ಬೆಂಗಳೂರು; ರಾಜ್ಯದ ಪ್ರತಿಷ್ಠಿತ ಮತ್ತು ಪ್ರಭಾವಿ ಮಠಗಳಲ್ಲಿ ಒಂದಾಗಿರುವ ಸಿರಿಗೆರೆಯ ತರಳಬಾಳು ಮಠವು ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ಬೆಂಗಳೂರಿನ ಆರ್ ಟಿ ನಗರದಲ್ಲಿ ಕಾನೂನು ಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವೆಂಕಟೇಶ್ ಎಂಬುವರು ಬಿಬಿಎಂಪಿ ಮತ್ತು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿ 2 ವರ್ಷಗಳಾದರೂ ಇದುವರೆಗೂ ಬಿಬಿಎಂಪಿಯ ವಲಯ ಆಯುಕ್ತರೂ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕ್ರಮಕ್ಕೆ ಮುಂದಾಗಿಲ್ಲ. ಬದಲಿಗೆ ಮಠದೊಂದಿಗೇ ಬಿಬಿಎಂಪಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಮತ್ತು ಲೋಕಾಯುಕ್ತವನ್ನೂ ದಾರಿ ತಪ್ಪಿಸಲಾಗಿದೆ ಎಂಬ ಬಲವಾದ ಆಪಾದನೆಯೂ ಕೇಳಿ ಬಂದಿದೆ.
ಬೆಂಗಳೂರು ನಗರದಲ್ಲಿ ಬಿಬಿಎಂಪಿ ಅನುಮೋದನೆ ಇಲ್ಲದೆಯೇ ಮತ್ತು ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ತರಳಬಾಳು ಮಠವು ಅನಧಿಕೃತವಾಗಿ ನಿರ್ಮಿಸುತ್ತಿದೆ ಎನ್ನಲಾಗಿರುವ ಕಟ್ಟಡವನ್ನು ನೆಲಸಮಗೊಳಿಸಿಲ್ಲ ಮತ್ತು ಕನಿಷ್ಠ ಕಟ್ಟಡ ಕಾಮಗಾರಿಗೂ ಅಧಿಕಾರಿಗಳು ತಡೆಯೊಡ್ಡಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ.
ಶೃಂಗೇರಿ ಮಠವು ಬೆಂಗಳೂರಿನಲ್ಲಿ ನಡೆಸುತ್ತಿರುವ ಜ್ಞಾನೋದಯ ಶೈಕ್ಷಣಿಕ ಸಂಸ್ಥೆಯು ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ವಸತಿ ಕಟ್ಟಡವನ್ನು ನೆಲಸಮಗೊಳಿಸುವ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರ ನ್ಯಾಯಾಲಯವು ತಡೆಯಾಜ್ಞೆ ನೀಡಿರುವ ಬೆನ್ನಲ್ಲೇ ಸಿರಿಗೆರೆಯ ತರಳಬಾಳು ಮಠವು ಅನಧಿಕೃತವಾಗಿ ನಿರ್ಮಾಣ ಮಾಡುತ್ತಿದೆ ಎನ್ನಲಾಗಿರುವ ಕಟ್ಟಡವನ್ನು ನೆಲಸಮಗೊಳಿಸದೇ ನಿರ್ಲಕ್ಷ್ಯ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆಯೇ ಈ ಬಗ್ಗೆ ಹಲವು ದೂರುಗಳಿದ್ದರೂ ಸಹ ಯಾವುದೇ ಬಿಬಿಎಂಪಿ ಕ್ರಮ ವಹಿಸಿಲ್ಲ. ಹೀಗಾಗಿ ನೈಜ ಹೋರಾಟಗಾರರ ವೇದಿಕೆಯು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮತ್ತೊಂದು ಪತ್ರ ಬರೆದಿದೆ.
ಈ ಮಧ್ಯೆ ಲೋಕಾಯುಕ್ತ ಸಂಸ್ಥೆಯೂ ಸಹ ಬಿಬಿಎಂಪಿಗೆ ಪತ್ರ ಬರೆದು ಪ್ರಕರಣದ ಕುರಿತು ಮಾಹಿತಿ ಮತ್ತು ಕೈಗೊಂಡ ಕ್ರಮದ ಕುರಿತು ಅನುಪಾಲನಾ ವರದಿ ಕೇಳಿತ್ತು. ಇದಕ್ಕೆ 2023ರ ನವೆಂಬರ್ ನಲ್ಲೇ ಬಿಬಿಎಂಪಿಯು ಲೋಕಾಯುಕ್ತಕ್ಕೆ ಪತ್ರ ಬರೆದಿತ್ತು.
ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲೇನಿದೆ?
ತರಳಬಾಳು ಕೇಂದ್ರದ ಕಟ್ಟಡದ ಬಳಿ ಪರಿಶೀಲನಾ ಸಮಯದಲ್ಲಿ ಕಂಡು ಬಂದಂತೆ ಸದರಿ ಕಟ್ಟಡವನ್ನು ಸುಮಾರು 30 ವರ್ಷಗಳಿಗೂ ಮುಂಚಿತವಾಗಿ ನಿರ್ಮಾಣ ಮಾಡಿರುವ ಕಟ್ಟಡವಾಗಿದೆ. ಜಿ ಪ್ಲಸ್ 3 ಮಹಡಿಗುಳುಳ್ಳ ಹಳೆಯ ಕಟ್ಟಡವಾಗಿದೆ. ಮೇಲ್ಛಾವಣಿಯಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆ ಕಂಡು ಬಂದಿದೆ. ಮೆಟಲ್ ಪಿಲ್ಲರ್‍ಗಳನ್ನು ಅಳವಡಿಸಿ ತಾತ್ಕಾಲಿಕ ಮೆಟಲ್ ಶೀಟ್ ಹೊದಿಕೆಯನ್ನು ಹಾಕಿ ಅದರ ಮೇಲ್ಬಾಗದಲ್ಲಿ ಸೌರ ಶಕ್ತಿ ಪ್ಯಾನಲ್‌ಗಳನ್ನು ಅಳವಡಿಸುತ್ತಿರುವುದು ಕಂಡು ಬಂದಿರುತ್ತದೆ. ಹಳೆಯ ಕಟ್ಟಡದ ಮೇಲ್ಬಾಗ ದಲ್ಲಿ ಯಾವುದೇ ಶಾಶ್ವತ ಕಾಮಗಾರಿ ಕೈಗೊಂಡಿಲ್ಲದಿರುವುದು ಗಮನಿಸಲಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮುಂದುವರೆದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತರಳಬಾಳು ಕೇಂದ್ರದ ಕಾರ್ಯದರ್ಶಿಗಳು ಸಿಟಿ ಸಿವಿಲ್ ನ್ಯಾಯಾಲಯದ ( ಒ.ಎಸ್ ಸಂಖ್ಯೆ 2036/2023ರ ) ತಡೆಯಾಜ್ಞೆ ತಂದಿರುತ್ತಾರೆ. ನ್ಯಾಯಾಲಯದ ತಡೆಯಾಜ್ಞೆ ಇತ್ಯರ್ಥವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಕಾರ್ಯನಿರ್ವಾಹಕ ಅಭಿಯಂತರರು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್‍ಗೆ (ವಿಚಾರಣೆಗಳು -02) 2023ರ ನವೆಂಬರ್ 27ರಂದು ಪತ್ರ ಬರೆದಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ವೆಂಕಟೇಶ್ ಎಂಬುವರು ಕಟ್ಟಡ ಕಾಮಗಾರಿ ನಡೆಯುತ್ತಿರುವ ಫೋಟೋ ಮತ್ತು ಅನುಮತಿ ಇಲ್ಲದೇ ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತಾದ ದಾಖಲೆಗಳನ್ನೂ ಸಲ್ಲಿಸಿದ್ದರು. ಈ ದಾಖಲೆಗಳನ್ನು ಪರಿಶೀಲಿPಸಿರುವ ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದು ಬಿಡಿಎ ವ್ಯಾಪ್ತಿಗೆ ಬರಲಿದೆ ಎಂದು 2024ರ ಜನವರಿಯಲ್ಲಿ ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದರು.
ಬಿಬಿಎಂಪಿಯು ನೀಡಿರುವ ಹಿಂಬರಹದಲ್ಲೇನಿದೆ?
ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕಚೇರಿಯ ನಕ್ಷೆ ಮಂಜೂರಾತಿ ದಾಖಲಾತಿಗಳನ್ನು ಪರಿಶೀಲಿಸಲಾಗಿ ನಕ್ಷೆ ಮಂಜೂರಾತಿ ನೀಡಿರುವುದಿಲ್ಲ. ಸದರಿ ಪ್ರಸ್ತಾಪಿಸಿರುವ ವಿಷಯವು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಕಚೇರಿ ವ್ಯಾಪ್ತಿಗೆ ಒಳಪಡುವುದರಿಂದ ಸದರಿ ಕಚೇರಿಯಿಂದ ಮಾಹಿತಿ ಪಡೆಯಬೇಕು ಎಂದು ಬಿಬಿಎಂಪಿಯ ಅಧಿಕಾರಿಗಳು, ವೆಂಕಟೇಶ್ ಅವರಿಗೆ ಹಿಂಬರಹದಲ್ಲಿ ತಿಳಿಸಿದ್ದರು.
ಈ ಬೆಳವಣಿಗೆ ಆದ ನಂತರವೂ ವೆಂಕಟೇಶ್ ಅವರು 2024ರ ಮಾರ್ಚ್‌ನಲ್ಲಿಯೇ ಲೋಕಾಯುಕ್ತ ಅಧಿಕಾರಿಗಳಿಗೆ ಮತ್ತೊಂದು ಪತ್ರವನ್ನು ಬರೆದಿದ್ದರು.
ಮಾರ್ಚ್‌ನಲ್ಲಿ ಬರೆದ ಪತ್ರದಲ್ಲೇನಿದೆ?
ಆರ್ ಟಿ ನಗರದಲ್ಲಿ ತರಳಬಾಳು ಕೇಂದ್ರದವರು ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ಮೇಲಂತಸ್ತನ್ನು ನಿರ್ಮಿಸಿರುವುದರ ವಿರುದ್ಧಕ್ರಮ ಕೈಗೊಳ್ಳಲು 2022ರ ಅಕ್ಟೋಬರ್ 9ರಂದು ಬಿಬಿಎಂಪಿಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ತಾವು ನೀಡಿದ ಹಿಂಬರಹ ಮತ್ತು ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರು ತಮಗೆ ನೀಡಿರುವ ಮಾಹಿತಿಯು ಸುಳ್ಳು ಹಾಗೂ ತಪ್ಪು ಮಾಹಿತಿಯಿಂದ ಮತ್ತು ಬೇಜವಾಬ್ದಾರಿಯಿಂದ ಕೂಡಿರುತ್ತದೆ.
ಬಿಬಿಎಂಪಿ ಅಧಿಕಾರಿಗಳು ಆ ಸಂಸ್ಥೆಯ ಜತೆ ಕೈ ಜೋಡಿಸಿ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುವರೆಂದು ನನಗೆ ಸಂಶಯವಿರುತ್ತದೆ. ಪ್ರಯುಕ್ತ ತಮ್ಮ ಕಚೇರಿಯೀಂದಲೇ ತಮ್ಮ ಸಿಬ್ಬಂದಿಯನ್ನು ಕಳಿಸಿದರೆ ಸರಿಯಾದ ಮಾಹಿತಿ ದೊರೆಯಬಹುದು ಎಂದು ಪತ್ರದಲ್ಲಿ ಕೋರಿದ್ದರು.
‘ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಿಗೆ ವ್ಯತಿರಿಕ್ತವಾಗಿ ತರಳಬಾಳು ಮಠವು ಆರ್ ಟಿ ನಗರದಲ್ಲಿ ಕಾನೂನು ಬಾಹಿರ ಮತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,’ ಎಂದು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮುಖ್ಯ ಆಯುಕ್ತರ ವಿರುದ್ಧ ವೆಂಕಟೇಶ್ ಜಿ ಬಿ ಎಂಬುವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.
ಸದ್ಯ ಈ ದೂರಿನ ವಿಚಾರಣೆಯು 2024ರ ಅಕ್ಟೋಬರ್ 24ರಂದು ನಡೆದಿತ್ತು. ಇದೀಗ ವಿಚಾರಣೆಯನ್ನು 2024ರ ಡಿಸೆಂಬರ್ 8ಕ್ಕೆ ಮುಂದೂಡಿಕೆಯಾಗಿದೆ.
ದೂರಿನಲ್ಲೇನಿದೆ?
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ತರಳಬಾಳು ಬೃಹನ್ಮಠಕ್ಕೆ ಹಂಚಿಕೆ ಮಾಡಿದ್ದ ನಾಗರಿಕ ಸೌಲಭ್ಯ ನಿವೇಶನದಲ್ಲಿ ತರಳಬಾಳು ಕೇಂದ್ರ ಕಟ್ಟಡವನ್ನು ನಿರ್ಮಿಸಲಾಗಿದೆ. ಮೂಲ ಕಟ್ಟಡದ ನಕಾಶೆಯಲ್ಲಿ ನೆಲಮಾಳಿಗೆ (ಬೇಸ್‌ಮೆಂಟ್) ವಾಹನ ನಿಲುಗಡೆ ಸೌಲಭ್ಯಕ್ಕೆ ಅನುಮತಿ ತೆಗೆದುಕೊಂಡು ಕಟ್ಟಡವನ್ನು ನಿರ್ಮಿಸಿದ್ದಾರೆ. ಆದರೆ ಈ ಕಟ್ಟಡದ ನಿರ್ಮಾಣವಾದ ದಿನದಿಂದಲೂ ಅಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿತ್ತು.
ವಾಹನ್ ಪಾರ್ಕಿಂಗ್‌ಗೆ ಮಹಾನಗರಪಾಲಿಕೆ ಅನುಮತಿ ನೀಡಿರುವ ಸ್ಥಳದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ, ಅದಕ್ಕೆ ಹೊಂದಿಕೊಂಡಿರುವ ಅಡಿಗೆ ಮನೆ, ಊಟದ ಮನೆ, ಕಲ್ಯಾಣ ಮಂಟಪದ ಕೊಠಡಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೇ ಜಾಗದಲ್ಲಿ ಈ ಕಟ್ಟಡದ ಸೆಂಟ್ರಲ್ ಏರ್ ಕಂಡೀಷನರ್ ನಿರ್ವಹಿಸುವ ಡಕ್ ರೂಮ್‌ಗಳು ಹಾಗೂ ಯಂತ್ರಗಳ ಕೊಠಡಿಗಳೂ ಇವೆ.
ನೆಲಮಾಳಿಗೆಯಲ್ಲಿ ಕಲ್ಯಾಣ ಮಂಟಪ ಮಾಡಿಕೊಂಡಿರುವುದರಿಂದ ಇಲ್ಲಿ ಬರುವ ಜನರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲದಂತಾಗಿದೆ. ಹೀಗಾಗಿ ಆರ್ ಟಿ ನಗರದ ಸಾರ್ವಜನಿಕ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಕಿರಿದಾದ ರಸ್ತೆಯು ವಾಹನಗಳಿಂದ ತುಂಬಿ ಹೋಗುತ್ತದೆ. ಈ ವಾಹನಗಳ ಹಾರನ್ ಶಬ್ದದಿಂದಾಗಿ ಶಬ್ದಮಾಲಿನ್ಯವೂ ಉಂಟಾಗುತ್ತಿದೆ. ಈ ಭಾಗದಲ್ಲಿ ಸಾರ್ವಜನಿಕರಿಂದ ತುಂಬಾ ತೊಂದರೆಯಾಗಿದೆ ಎಂದು ದೂರಿನಲ್ಲಿ ವಿವರಿಸಿತ್ತು.
ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ; ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು
‘ಆದರೆ ಈಗ ಕಟ್ಟಡದ ಮೂರನೇ ಅಂತಸ್ತಿನ ಮೇಲುಗಡೆ ಮತ್ತೊಂದು ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ಕಟ್ಟಲು ಮುಂದಾಗಿದ್ದಾರೆ. ಹೊಸದಾಗಿ ಕಟ್ಟಡ ಕಟ್ಟಲು ಮುಂದಾಗಿರುವ ಸ್ಥಳದಲ್ಲಿ ಮತ್ತೊಂದು ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶ ಇವರಿಗೆ ಇರುವಂತಿದೆ,’ ಎಂದು ದೂರುದಾರ ವೆಂಕಟೇಶ್ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದರು.
ನಾಗರಿಕ ಸೌಲಭ್ಯ ನಿವೇಶನಕ್ಕೆ ವ್ಯತಿರಿಕ್ತವಾಗಿ ಈ ಸಂಸ್ಥೆಯವರು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇವರು ನಡೆಸುತ್ತಿರುವ ಕಲ್ಯಾಣ ಮಂಟಪವು ಅತ್ಯಂತ ದುಬಾರಿ ಬಾಡಿಗೆಯನ್ನು ಹೊಂದಿದೆ. ಇದು ಸಹ ಸಿ ಎ ಸೈಟ್ ನಿಬಂಧನೆಗೆ ವಿರುದ್ಧವಾಗಿದೆ. ಈ ಕಟ್ಟಡವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಕೆಯಾಗದೇ ಹಣ ಸಂಪಾದನೆ ಮಾಡುವ ಕೆಲಸಕ್ಕೆ ಬಳಕೆಯಾಗುತ್ತಿದೆ ಎಂದು ದೂರಿದ್ದರು.
ಅಕ್ರಮ ಮತ್ತು ಕಾನೂನುಬಾಹಿರವಾಗಿ ನಿರ್ಮಾಣ ಮಾಡುತ್ತಿರುವ ನಾಲ್ಕನೇ ಅಂತಸ್ತಿನ ಕಟ್ಟಡ ನಿರ್ಮಾಣದ ಕೆಲಸವನ್ನು ಕೂಡಲೇ ತಡೆಹಿಡಿಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಕೊಟ್ಟಿದ್ದರೂ ಯಾಗವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲದೇ ಅಕ್ರಮ ಮತ್ತು ಕಾನೂನುಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ದೂರಿನಲ್ಲಿ ಕೋರಿದ್ದನ್ನು ಸ್ಮರಿಸಬಹುದು.
‘ಯಾವುದೇ ರೀತಿಯ ನಕ್ಷೆ ಮಂಜೂರಾತಿ ಇಲ್ಲದೆ ಹಳೆ ಕಟ್ಟಡದ ಮೇಲೆ ನಿರ್ಮಾಣ ಮಾಡುತ್ತಿರುವ ಅಂತಸ್ತುಗಳನ್ನು ಪರಿಶೀಲಿಸಿ ನಕ್ಷೆ ಮಂಜೂರಾತಿ ಇಲ್ಲದೆ ಕಾನೂನು ಉಲ್ಲಂಘಿಸಿ ಕಟ್ಟುತ್ತಿದ್ದಲ್ಲಿ ತಕ್ಷಣ ಕಾಮಗಾರಿಯನ್ನು ತಡೆಹಿಡಿದು ನಿರ್ಮಾಣವಾಗಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು. ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಈ ಕಟ್ಟಡದ ಮೇಲೆ ನಡೆಯುತ್ತಿರುವ ಮೇಲಂತಸ್ತುಗಳ ನಿರ್ಮಾಣ ಕಾಮಗಾರಿಗೆ ನಕ್ಷೆ ಅನುಮೋದನೆ ಪಡೆದಿದ್ದಾರೆಯೇ ಅಥವಾ ಕಾನೂನನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.