ಒಳ ಮೀಸಲಾತಿ; ಉಪ ಜಾತಿ ನಮೂದಿಸದ 7.29 ಲಕ್ಷ ಪರಿಶಿಷ್ಟರು, ಮುನ್ನೆಲೆಗೆ ಬಂದ ಸಚಿವ ಸಂಪುಟ ಟಿಪ್ಪಣಿ

ಬೆಂಗಳೂರು; 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿಲ್ಲ. ಅಲ್ಲದೇ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ 4 ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವ ಅಂಕಿ ಅಂಶವೂ ಇಲ್ಲ.

 

ಅಲ್ಲದೇ 2011ರ ಜನಗಣತಿಯಂತೆಯೇ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್‌ ಸರ್ಕಾರವು ಸಮರ್ಥಿಸಿಕೊಂಡಿದೆ.

 

ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿದ್ದ ಟಿಪ್ಪಣಿಯಲ್ಲಿ ಈ ಅಂಶವಿದೆ. 2024ರ ಅಕ್ಟೋಬರ್‍‌ 25ರಂದು ಮಂಡಿಸಿದ್ದ ಸಚಿವ ಸಂಪುಟದ ಇಡೀ ಟಿಪ್ಪಣಿಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಅವರ ನೇತೃತ್ವದ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯು ಅಪ್ರಸ್ತುತವಾಗಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ತೀರ್ಮಾನವಾಗಿತ್ತು. ಸದಾಶಿವ ಆಯೋಗದ ವರದಿಯನ್ನಾಧರಿಸಿಯೇ ಒಳ ಮೀಸಲಾತಿ ನೀಡಬೇಕು ಎಂದು ದಲಿತ ಸಂಘಟನೆಗಳು ಹಕ್ಕೊತ್ತಾಯವನ್ನು ಮಂಡಿಸಿದ್ದವು. ಈ ಕುರಿತು ಕಾಂಗ್ರೆಸ್‌ ಸರ್ಕಾರವು ಒಳ ಮೀಸಲಾತಿ ಕುರಿತಂತೆ ಮತ್ತೊಂದು ನ್ಯಾಯಾಂಗ ಆಯೋಗವನ್ನು ರಚಿಸಿದೆ.

 

ಇದರ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಮಂಡಿಸಿದ್ದ ಟಿಪ್ಪಣಿಯು ಮುನ್ನೆಲೆಗೆ ಬಂದಿದೆ.

 

2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಇದೆ. ಈ ಪೈಕಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿ ಇದೆ. (ಗ್ರಾಮೀಣ 75 ಲಕ್ಷ ಮತ್ತು ನಗರ 30 ಲಕ್ಷ) ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಶೇ.17.15ರಷ್ಟು ಇದೆ.

 

‘2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿರುವುದಿಲ್ಲ. ಕಾರಣ ಒಟ್ಟಾರೆ ಜಾತಿವಾರು ನಿಖರ ಜನಸಂಖ್ಯೆ 97.56 ಲಕ್ಷ ಎಂದು ಪರಿಗಣಿಸಲಾಗಿದೆ. ಈ ಜನಸಂಖ್ಯೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ 29.21 ಲಕ್ಷ ಮತ್ತು ಆದಿ ದ್ರಾವಿಡರು 7.95 ಲಕ್ಷ ಸಂಖ್ಯೆಯಲ್ಲಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

 

 

ಮೊದಲ ಗುಂಪಿನಲ್ಲಿ (ಶೇ.6) ಆದಿದ್ರಾವಿಡ, ಭಂಬಿ, ಮಾದಿಗ, ಸಮಗಾರ ಒಟ್ಟು 4 ಜಾತಿಗಳಿವೆ. ಈ ಗುಂಪಿನ ಒಟ್ಟು ಜನಸಂಖ್ಯೆ 32.60 ಲಕ್ಷ ಇದೆ. ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚನ್ನದಾಸರ, ಹೊಲೆಯ, ಮಹರ್‍‌ ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 32.58 ಲಕ್ಷ ಜನಸಂಖ್ಯೆ ಇದೆ. ಮೂರನೇ ಗುಂಪಿನಲ್ಲಿ ಬಂಜಾರ ಹಾಗೂ ಇದರ ಸಮನಾಂತರ ಜಾತಿಗಳಿವೆ.

 

ಭೋವಿ ಮತ್ತು ಇದರ ಸಮನಾಂತರ ಜಾತಿಗಳು, ಕೊರಚ,/ಕೊರಚರ್‍‌ ಮತ್ತು ಕೊರಮ/ಕೊರವ,/ಕೊರವಾರ್‍‌ ಜಾತಿ ಸೇರಿ ಒಟ್ಟು 4 ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 26.51 ಲಕ್ಷ ಜನಸಂಖ್ಯೆ ಇದೆ. ನಾಲ್ಕನೇ ಗುಂಪಿನಲ್ಲಿ (ಮೊದಲ ಮತ್ತು ಎರಡನೇ ಗುಂಪು) ಈ ಹಿಂದೆ ಅಸ್ಪ್ರಶ್ಯತೆಗೆ ಒಳಗಾದ ಮತ್ತು ಕಡಿಮೆ ಜನಸಂಖ್ಯೆ ಇರುವ ಒಟ್ಟು 88 ಪರಿಶಿಷ್ಟ ಜಾತಿಗಳನ್ನು ಸೇರಿಸಲಾಗಿದೆ. ಈ ಗುಂಪಿನಲ್ಲಿ ಒಟ್ಟು 5.87 ಲಕ್ಷ ಜನಸಂಖ್ಯೆ ಇರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ಗೊತ್ತಾಗಿದೆ.

 

 

‘2011ರ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಮಾಡಲಾಗಿದೆ. ಆದರೆ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ ನಾಲ್ಕು ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವುದೇ ಅಂಕಿ ಅಂಶವೂ ಇಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

 

ಸಮರ್ಥನೆ ಏನು?

 

ಪಂಜಾಬ್‌ ರಾಜ್ಯ ಸರ್ಕಾರ ಇತರರ ಮತ್ತು ದಾವಿಂದರ್‍‌ ಸಿಂಗ್‌ ಮತ್ತಿತರರು (ಸಿವಿಲ್‌ ಅಪೀಲು 2317 /2011) ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2024ರ ಆಗಸ್ಟ್‌ 1ರಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಗಳು ಭಾರತ ಸಂವಿಧಾನದ ಅನುಚ್ಛೇಧ 15(4) ಮತ್ತು 16(4)ರಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಆದ್ದರಿಂದ 2011ರ ಜನಗಣತಿಯಂತೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವರ ನೇತೃತ್ವದ ಆಯೋಗದ ಶಿಫಾರಸ್ಸು ಪ್ರಸ್ತುತವಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವೇ  ಆದೇಶ ಹೊರಡಿಸಿತ್ತು.

 

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳು ಪ್ರಸ್ತುತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು  ಹೊರಡಿಸಿದ್ದ ಆದೇಶವು ಮುನ್ನೆಲೆಗೆ ಬಂದಿದೆ.

 

ಒಳ ಮೀಸಲಾತಿ; ಪ್ರಸ್ತುತವಾಗದ ಸದಾಶಿವ ಆಯೋಗದ ವರದಿ, ಚರ್ಚೆಗೆ ಗ್ರಾಸವಾದ 2 ವರ್ಷದ ಹಿಂದಿನ ಆದೇಶ

ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇಧ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿತ್ತು.

SUPPORT THE FILE

Latest News

Related Posts