ಕಾರ್ಯಾದೇಶ ನೀಡಲು 60 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ; ಸರ್ಕಾರಕ್ಕೆ ದೂರು ಸಲ್ಲಿಸಿದ ಖಾಸಗಿ ಕಂಪನಿ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಕಾಂಗ್ರೆಸ್‌ ಇದೀಗ ತನ್ನದೇ ಅವಧಿಯಲ್ಲಿ 60 ಪರ್ಸೆಂಟ್‌ ಲಂಚ ಕೇಳುತ್ತಿದೆ!

 

ಅನಧಿಕೃತ ಜಾಹೀರಾತುಗಳು, ಖಾಸಗಿ ಸ್ವತ್ತುಗಳ ಒತ್ತುವರಿ ಹಾಗೂ ಮೊಬೈಲ್‌ ಟವರ್‍‌ಗಳನ್ನು ಉಚಿತವಾಗಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಂಪನಿಗಳಿಗೆ ಕಾರ್ಯಾದೇಶ ನೀಡಲು 60 ಪರ್ಸೆಂಟ್‌ ಲಂಚ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಬೇಡಿಕೆ ಇರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 

ಮದ್ಯ ಮಾರಾಟಗಾರರಿಂದ ಹಣಕ್ಕೆ ಬೇಡಿಕೆ ಇರಿಸುತ್ತಿದೆ ಮತ್ತು ಇವರಿಂದ 700 ಕೋಟಿ ರುಪಾಯಿ ವಸೂಲು ಮಾಡಲಾಗಿದೆ ಎಂಬ ಕುರಿತು ಖುದ್ದು ಮದ್ಯ ಮಾರಾಟಗಾರರು ಸರ್ಕಾರಕ್ಕೆ ಬರೆದಿರುವ ಪತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ  ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಇದೇ ಆರೋಪವನ್ನು ಮಾಡಿದ್ದಾರೆ. ಈ ಬೆಳವಣಿಗೆ ನಡುವೆಯೇ ಬಿಬಿಎಂಪಿಯಲ್ಲಿಯೂ 60 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಕಂಪನಿ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಈಗಲ್‌ ಐ ಎನ್‌ಫೋರ್ಸ್‌ಮೆಂಟ್‌ ಸೊಲ್ಯೂಷನ್ಸ್‌ ಕಂಪನಿಯು ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2024ರ ಏಪ್ರಿಲ್‌ 22ರಂದೇ ಬರೆದಿರುವ ಪತ್ರದಲ್ಲಿ 60 ಪರ್ಸೆಂಟ್‌ ಲಂಚಾವತಾರವನ್ನು ವಿವರಿಸಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೇಲಾಧಿಕಾರಿಗಳೂ ಸೇರಿದಂತೆ ಎಲ್ಲರಿಗೂ 60 ಪರ್ಸೆಂಟ್‌ ಲಂಚದ ಹಣ ಕೊಡುವವರೆಗೂ ಯಾವುದೇ ಮಾಹಿತಿ, ಸ್ಪಷ್ಟೀಕರಣ ನೀಡುವುದಿಲ್ಲ. ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ಕಡತವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಈಗಲ್‌ ಐ ಎನ್‌ಫೋರ್ಸ್‌ಮೆಂಟ್‌ ಸೊಲ್ಯೂಷನ್ಸ್‌ ಕಂಪನಿಯು ತನ್ನ ಪತ್ರದಲ್ಲಿ ಆರೋಪಿಸಿದೆ.

 

ದೂರಿನಲ್ಲೇನಿದೆ?

 

ಸರ್ಕಾರದಿಂದ ಈಗಾಗಲೇ 7 ಬಾರಿ ಪತ್ರವು ಬಿಬಿಎಂಪಿಗೆ ಬಂದಿದೆ. ಆದರೆ ನನಗೆ ಹಾಗೂ ಮೇಲಾಧಿಕಾರಿಗಳಿಗೆ ಎಲ್ಲರಿಗೂ 60ರಷ್ಟು ಲಂಚದ ಹಣವನ್ನು ಕೊಡುವವರೆಗೂ ಸರ್ಕಾರದ ಪತ್ರಗಳಿಗಾಗಲೀ ಹಾಗೂ ನನ್ನ ಪತ್ರಗಳಿಗಾಗಲೀ ಸಮರ್ಪಕವಾದ, ಸಮಂಜಸವಾದ ಮಾಹಿತಿ, ಸ್ಪಷ್ಟೀಕರಣ ನೀಡುವುದಿಲ್ಲ ಎಂದು ಬಿಬಿಎಂಪಿ ಸಹಾಯಕ ಆಯುಕ್ತರು ಹೇಳಿದ್ದಾರೆ ಎಂದು ವರದಿಯಲ್ಲಿ ವಿವರಿಸಿದೆ.

 

 

‘ನಾನು ಇನ್ನೂ 15 ತಿಂಗಳು ಇದೇ ಕಚೇರಿಯ ಇದೇ ಹುದ್ದೆಯಲ್ಲಿ ಮುಂದುವರೆಯುತ್ತೇನೆ. ಆದ್ದರಿಂದ 60ರಷ್ಟು ಲಂಚದ ಹಣವನ್ನು ಕೊಡುವವರೆಗೂ ನಿನ್ನ ಸಂಸ್ಥೆಗೆ ಸಂಬಂಧಪಟ್ಟ ಕಡತಗಳನ್ನು ಮೇಲಾಧಿಕಾರಿಗಳಿಗೆ ಮಂಡಿಸುವುದಿಲ್ಲ. ಮಂಡಿಸಿದ್ದಲ್ಲಿ ತಪ್ಪು ಮಾಹಿತಿಯೊಂದಿಗೆ ಮಂಡಿಸಿ ಕಡತಗಳನ್ನು ವಿಲೇ ಇಡುವುದಾಗಿ ತಿಳಿಸಿದ್ದಾರೆ,’ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಪ್ರಕರಣವೇನು?

 

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳು, ಖಾಸಗಿ ಸ್ವತ್ತುಗಳ ಒತ್ತುವರಿ ಹಾಗೂ ಮೊಬೈಲ್‌ ಟವರ್‍‌ಗಳನ್ನು ಉಚಿತವಾಗಿ ತೆರವುಗೊಳಿಸಲು ಕಾರ್ಯಾದೇಶ ನೀಡಲು ಬಿಬಿಎಂಪಿಯ ಸಹಾಯಕ ಆಯುಕ್ತರು (ಜಾಹೀರಾತು) ಕಾರ್ಯಾದೇಶ ಮತ್ತು ಮಾಹಿತಿ ನೀಡಿರಲಿಲ್ಲ. ಈ ಸಂಬಂಧ ಈಗಲ್‌ ಐ ಎನ್‌ಪೋರ್ಸ್‌ಮೆಂಟ್‌ ಸಲ್ಯೂಷನ್ಸ್‌ ಅವರು 2018-19ರಲ್ಲೇ ಮೇಲ್ಮನವಿ ಸಲ್ಲಿಸಿದ್ದರು.

 

ಮೇಲ್ಮನವಿಯಲ್ಲೇನಿತ್ತು?

 

ಮಹಾನಗರ ಪಾಲಿಕೆಯಾದ್ಯಂತ ಎಂಟು ವಲಯಗಳಲ್ಲಿ ಅನಧಿಕೃತ ಜಾಹೀರಾತುಗಳು ಮತ್ತು ಕಾನೂನುಬಾಹಿರವಾಗಿ ಅಳವಡಿಸಿರುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳು ಮತ್ತು ಮೊಬೈಲ್‌ ಟವರ್‍‌ ತೆರವುಗೊಳಿಸುವ ಸಂಬಂಧ ಕಾರ್ಯಾದೇಶ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಈ ಮನವಿಯನ್ನು ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ಪುರಸ್ಕರಿಸಲಾಗಿದೆ. ಅಲ್ಲದೇ ಕಾರ್ಯಾದೇಶ ನೀಡಲು ಸಭೆಯೂ ತೀರ್ಮಾನಿಸಿದೆ. ಇದನ್ನು ಆಯುಕ್ತರೂ ಅನುಮೋದಿಸಿದ್ದಾರೆ ಎಂದು ಮೇಲ್ಮನವಿಯಲ್ಲಿ ಕಂಪನಿಯು ವಿವರಿಸಿತ್ತು.

 

 

ಕಾರ್ಯಾದೇಶ ನೀಡದ ಬಿಬಿಎಂಪಿ

 

ಈ ಕಂಪನಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಬಿಬಿಎಂಪಿಯು ಆ ನಂತರ ಕಾರ್ಯಾದೇಶ ನೀಡಲಿಲ್ಲ ಎಂದು ಆರೋಪಿಸಲಾಗಿದೆ. ‘ ಯಾವುದೇ ಕಾರ್ಯಾದೇಶವನನ್ನೂ ನಮಗೆ ನೀಡಲಿಲ್ಲ. ಈ ಬಗ್ಗೆ ಆದೇಶದ ಪ್ರತಿ ಕೋರಿ ಲೀಗಲ್‌ ನೋಟೀಸ್‌ ನೀಡಿರುತ್ತೇನೆ. ಯಾವುದೆ ದಂಡ ವಿಧಿಸಿ ವಸೂಲು ಮಾಡಲಾಗಿಲ್ಲ ಎಂದು ಮರು ಉತ್ತರ ನೀಡಿದ್ದಾರೆ,’ ಎಂದು ಮೇಲ್ಮನವಿ ನಡವಳಿಯಲ್ಲಿ ಉಲ್ಲೇಖಿಸಿದೆ.

 

ಇದಾದ ನಂತರ 2019ರ ಆಗಸ್ಟ್‌ 7ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ನಡೆದಿತ್ತು.

 

‘ಮೇಲ್ಮನವಿದಾರರ ಪ್ರಸ್ತಾವನೆಯು ಪಾಲಿಕೆ ಹಿತದೃಷ್ಟಿಯಿಂದ ಉತ್ತಮವಾಗಿದೆ. ಹಾಗೂ ಯಾವುದೇ ವಿಧವಾದ ಆರ್ಥಿಕ ಹೊರೆ ಬೀಳದೇ ಇರುವುದರಿಂದ ಹಾಗೂ ನಗರವನ್ನು ಸುಂದರವನ್ನಾಗಿಸುವ ಸಲುವಾಗಿ ಈ ಯೋಜನೆ ಆಗಿರುವುದರಿಂದ ಆಯುಕ್ತರು ಎಂಒಯುನೊಂದಿಗೆ ಕಾರ್ಯಾದೇಶ ಹೊರಡಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು,’ ಎಂದು ಬಿಬಿಎಂಪಿಯ ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸುಜಾತ ಡಿ ಸಿ ರಮೇಶ್‌ ಅವರು ತೀರ್ಮಾನಿಸಿದ್ದರು.

 

 

ಅಲ್ಲದೇ ಮೇಲ್ಮನವಿದಾರರು ಕಾಲಕಾಲಕ್ಕೆ ನೀಡಿರುವ ಅರ್ಜಿಗಳಿಗೆ ಸರಿಯಾದ ಸಮಯದಲ್ಲಿ ಪ್ರತಿವಾದಿಗಳು ಯಾವುದೇ ಹಿಂಬರಹ ನೀಡದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರು. ಈಗಾಗಲೇ ನೀಡಿರುವ ಕಾರ್ಯಾದೇಶದ (2014ರ ಜನವರಿ 28, ಮೇ 21 ಮತ್ತು 29) ಪ್ರಕಾರ ಜಾಹೀರಾತು ವಿಭಾಗದವರೇ ಸಭೆ, ಸಮಿತಿ ಮತ್ತು ಆಯುಕ್ತರ ಆದೇಶವನ್ನು ಪಾಲಿಸಿ ಮುಂದುವರೆಸಲು ಆಯುಕ್ತರು ಕ್ರಮ ಕೈಗೊಳ್ಳಬಹುದು ಎಂದೂ ಇದೇ ಸಮಿತಿಯು ತೀರ್ಮಾನಿಸಿರುವುದು ಗೊತ್ತಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   40 ಪರ್ಸೆಂಟ್‌ ಕಮಿಷನ್‌ ಕೇಳಲಾಗಿತ್ತು ಎಂದು ಗುತ್ತಿಗೆದಾರರ ಸಂಘವು ಮಾಡಿದ್ದ ಆರೋಪವನ್ನೇ ಕಾಂಗ್ರೆಸ್‌ ಪಕ್ಷವು ಪ್ರಬಲ ಅಸ್ತ್ರವನ್ನಾಗಿಸಿಕೊಂಡಿತ್ತು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‍‌ ಅವರು ಇದನ್ನೇ ಪೇ ಸಿಎಂ ಎಂದು ಅಭಿಯಾನ ನಡೆಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts