ರೈತರ ಮಾಲೀಕತ್ವದ ಜಮೀನುಗಳು, ನೀರಾವರಿ ನಿಗಮದ ಹೆಸರಿಗೆ ನಮೂದು; ಮುನ್ನೆಲೆಗೆ ಬಂದ 761 ಪ್ರಕರಣಗಳು

ಬೆಂಗಳೂರು; ರಾಜ್ಯದ ಬೆಳಗಾವಿ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿನ ರೈತರು ಮತ್ತು ಭೂ ಮಾಲೀಕರ ಹೆಸರಿನಲ್ಲಿದ್ದ ಜಮೀನುಗಳು 2 ವರ್ಷದ ಹಿಂದೆಯೇ ಕರ್ನಾಟಕ ನೀರಾವರಿ ನಿಗಮದ ಹೆಸರಿಗೆ ದಾಖಲಾಗಿದ್ದವು.

 

ರೈತರು, ಭೂ ಮಾಲೀಕರ ಸ್ವಾಧೀನದಲ್ಲಿರುವ ಮತ್ತು ಅನುಭವದಲ್ಲಿರುವ ಜಮೀನುಗಳು ವಕ್ಪ್‌ ಆಸ್ತಿ ಎಂದು ದಾಖಲಾಗಿರುವುದರ ಪ್ರಕರಣಗಳು ರಾಜ್ಯದಲ್ಲಿ ಗದ್ದಲಕ್ಕೆ ಕಾರಣವಾಗಿವೆ. ಈ ಮಧ್ಯೆ ರೈತರ ಹೆಸರಿನಲ್ಲಿದ್ದ ಜಮೀನುಗಳು ನೀರಾವರಿ ನಿಗಮದ ಹೆಸರಿಗೆ ನಮೂದಾಗಿದ್ದವು ಎಂಬ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

ಬೆಳಗಾವಿ ಜಿಲ್ಲೆ ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತು ಕಿತ್ತೂರು ತಾಲೂಕುಗಳ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಈ ತಾಲೂಕುಗಳ ಹಲವಾರು ರೈತರ ಗೇಣಿ ಮತ್ತು ಪಹಣಿ ಪತ್ರಿಕೆ (ಆರ್‍‌ಟಿಸಿ)ಯಲ್ಲಿ ಭೂ ಮಾಲೀಕರ ಹೆಸರಿನ ಬದಲಿಗೆ ಕರ್ನಾಟಕ ನೀರಾವರಿ ನಿಗಮ ಎಂದು ನಮೂದಾಗುತ್ತಿದೆ. ಇದರಿಂದ ಭೂ ಮಾಲೀಕರು, ರೈತರು ಕಂಗಾಲಾಗಿದ್ದರು.

 

ಈ ಸಂಬಂಧ ಶಾಸಕ ಕೌಜಲಗಿ ಮಹಾಂತೇಶ್‌ ಅವರು ವಿಧಾನಸಭೆಯಲ್ಲಿ 2022ರಲ್ಲೇ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು.

 

ಈ ಬಗ್ಗೆ 2023ರ ಅಕ್ಟೋಬರ್‍‌ 10ರಂದು ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಉತ್ತರ ನೀಡಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರು ತಾಲೂಕುಗಳ ವ್ಯಾಪ್ತಿಯಲ್ಲಿ ಮಲಪ್ರಭಾ ನೀರಾವರಿ ಯೋಜನೆಯು ಇದೆ. ನೀರಾವರಿ ಇಲಾಖೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಷ್ಟೇ ಅಲ್ಲದೇ ಕೆಲವೊಂದು ತಾಂತ್ರಿಕ ದೋಷದಿಂದಾಗಿ ಸ್ವಾಧೀನಕ್ಕೆ ಒಳಗಾಗದ ಜಮೀನುಗಳ ರೈತರ ಗೇಣಿ ಮತ್ತು ಪಹಣಿ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ನೀರಾವರಿ ನಿಗಮ ಎಂದು ತಪ್ಪಾಗಿ ನಮೂದಾಗಿವೆ ಎಂದು ಕೌಜಲಗಿ ಮಹಾಂತೇಶ್‌ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.

 

ಇದಕ್ಕೆ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಉತ್ತರ ನೀಡಿದ್ದರು. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿಯು ಚರ್ಚಿಸಿದ್ದರು ಎಂದು ಗೊತ್ತಾಗಿದೆ.

 

ಉತ್ತರದಲ್ಲೇನಿದೆ?

 

ಮಲಪ್ರಭಾ ಯೋಜನೆ ನಂ -3 ಬಾಗಲಕೋಟೆ ಮತ್ತು ಹಿಡಕಲ್‌ ಡ್ಯಾಂನ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮದ ಹೆಸರನ್ನು ತಪ್ಪಾಗಿ ದಾಖಲು ಮಾಡಲಾಗಿದೆ. ಈ ರೀತಿ ತಪ್ಪಾಗಿ ನಮೂದಾಗಿರುವ ಕುರಿತು ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು 761 ಪ್ರಕರಣಗಳು ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾಗಿದ್ದವು. ಈ ಪೈಕಿ 693 ಪ್ರಕರಣಗಳನ್ನು 2023ರ ಅಕ್ಟೋಬರ್‍‌ 10ರ ಅಂತ್ಯಕ್ಕೆ ಇತ್ಯರ್ಥಗೊಳಿಸಲಾಗಿದೆ.

 

ತಪ್ಪಾಗಿ ದಾಖಲಾದ ಹಕ್ಕು ದಾಖಲೆಗಳನ್ನು ರದ್ದುಗೊಳಿಸಿ ಭೂ ಮಾಲೀಕರ ಹೆಸರು ದಾಖಲಿಸಲಾಗಿದೆ.
ವಿಶೇಷ ಭೂ ಸ್ವಾದೀನಾಧಿಕಾರಿಗಳಿಂದ ಸ್ವೀಕೃತಗೊಳ್ಳುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿರುವುದು ಗೊತ್ತಾಗಿದೆ.

 

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2017ರ ಅಂತ್ಯಕ್ಕೆ  ಇತರೆ ಹಕ್ಕಿನ  ಕಾಲಂಗಳಡಿಯಲ್ಲಿ 8,622 ಆಸ್ತಿಗಳನ್ನು   ವಕ್ಫ್‌ ಆಸ್ತಿ ಎಂದು ನಮೂದಾಗಿಸಲಾಗಿತ್ತು.

 

ಅಲ್ಲದೇ ಬಾಕಿ ಇದ್ದ  ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ ಮತ್ತು  ಇತರೆ ಹಕ್ಕಿನ  ಕಾಲಂಗಳಡಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದು ಮಾಡಬೇಕು ಎಂದು ಆರ್‍‌ ಅಶೋಕ್‌ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಜೆ ಆರ್‍‌ ಲೋಬೋ ಅವರು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯೂ ಸಹ  ಅಂದಿನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

 

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ವಕ್ಫ್‌ ಮತ್ತು ವಕ್ಫ್‌ ಮಂಡಳಿಯಲ್ಲಿ ನೋಂದಾಯಿತಗೊಂಡಿರುವ ವಕ್ಫ್‌ ಆಸ್ತಿಗಳ ಸಂರಕ್ಷಣೆ  ಮತ್ತು ವಕ್ಫ್‌ ಆಸ್ತಿಗಳ ನಿರ್ವಹಣೆ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ 2018 ಮತ್ತು 2019ರಲ್ಲೇ ವರದಿಯನ್ನು ಮಂಡಿಸಿತ್ತು. ಈ ಎರಡೂ ವರದಿಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು 2018ರ ಫೆ.2018ರಲ್ಲೇ ವರದಿ ನೀಡಿತ್ತು.

 

ವಕ್ಫ್‌ ಗದ್ದಲ; 2017ರ ಅಂತ್ಯಕ್ಕೇ 8,622 ಆಸ್ತಿಗಳು ವಕ್ಫ್‌ ಸ್ವತ್ತೆಂದು ನಮೂದು, ಕಲ್ಬುರ್ಗಿಯಲ್ಲೇ ಅತೀ ಹೆಚ್ಚು

 

 

 

 

ಈ ಪಟ್ಟಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 1,462, ಚಿಕ್ಕಬಳ್ಳಾಪುರದಲ್ಲಿ 708, ಕೋಲಾರದಲ್ಲಿ 989, ರಾಮನಗರದಲ್ಲಿ 576, ಶಿವಮೊಗ್ಗದಲ್ಲಿ 762, ತುಮಕೂರು 846, ಬೆಳಗಾವಿಯಲ್ಲಿ 1,915, ಧಾರವಾಡದಲ್ಲಿ 2,466, ಹಾವೇರಿಯಲ್ಲಿ 1,779, ವಿಜಯುಪುರದಲ್ಲಿ 2,382, ಬಳ್ಳಾರಿಯಲ್ಲಿ 842, ಬೀದರ್‍‌ನಲ್ಲಿ 3,367, ಕಲ್ಬುರ್ಗಿಯಲ್ಲಿ 3,460, ರಾಯಚೂರು 1,624, ದಕ್ಷಿಣ ಕನ್ನಡದಲ್ಲಿ 1,502, ಮೈಸೂರು 902 ಆಸ್ತಿಗಳನ್ನು ಇತರೆ ಕಾಲಂಗಳಡಿಯಲ್ಲಿ ವಕ್ಫ್‌ ಎಂದು ನಮೂದು ಮಾಡಲು ಬಾಕಿ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

 

ಪಹಣಿ ಕಾಲಂ 9ರಲ್ಲಿ ವಕ್ಫ್‌ ಆಸ್ತಿ ನಮೂದು; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಸೂಚನೆ, ಮುನ್ನೆಲೆಗೆ ಬಂದ ಸುತ್ತೋಲೆ

 

 

 

 

ವಕ್ಫ್‌ ಗೆ ಸಂಬಂಧಿಸಿದ ಭೂದಾಖಲೆಗಳನ್ನು ಕಾಲಕಾಲಕ್ಕೆ ಇಂದೀಕರಿಸಲು ವಿಫಲವಾಗಿದ್ದರಿಂದಾಗಿ ಮಂಡಳಿಯು ಆಸ್ತಿಗಳನ್ನು ನೋಂದಣಿ ಮಾಡಿದ ಬಹಳಷ್ಟು ಕಾಲದ ನಂತರ ವಕ್ಫ್‌ ಆಸ್ತಿಗಳನ್ನು ಮಾರಾಟ ಅಥವಾ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಂತಾಯಿತು ಎಂದು ವರದಿಯಲ್ಲಿ ವಿವರಿಸಿದೆ.

 

21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ; 7 ತಿಂಗಳ ಹಿಂದೆಯೇ ಕಂದಾಯ ಇಲಾಖೆಗೆ ಸೂಚನೆ, ಪತ್ರ ಬಹಿರಂಗ

 

‘ವಕ್ಫ್‌ ಆಸ್ತಿಗಳೆಂಬುದಾಗಿ ಮಂಡಳಿಯು ನೋಂದಣಿ ಮಾಡಿದ್ದ 609.91 ಕೋಟಿ ರು ಮೌಲ್ಯದ 145 ಆಸ್ತಿಗಳು ಅನೇಕ ವ್ಯಕ್ತಿಗಳ ವೈಯಕ್ತಿಕ ಹೆಸರಿನಲ್ಲಿದ್ದವು. ಹಾಗೂ ಮಂಡಳಿಯು ಭೂ ದಾಖಲೆಗಳನ್ನು ವಕ್ಫ್‌  ಸಂಸ್ಥೆಗಳ ಪರವಾಗಿ ಇಂದೀಕರಿಸಲು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ,’ ಎಂದು ಸಮಿತಿಯು ಖಂಡಿಸಿತ್ತು. ಮತ್ತು ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಮಿತಿಯು ವರದಿಯಲ್ಲಿ ಆಗ್ರಹಿಸಿತ್ತು.

 

SUPPORT THE FILE

Latest News

Related Posts