ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆ; ಬೋಸ್ಟನ್‌ನೊಂದಿಗೆ ಆಂತರಿಕ ಸಭೆ, ಖಾಸಗಿ ಬಿಲ್ಡರ್ಸ್‌, ಡೆವಲಪರ್ಸ್‌ಗಳಿಗೆ ಮಣೆ

ಬೆಂಗಳೂರು: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಖಾಸಗಿ ಡೆವಲಪರ್ಸ್‌, ಬಿಲ್ಡರ್ಸ್‌ಗಳಿಗೆ ರತ್ನಗಂಬಳಿ ಹಾಸಲಿದೆ!

 

ಈ ಮೂಲಕ ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಂತಹ ಸಂಸ್ಥೆಗಳನ್ನು ವಸತಿ ಯೋಜನೆಗಳಿಂದಲೇ ದೂರವಿಡುವುದು ಮತ್ತು ಇಂತಹ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ನೀಡುತ್ತಿದ್ದ ಸಬ್ಸಿಡಿಗಳನ್ನೂ ಖಾಸಗಿ ವಸತಿ ಕಂಪನಿಗಳಿಗೆ, ದೊಡ್ಡ ದೊಡ್ಡ ಬಿಲ್ಡರ್‍‌ಗಳಿಗೆ ನೇರಾನೇರ ವರ್ಗಾಯಿಸುವ ಹುನ್ನಾರವನ್ನು ನಡೆಸಿದೆಯೇ ಎಂಬ ಮಾತುಗಳು ಕೇಳಿ ಬಂದಿದೆ.

 

ವಿಶೇಷವೆಂದರೇ ಇಂತಹದೊಂದು ಯೋಜನಾ ಮಾದರಿಗಳನ್ನು ಸರ್ಕಾರದ ಮುಂದಿಟ್ಟಿರುವುದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ (ಬಿಸಿಜಿ) .  ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ವಸತಿ ಇಲಾಖೆಯ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್,  ಆರ್ಥಿಕ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್‌ ಅವರು ವಸತಿ ಇಲಾಖೆ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ (ಬಿಸಿಜಿ) ನೊಂದಿಗೆ ಆಂತರಿಕವಾಗಿ ಸಮಾಲೋಚನೆ ನಡೆಸಿದ್ದರು.

 

2024ರ ಡಿಸೆಂಬರ್‍‌ 2ರಮದೇ ವಿಧಾನಸೌಧದ ಕೊಠಡಿ ಸಂಖ್ಯೆ 251ರಲ್ಲಿ ಸಭೆಯನ್ನೂ ನಡೆಸಿದ್ದರು. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

 

ಆದಾಯ ಹೆಚ್ಚಿಸಲು ಖಾಸಗಿ ಕನ್ಸಲ್ಟಿಂಗ್ ಸಂಸ್ಥೆಯಾದ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್​ನ್ನು ಆರು ತಿಂಗಳ ಕಾಲ 9.5 ಕೋಟಿ ರೂ.ಗೆ ನೇಮಿಸಿ ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಇದೇ ಬಿಸಿಜಿ ಗ್ರೂಪ್‌, ಸರ್ಕಾರದ ಮುಂದಿಟ್ಟಿರುವ ಪಿಪಿಪಿ ಮಾದರಿಯ ವಸತಿ ಯೋಜನೆಯು ಹೊಸತೊಂದು ವಿವಾದಕ್ಕೆ ದಾರಿ ಮಾಡಿಕೊಡಲಿದೆ.

 

ಇಲ್ಲಿಯವರೆಗೆ ಕರ್ನಾಟಕ ಗೃಹ ಮಂಡಳಿಯು ವಸತಿ ಉದ್ದೇಶಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡು ವಸತಿ ನಿರ್ಮಾಣ ಮಾಡುತ್ತಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿ ಸಬ್ಸಿಡಿ ಸಹ ದೊರೆಯುತ್ತಿತ್ತು. ಆದರೀಗ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನೀಡಿರುವ ಮಾದರಿ ಪ್ರಕಾರ ಇನ್ನುಮುಂದೆ ಖಾಸಗಿಯವರು ಸಹ ಸರ್ಕಾರದ ಸ್ಥಳದಲ್ಲಿ ಪಿಪಿಪಿ ಮಾದರಿಯಲ್ಲಿ ವಸತಿ ನಿರ್ಮಾಣ ಮಾಡಲು ವೇದಿಕೆ ಸಿದ್ಧಪಡಿಸುತ್ತಿದೆ.

 

ಒಂದೊಮ್ಮೆ ಈ ಮಾದರಿಯನ್ನು ಸರ್ಕಾರವು ಒಪ್ಪಿಕೊಂಡಿದ್ದೇ ಆದಲ್ಲಿ ಖಾಸಗಿ ಬಿಲ್ಡರ್ಸ್‌, ಖಾಸಗಿ ಕಟ್ಟಡ ನಿರ್ಮಾಣ ಕಂಪನಿಗಳಿಗೆ ಕೇಂದ್ರ ಸರ್ಕಾರದ ಸಬ್ಸಿಡಿಯೂ ದೊರಕಲಿದೆ. ಅಥವಾ ಸರ್ಕಾರದ ಸ್ಥಳ ಇಲ್ಲದಿದ್ದಲ್ಲಿ ಖಾಸಗಿ ಸ್ವತ್ತಿನಲ್ಲಿಯೂ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಅಂದರೆ ಖಾಸಗಿ ಸ್ವತ್ತಿನಲ್ಲಿ ಖಾಸಗಿ ಡೆವಲಪರ್ಸ್‌ ನಿರ್ಮಿಸುವ ವಸತಿಗಳಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ಕೂಡ ಸಿಗುವುದರಿಂದ ಒಂದು ರೀತಿಯಲ್ಲಿ ಉಂಡು ಹೋದ, ಕೊಂಡೂ ಹೋದ ಎಂಬಂತಾಗಲಿದೆ.

 

ಸರ್ಕಾರದ ಮುಂದೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಮೂರು ಮಾದರಿಗಳನ್ನು ಪ್ರಸ್ತುತಪಡಿಸಿದೆ. ಅದರಲ್ಲಿ ಖಾಸಗಿ ಜಾಗಗಳಲ್ಲೇ ಮನೆಗಳ ನಿರ್ಮಾಣವನ್ನು ಕಡ್ಡಾಯಗೊಳಿಸುವುದು, ಎರಡನೆಯದು ಸಬ್ಸಿಡಿಯನ್ನು ಫಲಾನುಭವಿಗಳಿಗೆ ನೀಡುವುದು, ಮೂರನೆಯದು ಪಿಪಿಪಿ ಮಾದರಿಯಲ್ಲಿ ಸರ್ಕಾರಿ ಜಾಗಗಳಲ್ಲಿ ಜಂಟಿ ಅಭಿವೃದ್ಧಿ ಮಾಡಬಹುದು ಎಂಬ ಮೂರು ಮಾದರಿಗಳನ್ನು ಸರ್ಕಾರದ ಮುಂದಿರಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

 

ಈ ಮೂರೂ ಮಾದರಿಗಳ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್, ವಸತಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌, ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

 

ಖಾಸಗಿ ಡೆವಲಪರ್ಸ್‌ಗಳಿಗೆ ಕಡ್ಡಾಯಗೊಳಿಸಬಹುದಾದರ ಕುರಿತು ನೀತಿ ರೂಪಿಸುವುದು ಮತ್ತು ಅಂತಿಮಗೊಳಿಸುವುದರ ಕುರಿತು ಕ್ರೆಡೈ ನೊಂದಿಗೆ ಸಮಾಲೋಚಿಸಬೇಕು. ಇದಕ್ಕಾಗಿ ವಸತಿ ಇಲಾಖೆಯು ಕೆಟಿಪಿಸಿ ಕಾಯ್ದೆ ತಿದ್ದುಪಡಿ ಮತ್ತು ಅನುಷ್ಠಾನದ ಕುರಿತು ವಿಧಿ ಲೀಗಲ್‌ ಸಂಸ್ಥೆಯಿಂದ ಕಾನೂನು ತಜ್ಞರ ನೆರವು ಪಡೆಯಬೇಕು ಎಂದು ಸಭೆಯು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

ವಸತಿ ಇಲಾಖೆಯು ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ನಗರಾಭಿವೃದ್ಧಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳಿರಬೇಕು. ಈ ಸಮಿತಿಯು ಪೈಲಟ್‌ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ನಡೆಸಬೇಕು. ಪ್ರಾಧಿಕಾರವು ಯಾವುದೇ ಸೂಕ್ತವಾದ ಸರ್ಕಾರಿ ಭೂಮಿಯನ್ನು ಗುರುತಿಸದಿದ್ದರೆ ಖಾಸಗಿ ಭೂಮಿಯನ್ನು ಬಳಸಿಕೊಳ್ಳಲಾಗುವುದು ಎಂದು ಈ ಸಮಿತಿಯು ನಿರ್ದಿಷ್ಟಪಡಿಸಬೇಕು ಎಂದು ಶಿಫಾರಸ್ಸು ಮಾಡಿದೆ.

 

 

ಬಡ್ಡಿ ಸಬ್ಸಿಡಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಸಬ್ಸಿಡಿಗಳನ್ನು ಬಳಸಿಕೊಳ್ಳುವ ವಿಧಾನಳು ಮತ್ತು ಸರ್ಕಾರಿ ಭೂಮಿಯಲ್ಲಿ ವಸತಿ ಯೋಜನೆಯನ್ನು ಪಿಪಿಪಿ ಆಧಾರಿತ ಜಂಟಿ ಅಭಿವೃದ್ಧಿ ಮಾದರಿಯ ಕುರಿತು ಹೆಚ್ಚಿನ ಸಮಾಲೋಚನೆಗಳನ್ನು ನಡೆಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.

 

ರಾಜ್ಯದ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಿ ಹೆಚ್ಚುವರಿ ಆದಾಯ ತರುವ ಸಲುವಾಗಿ ಸಲಹೆ ನೀಡಲು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎಂಬ ವಿದೇಶಿ ಸಂಸ್ಥೆಯನ್ನು ಸರ್ಕಾರ ನೇಮಿಸಿದೆ. ಈ ಸಂಸ್ಥೆಗೆ ಆರು ತಿಂಗಳಿಗೆ 9.5 ಕೋಟಿ ರೂ. ಸಂಭಾವನೆಯನ್ನು ನಿಗದಿಪಡಿಸಿತ್ತು. ಇದಕ್ಕೆ ಪ್ರತಿಪಕ್ಷ ಬಿಜೆಪಿಯು ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts