ಉದ್ಯೋಗ ಮೀಸಲಾತಿಯಲ್ಲಿ ಕೆನೆಪದರ; ರಾಜ್ಯ ತನ್ನದೇ ನೀತಿ ಅಳವಡಿಕೆಗೆ ಅಭ್ಯಂತರವಿಲ್ಲವೆಂದ ಆಯೋಗ

ಬೆಂಗಳೂರು; ಉದ್ಯೋಗ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನ್ನದೇ ಆದ ಕೆನೆಪದರ ನೀತಿಯನ್ನು ಅಳವಡಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಸ್ಪಷ್ಟಪಡಿಸಿದೆ.

 

ಅಲ್ಲದೇ ಭಾರತ ಸರ್ಕಾರದ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ಕೆನೆಪದರ ನೀತಿಗೆ ತಕ್ಕಂತೆ ಕರ್ನಾಟಕದ ನೀತಿಯು ವಿಭಿನ್ನವಾಗಿದೆಯೇ ಎಂದೂ ರಾಜ್ಯವನ್ನು ಪ್ರಶ್ನಿಸಿದೆ. ಅದೇ ರೀತಿ ವಿವಿಧ ಯುಜಿ, ಪಿಜಿ ಕೋರ್ಸ್‌ಗಳಲ್ಲಿ ಪ್ರವರ್ಗ 1, 2ಎ ಹಾಗೂ 2 ಬಿ ನಲ್ಲಿ ಬರುವ ಮುಸ್ಲಿಂ ವಿದ್ಯಾರ್ಥಿಗಳ ಮಾಹಿತಿ ನೀಡಬೇಕು ಎಂದು ಆಯೋಗವು ಸೂಚಿಸಿದೆ.

 

ಹಾಗೆಯೇ ರಾಜ್ಯ ಸರ್ಕಾರದ ಕೆಲ ಇಲಾಖೆಗಳಲ್ಲಿ ಪ್ರವರ್ಗ ಬಿ ನಲ್ಲಿ ಶೇ.4ಕ್ಕಿಂತಲೂ ಮೀಸಲಾತಿ ನೀಡಲಾಗಿದೆ. ವಿವಿಧ ಮೀಸಲಾತಿ ಅಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಒಟ್ಟಾರೆ ಮಂಜೂರಾದ ಹುದ್ದೆಗಳು, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು, ವಿವಿಧ ಪ್ರವರ್ಗವಾರು ಸಂಪೂರ್ಣ ವಿವರಗಳನ್ನೂ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.

 

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀಡಿದ್ದ ಮಾಹಿತಿಯನ್ನು ಪರಿಶೀಲಿಸಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರದಿಂದ ಇನ್ನೂ ಹೆಚ್ಚಿನ ಸ್ಪಷ್ಟೀಕರಣ ಬಯಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು 2024ರ ಆಗಸ್ಟ್‌ 9ರಂದು ನಡೆದಿದ್ದ ಸಭೆಯಲ್ಲಿ ಕಳೆದ 3 ವರ್ಷಗಳಲ್ಲಿ ಆಗಿರುವ ನೇಮಕಾತಿಗಳ ವಿವರಗಳು ಮತ್ತು ಕಲ್ಪಿಸಿರುವ ಮೀಸಲಾತಿ ಕುರಿತೂ ಚರ್ಚೆಯಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಯಾವುದೇ ಕಾರಣಕ್ಕೂ ಕೆನೆಪದರ ಮೀಸಲಾತಿ ಜಾರಿ ಮಾಡಲ್ಲ. ಇದನ್ನು ಅನುಷ್ಠಾನಕ್ಕೆ ತರವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಉದ್ಯೋಗ ಮೀಸಲಾತಿಯಲ್ಲಿನ ಕೆನೆ ಪದರ ನೀತಿಯ ರಾಜ್ಯ ಸರ್ಕಾರದ ನಿಲುವಿನ ವಿಚಾರದ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋವು ಮಾಡಿರುವ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

 

‘ಹಾಲಿ ಇರುವ ಸಂವಿಧಾನದ ವಿಧಿ 342ಎ ಅನ್ವಯ ಪ್ರತಿಯೊಂದು ರಾಜ್ಯವು ತನ್ನದೇ ಆದ ಹಿಂದುಳಿದ ವರ್ಗಗಳ ಗುರುತಿಸಲು ಅಧಿಕಾರ ಹೊಂದಿರುತ್ತದೆ. ರಾಜ್ಯ ಸರ್ಕಾರವು ತನ್ನದೇ ಆದ ಕೆನೆಪದರ ನೀತಿಯನ್ನು ಅಳವಡಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ,’ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಹೇಳಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

ಹಾಲಿ ಚಾಲ್ತಿಯಲ್ಲಿರುವ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಇರುವ ಮೀಸಲಾತಿ ನಿಯಮಗಳನ್ನು ಪರಿಶೀಲಿಸಿದೆ. ಭಾರತ ಸರ್ಕಾರದ ವ್ಯಾಪ್ತಿಗೆ ಬರುವ ಉದ್ಯೋಗ ಮೀಸಲಾತಿಗೆ ನಿಗದಿಪಡಿಸಿರುವ ಕೆನೆಪದರ ನೀತಿಗೆ ತಕ್ಕಂತೆ ರಾಜ್ಯ ಸರ್ಕಾರದ ಕೆನೆಪದರ ನೀತಿ ವಿಭಿನ್ನವಾಗಿದೆಯೇ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಪ್ರಶ್ನಿಸಿರುವುದು ಸಭೆಯ ನಡವಳಿಯಿಂದ ಗೊತ್ತಾಗಿದೆ.

 

ಪೊಲೀಸ್‌ ಇಲಾಖೆಯ ನೇಮಕಾತಿಗಳಿಗೆ ಸಂಬಂಧಿಸಿದಂತೆ ಆಯೋಗವು ಪರಾಮರ್ಶಿಸಿದೆ. 2018-19ನೇ ಸಾಲಿನ ಪಿಸಿ (ಸಿವಿಲ್‌) ಹುದ್ದೆಗಳಿಗೆ ಸಂಬಂಧಿಸಿದಂತೆ ಸುಮಾರು 2,450 ಹುದ್ದೆಗಳು ಭರ್ತಿಯಾಗಿವೆ. ಈ ಪೈಕಿ ಪ್ರವರ್ಗ 2 ಬಿ ಯಲ್ಲಿ ಭರ್ತಿಯಾಗಿರುವ ಹುದ್ದೆಗಳ ಬಗ್ಗೆ ಪರಿಶೀಲನೆ ನಡೆಸಿದೆ. ಪ್ರವರ್ಗ 2 ಬಿ ನಲ್ಲಿ 104 ಸಿಬ್ಬಂದಿಗಳ ಆಯ್ಕೆ ಬಗ್ಗೆ ಪರಿಶೀಲಿಸಿರುವ ಆಯೋಗವು ಈ ಆಯ್ಕೆಯು ಹಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಶೇ.4.24ರಷ್ಟು ಇರುವುದನ್ನು ಆಯೋಗವು ಗಮನಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ 2019-20ನೇ ಸಾಲಿನಲ್ಲಿ ಸಹ ಪ್ರವರ್ಗ ಬಿ ನಲ್ಲಿಯೂ ಒಟ್ಟಾರೆ ಮೀಸಲಾತಿಯು ಶೇ.4.07ರಷ್ಟಿದೆ. ಈ ರೀತಿ ಶೇ.4ಕ್ಕಿಂತ ಪ್ರವರ್ಗ 2 ಬಿ ಮೀಸಲಾತಿ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

 

ಇಂಧನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 3,702 ಸಿಬ್ಬಂದಿಗಳ ಪೈಕಿ 2,393 ಸಿಬ್ಬಂದಿಗಳು ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಪ್ರವರ್ಗ ಬಿ ನಲ್ಲಿ ಶೇ. 4ಕ್ಕಿಂತಲೂ ಹೆಚ್ಚಿದ್ದಾರೆ. ಹೀಗಾಗಿ ಒಟ್ಟಾರೆ ಮಂಜೂರಾದ ಹುದ್ದೆಗಳು, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು ಬಗ್ಗೆ ವಿವಿಧ ಪ್ರವರ್ಗವಾರು ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು ಎಂದು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣಗಳ ಇಲಾಖೆಗೆ ಸಂಬಂಧಿಸಿದಂತೆ 2024ರ ಮಾರ್ಚ್‌ 31ರ ಅಂತ್ಯದವರೆಗಿನ ಮಾಹಿತಿಯನ್ನೂ ರಾಷ್ಟ್ರೀಯ ಆಯೋಗವು ಪರಿಶೀಲಿಸಿದೆ. ಪ್ರವರ್ಗವಾರು ನೇರ ನೇಮಕಾತಿಗೆ ಸಂಬಂಧಿಸಿದಂತೆ ಮಂಜೂರಾದ ಹುದ್ದೆಗಳು, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಮೀಸಲಾತಿಗೆ ಒಳಪಡದ ವರ್ಗಗಳ ಕುರಿತು ಕಳೆದ 3 ವರ್ಷಗಳ ಮಾಹಿತಿಯನ್ನು ಸಲ್ಲಿಸಲು ಸೂಚಿಸಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಬ್ಯಾಕ್‌ಲಾಗ್‌ನಲ್ಲಿ ಬಾಕಿ ಇದೆ. ಗ್ರೂಪ್‌ ಡಿ ಹುದ್ದೆಗಳಲ್ಲೂ ಸಹ ಯಾವ ರೀತಿ ಬ್ಯಾಕ್‌ಲಾಗ್‌ ಹುದ್ದೆಗಳು ಬಾಕಿ ಇರುವ ಕುರಿತು ಸ್ಪಷ್ಟೀಕರಣ ಕೋರಿದೆ. ಅದೇ ರೀತಿ ಇಲಾಖೆಯು ನೀಡಿರುವ ಕಳೆದ 3 ವರ್ಷಗಳ ಪಿಜಿ(ಸ್ನಾತಕೋತ್ತರ) ಸೀಟುಗಳ ಹಂಚಿಕೆ ಬಗ್ಗೆನೂ ಪರಿಶೀಲಿಸಿದೆ.

 

ಆಯಾ ವರ್ಷದಲ್ಲಿ ಒಟ್ಟಾರೆ ಒಬಿಸಿ ಪ್ರವರ್ಗವಾರು ನಿಗದಿಪಡಿಸಿರುವ ಸೀಟುಗಳನ್ನು ಪ್ರವೇಶವನ್ನು ಪಡೆದಿರುವ ಬಗ್ಗೆ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿರುವ ಮಾಹಿತಿಯ ಸ್ಪಷ್ಟೀಕರಣವನ್ನೂ ಕೋರಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ತುಮಕೂರು ವಿಶ್ವವಿದ್ಯಾಲಯವು ನೀಡಿರುವ ಮಾಹಿತಿಯನ್ನು ಆಯೋಗವು ಪರಿಶೀಲಿಸಿದೆ.ವಿವಿಧ ಪ್ರವರ್ಗಗಳಲ್ಲಿ ಒಟ್ಟು 42 ಹುದ್ದೆಗಳು ಖಾಲಿ ಇವೆ. 2012ರಿಂದ ಯಾವುದೇ ನೇರ ನೇಮಕಾತಿ ಆಗಿಲ್ಲ. ಯಾವ ಕಾರಣದಿಂದ ನೇಮಕಾತಿ ಆಗಿಲ್ಲ ಎಂದು ಸ್ಪಷ್ಟನೆ ಕೋರಿದೆ. ಅದೇ ರೀತಿ ರಾಜ್ಯದಲ್ಲಿ ಕಾಲಕಾಲಕ್ಕೆ ಎಕಾನಮಿ ಆದೇಶಗಳು ಜಾರಿಯಲ್ಲಿರುವ ಕಾರಣ ನೇರ ನೇಮಕಾತಿಗೆ ಅನುಮತಿ ನೀಡದ ಕಾರಣ ಹುದ್ದೆಗಳು ಭರ್ತಿ ಆಗಿಲ್ಲ ಎಂದು ಕಾರ್ಯದರ್ಶಿ ಅವರು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.

 

ಕೃಷಿ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 11 ಹುದ್ದೆಗಳು ಬ್ಯಾಕ್‌ಲಾಗ್‌ ಎಂದು ಗುರುತಿಸಿದೆಯಾದರೂ ನೇಮಕಾತಿ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಕರ್ನಾಟಕ ಸಿ ಡಾಕ್‌ ಕೂಡ ಯಾವುದೇ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿ ಆದೇಶ ಹೊರಡಿಸಿಲ್ಲ. ಕರ್ನಾಟಕ ಸೋಲಾರ್‍‌ ಎನರ್ಜಿ ಡೆವಲೆಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಸಂಬಂಧಿಸಿದಂತೆ ಅನ್ವಯಿಸುವುದಿಲ್ಲ ಎಂದು ತಿಳಿಸಿತ್ತು. ಈ ಅಂಶಕ್ಕೂ ಸ್ಪಷ್ಟೀಕರಣ ಕೋರಿರುವುದು ತಿಳಿದು ಬಂದಿದೆ.

 

ಪಶು ಸಂಗೋಪನೆ ಇಲಾಖೆಯು ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಯಲ್ಲಿ ಪ್ರವರ್ಗ 2 ಎಂದಷ್ಟೇ ನಮೂದಿಸಿತ್ತು. ಪ್ರವರ್ಗ 2 ಎ ಅಥವಾ ಪ್ರವರ್ಗ 2ಬಿ ಎಂಬುದನ್ನು ಸ್ಪಷ್ಟೀಕರಣ ನೀಡಲು ಆಯೋಗವು ಕೋರಿದೆ. ಕೆಐಎಡಿಬಿ ಸೃಜನೆ ಆದ ದಿನದಿಂದಲೂ ಯಾವುದೇ ನೇರ ನೇಮಕಾತಿ ಮಾಡಿಲ್ಲ. ಹೀಗಾಗಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿಲ್ಲ ಎಂಬುದು ಗೊತ್ತಾಗಿದೆ.

 

ನಗರಾಭಿವೃದ್ಧಿ ಇಲಾಖೆಯ ಕೆಯುಐಎಇಎಸ್‌ಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗವಾರು ಮಾಹಿತಿ ಶೂನ್ಯ ಎಂದು ನೀಡಿದೆ. ಯಾವುದೇ ನೇರ ನೇಮಕಾತಿ ಮಾಡಿಲ್ಲ. ಇದಲ್ಲದೇ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ಯುಜಿ, ಪಿಜಿ ಕೋರ್ಸ್‌ಗಳಲ್ಲಿ ಪ್ರವರ್ಗ 1, 2ಎ ಹಾಗೂ 2 ಬಿ ನಲ್ಲಿ ಬರುವ ಮುಸ್ಲಿಂ ವಿದ್ಯಾರ್ಥಿಗಳ ಮಾಹಿತಿ ನೀಡಬೇಕು ಎಂದು ಆಯೋಗವು ಸೂಚಿಸಿದೆ.

SUPPORT THE FILE

Latest News

Related Posts