ಆಸ್ತಿ ತೆರಿಗೆ ಪಾವತಿ ವಿನಾಯಿತಿಗೆ ನಕಾರ; 1,000 ಕೋಟಿ ನಷ್ಟವೆಂದ ಬಿಬಿಎಂಪಿ, ‘ನಿಶ್ಯಕ್ತಿ’ಯಾದ ಬಿಎಂಟಿಸಿ

ಬೆಂಗಳೂರು; ಶಕ್ತಿ ಯೋಜನೆ ಅನುಷ್ಠಾನವೂ ಸೇರಿದಂತೆ ಇನ್ನಿತರೆ ಕಾರಣಗಳಿಂದ ತೀವ್ರ ನಷ್ಟದಲ್ಲಿ ಸಾಗುತ್ತಿರುವ ಬಿಎಂಟಿಸಿ ಬಳಿ ಆಸ್ತಿ ತೆರಿಗೆ ಪಾವತಿಸಲೂ ಹಣವಿಲ್ಲದಂತಾಗಿದೆ. ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಸರ್ಕಾರಕ್ಕೆ ಕದ ತಟ್ಟಿದೆಯಾದರೂ ನಗರಾಭಿವೃದ್ಧಿ ಇಲಾಖೆಯು ಯಾವುದೇ ಕಾರಣಕ್ಕೂ ವಿನಾಯಿತಿ ನೀಡುವುದಿಲ್ಲ ಪಟ್ಟು ಹಿಡಿದು ಕುಳಿತಿದೆ.

 

ಅಲ್ಲದೇ ಬಿಎಂಟಿಸಿಗೆ ಶಕ್ತಿ ಯೋಜನೆಯಿಂದ ಉಂಟಾಗುತ್ತಿರುವ ಹಣಕಾಸಿನ ನಷ್ಟವನ್ನು ಬಿಬಿಎಂಪಿಯು ಉತ್ತಮಗೊಳಿಸಲಾಗುವುದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದೆ. ಶಕ್ತಿ ಯೋಜನೆ ಮತ್ತು ಇನ್ನಿತರೆ ಕಾರಣಗಳಿಂದ ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಬಿಎಂಟಿಸಿ ಪ್ರಸ್ತಾವನೆಯನ್ನು ತಳ್ಳಿ ಹಾಕಿರುವ ನಗರಾಭಿವೃದ್ದಿ ಇಲಾಖೆಯ ನಿರ್ಧಾರದಿಂದ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

 

ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಲ್ಲಿ ಚರ್ಚೆಗಳು ನಡೆದಿವೆ. ಈ ಸಂಬಂಧ ಕೆಲ ದಾಖಲೆಗಳು (ಸಂಖ್ಯೆ; UDD/115/MNU/2023-BBMP-Urban Development (Computer No. 1033007) ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಾರ್ವಜನಿಕರ ಅಗತ್ಯ ಸೇವಾ ಸಂಸ್ಥೆಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಹ ಸರ್ಕಾರಿ ಸ್ವಾಮ್ಯದ ನಗರ ಸಾರಿಗೆ ಸಂಸ್ಥೆಯಾಗಿ ಸಾರಿಗೆ ಸೇವೆಗಳನ್ನು ಒದಗಿಸುವುದರೊಂದಿಗೆ ನಗರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಪೂರಕವಾದ ಅಂಶಗಳೊಂದಿಗೆ ಬಿಎಂಟಿಸಿಯು ಪ್ರಸ್ತಾವನೆ ಮುಂದಿರಿಸಿತ್ತು.

 

ನಗರಾಭಿವೃದ್ದಿ ಪ್ರಾದಿಕಾರದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಸಹ ಆಸ್ತಿ ತೆರಿಗೆ ವಿನಾಯತಿಗೆ ಅರ್ಹವಾಗಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸ್ವತ್ತುಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಬಿಎಂಟಿಸಿಯು ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಪ್ರತಿಪಾದಿಸಿತ್ತು.

 

‘ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ 1976ರ ಕಲಂ 110(ಜೆ) ರ ಅಡಿಯಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂಮಿ ಮತ್ತು ಕಟ್ಟಡಗಳಿಗೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ಗೃಹ ಮಂಡಳಿ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಗಳು ಶಿಕ್ಷಣ ಸಂಸ್ಥೆಗಳ ಭೂಮಿ ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕವನ್ನು ನಿಗದಿಪಡಿಸಿ ವಸೂಲಾತಿ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ,’ ಎಂದು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿತ್ತು.

 

ಆದರೆ ಈ ಪ್ರಸ್ತಾವನೆಯನ್ನು ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆಯು ತಿರಸ್ಕರಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದಲ್ಲಿ 1,000 ಕೋಟಿಯಷ್ಟು ನಷ್ಟ ಉಂಟಾಗಲಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಪ್ರತಿಪಾದಿಸಿರುವುದು ಗೊತ್ತಾಗಿದೆ.

 

‘ಬಿಎಂಟಿಸಿ ಮತ್ತು ಇತರೆ ಸಾರ್ವಜನಿಕ ಉದ್ದಿಮೆಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದಲ್ಲಿ ಪಾಲಿಕೆಗೆ ಸುಮಾರು 1,000 ಕೋಟಿಗಳಷ್ಟು ನಷ್ಟ ಉಂಟಾಗುತ್ತದೆ. ಬಿಬಿಎಂಪಿಗೆ ಆಸ್ತಿ ತೆರಿಗೆಯು ಆದಾಯದ ಏಕೈಕ ದೊಡ್ಡ ಮೂಲವಾಗಿದೆ. ಬಿಎಂಟಿಸಿಗೆ ಶಕ್ತಿ ಯೋಜನೆಯಿಂದ ಉಂಟಾಗುತ್ತಿರುವ ಹಣಕಾಸಿನ ನಷ್ಟವನ್ನು ಬಿಬಿಎಂಪಿಯು ಉತ್ತಮಗೊಳಿಸಲಾಗುವುದಿಲ್ಲ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

 

ಅಷ್ಟೇ ಅಲ್ಲ, ಬಿಎಂಟಿಸಿಯು ಕೆಎಂಸಿ ಕಾಯ್ದೆ 1976ಕ್ಕೆ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸಿತ್ತು. ಈ ಮೂಲಕ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಕೋರಿತ್ತು. ಆದರೆ 2018ರಲ್ಲಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಲಿಕೆಯ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಇದನ್ನು ತಿರಸ್ಕರಿಸಿತ್ತು. ‘ಸರ್ಕಾರವು ಬಿಬಿಎಂಪಿಯ ಆದಾಯದ ದೃಷ್ಟಿಯಿಂದ ಕಾಯ್ದೆಗೆ ತಿದ್ದುಪಡಿ ಮಾಡುವುದು ಸಮಂಜಸವಲ್ಲವೆಂದು ಪುನರುಚ್ಛರಿಸಿ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ,’ ಎಂದು 2018ರ ಜೂನ್‌ 7ರಂದೇ ಬಿಎಂಟಿಸಿಗೆ ತಿಳಿಸಿತ್ತು.

 

ಹಾಗೆಯೇ ಪಾಲಿಕೆಯ ವ್ಯಾಪ್ತಿಯಲ್ಲಿರುವ ಬಿಎಂಟಿಸಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಬಿಬಿಎಂಪಿ ಕಾಯ್ದೆ 2020 ಪ್ರಕರಣ 152 ರ ಅನ್ವಯವೂಈ ಅವಕಾಶವಿಲ್ಲ. ಅಲ್ಲದೇ ಪಾಲಿಕೆಯ ಅರ್ಥಿಕ ಹಿತದೃಷ್ಟಿಯಿಂದ ಬಿಎಂಟಿಸಿಯ ಈ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

‘ ಬಿಬಿಎಂಪಿ ಕಾಯ್ದೆ 2020ರ ಕಲಂ 152 (ಜೆ) ಅಡಿಯಲ್ಲಿ ರಾಜ್ಯ ಸರ್ಕಾರದ ಸ್ವತ್ತನ್ನು ಇತರೆ ವಾಣಿಜ್ಯ ಚಟುವಟಿಕಗೆಳಿಗೆ ಅಥವಾ ವಸತಿ ಉದ್ದೇಶಕ್ಕಾಗಿ ಉಪಯೋಗಿಸುತ್ತಿದ್ದಲ್ಲಿ ಸದರಿ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕವನ್ನು ನಿಗದಿಪಡಿಸಲು ಅವಕಾಶವಿರುವುದಿಲ್ಲ. ಬಿಎಂಟಿಸಿಯು ವಾಣಿಜ್ಯ ಚಟುವಟಿಕೆ ನಡೆಸುವ ಸಂಸ್ಥೆಯಾಗಿದ್ದು ಈ ಸಂಸ್ಥೆಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕವನ್ನು ನಿಗದಿಪಡಿಸಲು ಕಾಯ್ದೆಯಲ್ಲಿ ಅವಕಾಶವಿರುವುದಿಲ್ಲ.

 

ಅಲ್ಲದೇ ಬಿಎಂಟಿಸಿ ಮತ್ತು ಇತರೆ ಸಾರ್ವಜನಿಕ ಉದ್ದಿಮೆಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಹಿತಿ ನೀಡಿದಲ್ಲಿ ಪಾಲಿಕೆಗೆ ಸುಮಾರು 1,000 ಕೋಟಿಯಷ್ಟು ನಷ್ಟ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಈ ಅಭಿಪ್ರಾಯವನ್ನು ಬಿಬಿಎಂಪಿಯ ಆಡಳಿತಗಾರರು ಸಹ ಅನುಮೋದಿಸಿದ್ದಾರೆ. ಹೀಗಾಗಿ ಬಿಎಂಟಿಸಿಯ ಕೋರಿಕೆಯಂತೆ ಕ್ರಮವಹಿಸಲು ಅವಕಾಶವಿರುವುದಿಲ್ಲ,’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ 2024ರ ಸೆ.6ರಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಬಿಎಂಟಿಸಿಯ ಪ್ರಸ್ತಾವನೆಯಲ್ಲೇನಿದೆ?

 

ಸಾರ್ವಜನಿಕರ ಅಗತ್ಯ ಸೇವಾ ಸಂಸ್ಥೆಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಹ ಸರ್ಕಾರಿ ಸ್ವಾಮ್ಯದ ನಗರ ಸಾರಿಗೆ ಸಂಸ್ಥೆಯಾಗಿ ಸಾರಿಗೆ ಸೇವೆಗಳನ್ನು ಒದಗಿಸುವುದರೊಂದಿಗೆ ನಗರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

 

ನಗರಾಭಿವೃದ್ದಿ ಪ್ರಾದಿಕಾರದ ಸಂಸ್ಥೆಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಸಹ ಆಸ್ತಿ ತೆರಿಗೆ ವಿನಾಯತಿಗೆ ಅರ್ಹವಾಗಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸ್ವತ್ತುಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ನೀಡಲಾಗಿರುವುದಿಲ್ಲ ಎಂದು ತಿಳಿಸಿದೆ.

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ 2016-17ನೇ ಸಾಲಿನಿಂದ ಈವರೆಗೆ ಬಾಕಿ ಇರುವ ತೆರಿಗೆ ಮತ್ತು ಬಡ್ಡಿ ಹಾಗೂ ದಂಡದ ಮೊತ್ತ ಸೇರಿ ಒಟ್ಟು ಅಂಧಾಜು 67.00 ಕೋಟಿ ರ.ಗಳನ್ನು ಮನ್ನಾ ಮಾಡುವಂತೆ ಕೋರಿದೆ. ಮುಂದುವರೆದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ನಿಯಮಿತದ ಸ್ವತ್ತುಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕ ಪಾವತಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2020ರ ಜೂನ್‌ 21ರಂದು ಜರುಗಿದ ಬಿಎಂಆರ್‍‌ಸಿಎಲ್‌ನ 35ನೇ ಹೈಪವರ್‍‌ ಕಮಿಟಿ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನದ ಪೂರ್ವ ನಿದರ್ಶನವನ್ನು ಒದಗಿಸಿತ್ತು.

 

‘ಬಿಡಿಎ, ಕೆಹೆಚ್‌ಬಿ, ಬಿಡಬ್ಲ್ಯೂಎಸ್‌ಎಸ್‌ಬಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಶೇ. 25ರಷ್ಟು ಸೇವಾ ಶುಲ್ಕವನ್ನು ನಿಗದಿಪಡಿಸಿರುವಂತೆ ಮತ್ತು ಬಿಎಂಆರ್‍‌ಸಿಎಲ್‌ ಸಂಸ್ಥೆಯ ಸ್ವತ್ತುಗಳಿಗೆ ಸಹ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕ ನಿಗದಿಪಡಿಸಿರುವಂತೆ ಬಿಎಂಟಿಸಿ ಸಂಸ್ಥೆಯ ಸ್ವತ್ತುಗಳಿಗೂ ಸಹ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಸೇವಾ ಶುಲ್ಕ ನಿಗದಿಪಡಿಸಿಕೊಡಬೇಕು,’ ಎಂದು ಬಿಎಂಟಿಸಿಯ ಹಿಂದಿನ ಎಂಡಿ ಸತ್ಯವತಿ ಅವರು 2023ರ ಫೆ.20ರಂದೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

 

ಈ ಕುರಿತು ಉಪ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts