ಭೂಸ್ವಾಧೀನ ಪ್ರಕರಣಗಳಲ್ಲಿ ಎಸ್‌ಎಲ್‌ಪಿ ದಾಖಲಿಸಲು ವಿಳಂಬ; ಬೊಕ್ಕಸಕ್ಕೆ 3,000 ಕೋಟಿಯಷ್ಟು ಆರ್ಥಿಕ ಹೊರೆ

ಬೆಂಗಳೂರು; ಭೂ ಸ್ವಾಧೀನ ಕಾಯ್ದೆ 1894 ಸೇರಿದಂತೆ ಮತ್ತಿತರೆ ಕಾಯ್ದೆಗಳಡಿಯಲ್ಲಿ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಜಾಗೊಂಡಿದ್ದ ಅರ್ಜಿಗಳಿಗೆ ಹಲವು ಪ್ರಕರಣಗಳಲ್ಲಿ 120 ದಿನಗಳ ನಂತರ ಒಟ್ಟು 981 ಮೇಲ್ಮನವಿ ಅರ್ಜಿಗಳನ್ನು ವಿಳಂಬವಾಗಿ ಸಲ್ಲಿಸಲಾಗಿದೆ. ಹೀಗಾಗಿ ಈ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ.

 

ಇದರಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಸುಮಾರು 3,000 ಕೋಟಿ ರು ನಷ್ಟು ಆರ್ಥಿಕ ಹೊರೆ ಬೀಳಲಿದೆ.

 

ಹೈಕೋರ್ಟ್‌ನ ವಿಭಾಗೀಯ ಪೀಠ ಮತ್ತು ಸುಪ್ರೀಂ ಕೋರ್ಟ್‌ನ ವಿವಿಧ ಪೀಠಗಳಲ್ಲಿ ವಿಶೇಷ ಮೇಲ್ಮನವಿ  ಅರ್ಜಿಗಳನ್ನು ಸಲ್ಲಿಸುವಲ್ಲಿ ಅಧಿಕಾರಿಗಳ ಹಂತದಲ್ಲೇ ವಿಳಂಬವಾಗುತ್ತಿದೆ. ಈ ಕುರಿತು ರಾಜ್ಯದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರ ಕಚೇರಿಯು 2024ರ ಅಕ್ಟೋಬರ್‍‌ನಲ್ಲಿ ಹಲವು ಪತ್ರಗಳನ್ನು ಬರೆದಿದೆ. ಈ ಎಲ್ಲಾ ಪತ್ರಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ಪತ್ರಗಳನ್ನಾಧರಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ   2024ರ ನವೆಂಬರ್‍‌ 13ರಂದು ನಡೆದಿರುವ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಇದರ ನಡವಳಿಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಕಂದಾಯ, ಮೂಲಸೌಕರ್ಯ ಅಭಿವೃದ್ದಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ವಿವಿಧ ನೀರಾವರಿ ನಿಗಮ ಮತ್ತು ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನವಾಗಿವೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಭೂ ಪರಿಹಾರ ನೀಡಿಲ್ಲ.

 

ಹೀಗಾಗಿ ಅರ್ಜಿದಾರರು ಮತ್ತು ಸಂಸ್ಥೆಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದವು. ಈ ದಾವೆಗಳನ್ನು ಪ್ರತಿನಿಧಿಸಿದ್ದ ಸರ್ಕಾರದ ವಿವಿಧ ಇಲಾಖೆಗಳ ಅರ್ಜಿಗಳೂ ವಜಾಗೊಂಡಿವೆ. ಆದರೆ ಈ ಅರ್ಜಿಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಲ್ಲಿ ಇಲಾಖೆಗಳು ವಿಳಂಬ ಧೋರಣೆ ಅನುಸರಿಸಿವೆ. ಇದರ ಒಟ್ಟಾರೆ ಪರಿಣಾಮವೇ 3,000 ಕೋಟಿಯಷ್ಟು ಸರ್ಕಾರದ ಬೊಕ್ಕಸದ ಮೇಲೆ ಹೊರೆ ಬೀಳಲಿದೆ ಎಂದು ಪತ್ರದಿಂದ ಗೊತ್ತಾಗಿದೆ.

 

‘ಭೂ ಸ್ವಾಧೀನ ಪ್ರಕರಣಗಳಲ್ಲಿ 120 ದಿನಗಳ ನಂತರ ಸಲ್ಲಿಸಿದ 981 ಮೇಲ್ಮನವಿ ಅರ್ಜಿಗಳನ್ನು ವಿಳಂಬದ ಕಾರಣದಿಂದ ವಜಾಗೊಳಿಸಲಾಗಿದೆ. ಇದರಿಂದಾಗಿ ಸುಮಾರು 3,000 ಕೋಟಿ ಆರ್ಥಿಕ ಹೊರೆ ಬೀಳಲಿದೆ,’ ಎಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೋಮಶೇಖರ ಅವರು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರಿಗೆ 2024ರ ಅಕ್ಟೋಬರ್‍‌ 30ರಂದು ಪತ್ರ ಬರೆದಿದ್ದಾರೆ.

 

 

981 ಮೇಲ್ಮನವಿ ಅರ್ಜಿಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 06 ಪ್ರಕರಣಗಳು ಇವೆ. ಇದು ಹೈಕೋರ್ಟ್‌ನ ಧಾರವಾಡ (ಎಂಎಫ್‌ಎ ಸಂಖ್ಯೆ 102524/2024 ಮತ್ತು 102525/2024) ಪೀಠದಲ್ಲಿದೆ. ಇದನ್ನು 2024ರ ಸೆ.23ರಂದು ನ್ಯಾಯಾಲಯವು ವಜಾಗೊಳಿಸಿದೆ. ಈ ಎರಡೂ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ದಾಖಲಿಸಲು ಸರ್ಕಾರಿ ಆದೇಶ ಹೊರಡಿಸಬೇಕಿದೆ.

 

2 ಪ್ರಕರಣಗಳನ್ನು ಹೊರತುಪಡಿಸಿ ವಜಾಗೊಂಡಿರುವ ದಾಖಲಾಗಿದ್ದ ಎಂಎಫ್‌ಎ (ಸಂಖ್ಯೆ 100345/2020, 200429/2020, 100482/2020 ಮತ್ತು 102799/2022 ) ಕುರಿತು ಮೇಲ್ಮವನಿ ವಜಾಗೊಳಿಸಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ದಾಖಲಿಸಲು ತೀರ್ಮಾನಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಹಾಗೆಯೇ 981 ಪ್ರಕರಣಗಳಲ್ಲಿ ಸೇರ್ಪಡೆಯಾಗದಿರುವ ಲೋಕೋಪಯೋಗಿ ಇಲಾಖೆಯ ಉಚ್ಛ ನ್ಯಾಯಾಲಯದ ಧಾರವಾಡದಲ್ಲಿ ದಾಖಲಿಸಿರುವ ಎಂಎಫ್‌ಎ ಸಂಖ್ಯೆ 104009/2024 ಕುರಿತು 2024ರ ಅಕ್ಟೋಬರ್‍‌ 1ರಂದು ವಜಾಗೊಳಿಸಿದೆ. ಈ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ದಾಖಲಿಸಲು ತೀರ್ಮಾನಿಸಿದೆ ಎಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೋಮಶೇಖರ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಈ 981 ಪ್ರಕರಣಗಳಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 65 ಪ್ರಕರಣಗಳಿವೆ. ಬೀಳಗಿ ಕಚೇರಿಗೆ ಸಂಬಂಧಿಸಿದಂತೆ 20 ಪ್ರಕರಣಗಳಿವೆ. ನ್ಯಾಯಾಲಯದ ಆದೇಶ ದಿನಾಂಕದಿಂದ 05 ಪ್ರಕರಣಗಳಲ್ಲಿ 100 ದಿನಕ್ಕೆ , 07 ಪ್ರಕರಣಗಳಲ್ಲಿ  98 ದಿನಕ್ಕೆ, 05 ಪ್ರಕರಣಗಳಲ್ಲಿ 72 ದಿನಕ್ಕೆ, 01 ಪ್ರಕರಣದಲ್ಲಿ 89 ದಿನಕ್ಕೆ , 01 ಪ್ರಕರಣದಲ್ಲಿ 76 ದಿನಕ್ಕೆ ಮೇಲ್ಮನವಿ ದಾಖಲಿಸಲು ಅಡ್ವೋಕೇಟ್‌ ಜನರಲ್‌ ಕಾರ್ಯಾಲಯಕ್ಕೆ ಸಲ್ಲಿಸಿತ್ತು.

 

 

 

ಅದೇ ರೀತಿ ಜಮಖಂಡಿ ಕಚೇರಿಗೆ ಸಂಬಂಧಿಸಿದಂತೆ 44 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ದಿನಾಂಕದಿಂದ 09 ಪ್ರಕರಣಗಳಲ್ಲಿ 60 ದಿನಕ್ಕೆ, 01 ಪ್ರಕರಣದಲ್ಲಿ 62 ದಿನಕ್ಕೆ, 03 ಪ್ರಕರಣಗಳಲ್ಲಿ 83 ದಿನಕ್ಕೆ , 01 ಪ್ರಕರಣದಲ್ಲಿ 84 ದಿನಕ್ಕೆ , 02 ಪ್ರಕರಣದಲ್ಲಿ 85 ದಿನಕ್ಕೆ, 03 ಪ್ರಕರಣದಲ್ಲಿ 90 ದಿನಕ್ಕೆ, 01 ಪ್ರಕರಣದಲ್ಲಿ 97 ದಿನಕ್ಕೆ, 02 ಪ್ರಕರಣದಲ್ಲಿ 101 ದಿನಕ್ಕೆ, 03 ಪ್ರಕರಣದಲ್ಲಿ 106 ದಿನಕ್ಕೆ, 05 ಪ್ರಕರಣದಲ್ಲಿ 118 ದಿನಕ್ಕೆ, 07 ಪ್ರಕರಣದಲ್ಲಿ 120 ದಿನಕ್ಕೆ 06 ಪ್ರಕಣದಲ್ಲಿ 134 ದಿನಕ್ಕೆ , 01 ಪ್ರಕರಣದಲ್ಲಿ 143 ದಿನಕ್ಕೆ ಮೇಲ್ಮನವಿ ದಾಖಲಿಸಲು ಅಡ್ವೋಕೇಟ್‌ ಜನರಲ್‌ ಅವರಿಗೆ ಸಲ್ಲಿಸಿರುವುದು ಗೊತ್ತಾಗಿದೆ.

 

ಮೆಹಬೂಬ್‌ ನಗರ ಮುನಿರಾಬಾದ್‌ (ಗಿಣಿಗೇರಾ ರಾಯಚೂರು ) ರೈಲ್ವೆ ಯೋಜನೆಗೆ ಸಂಬಂಧಿಸಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ 22 ಪ್ರಕರಣಗಳಿವೆ. ಸಕಾಲದಲ್ಲಿ ಮೇಲ್ಮವನಿ ಸಲ್ಲಿಸದ ಕಾರಣ ಒಟ್ಟಾರೆ 224.08 ಕೋಟಿ ರು. ಪರಿಹಾರ ನೀಡಬೇಕಿದೆ. ಇದರಲ್ಲಿ ಯಾವುದೇ ಆರ್ಥಿಕ ಹೊರೆ ಇಲ್ಲ ಎಂದು ಹೇಳಿದೆ.

 

 

ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿನ ಭೂ ಸ್ವಾಧೀನ ಪ್ರಕರಣಗಳಲ್ಲಿ 120 ದಿನಗಳ ನಂತರ ಮೇಲ್ಮನವಿ ಸಲ್ಲಿಸಲಬಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ. ಒಟ್ಟಾರೆ 28 ಪ್ರಕರಣಗಳಲ್ಲಿ 57.58 ಕೋಟಿಯಷ್ಟು ಹೊರೆಯಾಗಲಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಮುನಿರಾಬಾದ್‌ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 86 ಪ್ರಕರಣಗಳಿವೆ. ನಿಗದಿತ ಅವಧಿಯಲ್ಲಿ ಮೇಲ್ಮವನ ಸಲ್ಲಿಸದ ಕಾರಣ ಬಡ್ಡಿ ಸೇರಿ 35.11 ಕೋಟಿ ರು ಒಳಗೊಂಡಿದೆ.

 

 

ಜಲ ಸಂಪನ್ಮೂಲ, ಕೃಷ್ಣ ಜಲಭಾಗ್ಯ ನಿಗಮ, ಕರ್ನಾಟಕ ನೀರಾವರಿ ನಿಗಮ, ಮೂಲ ಸೌಕರ್ಯ, ಸಣ್ಣ ನೀರಾವರಿ, ಪಿಡಬ್ಲ್ಯೂಡಿ, ಕಂದಾಯ, ಮತ್ತಿತರೆ ಪ್ರಕರಣಗಳಲ್ಲಿ ಒಟ್ಟಾರೆ 2,527.59  ಕೋಟಿ ರು.ನಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಗೊತ್ತಾಗಿದೆ.

 

ಈ ಎಲ್ಲಾ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts