ಜಮೀನು ಖರೀದಿ, ಚುನಾವಣೆ ತಕರಾರು; ಸಚಿವದ್ವಯರ ವಿರುದ್ಧ ಪ್ರಾಣಬೆದರಿಕೆ ಆರೋಪ, ರಾಜ್ಯಪಾಲರಿಗೆ ದೂರು

ಬೆಂಗಳೂರು; ಜಮೀನು ಖರೀದಿ ಮತ್ತು ಚುನಾವಣೆ ತಕರಾರು ಅರ್ಜಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್‍‌ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬೀದರ್‍‌ನ ಶಶಿಕುಮಾರ್‍‌ ಪಾಟೀಲ ಎಂಬುವರು ರಾಜ್ಯಪಾಲರು, ಗೃಹ ಸಚಿವ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

 

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ್‍‌ ಖಂಡ್ರೆ ಅವರ ವಿರುದ್ಧ ಇತ್ತೀಚೆಗಷ್ಟೇ ಅರಣ್ಯ ಒತ್ತುವರಿ ಆರೋಪ ಕೇಳಿ ಬಂದಿತ್ತು.  ಇದರ ಬೆನ್ನಲ್ಲೇ  ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆಯೇ ಶಶಿಕುಮಾರ್‍‌ ಪಾಟೀಲ್‌ ಎಂಬುವರಿಗೆ ಅಧಿಕಾರಿಗಳ ಮೂಲಕ ಕಿರುಕುಳ, ಮಾನಸಿಕ ತೊಂದರೆ ಮತ್ತು ಪ್ರಚೋದನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ದೂರರ್ಜಿ ಮುನ್ನೆಲೆಗೆ ಬಂದಿದೆ. ಈ ದೂರರ್ಜಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅದೇ ರೀತಿ ಸಚಿವ ರಹೀಂ ಖಾನ್‌ ಅವರ ವಿರುದ್ಧವೂ ಶಶಿಕುಮಾರ್‍‌ ಅವರು ಚುನಾವಣೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ಹೈಕೋರ್ಟ್‌ ವಿಚಾರಣೆಯಲ್ಲಿದೆ. ಹೀಗಿದ್ದರೂ ಈ ಅರ್ಜಿಯನ್ನು ಹಿಂಪಡೆದುಕೊಳ್ಳಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಶಶಿಕುಮಾರ್‍‌ ಅವರು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ದೂರಿನಲ್ಲೇನಿದೆ?

 

ಬೀದರ್‍‌ ಗ್ರಾಮದ ಗುಲ್ಲರ ಹವೇಲಿ, ದೇವಿ ಕಾಲೋನಿಯ ಸರ್ವೆ ನಂಬರ್‍‌ 60/1ರಲ್ಲಿನ ಈಶ್ವರ ಖಂಡ್ರೆ ಅವರ ಜಮೀನಿನ ಪಕ್ಕದಲ್ಲಿದೆ. ಈ ಜಮೀನು ಖರೀದಿ ಮಾಡುವ ಮುನ್ನ ಅವರನ್ನು ಕೇಳಿದ್ದೆ. ಅವರು ಇದಕ್ಕೆ ತಕರಾರು ಇಲ್ಲ ಎಂದಿದ್ದರು. ನೀನು ಖರೀದಿ ಮಾಡಬಹುದು ಎಂದು ಹೇಳಿದ್ದರು. ಹೀಗಾಗಿ ಈ ಜಮೀನನ್ನು ಖರೀದಿ ಮಾಡಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಆದರೀಗ ರಾಜಕೀಯ ಉದ್ದೇಶದಿಂದ ಈಗ ಇದೇ ಜಮೀನಿನ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಆ ಜಮೀನು ಖರೀದಿ ಮಾಡಲು ಈಶ್ವರ್ ಖಂಡ್ರೆ ಅವರು ಯತ್ನಿಸುತ್ತಿದ್ದಾರೆ. ಮತ್ತು ಪೊಲೀಸ್‌ ಠಾಣೆಯಲ್ಲಿ ವಿನಾ ಕಾರಣ ದೂರು ಕೊಡಿಸಿ ಅದಕ್ಕೆ ಪೊಲೀಸ್‌ ಅಧಿಕಾರಿಗಳಿಂದ ಕಿರುಕುಳ ನೀಡುತ್ತಿದ್ಧಾರೆ. ಮಾನಸಿಕ ತೊಂದರೆ ಮತ್ತು ಪ್ರಚೋದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಶಶಿಕುಮಾರ್‍‌ ಅವರು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

 

‘ಅಲ್ಲದೇ ನನಗೆ ಅವರೇ ಫೋನ್‌ ಮಾಡಿ ಆ ಜಮೀನಿನ ಬಗ್ಗೆ ನೀನು ಖರೀದಿ ಮಾಡಿದ ಜಮೀನಿನ ಹಣ ತೆಗೆದುಕೋ, ಆ ಜಮೀನು ಬಿಟ್ಟು ಕೊಡು, ನೀನು ಕೊಟ್ಟ ಹಣ ತೆಗೆದುಕೋ ಎಂದು ದಬ್ಬಾಳಿಕೆ ಹಾಕುತ್ತಿದ್ದಾರೆ. ಇಲ್ಲದಿದ್ದರೇ ನಿನ್ನನ್ನು ನೋಡಿಕೊಳ್ಳುತ್ತೇನೆಂದು ಒತ್ತಡ ಹೇರಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

 

ಹಾಗೆಯೇ ಪೌರಾಡಳಿತ ಸಚಿವ ರಹೀಂ ಖಾನ್‌ ವಿರುದ್ಧವೂ ಇದೇ ದೂರಿನಲ್ಲಿ ಆಪಾದಿಸಿದ್ದಾರೆ.

 

‘ನಾನು ಚುನಾವಣೆ ತಕರಾರು ಅರ್ಜಿ ಹೂಡಿದ್ದೇನೆ. ಇದು ಹೈಕೋರ್ಟ್‌ ವಿಚಾರಣೆಯಲ್ಲಿದೆ. ಹೀಗಾಗಿ ಇವರೂ ಸಹ ಮಾನಸಿಕ ಹಿಂಸೆ ಕಿರಕುಳ ನೀಡುತ್ತಿದ್ಧಾರೆ. ಕೇಸ್‌ ವಾಪಸ್‌ ತೆಗದುಕೋ ಆ ಕೇಸಿನ ವಿಚಾರಣೆ ಬಿಟ್ಟುಕೊಡು. ಅದನ್ನು ಹಿಂಪಡೆದುಕೋ  ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಇಲ್ಲದಿದ್ದರೇ ನಿನ್ನನ್ನು ನೋಡಿಕೊಳ್ಳುತ್ತೇನೆ, ಬಾಜಾ ಬಜಾತು ಎಂದು ಒತ್ತಡ ಹೇರುತ್ತಿದ್ದಾರೆ,’ ಎಂದು ಆಪಾದಿಸಿರುವುದು ತಿಳಿದು ಬಂದಿದೆ.

 

ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಪೂರ್ಣ ಜವಾಬ್ದಾರಿ ಖಂಡ್ರೆ ಅವರೇ ಆಗಿರಲಿದ್ಧಾರೆ ಎಂದು ದೂರಿನಲ್ಲಿ ಹೇಳಿರುವ ಶಶಿಕುಮಾರ್‍‌ ಅವರು ನನ್ನ ಜೀವ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಯಾವುದೇ ಹಾನಿ ಆದರೆ ಸಂಫೂರ್ಣ ಹೊಣೆಗಾರಿಕೆ ಈಶ್ವರ್‍‌ ಖಂಡ್ರೆ ಮತ್ತು ರಹೀಂ ಖಾನ್‌ ಅವರದ್ದೇ ಅವರೇ ಹೊಣೆಗಾರರಾಗಿದ್ದಾರೆ ಎಂದೂ ತಿಳಿಸಿದ್ದಾರೆ.

the fil favicon

SUPPORT THE FILE

Latest News

Related Posts