ಗ್ಯಾರಂಟಿ ಯೋಜನೆ, ಕನ್ನಡಿಗರಿಗೆ ಮೀಸಲಾತಿ ನೀತಿ ಟೀಕಿಸಿದ್ದ ಮೋಹನ್‌ ದಾಸ್‌ ಪೈಗೆ ರತ್ನಗಂಬಳಿ

ಬೆಂಗಳೂರು; ಕಾಂಗ್ರೆಸ್‌ ಪಕ್ಷವು ಕರ್ನಾಟಕ, ಹರ್ಯಾಣ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿ ಉಚಿತ ಯೋಜನೆಗಳನ್ನು ಕಟುವಾಗಿ ಟೀಕಿಸಿದ್ದ ಉದ್ಯಮಿ ಮೋಹನ್‌ ದಾಸ್‌ ಪೈ ಅವರನ್ನೇ ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅನುಷ್ಠಾನಗೊಳಿಸಲಿರುವ ನಾಲೆಡ್ಜ್-ಹೆಲ್ತ್-ಇನ್ನೋವೇಶನ್-ರೀಸರ್ಚ್ ಸಿಟಿ ಸಲಹಾ ಸಮಿತಿಗೆ ನೇಮಿಸಿದೆ.

 

ಅಲ್ಲದೇ ಕಾಂಗ್ರೆಸ್‌ ವರಿಷ್ಠ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯ ಹೇಳಿಕೆಗಳನ್ನೂ ಮೋಹನ್‌ ದಾಸ್‌ ಪೈ ಅವರು ಕಟುವಾಗಿ ಟೀಕಿಸಿದ್ದರು. ಕಾಂಗ್ರೆಸ್‌ನ ಪ್ರಣಾಳಿಕೆಗಳೂ ಮಾರ್ಕ್ಸ್‌ವಾದಿಯಿಂದ ಪ್ರೇರಿತವಾಗಿದೆ ಎಂದೂ ಟೀಕಿಸಿದ್ದರು. ಇದೀಗ ನಾಲೆಡ್ಜ್-ಹೆಲ್ತ್-ಇನ್ನೋವೇಶನ್-ರೀಸರ್ಚ್ ಸಿಟಿಗೆ ಸಲಹಾ ಸಮಿತಿಗೆ ಮೋಹನ್‌ ದಾಸ್‌ ಪೈ ಅವರನ್ನೇ ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

Oplus_131072

 

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದನ್ನೂ ಸಹ ಮೋಹನ್‌ ದಾಸ್‌ ಪೈ ಅವರು ಟೀಕಿಸಿದ್ದರು.

 

ಉಚಿತ ಯೋಜನೆಗಳಿಗೆ ತಗಲುವ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದ್ದರು.

 

 

ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತಿತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ. 75 ರಷ್ಟು ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದಕ್ಕೂ ಮೋಹನ್‌ ದಾಸ್‌ ಪೈ ಅವರು ವಿರೋಧಿಸಿದ್ದರು. ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಬದಲು ಉದ್ಯೋಗ ಪಡೆಯಲು ಕೌಶಲ್ಯ ಬೆಳೆಸುವುದೊಂದೇ ದಾರಿ ಎಂದಿದ್ದರು.

 

‘ಕನ್ನಡಿಗರಿಗೆ ಉದ್ಯೋಗಕ್ಕಾಗಿ ಬಯಸಿದರೆ, ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಖರ್ಚು ಮಾಡಿ. ಅವರಿಗೆ ತರಬೇತಿ ನೀಡಿ. ಕೌಶಲ್ಯ ಅಭಿವೃದ್ಧಿ, ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಿ. ಅದರಿಂದ ಅವರೆಲ್ಲರೂ ಕೌಶಲ್ಯಪೂರ್ಣರಾಗುತ್ತಾರೆ. ಇದರಿಂದ ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದ ಮೋಹನ್‌ ದಾಸ್‌ ಪೈ ಅವರು ಈ ವಿಧೇಯಕವು ಫ್ಯಾಸಿಸ್ಟ್ ಮತ್ತು ಅಸಂವಿಧಾನಿಕವಾಗಿದೆ ಎಂದು ಜರಿದಿದ್ದರು.

 

 

ಅದೇ ರೀತಿ ಮೈಸೂರಿನಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದ್ದ ಕೇಯ್ನ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್‌ ಕಂಪನಿಯ ಸೆಮಿ ಕಂಡಕ್ಟರ್‌ ಘಟಕ (Semi conductor Unit) ಈಗ ತೆಲಂಗಾಣಕ್ಕೆ ವಲಸೆ ಹೋಗಿದ್ದ ವಿಚಾರದಲ್ಲೂ ಮೋಹನ್‌ದಾಸ್‌ ಪೈ ಮತ್ತು ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ನಡುವೆ ಜಟಾಪಟಿ ನಡೆದಿತ್ತು.

 

‘ನಮ್ಮ ಉದಾಸೀನ ಮತ್ತು ನಿರ್ಲಕ್ಷ್ಯದ ಪ್ರತಿಕ್ರಿಯೆಗಳಿಂದಾಗಿ ಮೈಸೂರಿನಿಂದ ಒಂದು ಒಳ್ಳೆಯ ಕಂಪನಿಯನ್ನು ನಾವು ಹೊರಗೆ ಓಡಿಸಿದ್ದೇವೆ. ಇದು ಕರ್ನಾಟಕದ ಪಾಲಿಗೆ ಅತ್ಯಂತ ಬೇಸರದ ದಿನ. ಯಾಕೆ ನಾವು ಹೀಗೆ ಕೈಗಾರಿಕೆಗಳನ್ನು ಓಡಿಸುತ್ತಿದ್ದೇವೆ. ಹೀಗೆ ಮಾಡಿದರೆ ನಾವು ಉದ್ಯೋಗ ಸೃಷ್ಟಿ ಮಾಡುವುದು ಹೇಗೆ? ಎಂದು ಕೇಳಿದ್ದಾರೆ. ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ, ಡಿ.ಕೆ. ಶಿವಕುಮಾರ್‌ ಮತ್ತು ಎಂ.ಬಿ. ಪಾಟೀಲ್‌ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಂ ಬಿ ಪಾಟೀಲ್‌ ಅವರು ಮೋಹನದಾಸ್‌ ಪೈ ಅವರಿಗೆ ವಿಷಯ ಗೊತ್ತಿಲ್ಲ ಎಂದಿದ್ದರು.

 

 

ಅದೇ ರೀತಿ ರಾಹುಲ್‌ ಗಾಂಧಿ ಅವರು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನೀಡಿದ್ದ ಹೇಳಿಕೆಗಳನ್ನೂ ಮೋಹನ್‌ ದಾಸ್‌ ಪೈ ಅವರು ಬಲವಾಗಿ ಟೀಕಿಸಿದ್ದರು.

 

 

ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕೆಎಚ್ಐಆರ್ (ನಾಲೆಡ್ಜ್-ಹೆಲ್ತ್-ಇನ್ನೋವೇಶನ್-ರೀಸರ್ಚ್) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸೆ.26ರಂದು ಚಾಲನೆ ನೀಡಲಿದ್ದಾರೆ.

 

ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ವಿಖ್ಯಾತ ಕಂಪನಿಗಳ ಆರ್ & ಡಿ ಕೇಂದ್ರಗಳು, ಗ್ಲೋಬಲ್ ಕೆಪಾಸಿಟಿ ಸೆಂಟರುಗಳು ಬರಲಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಡಾ.ದೇವಿಶೆಟ್ಟಿ, ಕಿರಣ್ ಮಜುಂದಾರ್ ಷಾ, ಪ್ರಶಾಂತ ಪ್ರಕಾಶ, ಥಾಮಸ್ ಓಶಾ, ರಾಂಚ್ ಕಿಂಬಾಲ್, ಮೋಹನದಾಸ್ ಪೈ, ನಿಖಿಲ್ ಕಾಮತ್ ಮುಂತಾದ ಖ್ಯಾತನಾಮರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ.

 

ಇಲ್ಲಿ ಪ್ರತಿ ಎಕರೆಗೆ 100 ಜನರ ವಸತಿ ಇರುವಂತೆ ನೋಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts