ಬೆಂಗಳೂರು; ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರಿಂದ ಅನುಮತಿ ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಕುರಿತು ವಿಧಾನಸೌಧದ ಭದ್ರತಾ ವಿಭಾಗದಿಂದಲೂ ಸರ್ಕಾರ ವರದಿ ಪಡೆದಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಅಷ್ಟೇ ಅಲ್ಲ, ಟಿ ಜೆ ಅಬ್ರಾಹಂ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಂದರ್ಭದಲ್ಲಿ ವಿಧಾನಸೌಧ ಭದ್ರತೆ ವಿಭಾಗದ ಪೊಲೀಸ್ ನಿರೀಕ್ಷಕರ ಮೇಲೆ ಕರ್ತವ್ಯಲೋಪದ ಆರೋಪವನ್ನೂ ಮಾಡಲಾಗಿತ್ತು. ಈ ಸಂಬಂಧ ಕಾರಣ ಕೇಳಿ ನೋಟೀಸ್ ಕೂಡ ನೀಡಲಾಗಿತ್ತು.
ಟಿ ಜೆ ಅಬ್ರಾಹಂ ಅವರು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಕೆಂಗಲ್ ಹನುಮಂತಯ್ಯ ದ್ವಾರದ ಬಳಿ ಆಗಮಿಸಿದ್ದರು. ಈ ವೇಳೆಯಲ್ಲಿ ಅಬ್ರಾಹಂ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿತ್ತು.
ವಿಧಾನಸೌಧದ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತರು 2024ರ ಆಗಸ್ಟ್ 3ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ವರದಿ (ನಂ;ಡಿಸಿಪಿ/ವಿಎಸ್‌ಎಸ್/ಸಿಬಿ/ವರದಿ/01/2024) ನೀಡಿದ್ದರು. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಸಂಬಂಧ ವಿಧಾನಸೌಧದ ಭದ್ರತೆಯ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ರಫೀಕ್, ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ಹನೀಫ್ ಪಾಷ ಮತ್ತು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಂದ ಲಿಖಿತ ಸಮಜಾಯಿಷಿಯನ್ನೂ ಕೇಳಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.
‘ಸಾಮಾಜಿಕ ಹೋರಾಟಗಾರ ಮತ್ತು ವಕೀಲರಾದ ಟಿ ಜೆ ಅಬ್ರಹಾಂ ಅವರು ಮುಖ್ಯ ಕಾರ್ಯದರ್ಶಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ ಮರಳಿ ಬರುತ್ತಿದ್ದರು. ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಮೀಡಿಯಾ ಸ್ಟ್ಯಾಂಡ್ ಹತ್ತಿರ ಮಾಧ್ಯಮಗಳೊಂದಿಗೆ ಮಾತನಾಡಿರುವುದು ಕಂಡು ಬಂದಿರುತ್ತದೆ. ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಮೀಡಿಯಾ ಸ್ಟ್ಯಾಂಡ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಲು ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದೆ.
ಆದರೆ ಮೀಡಿಯಾ ಸ್ಟ್ಯಾಂಡ್ ಬಳಿ ಕರ್ತವ್ಯದಲ್ಲಿದ್ದರೂ ಸಹ ಖಾಸಗಿ ವ್ಯಕ್ತಿಯಾದ ಟಿ ಜೆ ಅಬ್ರಾಹಂ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ. ಈ ಬಗ್ಗೆ ಸಮಜಾಯಿಷಿ ನೀಡಬೇಕು,’ ಎಂದು ನೋಟೀಸ್ ಜಾರಿಗೊಳಿಸಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
ವರದಿಯಲ್ಲೇನಿದೆ?
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾದ ಟಿ ಜೆ ಅಬ್ರಾಹಂ ಅವರು 2024ರ ಆಗಸ್ಟ್ 2ರಂದು ವಿಧಾನಸೌಧಕ್ಕೆ ತಮ್ಮ ವಕೀಲರ ಮೂಲಕ ಗುರುತಿನ ಚೀಟಿ ತೋರಿಸಿ ದಕ್ಷಿಣ ದ್ವಾರದ ಮೂಲಕ ವಿಧಾನಸೌಧಕ್ಕೆ ಪ್ರವೇಶಿಸಿದ್ದರು. ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲು ಆಗಮಿಸಿದ್ದರು. ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಇರದ ಕಾರಣ ವಿಧಾನಸೌಧದ ಹೊರಗಡೆ ಪಶ್ಚಿಮ ದ್ವಾರದಿಂದ ಸುಮಾರು 12.20ಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರು ಅವರನ್ನು ಬೈಟ್‌ಗಾಗಿ ಅಡ್ಡ ಹಾಕಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಆಗ ಮಾಧ್ಯಮದವವರೊಂದಿಗೆ ಟಿ ಜೆ ಅಬ್ರಾಹಂ ಅವರು ಅನಿವಾರ್ಯವಾಗಿ ಮಾತನಾಡಿದ್ದಾರೆ. ಇದೇ ಸಮಯಕ್ಕೆ ವಿಧಾನಸೌಧದ ಭದ್ರತೆಯ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್ ಮತ್ತು ಆರ್‍ಪಿಐ ಹನೀಫ್ ಪಾಷ ಮತ್ತು ಎಎಸ್‌ಐ ಶಿವಕುಮಾರ್ ಅವರು ಹೇಳಿಕೆ ನೀಡದಂತೆ ಒತ್ತಾಯಪೂರ್ವಕವಾಗಿ ತಡೆದರೆ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ದೂಷಿಸುವ ಸಂಭವವಿರುತ್ತದೆ.
ಹಾಗೆಯೇ ಮಾಧ್ಯಮದವರು ಮಾತನಾಡಿಸುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದರೇ ಸುಖಾ ಸುಮ್ಮನೆ ಪೊಲೀಸರನ್ನು ದೂಷಿಸುವ ಸಂಭವವಿದ್ದರಿಂದ ಮತ್ತು ಸಂದರ್ಭದ ಗಾಂಭೀರ್ಯತೆ ಅರಿತು ಅವರನ್ನು ಡಿಪ್ಲೋಮ್ಯಾಟಿಕ್ ಆಗಿ ಪಶ್ಚಿಮ ದ್ವಾರದಿಂದ ಅಬ್ರಾಹಂ ಅವರನ್ನು ಹೊರಗಡೆ ಕಳಿಸಿಕೊಟ್ಟಿರುತ್ತಾರೆ,’ ಎಂದು ವರದಿಯಲ್ಲಿ ಉಪ ಪೊಲೀಸ್ ಆಯುಕ್ತರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈ ಪ್ರಕರಣದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರ ಅನುಮತಿ ಕೋರಿದ್ದರು.
ಇವರ ಮನವಿಯನ್ನು ಪರಿಗಣಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕಡೆಗೆ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾಗೊಳಿಸಿದ್ದ ಉಚ್ಛ ನ್ಯಾಯಾಲಯವು ಟಿ ಜೆ ಅಬ್ರಾಹಂ ಅವರಿಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಎತ್ತಿ ಹಿಡಿದಿರುವುದನ್ನು ಸ್ಮರಿಸಬಹುದು.
ಇದೇ ಪ್ರಕರಣವನ್ನು ಮುಂದಿರಿಸಿದ್ದ ಸರ್ಕಾರವು ವಿಧಾನಸೌಧದ ಒಳಗೆ ಪ್ರವೇಶಿಸುವ ಮುಖ್ಯಮಂತ್ರಿ, ಸಚಿವರು ಮತ್ತಿತರಿಂದ ಮಾಧ್ಯಮಗಳ ಪ್ರತಿನಿಧಿಗಳು ‘ಬೈಟ್’ ಪಡೆಯುವ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ನೆಪವೊಡ್ಡಿತ್ತು. ಅಲ್ಲದೇ ಮಾಹಿತಿ ಸೋರಿಕೆ ಆಗುವ ಸಾಧ್ಯತೆಯೂ ಇದೆ ಎಂಬ ಕಾರಣವನ್ನು ಮುಂದಿರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದೆ.
ಗಣ್ಯ ವ್ಯಕ್ತಿಗಳ ಸುರಕ್ಷತೆ, ಭದ್ರತೆ ಹಿತದೃಷ್ಟಿ ಕಾರಣವನ್ನು ಮುಂದಿರಿಸಿರುವ ವಿಧಾನಸೌಧ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ ಎನ್ ಕರಿಬಸವನಗೌಡ ಅವರು ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ನಿಯಂತ್ರಿಸುವ ಕುರಿತು 2024ರ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್‍ನಲ್ಲಿ ನಡೆಸಿರುವ ಪತ್ರ ವ್ಯವಹಾರ ನಡೆಸಿದ್ದರು.
ಮಾಧ್ಯಮ ಪ್ರತಿನಿಧಿಗಳು ಗಣ್ಯ ವ್ಯಕ್ತಿಗಳಿಂದ ಬೈಟ್ ಅಥವಾ ಹೇಳಿಕೆ ಪಡೆಯಲು ನಿಗದಿಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಬೈಟ್, ಹೇಳಿಕೆಗಳನ್ನು ತೆಗೆದುಕೊಳ್ಳದ ಹಾಗೇ ನಿರ್ಬಂಧಿಸಬೇಕು. ನ್ಯೂಸ್ ಮೀಡಿಯಾ ಚಾನಲ್‌ಗಳ ಪ್ರತಿನಿಧಿಗಳು 3 ರಿಂದ 4 ತಂಡಗಳಾಗಿ, 15 ರಿಂದ 20 ಜನರು ವಿಧಾನಸೌಧಕ್ಕೆ ಬರುತ್ತಿದ್ದು ಇದರಿಂದ ಭದ್ರತಾ ಲೋಪ ಉಂಟಾಗುವ ಸಾಧ್ಯತೆ ಇದೆ. ಒಂದು ಸಮೂಹ ಮಾಧ್ಯಮದ ಒಂದು ತಂಡಕ್ಕೆ ಮಾತ್ರ ಅನುಮತಿ ಅಥವಾ ಪಾಸ್ ನೀಡಬೇಕು ಎಂದು ಕೋರಿದ್ದರು.
ವಿಧಾನಸೌಧದ 334 ಮತ್ತು 313 ಸಂಖ್ಯೆಯ ಕೊಠಡಿಗಳಲ್ಲಿ ಗಣ್ಯ ವ್ಯಕ್ತಿಗಳು ಸಭೆಗಳನ್ನು ಮುಗಿಸಿ ಹೊರಗೆ ಬಂದಾಗ ಮಾಧ್ಯಮದವರು ಬೈಟ್ ತೆಗೆದುಕೊಳ್ಳಲು ಕಾರಿಡಾರ್‍ಗಳಲ್ಲಿ ಗಣ್ಯ ವ್ಯಕ್ತಿಗಳ ಮೇಲೆಯೇ ಮುಗಿಬೀಳುತ್ತಿದ್ದಾರೆ. ಇದರಿಂದ ಗಣ್ಯ ವ್ಯಕ್ತಿಗಳ ಭದ್ರತೆಗೆ ಮತ್ತು ಸಚಿವಾಲಯದ ಕಾರ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ವೈಯಕ್ತಿಕ ಬೈಟ್ ಪಡೆದುಕೊಳ್ಳುವುದನ್ನು ನಿರ್ಬಂಧಿಸಬೇಕು ಎಂದು ಪತ್ರದಲ್ಲಿ ಉಪ ಪೊಲೀಸ್ ಆಯುಕ್ತರು (ನಂ; ಡಿಸಿಪಿ/ವಿಎಸ್‌ಎಸ್/ಸಿಬಿ/ಸಿಸಿ/119/2024) ಉಲ್ಲೇಖಿಸಿದ್ದರು.
ವಿಧಾನಸೌಧದಲ್ಲಿ ಸಿಎಂ ಸೇರಿ ಗಣ್ಯವ್ಯಕ್ತಿಗಳ ಭದ್ರತೆಗೆ ಧಕ್ಕೆ, ಮಾಹಿತಿ ಸೋರಿಕೆ; ಮಾಧ್ಯಮಗಳಿಗೆ ನಿಯಂತ್ರಣ?
ಮಾಧ್ಯಮ ಪ್ರತಿನಿಧಿಗಳು ಭದ್ರತಾ ಅಧಿಕಾರಿಗಳ ಆದೇಶಗಳನ್ನು ಪಾಲಿಸುತ್ತಿಲ್ಲ. ಮತ್ತು ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮದವರನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಇದರಿಂದ ಗಣ್ಯ ವ್ಯಕ್ತಿಗಳ ಆಗಮನ ಮತ್ತು ನಿರ್ಗಮದ ವೇಳೆ ಸರಿಯಾದ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮ ಪ್ರತಿನಿಧಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಉಪ ಪೊಲೀಸ್ ಆಯುಕ್ತರಿಗೆ ಸಹಾಯಕ ಪೊಲೀಸ್ ಆಯುಕ್ತರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.