‌ಗಳನ್ನಾಗಿ ಹಂಚಿಕೆ ಮಾಡಿರುವುದು ಮತ್ತು ಹೈದರಬಾದ್ ಮೂಲದ ಚಾರ್ಟೆಡ್ ಅಕೌಂಟೆಂಟ್ ಸೈಯದ್ ಗುಲಾಂ ದಸ್ತಗಿರ್ ಹಾಗೂ ಮಾಜಿ ಸಚಿವ ಕಮರುಲ್ ಇಸ್ಲಾಂ (ದಿವಂಗತ) ಅವರ ಪರವಾಗಿ ವಕ್ಫ್ ಮಂಡಳಿಯು ವಿನಾಕಾರಣ ರಿಯಾಯಿತಿ ತೋರಿಸಿತ್ತು ಎಂಬುದನ್ನು ಉಪ ಲೋಕಾಯುಕ್ತ ಎನ್ ಆನಂದ್ ಅವರು ಬಯಲು ಮಾಡಿದ್ದಾರೆ.
ವಕ್ಫ್ ಆಸ್ತಿ ದುರ್ಬಳಕೆ, ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಯಂತೆ ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರು ತನಿಖೆ ನಡೆಸಿದ್ದರು. 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ವಕ್ಫ್ ಆಸ್ತಿ ದುರ್ಬಳಕೆಯ ವಿವಿಧ ಮುಖಗಳನ್ನು ತೆರೆದಿಟ್ಟಿದ್ದಾರೆ. ಈ ತನಿಖಾ ವರದಿಯನ್ನು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಗುಲ್ಬರ್ಗಾದ ಶಾಸಕರು ಮತ್ತು ಸಚಿವರೂ ಆಗಿದ್ದ ಕಮರುಲ್ ಇಸ್ಲಾಂ ಅವರು ವಕ್ಫ್ ಆಸ್ತಿಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ತಪ್ಪಾಗಿ ಪ್ರತಿನಿಧಿಸಿದ್ದರು. ಈ ಮೂಲಕ 8.34 ಎಕರೆ ವಿಸ್ತೀರ್ಣದ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದರು ಎಂದು ಅನ್ವರ್ ಮಾಣಿಪ್ಪಾಡಿ ಅವರ ನೇತೃತ್ವದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವೂ ತನ್ನ ವರದಿಯಲ್ಲಿ ವಿವರಿಸಿತ್ತು.
ಉಪ ಲೋಕಾಯುಕ್ತ ಎನ್ ಆನಂದ್ ಅವರು ಈ ವರದಿಯಲ್ಲಿನ ಬಹುತೇಕ ಸಂಗತಿ, ಅಂಶಗಳನ್ನು ಮತ್ತಷ್ಟು ವಿಸ್ತರಿಸಿರುವುದು ವರದಿಯಿಂದ ಗೊತ್ತಾಗಿದೆ. 8.34 ಎಕರೆ ವಿಸ್ತೀರ್ಣದ ವಕ್ಫ್ ಆಸ್ತಿಯನ್ನು ಕಾಲ್ಪನಿಕ ದಾಖಲೆಗಳ ಮೂಲಕ ವಶಪಡಿಸಿಕೊಂಡು ಸಾರ್ವಜನಿಕರಿಗೆ ಮನೆ, ನಿವೇಶನಗಳ ರೂಪದಲ್ಲಿ ಮಾರಾಟ ಮಾಡಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕಮರುಲ್ ಇಸ್ಲಾಂ ಅವರು ವಕ್ಫ್ ಭೂಮಿಯನ್ನು ಪ್ಲಾಟ್‌ಗಳಾಗಿ ಪರಿವರ್ತಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದೆ ಎಂದು ಮೇಲಿನವುಗಳಿಂದ ಸ್ಪಷ್ಟವಾಗುತ್ತದೆ. ಇದನ್ನು ತನಿಖೆಗೊಳಪಡಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸೈಯದ್ ಗುಲಾಂ ದಸ್ತಗೀರ್ ಮತ್ತು ಕಮರುಲ್ ಇಸ್ಲಾಂ ಅವರ ಪರವಾಗಿ ವಿನಾಕಾರಣ ರಿಯಾಯತಿಯನ್ನು ತೋರಿಸಿದ್ದಕ್ಕಾಗಿ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು,’ ಎಂದು ವರದಿಯಲ್ಲಿ ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಕಲ್ಬುರ್ಗಿ ತಾಲೂಕಿನ ಬಡೇಪುರ ಗ್ರಾಮದ ಸರ್ವೆ ನಂಬರ್ 12 ರಲ್ಲಿ 8.34 ಎಕರೆ ವಕ್ಫ್ ಎಂದು 1974ರಲ್ಲೇ ಅಧಿಸೂಚಿಸಲಾಗಿದೆ. ಸೈಯದ್ ಶಾ ಮೊಹ್ಮದ್ ಹುಸೈನ್, ಅಕ್ಪಬರ್ ಮೊಹ್ಮದ್ ಇವರನ್ನು ಮುತವಲ್ಲಿಗಳು ಎಂದು ಹೇಳಲಾಗಿದೆ. ಮೂಲತಃ ಈ ಜಮೀನು ವಕ್ಫ್ ಆಸ್ತಿ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳೇ ವರದಿ ನೀಡಿದ್ದಾರೆ.
ಅಲ್ಲದೇ ಮುತವಲ್ಲಿ ಅಡಿಯಲ್ಲಿ ಅಫ್ಸರ್ ಜಹಾನ್ ಬೇಗಂ ಈ ಜಮೀನಿಗೆ ಗುತ್ತಿಗೆದಾರರಾಗಿದ್ದರು. ಕ್ರಮೇಣ ಆಸ್ತಿಯ ಗುತ್ತಿಗೆ ಹಕ್ಕುಗಳನ್ನು ಅಪ್ಸರ್ ಜಹಾನ್ ಬೇಗಂ ಅವರು ಸೈಯದ್ ಗುಲಾಮ್ ದಸ್ತಗಿರ್ ಎಂಬುವರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಸೇಲ್ ಡೀಡ್ ಕೂಡ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಈ ಮಧ್ಯೆ ಸೈಯದ್ ಗುಲಾಮ್ ದಸ್ತಗಿರ್ ಎಂಬುವರು ಕರ್ನಾಟಕ ಇನಾಂ ರದ್ದತಿ ಕಾಯ್ದೆ 1977ರ ಅನ್ವಯ ಅರ್ಜಿ ಸಲ್ಲಿಸಿದ್ದರು. ದರ್ಗಾದ ಮುತವಲ್ಲಿ ಸರ್ವೆ ನಂಬರ್ 12ರಲ್ಲಿನ 8 ಎಕರೆ 34 ಗುಂಟೆ ಜಮೀನನ್ನು ಅಪ್ಸರ್ ಜಹಾನ್ ಬೇಗಂ ಅವರಿಗೆ ಗುತ್ತಿಗೆ ನೀಡಿದ್ದಾರೆ. ಈಕೆ ಹೈದರಾಬಾದ್ ಮೂಲದ ಸೈಯದ್ ಗುಲಾಂ ದಸ್ತಗಿರ್ ಅವರಿಗೆ ಗುತ್ತಿಗೆ ಹಕ್ಕುಗಳನ್ನು ಮಾರಾಟ ಮಾಡಿದ್ದರು.
‘ಆದರೆ, ಸೈಯದ್ ಗುಲಾಮ್ ದಸ್ತಗೀರ್ ಪರವಾಗಿ ಅಫ್ಜರ್ ಜಹಾನ್ ಬೇಗಂ ಅವರು ಗುತ್ತಿಗೆ ಹಕ್ಕುಗಳ ಮಾರಾಟವು ಅನೂರ್ಜಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ ಹೈದರಾಬಾದ್ ಮೂಲದ ಚಾರ್ಟೆಟ್ ಅಕೌಂಟೆಂಟ್ ಆಗಿರುವ ಸೈಯದ್ ದಸ್ತಗಿರ್, ಗುಲ್ಬರ್ಗಾ ನಿವಾಸಿಯಾಗಿರುವ ಕಮರುಲ್ ಇಸ್ಲಾಂ ಅವರನ್ನು ಜಿಪಿಎ ಹೋಲ್ಡರ್ ಎಂದು ಲ್ಯಾಂಡ್ ಟ್ರಿಬ್ಯುನಲ್ ಮುಂದೆ ದಾಖಲೆ ಸಲ್ಲಿಸಿದ್ದರು. ಆದರೆ ಈ ಜಮೀನಿಗೆ ಸೈಯದ್ ಗುಲಾಮ್ ದಸ್ತಗಿರ್ ಅವರು ಅರ್ಜಿದಾರರೇ ಆಗಿರಲಿಲ್ಲ,’ ಎಂದು ವಿವರಿಸಿರುವುದು ಗೊತ್ತಾಗಿದೆ.
ಲ್ಯಾಂಡ್ ಟ್ರಿಬ್ಯೂನಲ್ ಈ ಬಗ್ಗೆ ಆದೇಶ ಹೊರಡಿಸಿತ್ತು. 1981ರ ಮಾರ್ಚ್ 19 ರಿಂದಲೇ 8 ಎಕರೆ 34 ಗುಂಟೆ ಜಮೀನಿಗೆ ಸೈಯದ್ ಗುಲಾಮ್ ದಸ್ತಗಿರ್ ಅವರ ಹೆಸರಿಗೆ ಭೂ ಸ್ವಾಧೀನ ಹಕ್ಕುಗಳನ್ನು ನೀಡಿತ್ತು. ಇದರಿಂದ ಸೈಯದ್ ಗುಲಾಮ್ ದಸ್ತಗಿರ್ ಎಂಬಾತ ಈ ಜಮೀನಿಗೆ ಶಾಶ್ವತ ಬಾಡಿಗೆದಾರ ಆಗಿದ್ದ.
ಅಲ್ಲದೇ ಇದೇ ಪ್ರಕರಣದಲ್ಲಿ ಸೈಯದ್ ಗುಲಾಮ್ ದಸ್ತಗಿರ್ ಬಳಿ ನೌಕರನಾಗಿದ್ದ ಮತ್ತೊಬ್ಬ ಅರ್ಜಿದಾರನಾಗಿದ್ದ ಚುನ್ನುಮಿಯಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಲ್ಯಾಂಡ್ ಟ್ರಿಬ್ಯೂನಲ್ ವಜಾಗೊಳಿಸಿತ್ತು. ಅಲ್ಲದೇ ಈತ ಜಮೀನನ್ನು ಉಳುಮೆ ಮಾಡುತ್ತಿರಲಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಸೈಯದ್ ಗುಲಾಂ ದಸ್ತಗಿರ್ ಎಂಬಾತ ಚಾರ್ಟಡ್ ಅಕೌಂಟೆಂಟ್ ಹಾಗೂ ಹೈದರಾಬಾದ್‌ನ ನಿವಾಸಿಯಾಗಿದ್ದ ಮತ್ತು ಈತ ಬಾಡಿಗೆದಾರನೂ ಅಲ್ಲ, ಈ ಜಮೀನಿನಲ್ಲಿ ಉಳುಮೆಯನ್ನೂ ಮಾಡುತ್ತಿರಲಿಲ್ಲ ಎಂಬ ಅಂಶವನ್ನೂ ಲ್ಯಾಂಡ್ ಟ್ರಿಬ್ಯೂನಲ್ ಕೂಡ ನಿರ್ಲಕ್ಷ್ಯಿಸಿತ್ತು. ಮತ್ತು ಕರ್ನಾಟಕ ಇನಾಂ ರದ್ದತಿ ಕಾಯ್ದೆಯು ವಕ್ಫ್ ಆಸ್ತಿಗೆ ಅನ್ವಯವಾಗುವುದಿಲ್ಲ ಎಂಬ ಕಾನೂನಾತ್ಮಕ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.
ಮುತವಲ್ಲಿಗಳಿಗೆ ವಕ್ಫ್ ಆಸ್ತಿಗಳ ರಕ್ಷಣೆ ಮಾಡುವ ಹೊಣೆಗಾರಿಕೆಯಿದೆಯೇ ವಿನಃ ಇವರಿಗೆ ಈ ಭೂಮಿಯ ಸ್ವಾಧೀನದ ಹಕ್ಕುಗಳನ್ನು ಹೊಂದಲು ಅವಕಾಶವಿಲ್ಲ ಮತ್ತು ಮುತವಲ್ಲಿಗಳು ಈ ವಿಚಾರದಲ್ಲಿ ಸ್ವಯಂ ಯಾವುದೇ ಹಕ್ಕೂ ಹೊಂದಿಲ್ಲ. ಹೀಗಾಗಿ ಮುತವಲ್ಲಿಗಳು ಇತರೆ ಖಾಸಗಿ ಯಾರೇ ವ್ಯಕ್ತಿಗಳಿಗೆ ವಕ್ಫ್ ಆಸ್ತಿಯ ಕಾನೂನುಬದ್ಧ ಹಕ್ಕುಗಳನ್ನು ವರ್ಗಾವಣೆ ಮಾಡಲು ಅಧಿಕಾರವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.