ಬೆಂಗಳೂರು; ವಕ್ಫ್ ಆಸ್ತಿಯ ದುರ್ಬಳಕೆ, ನಿಯಮಬಾಹಿರ ಚಟುವಟಿಕೆ ಮತ್ತು ದುರಾಡಳಿತ ಕುರಿತು ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ವರದಿ ಸಲ್ಲಿಸಿದ್ದ ದಿನದಂದೇ ತನಿಖೆಗೆ ಹೊರಡಿಸಿದ್ದ ಅಧಿಸೂಚನೆಯನ್ನೂ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿದ್ದ ಕಾಂಗ್ರೆಸ್ ಸರ್ಕಾರವು ರದ್ದುಗೊಳಿಸಿತ್ತು.
ರೈತರು ಸ್ವಾಧೀನ ಮತ್ತು ಅನುಭವದಲ್ಲಿರುವ ಆಸ್ತಿಯ ಪಹಣಿ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಾಗಿರುವ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಿಜೆಪಿ ಮತ್ತು ರೈತರ ಟೀಕೆಗೆ ಗುರಿಯಾಗಿದ್ದಾರೆ. ಪ್ರತಿಪಕ್ಷ ಬಿಜೆಪಿಯು ಇದೇ ನವೆಂಬರ್ 4ರಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗುತ್ತಿದ್ದಂತೆ ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳನ್ನೂ ರದ್ದು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು ವಕ್ಫ್ ಆಸ್ತಿ ದುರ್ಬಳಕೆ ಕುರಿತಾಗಿ ಉಪ ಲೋಕಾಯುಕ್ತರಿಗೆ ವಹಿಸಿದ್ದ ತನಿಖೆ ಆದೇಶವನ್ನೇ ರದ್ದುಗೊಳಿಸಿದ್ದ ಸಂಗತಿಯು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ವಕ್ಫ್ ಆಸ್ತಿ ದುರ್ಬಳಕೆ, ನಿಯಮಬಾಹಿರ ಚಟುವಟಿಕೆ ಮತ್ತು ಒತ್ತುವರಿ ಕುರಿತಂತೆ ತನಿಖೆ ನಡೆಸಬೇಕು ಎಂದು ಖುದ್ದು ರಾಜ್ಯ ಸರ್ಕಾರವೇ ಉಪ ಲೋಕಾಯುಕ್ತರಿಗೆ ವಹಿಸಿತ್ತು. ಹಿಂದಿನ ಉಪ ಲೋಕಾಯುಕ್ತ ಎನ್ ಆನಂದ್ ಅವರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ವರದಿ ಸಲ್ಲಿಸಿದ್ದ ದಿನದಂದೇ ತನಿಖೆಗೆ ವಹಿಸಿದ್ದ ಅಧಿಸೂಚನೆಯನ್ನೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರವು ರದ್ದುಗೊಳಿಸಿತ್ತು.
ಮತ್ತೊಂದು ವಿಶೇಷವೆಂದರೇ ಉಪ ಲೋಕಾಯುಕ್ತರು ಸಲ್ಲಿಸಿದ್ದ ತನಿಖಾ ವರದಿಯನ್ನು ಸಿದ್ದರಾಮಯ್ಯ ಅವರ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು ಸ್ವೀಕರಿಸಿತ್ತು. ಆದರೆ ಇದನ್ನು ಪರಿಶೀಲಿಸಿರಲಿಲ್ಲ ಮತ್ತು ಯಾವುದೇ ಕ್ರಮವನ್ನೂ ವಹಿಸಿರಲಿಲ್ಲ. ಹೀಗಾಗಿ ಈ ತನಿಖಾ ವರದಿಯು ಸರ್ಕಾರದ ದಾಖಲೆಯಾಗಿ ಪರಿಗಣಿಸಿರಲಿಲ್ಲ ಎಂಬುದು ಆರ್‍ಟಿಐ ದಾಖಲೆಯಿಂದ ತಿಳಿದು ಬಂದಿದೆ.
ಇದೇ ವಕ್ಫ್ ಆಸ್ತಿ ದುರ್ಬಳಕೆ ಮತ್ತು ಒತ್ತುವರಿ ಸಂಬಂಧ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ವಿಶೇಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನೂ ಸಹ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿತ್ತು. ಆ ನಂತರ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿಯೂ ಈ ವರದಿ ಮೇಲೆ ಯಾವುದೇ ಕ್ರಮವಹಿಸಿರಲಿಲ್ಲ.
ಆದರೆ ಬಿಜೆಪಿ ಸರ್ಕಾರದ ಕಡೇ ದಿನಗಳಲ್ಲಿ ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷತೆಯಲ್ಲಿನ ವರದಿಯನ್ನು ವಿಧಾನಮಂಡಲದ ಉಭಯ ಸದನದಲ್ಲಿ ಮಂಡಿಸಲಾಗಿತ್ತು. ಹೀಗಾಗಿ ಈ ವರದಿಯು ಸಾರ್ವಜನಿಕ ದಾಖಲೆಯಾಗಿ ಉಳಿದುಕೊಂಡಿದೆ. ಆದರೆ ಈ ವರದಿ ಆಧರಿಸಿಯೂ ಹಾಲಿ ಕಾಂಗ್ರೆಸ್ ಸರ್ಕಾರವು ಯಾವುದೇ ಕ್ರಮ ವಹಿಸಿರಲಿಲ್ಲ.
ರಾಜ್ಯ ಸರ್ಕಾರವು ಕರ್ನಾಟಕ ಲೋಕಾಯುಕ್ತ ಸೆಕ್ಷನ್ 7 (2A) ಅಡಿಯಲ್ಲಿ ಲೋಕಾಯುಕ್ತ ತನಿಖೆಗೆ ವಹಿಸಿತ್ತು.
ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಯು 2016ರ ಮಾರ್ಚ್ 28 ರಂದೇ ಉಪ ಲೋಕಾಯುಕ್ತರಿಗೆ ತನಿಖೆ ನಡೆಸಲು ಆದೇಶ ಹೊರಡಿಸಿತ್ತು. ಈ ಆದೇಶವನ್ನು 2016ರ ಮಾರ್ಚ್ 30ರಂದು ಸ್ವೀಕರಿಸಿದ್ದ ಲೋಕಾಯುಕ್ತ ಸಂಸ್ಥೆಯು ಪ್ರಕರಣದ ತನಿಖೆಯನ್ನು ಉಪಲೋಕಾಯುಕ್ತರಿಗೆ ಹಸ್ತಾಂತರಿಸಿತ್ತು.
ರಾಜ್ಯ ಸರ್ಕಾರವೇ ತನಿಖೆಗೆ ಹಸ್ತಾಂತರಿಸಿ ಆ ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ತನಿಖೆಗೆ ವಹಿಸಿದ್ದ ಆದೇಶವನ್ನೇ ರದ್ದುಗೊಳಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಆದೇಶದಲ್ಲೇನಿತ್ತು?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಕರ್ನಾಟಕ ರಾಜ್ಯದಲ್ಲಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಅತಿಕ್ರಮಣ ಮತ್ತು ಒತ್ತುವರಿ ಆಗಿರುವ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಿದೆ. ಇದನ್ನು 2012ರ ಮಾರ್ಚ್ 26ರಂದು ಸರ್ಕಾರಕ್ಕೆ ಸಲ್ಲಿಸಿದೆ. ಈ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಉಪ ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ಸರ್ಕಾರವು ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ವಿಶೇಷ ವರದಿಯ ಶಿಫಾರಸ್ಸುಗಳನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994ರ ಕಲಂ 20(2)ರಂತೆ ಸಚಿವ ಸಚಿವ ಸಂಪುಟದಲ್ಲಿ 2016ರ ಮಾರ್ಚ್ 3ರಂದು ಮಂಡಿಸಲಾಗಿತ್ತು. ಸಚಿವ ಸಂಪುಟವು ಅಲ್ಪಸಂಖ್ಯಾತರ ಆಯೋಗದ ವಿಶೇಷ ವರದಿಯಲ್ಲಿನ ಶಿಫಾರಸ್ಸುಗಳನ್ನು ತಿರಸ್ಕರಿಸಿದೆ.
ಸಚಿವ ಸಂಪುಟದ ನಿರ್ಣಯದಂತೆ (ಸರ್ಕಾರದ ಆದೇಶ ಸಂಖ್ಯೆ; MWD 19 WES 2015 ದಿನಾಂಕ 28.03.2016) 2012ರ ಜುಲೈ 4ರಲ್ಲಿನ ಆದೇಶದಲ್ಲಿನ ತನಿಖೆಯನ್ನು ಕೂಡಲೇ ಕೈ ಬಿಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಂದಿನ ಸರ್ಕಾರದ ಕಾರ್ಯದರ್ಶಿಯು ಲೋಕಾಯುಕ್ತ ರಿಜಿಸ್ಟ್ರಾರ್‍ಗೆ ಪತ್ರವನ್ನು ಬರೆದಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಈ ವಿಶೇಷ ವರದಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದಿಂದ ಹೊರಡಿಸಲಾಗಿರುವ ಎಲ್ಲಾ ಅದೇಶಗಳೂ ಅನೂರ್ಜಿತಗೊಳ್ಳುತ್ತವೆ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಿಂದ ವಿಪಕ್ಷ ನಾಯಕರು ಹೊರನಡೆದಿದ್ದಾರೆ. ಈ ಸಮಿತಿ ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿದ್ದರು.