ಬೆಂಗಳೂರು; ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಿಂದಲೂ ಕರ್ನಾಟಕ ರಾಜ್ಯ ಕೋ-ಆಪರೇಟೀವ್ ಸೊಸೈಟಿ ಮಹಾಮಂಡಲದಲ್ಲಿ 2023ರ ಅಕ್ಟೋಬರ್‍ವರೆಗೆ ಒಟ್ಟಾರೆ 19.34 ಕೋಟಿ ರು. ದುರುಪಯೋಗ ಆಗಿದೆ ಎಂದು ದೂರು ಸಲ್ಲಿಕೆಯಾಗಿದೆ.
ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಬಿಡಿಸಿಸಿ ಬ್ಯಾಂಕ್ ಅಧಿಕಾರಿ, ಸಿಬ್ಬಂದಿಯೂ ಶಾಮೀಲಾಗಿದ್ದಾರೆ. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು 2024ರ ಅಕ್ಟೋಬರ್ 9ರಂದು ನಡೆಸಿದ್ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ.
ಸೊಸೈಟಿ ಹೆಸರಿನಲ್ಲಿ ಸ್ಥಿರ ಠೇವಣಿ ರೂಪದಲ್ಲಿದ್ದ 19.34 ಕೋಟಿ ರು.ಗಳನ್ನು ಆಶಾಲತಾ ಅವರು ತಮ್ಮ ಪತಿ ಸೋಮಶೇಖರ್ ಸೇರಿದಂತೆ ಇನ್ನಿತರೆ ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂದು ಮಂಡಳದ ಅಧ್ಯಕ್ಷ ರಾಜು ಅವರು ದೂರು ಸಲ್ಲಿಸಿದ್ದರು.
ಈ ದೂರನ್ನಾಧರಿಸಿ ನಂದಿನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಂಡಳಿಯ ಅಧ್ಯಕ್ಷ ರಾಜು ಅವರು ಸಲ್ಲಿಸಿದ್ದ ದೂರರ್ಜಿಗೆ ಸಂಬಂಧಿಸಿದಂತೆ ಮಂಡಳಿಯ ಹಿಂದಿನ ಸಿಇಒ ಆಶಾಲತಾ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ನಂದಿನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರುಪಾಯಿಗಳನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಪ್ರಕರಣದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದಲ್ಲಿನ 19.34 ಕೋಟಿ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಮುನ್ನೆಲೆಗೆ ಬಂದಿದೆ.
ಮಂಡಳಿಯ ಹೆಸರಿನಲ್ಲಿ ಒಟ್ಟು 111 ಸ್ಥಿರ ಠೇವಣಿಗಳಲ್ಲಿದ್ದ 19,34,00,000 ರು.ಗಳ ನಕಲಿ ಠೇವಣೆ ಬಾಂಡ್‌ಗಳಿದ್ದವು. ಈ ಪೈಕಿ ಕೆಲವು ನಿಶ್ಚಿತ ಠೇವಣಿಗಳನ್ನು ಮಂಡಳಿಯ ಹಿಂದಿನ ಸಿಇಒ ಆಶಾಲತಾ ಅವರೇ ಬರೆದಿದ್ದರು. ಬ್ಯಾಂಕ್ ದೃಢೀಕರಣ ಪತ್ರವನ್ನು ಅವರೇ ಖುದ್ದಾಗಿ ತಂದಿದ್ದರು. ಅಲ್ಲದೇ ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಮಂಡಳಿ ಅಧ್ಯಕ್ಷ ರಾಜು ಅವರು ದೂರಿನಲ್ಲಿ ವಿವರಿಸಿರುವುದು ಎಫ್‌ಐಆರ್‍ನಿಂದ ತಿಳಿದು ಬಂದಿದೆ.
‘2017ರಿಂದ ಬ್ಯಾಂಕ್‌ನ ಸ್ಥಿರ ಠೇವಣಿಗಳಲ್ಲಿನ ಹಣವನ್ನು ತಮ್ಮ ಪತಿ ಸೋಮಶೇಖರ್, ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್ ಅವರಿಗೆ ವರ್ಗಾವಣೆ ಮಾಡಿದ್ದಾರೆ. ಹಾಗೂ 2017ರಿಂದ 2023ರವರೆಗೆ ಆಶಾಲತಾ ಅವರು ಮೂಲ ಸ್ಥಿರ ಠೇವಣಿಯನ್ನು ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳನ್ನು ಸಲ್ಲಿಸಿದ್ದಾರೆ,’ ಎಂದು ರಾಜು ಅವರು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಮೂಲ ಎಫ್‌ಡಿ ಬಾಂಡ್‌ಗಳನ್ನು ಸಲ್ಲಿಸುವಾಗ ಕವರ್ ಲೆಟರ್‍ಗಳನ್ನು ಸಹಕಾರಿ ಫೆಡರೇಷನ್‌ನಲ್ಲಿ ಇಡಬೇಕಿತ್ತು. ಇದರಲ್ಲಿ ಅಧ್ಯಕ್ಷರು ಮತ್ತು ಸಿಇಒ ಇಬ್ಬರ ಸಹಿಯೂ ಇರಬೇಕು. ಆದರೆ ಸಿಇಒ ಒಬ್ಬರೇ ಸಹಿ ಮಾಡಿ ಎಫ್‌ಡಿ ಮೊತ್ತವನ್ನು ಆಶಾಲತಾ ಅವರು ತಮ್ಮ ಪತಿಯ ವೈಯಕ್ತಿಕ ಖಾತೆಗೆ ಸೇರಿದಂತೆ ಇನ್ನಿತರೆ ಖಾಸಗಿ ವ್ಯಕ್ತಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಾಸ್ತವವಾಗಿ ಆರ್‍ಟಿಜಿಎಸ್ ಫಾರಂನಲ್ಲಿ ಅಧ್ಯಕ್ಷರು ಮತ್ತು ಸಿಇಒ ಅವರ ಸಹಿ ಇರಬೇಕಿತ್ತು. ಬ್ಯಾಂಕ್‌ನವರು ಆಶಾಲತಾ ಅವರೊಂದಿಗೆ ಶಾಮೀಲಾಗಿ ಅಧ್ಯಕ್ಷರ ಸಹಿಯನ್ನೂ ಪಡೆಯದೇ ಹಣವನ್ನು ವರ್ಗಾಯಿಸಿದ್ದಾರೆ. ಇಲ್ಲಿಯವರೆಗೆ ಬ್ಯಾಂಕ್‌ನವರು ಅಧ್ಯಕ್ಷರಿಗೆ, ನಿರ್ದೇಶಕರಿಗೆ ಹಾಗೂ ಪದಾಧಿಕಾರಿಗಳಿಗೆ ಹಣದ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇದರಿಂದ ಪ್ರಭಾರಿ ಸಿಇಒ ಆಶಾಲತಾ ಅವರೊಂದಿಗೆ ಬ್ಯಾಂಕ್‌ನವರೂ ಶಾಮೀಲಾಗಿರುವುದು ತಿಳಿದು ಬಂದಿದೆ ಎಂದು ದೂರರ್ಜಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ನಕಲಿ ಠೇವಣಿ ಮಾಡುವ ಮೂಲಕ ಫೆಡರೇಷನ್‌ಗೆ ಮೋಸ ಮಾಡಿದ್ದಾರೆ. ಫೆಡರೇಷನ್‌ನ ಲೆಕ್ಕ ಪರಿಶೋಧಕರಿಗೂ ನಕಲಿ ದಾಖಲಾತಿಗಳನ್ನು ನೀಡಿದ್ದಾರೆ. ಪ್ರಭಾರಿ ಸಿಇಒ ಅವರು ನೀಡಿದ್ದ ಮೋಸದ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿಲ್ಲ. ಆದ್ದರಿಂದ ಫೆಡರೇಷನ್‌ನ 19.34 ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಭಾರಿ ಸಿಇಒ ಆಶಾಲತಾ, ಸೋಮಶೇಖರ್, ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್, ಬಿಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‌ನ ಮ್ಯಾನೇಜರ್, ಆಡಿಟರ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು,’ ಎಂದು ಮಂಡಳಿ ಅಧ್ಯಕ್ಷ ರಾಜು ಅವರು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.