ಬೆಂಗಳೂರು; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿ.ಎ) ಮೀಸಲಿಟ್ಟ ನಿವೇಶನಗಳ ಹಂಚಿಕೆಯಲ್ಲಿ ಒಳಸಂಚು ಮತ್ತು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜಭವನ ಮೆಟ್ಟಿಲೇರಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14 ಬದಲಿ ನಿವೇಶನ ಪಡೆದುಕೊಂಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟದ ಸುಳಿಗೆ ಸಿಲುಕಿರುವ ಬೆನ್ನಲ್ಲೇ ಇದೀಗ ಸಿ ಎ ನಿವೇಶನಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿರುವ ಮನವಿಯು ಮುನ್ನೆಲೆಗೆ ಬಂದಿದೆ.
ಕೈಗಾರಿಕೆಗಳನ್ನೇ ನಡೆಸದ ಕಂಪನಿಗಳಿಗೂ ಸಿ ಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದೂರಿರುವ ದಿನೇಶ್, ಮಂಡಳಿಯ ನಿಯಮ (7)ನ್ನು ನೇರವಾಗಿ ಉಲ್ಲಂಘಿಸಲಾಗಿದೆ ಎಂದು ಆಪಾದಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು ರಚಿಸಿರುವ ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರ, ಅಕ್ರಮ, ಕ್ರಿಮಿನಲ್ ಒಳಸಂಚು ನಡೆಸಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ. ಇದರಿಂದ ಕೆಐಎಡಿಬಿಗೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ. ಇದರಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ ಬಿ ಪಾಟೀಲ್ ಅವರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.
ಅಲ್ಲದೇ ಭಾರತೀಯ ನಾಘರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 218 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 17 ಎ ಮತ್ತು 19ರ ಅಡಿಯಲ್ಲಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
ಪ್ರಕರಣದ ವಿವರ
ಭಾರೀ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಅಧೀನದಲ್ಲಿರುವ ಕೆಐಎಡಿಬಿಯು ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಪಾರ್ಕ್ ವಸತಿ, ನಾಗರಿಕ ಸೌಲಭ್ಯ(ಸಿ.ಎ) ಹಾಗೂ ಇತರೆ ಸೌಲಭ್ಯ, ತಾಜ್ಯ ನಿರ್ವಹಣಾ ಘಟಕ ಹೀಗೆ ನಿರ್ದಿಷ್ಟ ಉದ್ದೇಶಕ್ಕಾಗಿ ಜಾಗವನ್ನು ಮೀಸಲಿರಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಅಭಿವೃದ್ಧಿ ಪಡಿಸಿದ ಪ್ರತೀ ಕೈಗಾರಿಕಾ ಪ್ರದೇಶದಲ್ಲಿ ಸಿಎ ನಿವೇಶನ ಮೀಸಲಿಟ್ಟಿದೆ.
ಇಂತಹ ನಿವೇಶನವನ್ನು ಹರಾಜು ಮೂಲಕ ಹಂಚಿಕೆ ದರದ ದುಪ್ಪಟ್ಟು ದರದಲ್ಲಿ ಅಥವಾ ಹಂಚಿಕೆ ದರದ ಶೇಕಡಾ 1 ½ ಹಂಚಿಕೆಯ ದರದಲ್ಲಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೆಐಡಿಬಿಯು ನಿಯಮಗಳನ್ನು ಪಾಲಿಸದೇ ಹಂಚಿಕೆ ದರದಲ್ಲಿಯೇ ಸಿಎ ನಿವೇಶನವನ್ನು ಹಂಚಿಕೆ ದರದಲ್ಲಿ ಹಂಚಿಕೆ ಮಾಡುತ್ತಿದ್ದು, ಇದರಿಂದ ಕೆಐಡಿಬಿಗೆ ಕೋಟ್ಯಾಂತರ ರುಪಾಯಿಗಳು ನಷ್ಟವುಂಟಾಗಿದೆ ಎಂದು ದಿನೇಶ್ ಆರೋಪಿಸಿರುವುದು ಗೊತ್ತಾಗಿದೆ.
ಕೆಐಎಡಿಬಿ ಅಭಿವೃದ್ಧಿಪಡಿಸಿದ್ದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಹಾಗೂ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಗ್ಗುಲಲ್ಲೇ ಇರುವ ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಪಾರ್ಕ್(ಐಟ ಸೆಕ್ಟರ್ ಅಂಡ್ ಹಾರ್ಡ್ವೇರ್ ಸೆಕ್ಟರ್), ಗ್ರಾಮಾಂತರ ಜಿಲ್ಲೆಯ ಡಿಫೆನ್ಸ್ ಅಂಡ್ ಏರೋಸ್ಪೇಸ್ ಪಾರ್ಕ್ (ಏರೋಸ್ಪೇಸ್ ಸೆಕ್ಟರ್-ಏರೋಸ್ಪೇಸ್ ಎಸ್ಇಝಡ್) ಗ್ರಾಮಾಂತರ ಜಿಲ್ಲೆಯ ಸೋಂಪುರ 1 ಮತ್ತು ಎರಡನೇ ಹಂತ, ರಾಮನಗರ ಜಿಲ್ಲೆಯ ಬಿಡಿದಿ ಎರಡನೇ ಹಂತದ ಸೆಕ್ಟರ್, ಕೋಲಾರ ಜಿಲ್ಲೆಯ ನರಸಾಪುರ, ತುಮಕೂರಿನ ವಸಂತನರಸಾಪುರದ 1, 2, 3 ನೇ ಹಂತ, ಧಾರವಾಡ ಜಿಲ್ಲೆಯ ಗಾಮನಗಟ್ಟಿ ಜಿಗಣಿ 2ನೇ ಹಂತ, ಹಾರೋಹಳ್ಳಿ 3ನೆ ಹಂತ, ದೊಡ್ಡಬಳ್ಳಾಪುರ 3ನೇ ಹಂತ, ಮಾನ್ವಿ ನಂದಿಕೂರು ಕೈಗಾರಿಕೆ ಪ್ರದೇಶಗಳಲ್ಲಿ ಲಭ್ಯವಿರುವ ಸಿ.ಎ. ಜಮೀನುಗಳನ್ನು ಹಂಚಿಕೆ ಪ್ರ/ಕ್ರಿಯೆಯನ್ನು ಪೂರ್ಣಗೊಳಿಸಿದೆ.
ಹಂಚಿಕೆಯಾಗಿರುವ ಕಂಪನಿಗಳ ಪಟ್ಟಿ
ಕರ್ನಾಟಕ ಡ್ರಗ್ಸ್ ಫಾರ್ಮಾಸ್ಯುಟಿಕಲ್ಸ್, ಕರ್ನಾಟಕ ಡ್ರಗ್ಸ್, ಕಾಫಿ ಪಾಯಿಮಟ್, ಪಾಟೀಲ್ ಅಂಡ್ ಪಾಟೀಲ್ ಇನ್ಫ್ರಾಸ್ಚಕ್ಟರ್, ಎನ್‌ಸಿಎಲ್ ಎಂಟರ್ ಪ್ರೈಸೆಸ್, ವಿನಾಯಕ ಪ್ರಿಸೆನ್ಸ್, ಹೋಟೆಲ್ ಇಪ್ಕಾನ್, ದಿತ್ಯ ಇಂಟಿರೀಯರ್ ಕನ್ಸ್‌ಟ್ರಕ್ಷನ್ಸ್, ಮೋಹನ್ ಕುಮಾರ್ ವೈ ಎನ್, ಶ್ರೀ ಶ್ಯಾಮ್ ಇನ್ಪ್ರಾಸ್ಟಕ್ಚರ್‍ಸ್, ಬಯೋ ತೆರೆಪಿಕ್ಸ್ ಪ್ರೈವೈಟ್ ಲಿಮಿಟೆಡ್, ಸೃಜನ್ ಇನ್ಫ್ರಾಸ್ಷಕ್ಚರ್‍ಸ್, ಏರ್‍ವೈ ಎಂಟರ್ ಪ್ರೈಸೆಸ್, ಬ್ರೋನ್, ಟ್ರೀ ಹಾಸ್ಪಿಟಲ್ಸ್, ಶರಾವತಿ ಬಿಪಿಒ ಸರ್ವಿಸ್, ಡಿಸ್ಕವರಿ ಇನ್ಫ್ರಾ ವೆಂಚರ್‍ಸ್, ಟ್ರೈಡೆಂಡ್ ಡೆವೆಲೆಪರ್ಸ್, ಎಡಿಯು ಇನ್ಪ್ರಾ, ರೇಖಾ ಎಂಟರ್ ಪ್ರೈಸೆಸ್, ಸಿದ್ದಾರ್ಥ ಎಂ ವಿಹಾರ್ ಟ್ರಸ್ಟ್, ಎಡಿಯು ಇನ್ಫ್ರಾ ಅರುನ್ ಪಾರ್ಟನಕ್, ವೈಗೈ ಇನ್‌ವೆಸ್ಟ್‌ಮೆಂಟ್ಸ್, ಅರವ್ ಎಂಟರ್ ಪ್ರೈಸೆಸ್, ಹರಿತಾ ಲಾಜಿಸ್ಟಿಕ್ ವೇರ್‍ಹೌಸಿಂಗ್ ಪ್ರೈವೈಟ್ ಲಿಮಿಟೆಡ್, ಅದ್ವೈಕ್ ಗೇಟ್‌ವೇ, ಸಫ್ರಾನ್ ಎಂಟರ್ ಪ್ರೈಸೆಸ್, ಮೆಕ್ ಇಂಜಿನಿಯರಿಂಗ್ ಪವರ್ ಸರ್ವಿಸ್, ವೆಂಕಟೇಶ್ವರ ಹೋಟೆಲ್, ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಶುಭದಾ ಸಂತೋಷ್ ಗಣಿ, ಸಿಎಂ ಕಿರಣ್ , ಎಕೋಲೈಫ್ ಪ್ರಾಜೆಕ್ಟ್ಸ್, ವಿ ಎನ್ ಹೋಟೆಲ್ ಫ್ಲಾಟ್, ಜಿ ಎನ್ ಮೂರ್ತಿ, ನಕ್ಷ್ ಎಂಟರ್ ಪ್ರೈಸೆಸ್, ಶಿವಗಂಗಾ ಎಂಟರ್ ಪ್ರೈಸೆಸ್, ಸಪ್ತಗಿರಿ ಇನ್, ರಾಷ್ಟ್ರೀಯ ಗ್ರೂಪ್ಸ್, ಸಿಂಫೊಸಿಸ್ ಹೆಲ್ತ್ ಕೇರ್ ಕಂಪನಿಗಳಿಗೆ ಸಿ ಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯಪಾಲರಿಗೆ ಪಟ್ಟಿಯನ್ನು ಒದಗಿಸಿರುವುದು ಗೊತ್ತಾಗಿದೆ.
ಕೈಗಾರಿಕೆಯನ್ನೇ ನಡೆಸದ ಕಂಪನಿಗಳಿಗೂ ಕೆಐಎಡಿಬಯು ತನ್ನ ನಿಯಮ 7 ನ್ನು ಉಲ್ಲಂಘಿಸಿ ಸಿ ಎ ನಿವೇಶನಗಳನ್ನು ಮಂಜೂರಾತಿ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ಅಕ್ರಮ ನಡೆಸಲಾಗಿದೆ ಎಂದು ದೂರಿದ್ದಾರೆ.
ಸಚಿವರ ಒತ್ತಡ-ಅಧಿಕಾರಿಗಳ ಸಹಕಾರ
ಸಿ ಎ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ಆನೈನ್ ಮೂಲಕ ಮಾಡಬೇಕಿತ್ತು. ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಭಾರಿ ಅಕ್ರಮಕ್ಕೆ ಕಾರಣವಾಗಿದೆ ಎಂದು ದೂರಿರುವ ದಿನೇಶ್, ಸಚಿವ ಎಂ ಬಿ ಪಾಟೀಲ್ ರವರು ಅಧಿಕಾರಿಗಳಿಗೆ ಕರ್ತವ್ಯದಲ್ಲಿ ಅಕ್ರಮ ಎಸಗುವಂತೆ ಒತ್ತಡ ಹೇರಿದ್ದಾರೆ ಎಂದೂ ಆಪಾದಿಸಿದ್ದಾರೆ.
ಸಚಿವರ ಪ್ರಭಾವಕ್ಕೆ ಒಳಗಾಗಿರುವ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಮಂಡಳಿಯ ಸಿಇಒ ಡಾ.ಮಹೇಶ್ ಎಂ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಸದಸ್ಯರಾದ ಗುಂಜನ್ ಕೃಷ್ಣ, ಕೈಗಾರಿಕಾ ಅಭಿವೃದ್ಧಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿ, (SLSSWCC)ಈ ಅಧಿಕಾರಿಗಳು ಅಕ್ರಮಕ್ಕೆ ಸಹಕಾರ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ.
‘ಅತ್ಯಂತ ಬೆಲೆಬಾಳುವ ಸಿ.ಎ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮಾರ್ಗಸೂಚಿ ಅನುಸರಿಸದೆ ಮನಸೋ ಇಚ್ಚೆ ಹಂಚಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿಲ್ಲ ಇದಕ್ಕೆ ಸಮರ್ಥನೀಯ ಕಾರಣಗಳನ್ನು ಒದಗಿಸಿಲ್ಲ ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರುಪಾಯಿ ಆದಾಯ ನಷ್ಟ ಉಂಟಾಗಿದೆ,’ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.