ಗಾಂಧಿ ಭವನಕ್ಕೆ ಉಚಿತ ನಿವೇಶನ ಮಂಜೂರಾತಿಗೆ ಅಡ್ಡಗಾಲು; ಆರ್ಥಿಕವಾಗಿ ತುಂಬಾ ನಷ್ಟವೆಂದ ಸರ್ಕಾರ

ಬೆಂಗಳೂರು; ಕೋಲಾರ ನಗರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ನಾಗರಿಕ ಸೌಲಭ್ಯ ನಿವೇಶನವನ್ನು ಉಚಿತವಾಗಿ ನೀಡಲು ನಗರಾಭಿವೃದ್ಧಿ ಇಲಾಖೆಯು ಅಡ್ಡಗಾಲು ಹಾಕಿದೆ. ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗಲಿದೆ ಎಂದು ಪ್ರತಿಪಾದಿಸಿದೆ.

 

ಬೆಳಗಾವಿಯಲ್ಲಿ ಇದೇ 24ರಂದು ಕಾಂಗ್ರೆಸ್‌ ಶತಮಾನೋತ್ಸವ ಆಚರಣೆ ಮತ್ತು ಗಾಂಧಿ ಭಾರತ ಪರಿಕಲ್ಪನೆಯಡಿಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಹೊರಟಿರುವ ನಡುವೆಯೇ ಕೋಲಾರ ನಗರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಉಚಿತವಾಗಿ ನಿವೇಶನ ನೀಡಲು ನಗರಾಭಿವೃದ್ಧಿ ಇಲಾಖೆಯು ಎತ್ತಿರುವ ತಕರಾರು ಮುನ್ನೆಲೆಗೆ ಬಂದಿದೆ.

 

ಕೋಲಾರ ನಗರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಚಿತ ನಿವೇಶನ ಮಂಜೂರು ಮಾಡಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆಯು ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಎರಡು ಬಾರಿಯೂ ನಗರಾಭಿವೃದ್ಧಿ ಮತ್ತು ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಉಚಿತವಾಗಿ ನಿವೇಶನ ಮಂಜೂರು ಮಾಡುವುದರಿಂದ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗಲಿದ ಎಂದು ಪ್ರತಿಪಾದಿಸಿತ್ತು.

 

ಆದರೂ ಪಟ್ಟು ಬಿಡದ ಕನ್ನಡ ಸಂಸ್ಕೃತಿ ಇಲಾಖೆಯು 2023ರ ನವಂಬರ್‍‌ 16ರಂದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತ್ತು. ಈಗಲೂ ಸಹ ನಗರಾಭಿವೃದ್ಧಿ ಇಲಾಖೆ ಮತ್ತು ಆರ್ಥಿಕ ಇಲಾಖೆಯು ತನ್ನ ಹಿಂದಿನ ನಿಲುವಿಗೇ ಅಂಟಿಕೊಂಡಿದೆ. ಸದ್ಯ ಈ ಪ್ರಸ್ತಾವನೆಯ ಮೇಲೆ ಮುಂದಿನ ಕ್ರಮಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯೇ ಸಚಿವ ಸಂಪುಟಕ್ಕೆ ಕಡತ (ನಅಇ 226 ಬೆಂರೂಪ್ರಾ 2023) ಮಂಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಸ್ತಾವನೆಯಲ್ಲೇನಿದೆ?

 

ಕೋಲಾರ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲು 100/100 ಅಳತೆಯ ನಾಗರಿಕ ಸೌಲಭ್ಯ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಕೋಲಾರ ಜಿಲ್ಲಾಧಿಕಾರಿಗೆ ಕೋರಿದ್ದರು. ಈ ಪ್ರಕರಣವು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕಾರಣ, ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳಿಸಿದ್ದರು. ಅಲ್ಲದೇ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡುವ ಕುರಿತು ಸರ್ಕಾರದ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೋರಿದ್ದರು ಎಂದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ನಿಯಮದಲ್ಲಿ ಅವಕಾಶವಿಲ್ಲ

 

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ನಿಯಮ 8(1)ರ ಪ್ರಕಾರ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಿದೆ. ಅದರಂತೆ ನಿವೇಶನಕ್ಕೆ ದರವನ್ನು ನಿಗದಿಪಡಿಸಿದೆ. ಹೀಗಾಗಿ ಪ್ರಸ್ತಾಪಿತ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಅಭಿಪ್ರಾಯಿಸಿದೆ.
ಆದರೂ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಸಚಿವ ಬೈರತಿ ಸುರೇಶ್‌ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು.

 

 

ಆರ್ಥಿಕ ನಷ್ಟ

 

ಕನ್ನಡ ಸಂಸ್ಕೃತಿ ಇಲಾಖೆಯ ಕೋರಿಕೆ ಮೇರೆಗೆ ಗಾಂಧಿ ಭವನ ನಿರ್ಮಾಣಕ್ಕೆ ಉಚಿತವಾಗಿ ನಿವೇಶನ ಮಂಜೂರು ಮಾಡಿದರೆ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗಲಿದೆ ಎಂದು ಇಲಾಖೆಯು ಪ್ರತಿಪಾದಿಸಿದೆ.

 

‘ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸರ್ಕಾರದ ವತಿಯಿಂದ ಯಾವುದೇ ಅನುದಾನವನ್ನು ನೀಡುತ್ತಿರುವುದಿಲ್ಲ. ನಗರಾಭಿವೃದ್ದಿ ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಗಾಂಧಿ ಭವನ ನಿರ್ಮಿಸುವ ಸಂಬಂಧ 100/100 ಅಳತೆಯ ನಾಗರೀಕ ನಿವೇಶನವನ್ನು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಉಚಿತವಾಗಿ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತದೆ,’ ಎಂದು ನಗರಾಭಿವೃದ್ಧಿ ಇಲಾಖೆಯು ಅಭಿಪ್ರಾಯಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ನಗರಾಭಿವೃದ್ಧಿ ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಆರ್ಥಿಕ ಇಲಾಖೆಯೂ ಸಹಮತಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್‌ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts