ವಿಧಾನಸೌಧದಲ್ಲಿ ಸಿಎಂ ಸೇರಿ ಗಣ್ಯವ್ಯಕ್ತಿಗಳ ಭದ್ರತೆಗೆ ಧಕ್ಕೆ, ಮಾಹಿತಿ ಸೋರಿಕೆ; ಮಾಧ್ಯಮಗಳಿಗೆ ನಿಯಂತ್ರಣ?

ಬೆಂಗಳೂರು; ವಿಧಾನಸೌಧದ ಒಳಗೆ ಪ್ರವೇಶಿಸುವ ಮುಖ್ಯಮಂತ್ರಿ, ಸಚಿವರು ಮತ್ತಿತರಿಂದ  ಮಾಧ್ಯಮಗಳ ಪ್ರತಿನಿಧಿಗಳು   ‘ಬೈಟ್‌’ ಪಡೆಯುವ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ. ಮತ್ತು ಮಾಹಿತಿ ಸೋರಿಕೆ ಆಗುವ ಸಾಧ್ಯತೆಯೂ ಇದೆ ಎಂಬ ಕಾರಣವನ್ನು ಮುಂದಿರಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದೆ.

 

ಅದೇ ರೀತಿ ವಿಧಾನಸೌಧದ ಪಶ್ಚಿಮ ದ್ವಾರದ ಪತ್ರಕರ್ತರ ಪೋರ್ಟಿಕೋದಲ್ಲಿರುವ ಸ್ಟ್ಯಾಂಡ್‌ ಬಳಿ ಯಾವ ಗಣ್ಯ ವ್ಯಕ್ತಿಗಳ ಹೇಳಿಕೆ, ಬೈಟ್‌ ಪಡೆಯಬೇಕು ಎಂಬುದನ್ನೂ ಸರ್ಕಾರವು ಸದ್ಯದಲ್ಲೇ ನಿರ್ಧರಿಸಲಿದೆ.

 

ಗಣ್ಯ ವ್ಯಕ್ತಿಗಳ ಸುರಕ್ಷತೆ, ಭದ್ರತೆ ಹಿತದೃಷ್ಟಿ ಕಾರಣವನ್ನು ಮುಂದಿರಿಸಿರುವ ವಿಧಾನಸೌಧ ಭದ್ರತಾ ವಿಭಾಗದ ಉಪ ಪೊಲೀಸ್‌ ಆಯುಕ್ತ ಎಂ ಎನ್‌ ಕರಿಬಸವನಗೌಡ ಅವರು ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ನಿಯಂತ್ರಿಸುವ ಕುರಿತು ಹಲವು ಪತ್ರಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದಿದ್ದಾರೆ. 2024ರ ಜೂನ್‌, ಜುಲೈ, ಆಗಸ್ಟ್‌ ಮತ್ತು  ಸೆಪ್ಟಂಬರ್‍‌ನಲ್ಲಿ ನಡೆಸಿರುವ ಪತ್ರ ವ್ಯವಹಾರಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸೆ.5ರಂದು ಬರೆದಿರುವ ಪತ್ರದಲ್ಲೇನಿದೆ?

 

ಮಾಧ್ಯಮ ಪ್ರತಿನಿಧಿಗಳು ಗಣ್ಯ ವ್ಯಕ್ತಿಗಳಿಂದ ಬೈಟ್‌ ಅಥವಾ ಹೇಳಿಕೆ ಪಡೆಯಲು ನಿಗದಿಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಬೈಟ್‌, ಹೇಳಿಕೆಗಳನ್ನು ತೆಗೆದುಕೊಳ್ಳದ ಹಾಗೇ ನಿರ್ಬಂಧಿಸಬೇಕು. ನ್ಯೂಸ್‌ ಮೀಡಿಯಾ ಚಾನಲ್‌ಗಳ ಪ್ರತಿನಿಧಿಗಳು 3 ರಿಂದ 4 ತಂಡಗಳಾಗಿ, 15 ರಿಂದ 20 ಜನರು ವಿಧಾನಸೌಧಕ್ಕೆ ಬರುತ್ತಿದ್ದು ಇದರಿಂದ ಭದ್ರತಾ ಲೋಪ ಉಂಟಾಗುವ ಸಾಧ್ಯತೆ ಇದೆ. ಒಂದು ಸಮೂಹ ಮಾಧ್ಯಮದ ಒಂದು ತಂಡಕ್ಕೆ ಮಾತ್ರ ಅನುಮತಿ ಅಥವಾ ಪಾಸ್‌ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

ವಿಧಾನಸೌಧದ 334 ಮತ್ತು 313 ಸಂಖ್ಯೆಯ ಕೊಠಡಿಗಳಲ್ಲಿ ಗಣ್ಯ ವ್ಯಕ್ತಿಗಳು ಸಭೆಗಳನ್ನು ಮುಗಿಸಿ ಹೊರಗೆ ಬಂದಾಗ ಮಾಧ್ಯಮದವರು ಬೈಟ್‌ ತೆಗೆದುಕೊಳ್ಳಲು ಕಾರಿಡಾರ್‍‌ಗಳಲ್ಲಿ ಗಣ್ಯ ವ್ಯಕ್ತಿಗಳ ಮೇಲೆಯೇ ಮುಗಿಬೀಳುತ್ತಿದ್ದಾರೆ. ಇದರಿಂದ ಗಣ್ಯ ವ್ಯಕ್ತಿಗಳ ಭದ್ರತೆಗೆ ಮತ್ತು ಸಚಿವಾಲಯದ ಕಾರ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ವೈಯಕ್ತಿಕ ಬೈಟ್‌ ಪಡೆದುಕೊಳ್ಳುವುದನ್ನು ನಿರ್ಬಂಧಿಸಬೇಕು ಎಂದು ಪತ್ರದಲ್ಲಿ ಉಪ ಪೊಲೀಸ್‌ ಆಯುಕ್ತರು ಕೋರಿದ್ದಾರೆ.

 

ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಒಳಭಾಗದ ಎಲ್ಲಾ ಮಹಡಿಗಳಲ್ಲಿ ಓಡಾಡಿಕೊಂಡು ಬೈಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಕಾರಿಡಾರ್‍‌ಗಳಲ್ಲಿ ಓಡಾಡುವ ಗಣ್ಯವ್ಯಕ್ತಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ವಿಧಾನಸೌಧದ 334 ಮತ್ತು 313ರಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಇತರೆ ಸಚಿವರು ಸಭೆ ಮುಗಿಸಿದ ನಂತರ ಸವಿಸ್ತಾರವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪತ್ರಿಕಾ ಗೋಷ್ಠಿ ಮಾಡಿ ಮಾಹಿತಿ ಒದಗಿಸಿದ ನಂತರವೂ ಸಹ ಮಾಧ್ಯಮದವರು  ಒಬ್ಬೊಬ್ಬರು ಬೈಟ್‌ ತೆಗೆದುಕೊಳ್ಳುವ ಪರಿಪಾಠವನ್ನು ಮುಂದುವರೆಸಿದ್ದಾರೆ ಎಂದು ಪತ್ರದಲ್ಲಿ (ನಂ; ಡಿಸಿಪಿ/ವಿಎಸ್‌ಎಸ್‌/ಸಿಬಿ/ಸಿಸಿ/119/2024) ವಿವರಿಸಿರುವುದು ತಿಳಿದು ಬಂದಿದೆ.

 

ಅಧಿಕೃತ ಪತ್ರಿಕಾ ಗೋಷ್ಠಿ ಮುಗಿದ ನಂತರ ವೈಯಕ್ತಿಕ ಬೈಟ್‌ ತೆಗೆದುಕೊಳ್ಳದಂತೆ ಸೂಚಿಸಬೇಕು. ಪಶ್ಚಿಮ ದ್ವಾರದ ಪತ್ರಕರ್ತರ ಪೋರ್ಟಿಕೋದಲ್ಲಿರುವ ಪತ್ರಕರ್ತರ ಸ್ಟ್ಯಾಂಡ್‌ ಬಳಿ ಯಾವ ಗಣ್ಯ ವ್ಯಕ್ತಿಗಳ ಹೇಳಿಕೆ, ಬೈಟ್ ಪಡೆಯಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಹಾಗೂ ವಿಧಾನಸೌಧದ ಒಳಭಾಗದ ಎಲ್ಲಾ ಮಹಡಿಗಳಲ್ಲಿಯೂ ಕ್ಯಾಮರಾಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇದರಿಂದ ವಿಧಾನಸೌಧ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಾಗೂ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಮಾಧ್ಯಮ ಪ್ರತಿನಿಧಿಗಳು ಭದ್ರತಾ ಅಧಿಕಾರಿಗಳ ಆದೇಶಗಳನ್ನು ಪಾಲಿಸುತ್ತಿಲ್ಲ. ಮತ್ತು ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮದವರನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಇದರಿಂದ ಗಣ್ಯ ವ್ಯಕ್ತಿಗಳ ಆಗಮನ ಮತ್ತು ನಿರ್ಗಮದ ವೇಳೆ ಸರಿಯಾದ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮ ಪ್ರತಿನಿಧಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಉಪ ಪೊಲೀಸ್‌ ಆಯುಕ್ತರಿಗೆ ಸಹಾಯಕ ಪೊಲೀಸ್‌ ಆಯುಕ್ತರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಮಾಧ್ಯಮ ವರದಿಗಾರರು ಎಲ್ಲೆಂದರಲ್ಲಿ ಗಣ್ಯ ವ್ಯಕ್ತಿಗಳಿಂದ ಮಾಹಿತಿ ಪಡೆಯಲು ಮುಗಿಬೀಳುತ್ತಿದ್ದಾರೆ. ಕ್ಯಾಮರಾ, ವೈರ್‍‌ಗಳು, ಟ್ರೈಪಾಡ್‌ ಗಳು ಗಣ್ಯ ವ್ಯಕ್ತಿಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಬೈಟ್‌, ಹೇಳಿಕೆ ಪಡೆಯಲು ಮುಗಿಬೀಳದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

 

ಹಾಗೆಯೇ ಯೂ ಟ್ಯೂಬ್‌ ಚಾನಲ್‌ನ ಪ್ರತಿನಿಧಿಗಳು ಹಾಗೂ ಮುಖ್ಯ ಮಾಧ್ಯಮ ಪ್ರತಿನಿಧಿಗಳು ಲೋಗೋ ಹಿಡಿದು ಒಳ ಪ್ರವೇಶಿಸುತ್ತಿದ್ದಾರೆ. ಇವರುಗಳಲ್ಲಿ ವ್ಯತ್ಯಾಸ ಕಂಡುಬಾರದ ಕಾರಣ ಗೇಟ್‌ಗಳಲ್ಲಿ ಇವರನ್ನು ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯೂ ಟ್ಯೂಬ್‌ ಚಾನಲ್‌ನ ಪ್ರತಿನಿಧಿಗಳನ್ನು ಒಳ ಪ್ರವೇಶಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಉಪ ಪೊಲೀಸ್‌ ಆಯುಕ್ತರು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

‘ಪ್ರತಿನಿತ್ಯ ವಿಧಾನಸೌಧ ಕಟ್ಟಡದಲ್ಲಿ ಮಾಧ್ಯಮ ಪ್ರತಿನಿಧಿಗಳಿಂದ ಗಣ್ಯ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ಆಗುತ್ತಿದೆ. ವಿಧಾನಸೌಧ ಕಟ್ಟಡದಲ್ಲಿ ಅವರಿಗೆಂದು ಮೀಸಲಿಟ್ಟಿರುವ ಮೀಡಿಯಾ ಸ್ಟ್ಯಾಂಡ್‌ ಬಳಿ ಮಾತ್ರ ಗಣ್ಯ ವ್ಯಕ್ತಿಗಳ ಸಂದರ್ಶನ ಪಡೆಯುವಂತೆ ಹಾಗೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಸಚಿವರು ಅಥವಾ ಸ್ಪೀಕರ್‍‌ರಿಂದ ಸಚಿವ ಸಂಪುಟ ಸಭೆ, ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುವಂತಹ ಸಂದರ್ಭಗಳಲ್ಲಿ ಪತ್ರಿಕಾ ಗೋಷ್ಠಿ ನಡೆಸುವ ಕುರಿತು ಆಹ್ವಾನವಿದ್ದಲ್ಲಿ ಮಾತ್ರ ಜಾಗಕ್ಕೆ ಹಾಜರಾಗುವಂತೆ, ಅನಾವಶ್ಯಕವಾಗಿ ಹಿಂಬಾಲಿಸದಂತೆ ಗಣ್ಯ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಮಾಧ್ಯಮದವರನ್ನು ನಿಯಂತ್ರಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಬೇಕು,’ ಎಂದು ಉಪ ಪೊಲೀಸ್‌ ಆಯುಕ್ತರು 2023ರ ಜೂನ್‌ 7ರಂದು ಪತ್ರ (ಸಂಖ್ಯೆ; ನಂ ಡಿಸಿಪಿ/ವಿಎಸ್‌ಎಸ್‌/ಸಿಬಿ/ಸಿಸಿ/51/2023) ಬರೆದಿದ್ದರು.

 

ಆದರೆ ಈ ಪತ್ರಕ್ಕೆ ಸಂಬಂಧಿಸಿದಂತೆ ಡಿಪಿಎಆರ್‍‌ನ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts