ವಕ್ಫ್‌ ಗದ್ದಲ; 2017ರ ಅಂತ್ಯಕ್ಕೇ 8,622 ಆಸ್ತಿಗಳು ವಕ್ಫ್‌ ಸ್ವತ್ತೆಂದು ನಮೂದು, ಕಲ್ಬುರ್ಗಿಯಲ್ಲೇ ಅತೀ ಹೆಚ್ಚು

ಬೆಂಗಳೂರು;  ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2017ರ ಅಂತ್ಯಕ್ಕೆ  ಇತರೆ ಹಕ್ಕಿನ  ಕಾಲಂಗಳಡಿಯಲ್ಲಿ 8,622 ಆಸ್ತಿಗಳನ್ನು   ವಕ್ಫ್‌ ಆಸ್ತಿ ಎಂದು ನಮೂದಾಗಿಸಲಾಗಿತ್ತು.

 

ಅಲ್ಲದೇ ಬಾಕಿ ಇದ್ದ  ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ ಮತ್ತು  ಇತರೆ ಹಕ್ಕಿನ  ಕಾಲಂಗಳಡಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಮಾಡಬೇಕು ಎಂದು ಆರ್‍‌ ಅಶೋಕ್‌ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಜೆ ಆರ್‍‌ ಲೋಬೋ ಅವರು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯೂ ಸಹ  ಅಂದಿನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

 

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ವಕ್ಫ್‌ ಮತ್ತು ವಕ್ಫ್‌ ಮಂಡಳಿಯಲ್ಲಿ ನೋಂದಾಯಿತಗೊಂಡಿರುವ ವಕ್ಫ್‌ ಆಸ್ತಿಗಳ ಸಂರಕ್ಷಣೆ  ಮತ್ತು ವಕ್ಫ್‌ ಆಸ್ತಿಗಳ ನಿರ್ವಹಣೆ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ 2018 ಮತ್ತು 2019ರಲ್ಲೇ ವರದಿಯನ್ನು ಮಂಡಿಸಿತ್ತು. ಈ ಎರಡೂ ವರದಿಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು 2018ರ ಫೆ.2018ರಲ್ಲೇ ವರದಿ ನೀಡಿತ್ತು.

 

 

ಈ ಸಮಿತಿಗೆ ಜೆ ಆರ್ ಲೋಬೋ ಅವರು ಅಧ್ಯಕ್ಷರಾಗಿದ್ದರು.

 

 

ಈ ಎರಡೂ ವರದಿಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಒಟ್ಟು 30 ಜಿಲ್ಲೆಗಳಲ್ಲಿ ಕಂದಾಯ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 18,405ಕ್ಕೂ ಹೆಚ್ಚು ಆಸ್ತಿಗಳನ್ನು ವಕ್ಫ್‌ ದಾಖಲೆ ಮಾಡಲಾಗಿತ್ತು. ಅದೇ ರೀತಿ ಮತ್ತು ಇತರೆ ಕಾಲಂನಲ್ಲಿ 8,622 ಆಸ್ತಿಗಳನ್ನು ವಕ್ಫ್‌ ಸ್ವತ್ತು  ಎಂದು 2017ರ ಡಿಸೆಂಬರ್ ಅಂತ್ಯಕ್ಕೆ ದಾಖಲೆಗಳಲ್ಲಿ  ನಮೂದು ಮಾಡಿತ್ತು.

 

 

ದಾವಣಗೆರೆ ಜಿಲ್ಲೆಯಲ್ಲಿ 500, ಚಿತ್ರದುರ್ಗದಲ್ಲಿ 384, ಬಾಗಲಕೋಟೆಯಲ್ಲಿ 395, ಬೆಳಗಾವಿಯಲ್ಲಿ 578, ಗದಗ್‌ 525, ಉತ್ತರ ಕನ್ನಡದಲ್ಲಿ 576, ಬಳ್ಳಾರಿಯಲ್ಲಿ 542, ಬೀದರ್‍‌ 429, ಕಲ್ಬುರ್ಗಿಯಲ್ಲಿ 2,253, ಕೊಪ್ಪಳದಲ್ಲಿ 675, ರಾಯಚೂರು 1,021 ಸ್ವತ್ತುಗಳನ್ನು ಇತರೆ ಕಾಲಂಗಳಡಿಯಲ್ಲಿ ವಕ್ಪ್‌ ಸ್ವತ್ತು ಎಂದು ನಮೂದಿಸಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

2017ರ ಡಿಸೆಂಬರ್‍‌ ಅಂತ್ಯಕ್ಕೆ ಒಟ್ಟಾರೆಯ 32,675 ಆಸ್ತಿಗಳನ್ನು ವಕ್ಫ್‌ ಎಂದು ಇತರೆ ಕಾಲಂಗಳಡಿಯಲ್ಲಿ ನಮೂದು ಮಾಡಲು ಬಾಕಿ ಇತ್ತು ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸಮಿತಿಗೆ ಪಟ್ಟಿ ಒದಗಿಸಿತ್ತು.

 

 

ಈ ಪಟ್ಟಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 1,462, ಚಿಕ್ಕಬಳ್ಳಾಪುರದಲ್ಲಿ 708, ಕೋಲಾರದಲ್ಲಿ 989, ರಾಮನಗರದಲ್ಲಿ 576, ಶಿವಮೊಗ್ಗದಲ್ಲಿ 762, ತುಮಕೂರು 846, ಬೆಳಗಾವಿಯಲ್ಲಿ 1,915, ಧಾರವಾಡದಲ್ಲಿ 2,466, ಹಾವೇರಿಯಲ್ಲಿ 1,779, ವಿಜಯುಪುರದಲ್ಲಿ 2,382, ಬಳ್ಳಾರಿಯಲ್ಲಿ 842, ಬೀದರ್‍‌ನಲ್ಲಿ 3,367, ಕಲ್ಬುರ್ಗಿಯಲ್ಲಿ 3,460, ರಾಯಚೂರು 1,624, ದಕ್ಷಿಣ ಕನ್ನಡದಲ್ಲಿ 1,502, ಮೈಸೂರು 902 ಆಸ್ತಿಗಳನ್ನು ಇತರೆ ಕಾಲಂಗಳಡಿಯಲ್ಲಿ ವಕ್ಫ್‌ ಎಂದು ನಮೂದು ಮಾಡಲು ಬಾಕಿ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

 

ಪಹಣಿ ಕಾಲಂ 9ರಲ್ಲಿ ವಕ್ಫ್‌ ಆಸ್ತಿ ನಮೂದು; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಸೂಚನೆ, ಮುನ್ನೆಲೆಗೆ ಬಂದ ಸುತ್ತೋಲೆ

 

ವಕ್ಫ್‌ ಆಸ್ತಿಗಳು ಸಮುದಾಯದ ಸಾರ್ವಜನಿಕ ಸ್ವತ್ತಾಗಿದ್ದು ಜಮೀನಿನ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಧಿಕೃತ ಒತ್ತುವರಿ, ಅನಧಿಕೃತ ಮಾರಾಟಕ್ಕೆ ತುತ್ತಾಗುವ ಸಂಭವವಿದೆ. ಕಂದಾಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಗಳಲ್ಲಿ ಬಾಕಿ ಇರುವ ಖಾತೆ ಬದಲಾವಣೆ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಲೋಬೋ ಅಧ್ಯಕ್ಷತೆಯ ಸಮಿತಿಯು ನಿರ್ದೇಶಿಸಿತ್ತು.

 

 

 

ಅದೇ ರೀತಿ ಆರ್‍‌ ಅಶೋಕ್‌ ಅಧ್ಯಕ್ಷತೆಯಲ್ಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌, ವಕ್ಫ್‌ ಇಲಾಖೆಗೆ ಸಂಬಂಧಿಸಿದಂತೆ ತನ್ನ ಮೊದಲನೇ ವರದಿಯನ್ನು 2019ರ ಫೆ 13 ಮತ್ತು 14ರಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿತ್ತು.

 

 

 

 

ಕರ್ನಾಟಕ ವಕ್ಫ್‌ ನಿಯಮಗಳ ಪ್ರಕಾರ ವಕ್ಫ್ ಆಸ್ತಿಗಳ ವಿವರಗಳನ್ನು ಇಂದೀಕರಿಸಬೇಕು  (to update) ಎಂದು ಪಿಎಸಿ ಅಧ್ಯಕ್ಷರಾಗಿದ್ದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು  ನಿರ್ದೇಶನ ನೀಡಿತ್ತು.

 

 

ಪ್ರತಿಯೊಂದು ಆಸ್ತಿಯ ದಾಖಲೆಗಳನ್ನು ದಾಖಲೆಗಳ ಸಂಬಂಧಿತ ಕಾಲಂಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿದ ನಂತರ ವಕ್ಫ್‌ನ ಹೆಸರನ್ನು ನಮೂದಿಸಬೇಕು. ಆದರೆ ಮಂಡಳಿಯು ಈ ನಿಯಮಗಳನ್ನು ಅನುಸರಿಸಿರಲಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವರದಿಯಲ್ಲಿ ವಿವರಿಸಿತ್ತು.

 

 

ವಕ್ಫ್‌ ಗೆ ಸಂಬಂಧಿಸಿದ ಭೂದಾಖಲೆಗಳನ್ನು ಕಾಲಕಾಲಕ್ಕೆ ಇಂದೀಕರಿಸಲು ವಿಫಲವಾಗಿದ್ದರಿಂದಾಗಿ ಮಂಡಳಿಯು ಆಸ್ತಿಗಳನ್ನು ನೋಂದಣಿ ಮಾಡಿದ ಬಹಳಷ್ಟು ಕಾಲದ ನಂತರ ವಕ್ಫ್‌ ಆಸ್ತಿಗಳನ್ನು ಮಾರಾಟ ಅಥವಾ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಂತಾಯಿತು ಎಂದು ವರದಿಯಲ್ಲಿ ವಿವರಿಸಿದೆ.

 

21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ; 7 ತಿಂಗಳ ಹಿಂದೆಯೇ ಕಂದಾಯ ಇಲಾಖೆಗೆ ಸೂಚನೆ, ಪತ್ರ ಬಹಿರಂಗ

 

‘ವಕ್ಫ್‌ ಆಸ್ತಿಗಳೆಂಬುದಾಗಿ ಮಂಡಳಿಯು ನೋಂದಣಿ ಮಾಡಿದ್ದ 609.91 ಕೋಟಿ ರು ಮೌಲ್ಯದ 145 ಆಸ್ತಿಗಳು ಅನೇಕ ವ್ಯಕ್ತಿಗಳ ವೈಯಕ್ತಿಕ ಹೆಸರಿನಲ್ಲಿದ್ದವು. ಹಾಗೂ ಮಂಡಳಿಯು ಭೂ ದಾಖಲೆಗಳನ್ನು ವಕ್ಫ್‌  ಸಂಸ್ಥೆಗಳ ಪರವಾಗಿ ಇಂದೀಕರಿಸಲು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ,’ ಎಂದು ಸಮಿತಿಯು ಖಂಡಿಸಿತ್ತು. ಮತ್ತು ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಮಿತಿಯು ವರದಿಯಲ್ಲಿ ಆಗ್ರಹಿಸಿತ್ತು.

 

 

ಅದೇ ರೀತಿ 3,000 ವಕ್ಫ್‌ ಆಸ್ತಿಗಳ ಕುರಿತು ವಿವರಣೆಗಳೇ ಇರಲಿಲ್ಲ ಎಂದು ಇಲಾಖೆಯು ಹೇಳಿದ್ದನ್ನು ಸಮಿತಿಯು ಅವಲೋಕಿಸಿತ್ತು. ಬಾಕಿ ಇದ್ದ 20,473 ಆಸ್ತಿಗಳನ್ನು ಇಂದೀಕರಿಸಲು (updation) ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಮಿತಿಯು ಸೂಚಿಸಿತ್ತು.

SUPPORT THE FILE

Latest News

Related Posts