ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನಗಳನ್ನು 60;40ರ ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2014ರಲ್ಲೇ ತಿಳಿವಳಿಕೆ ಪತ್ರ ನೀಡಿತ್ತು. ಆದರೂ 50;50 ರ ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿತ್ತು ಎಂಬ ಹೊಸ ದಾಖಲೆಯೊಂದು ಬಿಡುಗಡೆಯಾಗಿದೆ.
50;50 ರ ಅನುಪಾತದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ದಾಖಲೆಗಳು ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲೇ ಇದೀಗ ಮುಡಾವು ಪಾರ್ವತಿ ಅವರಿಗೆ ನೀಡಿದ್ದ ತಿಳಿವಳಿಕೆ ಪತ್ರವೂ ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿಯೇ ಇದೆ. ಈ ಸಂಗತಿಯನ್ನು ಸ್ನೇಹಮಯಿ ಕೃಷ್ಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರು ತಾಲೂಕು ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3-16 ಎಕರೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಸರ್ಕಾರ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಬದಲಿ ಜಮೀನು ನೀಡಬೇಕು ಎಂದು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 2014ರ ಜೂನ್ 23ರಂದು ಮೂಡಾಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಪರಿಶೀಲಿಸಿದ್ದ ಮುಡಾವು ಪಾರ್ವತಿ ಅವರಿಗೆ ತಿಳಿವಳಿಕೆ ಪತ್ರ ನೀಡಿತ್ತು.
ತಿಳಿವಳಿಕೆ ಪತ್ರದಲ್ಲೇನಿದೆ?
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ದೇವನೂರು ಮೂರನೇ ಹಂತದ ಬಡಾವಣೆಗಾಗಿ ಸರ್ಕಾರವು 1997ರ ಆಗಸ್ಟ್ 20ರಂದು ಅಂತಿಮ ಅಧಿಸೂಚನೆ ಹೊರಡಿಸಿದ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3-16 ಎಕರೆ ಜಮೀನನ್ನು ಸರ್ಕಾರವು 1998ರ ಮೇ 18ರಂದು ಅಧಿಸೂಚನೆ ಮೂಲಕ ಭೂ ಸ್ವಾಧೀನ ಕ್ರಮದಿಂದ ಮೇಲ್ಕಂಡ ಜಮೀನನ್ನು ಕೈ ಬಿಟ್ಟು ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಸರ್ಕಾರದ ಡಿನೋಟಿಫಿಕೇಷನ್ ನಡವಳಿಯು ಪ್ರಾಧಿಕಾರದ ತಾಂತ್ರಿಕ ಸಾಖೆಯ ಗಮನಕ್ಕೆ ಬಾರದೇ ಇರುವುದರಿಂದ ಈ ಜಮೀನನ್ನು ಪೂರ್ಣ ಪ್ರಮಾಣದಲ್ಲಿ ಪ್ರಾಧಿಕಾರವು ಅಭಿವೃದ್ಧಿ ಪಡಿಸಲಾಗಿತ್ತು.
ತಮ್ಮ ಕೋರಿಕೆಯಂತೆ ತಮ್ಮ ಜಮೀನಿಗೆ ಬದಲಾಗಿ ಭೂ ಸ್ವಾಧೀನ ಪಡಿಸಿದ ಜಮೀನನ್ನು ನೀಡಲು ಪ್ರಾಧಿಕಾರದ ವಶದಲ್ಲಿ ಹಾಲಿ ಜಮೀನು ಲಭ್ಯವಿರುವುದಿಲ್ಲ. ಆದ್ದರಿಂದ ನಿಮ್ಮ ಜಮೀನಿಗೆ ಮಾರುಕಟ್ಟೆ ದರದಲ್ಲಿ ದರವನ್ನು ನಿಗದಿಪಡಿಸಿ ಭೂಮಿಯ ಪರಿಹಾರ ನೀಡಲು ಅಥವಾ 60;40ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ತತ್ಸಮಾನ ಬಡಾವಣೆಗಳಲ್ಲಿ ನೀಡಲು ಪ್ರಾಧಿಕಾರವು ಪರಿಶೀಲಿಸಿ ನಿಮ್ಮ ಕೋರಿಕೆಯನ್ನು ಪರಿಗಣಿಸಲಾಗುವುದು.
ಈ ಎರಡೂ ಅಂಶಗಳ ವಿಚಾರದಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಕೂಡಲೇ ತಿಳಿಸಬೇಕು ಎಂದು ಎಂದು 2014ರ ಆಗಸ್ಟ್ 18ರಂದು ಮೂಡಾ ಆಯುಕ್ತರು ಪಾರ್ವತಿ ಅವರಿಗೆ ಪತ್ರ ಬರೆದಿದ್ದರು.
60;40 ರ ಅನುಪಾತದಲ್ಲಿ ನಿವೇಶನ ನೀಡಲಾಗುವುದು ಎಂದು ಮುಡಾ ಪಾರ್ವತಿ ಅವರಿಗೆ ತಿಳಿವಳಿಕೆ ಪತ್ರ ಹೊರಡಿಸಿತ್ತು. ಇದಾದ ನಂತರ ಸರ್ಕಾರದಿಂದ 2015ರಲ್ಲಿ ಅಧಿಸೂಚನೆ ಆದೇಶ ಹೊರಡಿಸಿತ್ತು.
ಈ ಅಧಿಸೂಚನೆಯಲ್ಲಿಯೂ ಎಡವಟ್ಟು ನಡೆದಿದೆ ಎಂದು ಸ್ನೇಹಮಯಿ ಕೃಷ್ಣ ಅವರು ಬೆಳಕಿಗೆ ತಂದಿದ್ದಾರೆ.
‘ಈ ಆದೇಶದಲ್ಲಿನ ಎಡವಟ್ಟು ಏನೆಂದರೆ 40 ಎನ್ನುವುದನ್ನು, 50 ಎಂದು ತಿದ್ದುಪಡಿ ಮಾಡಿಕೊಳ್ಳಲು ತಿಳಿಸಲಾಗಿದೆ. 60 ಎನ್ನುವುದನ್ನು 50 ಎಂದು ತಿದ್ದುಪಡಿ ಮಾಡಿಕೊಳ್ಳಲು ತಿಳಿಸಿರುವುದಿಲ್ಲ. ಅಲ್ಲಿಗೆ “ಪ್ರಾಧಿಕಾರ” ಗಳು 60;40 ಅನುಪಾತದಲ್ಲಿ ನಿವೇಶನಗಳನ್ನು ಹಂಚಬೇಕು. ಈ ಚಮತ್ಕಾರ ಹೇಗೆ ಸಾಧ್ಯವಾಗುತ್ತದೆ,’ ಎಂದು ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.