ಬೆಂಗಳೂರು; ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್‌ನ್ನು ಅಂತಿಮಗೊಳಿಸುವಲ್ಲಿ ವಿಳಂಬ ಧೋರಣೆಯಿಂದಾಗಿ 113.42 ಕೋಟಿಯಷ್ಟು ಹೆಚ್ಚುವರಿಯಾಗಿ ಹೊರೆ ಹೊರೆಸಿದೆ ಎಂಬ ಸಿಎಜಿ ಆಕ್ಷೇಪಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ತಳ್ಳಿ ಹಾಕಿದೆ.
ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣ 113.42 ಕೋಟಿಯಷ್ಟು ಹೆಚ್ಚುವರಿಯಾಗಿ ಹೊರೆ ಹೊರಿಸಿತ್ತು ಎಂದು ಸಿಎಜಿ ಬಲವಾಗಿ ಆಕ್ಷೇಪ ಎತ್ತಿತ್ತು. ಅಲ್ಲದೇ ಈ ಬಗ್ಗೆ ವಿವರಣೆ ಕೋರಿ ಪತ್ರವನ್ನು ಬರೆದಿತ್ತು. ಇದನ್ನಾಧರಿಸಿ ‘ದಿ ಫೈಲ್’ 2024ರ ಸೆ.18ರಂದೇ ವರದಿ ಪ್ರಕಟಿಸಿತ್ತು.
ವಿದ್ಯುತ್ ಖರೀದಿ ಟೆಂಡರ್ ಪ್ರಕ್ರಿಯೆ ವಿಳಂಬ; ಗ್ರಾಹಕರಿಗೆ 113.42 ಕೋಟಿ ಹೊರೆ ಹೊರಿಸಿದ ಸರ್ಕಾರ
ಇದೇ ವರದಿಗೆ ಪೂರಕವಾಗಿ ವಿಧಾನ ಪರಿಷತ್ ಸದಸ್ಯ ಜೆಡಿಎಸ್‌ನ ಟಿ ಎ ಶರವಣ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ 2024ರ ಡಿಸೆಂಬರ್ 9ರಂದು ಉತ್ತರ ನೀಡಿರುವ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದರಿಂದ ಯಾವುದೇ ರೀತಿಯ ಆರ್ಥಿಕ ಹೊರೆ ಆಗಿರುವುದಿಲ್ಲ ಎಂದು ಉತ್ತರಿಸಿದ್ದಾರೆ.
ಅಲ್ಲದೇ ಅಲ್ಪಾವಧಿ ಅವಧಿಗೆ ಕಡಿಮೆ ದರದಲ್ಲಿ ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‍ನ್ನು ರದ್ದುಗೊಳಿಸಿರುವುದರಿಂದಲೂ ಯಾವುದೇ ಆರ್ಥಿಕ ಹೊರೆ ಆಗಿರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ನ್ನು ವಿದ್ಯುತ್ ವಿನಿಮಯ ಕೇಂದ್ರದಿಂದ ಖರೀದಿಸಿದ್ದರಿಂದಾಗಿ ಸರ್ಕಾರಕ್ಕೆ ಸುಮಾರು 5.26 ಕೋಟಿಗಳಷ್ಟು ಉಳಿತಾಯವಾಗಿದೆ ಎಂದೂ ಸಮರ್ಥಿಸಿಕೊಂಡಿದ್ದಾರೆ.
ಅಲ್ಪಾವಧಿ ಅವಧಿಗೆ ಕಡಿಮೆ ದರದಲ್ಲಿ ವಿದ್ಯುತ್ ಖರೀದಿ ಸಂಬಂಧ ಇಂಧನ ಇಲಾಖೆಯು ಅನುಸರಿಸಿದ್ದ ವಿಳಂಬದ ಕುರಿತು ಪ್ರಧಾನ ಮಹಾಲೇಖಪಾಲರು (ಸಿಎಜಿ) ಗ್ರಾಹಕರ ಮೇಲೆ 113.42 ಕೋಟಿಯಷ್ಟು ಹೊರೆ ಹೊರಿಸಿರುವ ಬಗ್ಗೆ ವಿವರಣೆ ಕೇಳಿ 2024ರ ಆಗಸ್ಟ್ 23ರಂದು ಪತ್ರ ಬರೆದಿತ್ತು.
ಅಕ್ಟೋಬರ್ 2023 ರಿಂದ ಮೇ 2024 ರ ಅವಧಿಗೆ ಅಲ್ಪಾವಧಿಯ ವಿದ್ಯುತ್ ಖರೀದಿ ಸಂಬಂಧ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ವಿದ್ಯುತ್‌ನ್ನು ಸ್ಪರ್ಧಾತ್ಮಕ ದರಗಳಲ್ಲಿ ಖರೀದಿಸಲು ಕರೆದಿದ್ದ ಟೆಂಡರ್‌ನ್ನು ನಾಲ್ಕು ಬಾರಿ ತಿದ್ದುಪಡಿ ಮಾಡಲಾಗಿತ್ತು. ಆದರೂ ಟೆಂಡರ್‌ನ್ನು ನಿಗದಿತ ಅವಧಿಯೊಳಗೇ ಅಂತಿಮಗೊಳಿಸಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಹೆಚ್ಚುವರಿಯಾಗಿ 113.42 ಕೋಟಿ ರು.ನಷ್ಟು ಹೊರೆ ಹೊರಿಸಿದಂತಾಗಿದೆ ಎಂದು ಸಿಎಜಿ ತನ್ನ ಪತ್ರದಲ್ಲಿ ವಿವರಿಸಿತ್ತು.
ಸಿಎಜಿ ಆಕ್ಷೇಪಣೆಯನ್ನೇ ತಳ್ಳಿ ಹಾಕಿದ ಸರ್ಕಾರ
ಆದರೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಸಿಎಜಿ ಆಕ್ಷೇಪಣೆಯನ್ನೇ ತಳ್ಳಿ ಹಾಕಿದೆ. ಟೆಂಡರ್ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದೆ.
2023ರ ಆಗಸ್ಟ್ 14ರಂದು 25ನೇ ವಿದ್ಯುತ್ ವಹಿವಾಟು ಸಮಿತಿ ಸಭೆ ನಡೆದಿತ್ತು. ಆಗಸ್ಟ್ 2023ರ ನಂತರ ಸುಮಾರು 1,500 ಮೆಗಾವ್ಯಾಟ್‌ವರೆಗೆ ವಿದ್ಯುತ್ ಕೊರತೆ ಉಂಟಾಗುವ ಸಾಧ್ಯತೆಗಳನ್ನು ಈ ಸಭೆಯು ಮನಗಂಡಿತ್ತು.
ಸೆ.2023ರಿಂದ ಡಿಸೆಂಬರ್ 23ರವರೆಗೆ 1,200 ಮೆಗಾ ವ್ಯಾಟ್ ಮತ್ತು ಜನವರಿ 2024ರಿಂದ ಮೇ 2024ರವರೆಗೆ 1,500 ಮೆಗಾವ್ಯಾಟ್ ಹಾಗೂ 500 ಮೆಗಾ ವ್ಯಾಟ್‌ಗಳಿಗೆ (ಬೆಳಿಗ್ಗೆ 5ರಿಂದ 9 ಗಂಟೆ)ವರೆಗೆ ಮತ್ತು ಸಂಜೆ 6ರಿಂದ 10ರವರೆಗೆ ಪೀಕ್ ಪವರ್‍ನ್ನು ಖರೀದಿ ಮಾಡಲು ಸೂಚಿಸಿತ್ತು ಎಂದು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
26ನೇ ವಿದ್ಯುತ್ ವಹಿವಾಟು ಸಮಿತಿ ಸಭೆಯಲ್ಲಿಯೂ ವಿದ್ಯುತ್ ಖರೀದಿ ಮಾಡಲು ವಿಸ್ತಾರವಾಗಿ ಚರ್ಚಿಸಿತ್ತು. ಕೊರತೆಯಾದ ವಿದ್ಯುತ್ ಖರೀದಿಸಲು ಕ್ರಮ ಕೈಗೊಳ್ಳಲು ಸೂಚಿಸಿತ್ತು. ಕೊರತೆಯಾದ ವಿದ್ಯುತ್ ಖರೀದಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕೇಂದ್ರ ವಿದ್ಯುತ್ ಮಂತ್ರಾಲಯಕ್ಕೆ ಅನುಮೋದನೆ ಕೋರಿ ಪತ್ರ ಬರೆದಿತ್ತು. ಅದರಂತೆ ಪೀಕ್ ಪವರ್‍ನ್ನು ವಿದ್ಯುತ್ ದರ ಒಂದು ಯೂನಿಟ್‌ಗೆ 6.02 ರು. ಮೀರದಂತೆ ವಿದ್ಯುತ್ ಖರೀದಿಸಬಹುದು ಎಂದು ಅನುಮೋದಿಸಿತ್ತು ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ಟೆಂಡರ್ ಮೊತ್ತವು 50 ಕೋಟಿ ರು ಮೀರಿತ್ತು. ಹೀಗಾಗಿ ನಿಯಮಾನುಸಾರವಾಗಿ ರಾಜ್ಯ ಟೆಂಡರ್ ಪೂರ್ವ ಪರಿಶೀಲನೆ ಸಮಿತಿಯ ಅನುಮೋದನೆಗೆ ಪತ್ರ ಬರೆದಿತ್ತು. ನಂತರ ಈ ಸಮಿತಿಗೆ ರಾಜ್ಯಕ್ಕೆ ವಿದ್ಯುತ್ ಕೊರತೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿತ್ತು. ಸಮಿತಿಗೆ ಮನವರಿಕೆ ಮಾಡಿದ ನಂತರ 2023ರ ಅಕ್ಟೋಬರ್ 26ರಂದು ಟೆಂಡರ್ ಕರೆಯಲು ಅನುಮೋದನೆ ನೀಡಿತ್ತು. ವಿದ್ಯುತ್ ಕೊರತೆ ನೀಗಿಸಲು ಅಲ್ಪಾವಧಿ ವಿದ್ಯುತ್ ಖರೀದಿ ಸಂಬಂಧ 2023ರ ಅಕ್ಟೋಬರ್ 30ರಂದು ಟೆಂಡರ್ ಆಹ್ವಾನಿಸಿತ್ತು.
ನಂತರ ಕೆಇಆರ್‍ಸಿಯವರು ನಮೂದಿಸಿದ್ದ ಪ್ರತಿ ಯೂನಿಟ್‌ನ ದರ 4.98 ರು ಮೀರದಂತೆ ಟೆಂಡರ್ ನ್ನು ಪರಿಷ್ಕರಿಸಲಾಗಿತ್ತು. ಬಿಡ್ ಸಲ್ಲಿಸುವ ಅಂತಿಮ ದಿನಾಂಕವನನು 2023ರ ನವೆಂಬರ್ 16ರವರೆಗೆ ವಿಸ್ತರಿಸಿತ್ತು. ಆದರೆ ಈ ಅವಧಿಯೊಳಗೆ ಯಾವುದೇ ಬಿಡ್‌ದಾರರು ಭಾಗವಹಿಸಿರಲಿಲ್ಲ. ಹೀಗಾಗಿ ಇದನ್ನು ನವೆಂಬರ್ 27ರವರೆಗೆ ಮತ್ತೆ ವಿಸ್ತರಿಸಲಾಗಿತ್ತು. ಇದಾದ ನಂತರವೂ ಯಾವೊಬ್ಬ ಬಿಡ್‌ದಾರರೂ ಭಾಗವಹಿಸಿರಲಿಲ್ಲ. ಹೀಗಾಗಿ ಕೆಇಆರ್‍ಸಿ ಅವರಿಗೆ ಈ ಹಿಂದಿನ ಅನುಮೋದನೆಯಲ್ಲಿ ನಿರ್ಬಂಧಿಸಿರುವ ವಿದ್ಯುತ್ ದರವನ್ನು (ಪ್ರತಿ ಯೂನಿಟ್‌ಗೆ 6.02 ರು) ತೆರವುಗೊಳಿಸಬೇಕು ಎಂದು ಕೋರಿತ್ತು ಎಂದು ಸಚಿವ ಜಾರ್ಜ್ ಅವರು ವಿವರಿಸಿರುವುದು ತಿಳಿದು ಬಂದಿದೆ.
2023ರ ನವೆಂಬರ್ 29ರಂದು ಯಾವುದೇ ಬಿಡ್‌ಗಳು ಸ್ವೀಕೃತವಾಗಿರಲಿಲ್ಲ. ಹೀಗಾಗಿ ಅಂತಿಮ ದಿನಾಂಕವನ್ನು 2023ರ ಡಿಸೆಂಬರ್ 12ರವರೆಗೆ ಮತ್ತೆ ವಿಸ್ತರಿಸಲಾಗಿತ್ತು. ಮತ್ತು ಟೆಂಡರ್‍ನಲ್ಲಿ ನಿರ್ಬಂಧಿಸಿದ್ದ ವಿದ್ಯುತ್ ದರ ತೆರವುಗೊಳಿಸಲು ಅನುಮತಿ ನೀಡಿತ್ತು. ಅಲ್ಲದೇ 2023ರ ಡಿಸೆಂಬರ್ 1ರಂದು ಬಿಡ್ ಡಾಕ್ಯುಮೆಂಟ್‌ನಲ್ಲಿ ನಿರ್ಬಂಧಿಸಿದ್ದ ವಿದ್ಯುತ್ ದರವನ್ನು ತೆಗೆದು ಹಾಕಿತ್ತು. ನಂತರ ಬಿಡ ಸಲ್ಲಿಸುವ ಅಂತಿಮ ದಿನಾಂಕವನ್ನು 2023ರ ಡಿಸೆಂಬರ್ 29ರವರೆಗೆ ಮತ್ತೊಮ್ಮೆ ವಿಸ್ತರಿಸಿತ್ತು ಎಂಬುದು ಉತ್ತರದಿಂದ ಗೊತ್ತಾಗಿದೆ.
ಈ ಸಂಬಂಧ 6ನೇ ತಿದ್ದುಪಡಿ ಮಾಡಲಾಗಿತ್ತು. ಬಿಡ್ ಸಲ್ಲಿಕೆಯ ಕೊನೆಯ ದಿನಾಂಕವಾದ 2023ರ ಡಿಸೆಂಬರ್ 29, ಇಆರ್‍ಎ ಪ್ರಾರಂಭವಾಗಿದ್ದ 2024ರ ಜನವರಿ 5ರವರೆಗೆ ಯಾವುದೇ ಬಿಡ್‌ಗಳನ್ನು ಸ್ವೀಕರಿಸಿರಲಿಲ್ಲ. ಆದರೆ ತಾಂತ್ರಿಕ ಬಿಡ್‌ಗಳನ್ನು ತೆರೆದು ಪರಿಶೀಲಿಸಲಾಗಿತ್ತು. ಒಬ್ಬನೇ ಒಬ್ಬ ಬಿಡ್‌ದಾರರು ಮಾತ್ರ ಭಾಗವಹಿಸಿದ್ದರು. ಹೀಗಾಗಿ ಆರ್ಥಿಕ ಬಿಡ್ ತೆರೆಯಲು 2024ರ ಜನವರಿ 16ರಂದು ಕೆಇಆರ್‍ಸಿಯು ಅನುಮತಿ ನೀಡಿತ್ತು.
ಈ ಆರ್ಥಿಕ ಬಿಡ್‌ಗಳನ್ನು ಸ್ಥಾಯಿ ಸಮಿತಿಯು ಪರಿಶೀಲಿಸಿತ್ತು. ಟೆಂಡರ್‍ನಲ್ಲಿ ನಮೂದಿಸಿದ್ದ ದರವು ಮಾರುಕಟ್ಟೆಯ ದರಕ್ಕಿಂತ ಹೆಚ್ಚಾಗಿತ್ತು. ಹೀಗಾಗಿ ಈ ಟೆಂಡರ್‍ನ್ನು ರದ್ದುಗೊಳಿಸಿತ್ತು ಮತ್ತು ಟೆಂಡರ್‍ನ್ನು ಕೈಬಿಡಲಾಗಿತ್ತು ಎಂದು ಇಂಧನ ಇಲಾಖೆಯು ತನ್ನ ಉತ್ತರದಲ್ಲಿ ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.