ತಹಶೀಲ್ದಾರ್ ಆಗಿದ್ದಾಗಲೇ ಏಕೇಶ್‌ಬಾಬು ವಿರುದ್ಧ ಕರ್ತವ್ಯಲೋಪ ಆರೋಪ; ಉಪಲೋಕಾಯುಕ್ತರ ವರದಿ

ಬೆಂಗಳೂರು; ಮನೆಯಲ್ಲಿ ಹಣ ಎಣಿಸುವ ಉಪಕರಣದೊಂದಿಗೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಏಕೇಶ್‌ ಬಾಬು ಕೆ ಅವರು ತಹಶೀಲ್ದಾರ್‍‌ ಆಗಿದ್ದಾಗಲೇ ಕರ್ತವ್ಯ ಲೋಪ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಉಪ ಲೋಕಾಯುಕ್ತರು 12(1) ಅಡಿಯಲ್ಲಿ ವರದಿ ಸಲ್ಲಿಸಿದ್ದರು.

 

ವಿಶೇಷವೆಂದರೇ ಉಪ ಲೋಕಾಯುಕ್ತರು ವರದಿ ಸಲ್ಲಿಸಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಮೊದಲ ಅವಧಿಯ ಕಾಂಗ್ರೆಸ್‌ ಸರ್ಕಾರವಿತ್ತು. ಈಗ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡನೇ ಅವಧಿಯ ಕಾಂಗ್ರೆಸ್‌ ಸರ್ಕಾರವಿರುವಾಗಲೇ ಲೋಕಾಯುಕ್ತ ದಾಳಿಯಲ್ಲಿ ಏಕೇಶ್‌ ಬಾಬು ಅವರು ಸಿಕ್ಕಿ ಬಿದ್ದಿದ್ದಾರೆ.

 

ಏಕೇಶ್‌ ಬಾಬು ಅವರು ಕೊರಟಗೆರೆ ತಾಲೂಕಿನ ತಹಶೀಲ್ದಾರ್‍‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ 7 ಎಕರೆ 1 ಗುಂಟೆ ವಿಸ್ತೀರ್ಣದ ಜಮೀನು ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಿರಲಿಲ್ಲ. ಮತ್ತು ಅದನ್ನು ಸಾಮಾಜಿಕ ಅರಣ್ಯೀಕರಣಕ್ಕಾಗಿ ಹಸ್ತಾಂತರಿಸದೇ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಮೇಲೆ ತನಿಖೆ ನಡೆಸಿದ್ದ ಅಂದಿನ ಉಪ ಲೋಕಾಯುಕ್ತ ಸುಭಾಷ್‌ ಬಿ ಅಡಿ ಅವರು 2016ರ ನವೆಂಬರ್‍‌ 14ರಂದೇ ವರದಿ ಸಲ್ಲಿಸಿದ್ದರು.

 

ಲೋಕಾಯುಕ್ತ ದಾಳಿಗೆ ಒಳಗಾಗಿರುವ ಬೆನ್ನಲ್ಲೇ ಏಕೇಶ್‌ ಬಾಬು ಅವರು ತಹಶೀಲ್ದಾರ್‍‌ ಆಗಿದ್ದ ಅವಧಿಯಲ್ಲಿನ ಪ್ರಕರಣದ ತನಿಖಾ ವರದಿಯು ಮುನ್ನೆಲೆಗೆ ಬಂದಿದೆ. ಈ ಪ್ರಕರಣ ಕುರಿತು ಉಪಲೋಕಾಯುಕ್ತರು ನೀಡಿದ್ದ ತನಿಖಾ ವರದಿ ಮತ್ತು ಸರ್ಕಾರದ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ವರದಿ ಆಧರಿಸಿ ಸರ್ಕಾರವು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೇ ಈ ಸಂಬಂಧ ತುಮಕೂರು ಜಿಲ್ಲಾಧಿಕಾರಿಯು 2017ರ ಸೆ.23ರಂದು ಬರೆದಿದ್ದ ಪತ್ರ ಆಧರಿಸಿ ಕಂದಾಯ ಇಲಾಖೆಯಲ್ಲಿಯೂ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡಿತ್ತು. ಮಧುಗಿರಿಯ ಉಪ ವಿಭಾಗಾಧಿಕಾರಿಗಳೂ 2017ರ ಜುಲೈ 15ರಂದು ಬರೆದಿದ್ದ ಮೂಲ ಪತ್ರವೂ ಕಡತದಲ್ಲಿ ಲಭ್ಯವಿರಲಿಲ್ಲ. ಈ ಸಂಬಂಧ 2023ರ ಅಕ್ಟೋಬರ್‍‌ 10ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್‍‌ ಪಾಷ ಹೆಚ್‌ ಜಿ ಅವರು ಏಕೇಶ್‌ ಬಾಬು ಅವರಿಗೆ 2023ರ ಅಕ್ಟೋಬರ್‍‌ನಲ್ಲೇ ಪತ್ರ (ಸಂಖ್ಯೆ; ಇ-ಆರ್‍‌ಡಿ 95 ಎಡಿಇ 2017)  ಬರೆದಿದ್ದರು.

 

ದೂರಿನಲ್ಲೇನಿತ್ತು?

 

ಈ ಕುರಿತು ತುಮಕೂರಿನ ನಿವೃತ್ತ ಇಂಜಿನಿಯರ್‍‌ ಜಿ ವಿ ಮುದ್ದಯ್ಯ ಎಂಬುವರು ಕೊರಟೆಗೆರೆ ತಾಲೂಕಿನ ತಹಶೀಲ್ದಾರ್‍‌ ಆಗಿದ್ದ ಏಕೇಶ್‌ ಬಾಬು ಅವರ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಕೊರಟೆಗೆರೆ ತಾಲೂಕು ವೆಂಕನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‍‌ 9ರಲ್ಲಿ 16 ಎಕರೆ 11 ಗುಂಟೆ ಜಮೀನಿನಲ್ಲಿ 7 ಎಕರೆ ಜಮೀನನ್ನು ಸಾಮಾಜಿಕ ಅರಣ್ಯ ಸಂರಕ್ಷಕರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಈ ಹಸ್ತಾಂತರಿಸಲಾಗಿದ್ದ 7 ಎಕರೆ ಜಮೀನನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು.

 

ಈ ಒತ್ತುವರಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆಯ ಸ್ವಾಧೀನಕ್ಕೆ ನೀಡಬೇಕು ಎಂದು ಎದುರುದಾರರು ಅರ್ಜಿ ಸಲ್ಲಿಸಿದ್ದರು. ಆದರೂ ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಹೀಗಾಗಿ ಇವರ ವಿರುದ್ಧ ಕ್ರಮ ವಹಿಸಿ ಅತಿಕ್ರಮಿತ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ದೂರಿನಲ್ಲಿ ಕೋರಿದ್ದರು.

 

ಆಕ್ಷೇಪಣೆ ಸಲ್ಲಿಸಿದ್ದ ಏಕೇಶ್‌ ಬಾಬು

 

ಮುದ್ದಯ್ಯ ಅವರು ಸಲ್ಲಿಸಿದ್ದ ದೂರಿಗೆ ಏಕೇಶ್‌ ಬಾಬು ಅವರು ಆಕ್ಷೇಪಣೆ ಸಲ್ಲಿಸಿದ್ದರು. ‘ಈ ವಿಚಾರವಾಗಿ ಉಚ್ಛ ನ್ಯಾಯಾಲಯವು (ರಿಟ್‌ ಅರ್ಜಿ 48638-48640/2014 ಹಾಗೂ ರಿಟ್‌ ಅರ್ಜಿ 16030-16048/1992ರಲ್ಲಿ ) ಒತ್ತುವರಿಯಾದ ಜಮೀನನ್ನು ಸಾಮಾಜಿಕ ಅರಣ್ಯೀಕರಣಕ್ಕಾಗಿ ನೀಡಬೇಕು ಎಂದು ಆದೇಶಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕಾನೂನು ಸಲಹೆ, ಅಭಿಪ್ರಾಯ ಪಡೆದು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಯಾವುದೇ ಕರ್ತವ್ಯ ಲೋಪ ಎಸಗಿಲ್ಲ,’ ಎಂದು ಉಪ ಲೋಕಾಯುಕ್ತರ ಮುಂದೆ ಪ್ರತಿಪಾದಿಸಿದ್ದರು. ಈ ಕುರಿತು ಉಪ ಲೋಕಾಯುಕ್ತರು ತನಿಖೆ ನಡೆಸಿದ್ದರು.

 

ಉಪ ಲೋಕಾಯುಕ್ತರ ವರದಿಯಲ್ಲೇನಿದೆ?

 

ಕೊರಟಗೆರೆ ತಾಲೂಕು ವೆಂಕನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 9ರಲ್ಲಿನ 7 ಎಕರೆ ಜಮೀನನ್ನು ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವುದು ಅಗತ್ಯವಾಗಿತ್ತು. ಈ ಜಮೀನನ್ನು ಸಕ್ಷಮ ಪ್ರಾಧಿಕಾರದವರು ಮಂಜೂರು ಮಾಡಿರಲಿಲ್ಲ ಎಂದು ರಿಟ್‌ ಅರ್ಜಿಗಳನ್ನು ಹೈಕೋರ್ಟ್‌ ವಜಾ ಮಾಡಿತ್ತು. ಆದ್ದರಿಂದ ಅನಧಿಕೃತವಾಗಿ ಒತ್ತುವರಿಯಾದ 7 ಎಕರೆ ಜಮೀನನ್ನು ಎದುರುದಾರರು ಸ್ವಾಧೀನಕ್ಕೆ ಪಡೆದು ಪುನಃ ಅದನ್ನು ಸಾಮಾಜಿಕ ಅರಣ್ಯೀಕರಣಕ್ಕಾಗಿ ಹಸ್ತಾಂತರಿಸಬೇಕಿತ್ತು ಎಂದು ವಿವರಿಸಲಾಗಿದೆ.

 

 

ಈ ಕಡತದಲ್ಲಿ ಲಭ್ಯವಿದ್ದ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿಗಳನ್ನು ಪರಿಶೀಲಿಸಿದಾಗ ಜಮೀನನ್ನು ಅತಿಕ್ರಮಿಸಿದ ಹಿಡುವಳಿದಾರರು ಫಾರಂ 50 ಅಥವಾ 53ರಲ್ಲಿ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದಾಗ ಅದನ್ನು 1 ವರ್ಷದೊಳಗಾಗಿಯೇ ಅದರ ಮೇಲೆ ಆದೇಶ ಮಾಡಬೇಕಾಗುತ್ತದೆ. ಆದ್ದರಿಂದ ಎದುರುದಾರರು ನಿಗದಿತ ಅವಧಿಯಲ್ಲಿ ಈ ಅರ್ಜಿಗಳ ಮೇಲೆ ಆದೇಶ ಮಾಡಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವುದು ವರದಿಯಿಂದ ಗೊತ್ತಾಗಿದೆ.

 

ಈ ಪ್ರಕರಣದಲ್ಲಿ (ರಿಟ್‌ ಪಿಟಿಷನ್‌ ನಂ 46006/1993ರಲ್ಲಿ) ವೆಂಕಯ್ಯ ಎಂಬಾತನು 7 ಎಕರೆ 1 ಗುಂಟೆ ಜಮೀನಿನ ಅನುಭವದಲ್ಲಿದ್ದು ಸಾಗುವಳಿ ಚೀಟಿ ನೀಡಲು ಅರ್ಜಿ ಸಲ್ಲಿಸಿದ್ದ. ಆದರೆ ಈ ಜಮೀನನ್ನು ಆತನು ಪಡೆಯಲು ಅರ್ಹನಾಗಿರಲಿಲ್ಲ. ಏಕೆಂದರೇ ಆತನು ನಿಯಮಬದ್ಧವಾಗಿ ಜಮೀನು ಮಂಜೂರಾತಿಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಾಗ ಅದರ ಮೇಲೆ ನಿಯಮಾನುಸಾರ ಆದೇಶ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

ಸರ್ವೆ ನಂಬರ್‍‌ 9ರಲ್ಲಿ 7 ಎಕರೆ ಜಮೀನನ್ನು ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವುದು ಅಗತ್ಯವಾಗಿರುತ್ತದೆ. ಈ ಜಮೀನನ್ನು ಸಕ್ಷಮ ಪ್ರಾಧಿಕಾರದವರು ಮಂಜೂರು ಮಾಡಿರುವುದಿಲ್ಲವೆಂದು ಸಲ್ಲಿಸಿದ ರಿಟ್‌ ಅರ್ಜಿಗಳನ್ನು ಉಚ್ಛ ನ್ಯಾಯಾಲಯವು ವಜಾ ಮಾಡಿತ್ತು.

 

‘ಆದ್ದರಿಂದ ಅನಧಿಕೃತವಾಗಿ ಒತ್ತುವರಿಯಾದ 7 ಎಕರೆ ಜಮೀನನ್ನು ಎದುರುದಾರರು ಸ್ವಾಧೀನಕ್ಕೆ ಪಡೆದು ಅದನ್ನು ಸಾಮಾಜಿಕ ಅರಣ್ಯೀಕರಣಕ್ಕಾಗಿ ಹಸ್ತಾಂತರಿಸಲು ಸಕ್ಷಮ ಪ್ರಾಧಿಕಾರಕ್ಕೆ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ 12(1) ಅಡಿಯಲ್ಲಿ ನಿರ್ದೇಶಿಸುವುದು ಅಗತ್ಯವಾಗಿರುತ್ತದೆ,’ ಎಂದು 2016ರ ನವೆಂಬರ್‍‌ 14ರಂದೇ ವರದಿ ಸಲ್ಲಿಸಿದ್ದರು.

 

 

ಸದ್ಯ ಏಕೇಶ್‌ ಬಾಬು ಅವರ ಮನೆಯ ಮೇಲೆ ದಾಳಿ ನಡೆದ ನಂತರ ಅವರ ಒಟ್ಟು ಆಸ್ತಿ ಮೌಲ್ಯ 7.92 ಕೋಟಿ ಎಂದು ಲೋಕಾಯುಕ್ತ ಪೊಲೀಸರು ಅಂದಾಜಿಸಿದ್ದಾರೆ. 3 ಎಕರೆ 12 ಗುಂಟೆ ಕೃಷಿ ಜಮೀನು, ಮೂರು ನಿವೇಶನ, ಮೂರು ಬಂಗಲೆ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ.

 

ಅದೇ ರೀತಿ 7.40 ಕೋಟಿ ರು ಮೌಲ್ಯದ ಸ್ಥಿರಾಸ್ತಿ, 14.25 ಲಕ್ಷದ ಚಿನ್ನಾಭರಣ, 60 ಸಾವಿರ ಮೌಲ್ಯದ ವಾಹನಗಳು, 15.25 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, ನೋಟಿಎಣಿಸುವ ಯಂತ್ರ ಮತ್ತು 22.15 ಲಕ್ಷ ರು. ನಗದನ್ನು ವಶಕ್ಕೆ ಪಡೆದುಕೊಂಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts