ಬೆಂಗಳೂರು; ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನೀಡಿದ್ದ ಮಂಜೂರಾತಿ ಆದೇಶವನ್ನು ಸರ್ಕಾರವು ರದ್ದುಪಡಿಸಿದೆ. ಅಲ್ಲದೇ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದರೇ ಅದನ್ನು ಕೂಡಲೇ ಹಿಂಪಡೆಯಬೇಕು ಎಂದೂ ಸೂಚಿಸಿದೆ.
ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರ ಕೋರಿಕೆ ಮೇರೆಗೆ ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿದೆ. ಈ ಸಂಬಂಧ 2024ರ ಡಿಸೆಂಬರ್ 3ರಂದೇ ಆದೇಶ ಹೊರಡಿಸಿದೆ. ಈ ಆದೇಶದ (ಸಕಇ 250 ಪಕವಿ 2024 ) ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಂಗಳೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ 2024ರ ಆಗಸ್ಟ್ 8ರಂದು 1 ಕೋಟಿ ರು. ಅನುದಾನ ಮಂಜೂರಾಗಿತ್ತು. ಈ ಬಗ್ಗೆ ಸರ್ಕಾರದ ಆದೇಶವನ್ನೂ ಹೊರಡಿಸಲಾಗಿತ್ತು.
ಈ ಆದೇಶದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು 2024ರ ನವೆಂಬರ್ 11ರಂದು ಸೂಚಿಸಿದ್ದರು.
ಈ ಮಧ್ಯೆ ಈ ಅನುದಾನವನ್ನು ವಿವಿಧ ಇಲಾಖೆಗಳಿಗೆ ಮರು ಹಂಚಿಕೆಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಕೋರಿದ್ದರು. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರಾಗಿದ್ದ ಮೊತ್ತವನ್ನು ಕಡಿತ ಮಾಡುವಂತೆ ತಿಳಿಸಿದ್ದರು ಎಂಬುದು ಆದೇಶದ ಪ್ರತಿಯಿಂದ ಗೊತ್ತಾಗಿದೆ.
‘ಈ ಹಿನ್ನೆಲೆಯಲ್ಲಿ ಮಂಗಳೂರು ವಿಧಾನಸಭೆ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರಾದ 1.00 ಕೋಟಿ ಮೊತ್ತಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದಲ್ಲಿ ಈ ಆದೇಶವನ್ನು ಹಿಂಪಡೆಯಬೇಕು. ಹಿಂಪಡೆಯಲಾದ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು,’ ಎಂದೂ ಆದೇಶದಲ್ಲಿ ಹೇಳಲಾಗಿದೆ.
ಪಕ್ಷದ ಸದಸ್ಯರಿಗೆ ತಲಾ 25 ಕೋಟಿ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಈ ಅನುದಾನ ಪಡೆಯಲು ಕಾಂಗ್ರೆಸ್ ಶಾಸಕರು ಪೈಪೋಟಿಗಿಳಿದಿದ್ದರು. ಕಾಮಗಾರಿಗಳ ಪಟ್ಟಿ, ಅದಕ್ಕೆ ತಗಲುವ ಅಂದಾಜು ಮೊತ್ತ ಮತ್ತು ಅನುಷ್ಠಾನಗೊಳಿಸಬೇಕಾದ ಏಜೆನ್ಸಿಯ ವಿವರಗಳನ್ನು ಮುಖ್ಯಮಂತ್ರಿಗಳಿಗೆ ಶಾಸಕರು ಪ್ರಸ್ತಾವ ಸಲ್ಲಿಸಿದ್ದರು.