ಬೆಂಗಳೂರು; ಕನಿಷ್ಟ ಕಾನೂನು ಪದವಿಯನ್ನೇ ಪಡೆಯದ ಮಾಜಿ ಪತ್ರಕರ್ತರೊಬ್ಬರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಸರ್ಕಾರವು ಮುಂದಾಗಿದೆ.
ಉಚ್ಚನ್ಯಾಯಾಲಯದ ನ್ಯಾಯಮೂರ್ತಿಯಾಗಿರುವ ಅಥವಾ ನ್ಯಾಯಾಮೂರ್ತಿಯಾಗಿದ್ದ ಅಥವಾ ಉಚ್ಚನ್ಯಾಯಾಲಯದ ನ್ಯಾಯಧೀಶರಾಗಿ ನೇಮಕ ಮಾಡಲು ಅರ್ಹನಾಗಿರುವ ಅಥವಾ ಸಮಾಜ ವಿಜ್ಞಾನಿಯಾಗಿರುವ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಯೋಗದ ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ಇದೇ ಕಾಯ್ದೆ ಅನುಸಾರವೇ 1918ರಿಂದ ಇದುವರೆಗೂ ಅಧ್ಯಕ್ಷ ಸ್ಥಾನದಲ್ಲಿ ಸುಪ್ರಿಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರಾಗಿದ್ದವರು, ಸಮಾಜ ವಿಜ್ಞಾನಿ, ಕಾನೂನು ಪದವೀಧರರನ್ನೇ ನೇಮಕ ಮಾಡಲಾಗುತ್ತಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರವು ಕನಿಷ್ಟ ಕಾನೂನು ಪದವಿಯನ್ನೇ ಪಡೆಯದೇ ಇರುವ ಮಾಜಿ ಪತ್ರಕರ್ತರೊಬ್ಬರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಮುಂದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಒಂದೊಮ್ಮೆ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಲಭ್ಯವಾಗದೇ ಇದ್ದಲ್ಲಿ ಕಾನೂನು ಪದವಿ ಅಥವಾ ಹಿರಿಯ ಕಾನೂನು ತಜ್ಞ, ವಕೀಲರನ್ನು ನೇಮಕ ಮಾಡಿರುವ ನಿದರ್ಶನಗಳೂ ಇವೆ. ಆದರೆ ಈ ಯಾವುದೇ ಪದವಿಯನ್ನೇ ಪಡೆಯದ ಮಾಜಿ ಪತ್ರಕರ್ತರೊಬ್ಬರಿಗೆ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುತ್ತಿರುವುದು ವಿವಾದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳೇ ಹೆಚ್ಚಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
‘ಕನಿಷ್ಟ ಕಾನೂನು ಪದವಿ ಅಥವಾ ಅರಿವಿಲ್ಲದ ಮತ್ತು ಮುಖ್ಯಮಂತ್ರಿ ಸುತ್ತ ಓಡಾಡಿಕೊಂಡು ಲಾಬಿ ಮಾಡುವವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರೆ ಅದು ಹಿಂದುಳಿದ ವರ್ಗಗಳ ಅಂತ್ಯಕ್ರಿಯೆ ಮಾಡಿದಂತೆ. ಸಿದ್ದರಾಮಯ್ಯ ಅವರು ಈ ಮೂಲಕ ಹಿಂದುಳಿದ ವರ್ಗಗಳಿಗೆ ಶವಪೆಟ್ಟಿಗೆ ಕಡೆಯ ಮೊಳೆ ಹೊಡೆಯುತ್ತಿದ್ದಾರೆ ಎಂದೇ ಅರ್ಥ,’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಹಿರಿಯ ಅಧಿಕಾರಿಯೊಬ್ಬರು.
ಆಯೋಗದ ಅಧ್ಯಕ್ಷ ಸ್ಥಾನದಲ್ಲಿ 1918ರಲ್ಲಿ ಲೆಸ್ಲಿ ಮಿಲ್ಲರ್, 1960ರಲ್ಲಿ ಡಾ ಆರ್ ನಾಗನಗೌಡ (ಶಾಸಕರೂ ಮತ್ತು ವಕೀಲರು), 1972ರಲ್ಲಿ ಎಲ್ ಜಿ ಹಾವನೂರ್, 1983ರಲ್ಲಿ ವೆಂಕಟಸ್ವಾಮಿ, 1988ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಓ ಚಿನ್ನಪ್ಪರೆಡ್ಡಿ, 1974ರಲ್ಲಿ ನ್ಯಾಯಮೂರ್ತಿ ಕುದೂರ್ ನಾರಾಯಣ ರೈ, 1997ರಲ್ಲಿ ಪ್ರೊ ರವಿವರ್ಮ ಕುಮಾರ್, 2001ರಲ್ಲಿ ಎಸ್ ಮುನಿರಾಜು, 2003ರಲ್ಲಿ ಎಸ್ ಸಿದ್ದಗಂಗಯ್ಯ, 2007ರಲ್ಲಿ ಡಾ ಸಿ ಎಸ್ ದ್ವಾರಕನಾಥ್, 2011ರಲ್ಲಿ ಎನ್ ಶಂಕರಪ್ಪ, 2014ರಲ್ಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಹೆಚ್ ಕಾಂತರಾಜ, 2020ರಲ್ಲಿ ಕೆ ಜಯಪ್ರಕಾಶ ಹೆಗ್ಡೆ ಅವರು ಕಾರ್ಯನಿರ್ವಹಿಸಿದ್ದರು.
‘ಆಯೋಗ ಅಧ್ಯಕ್ಷ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಂತಹ ಜಸ್ಟೀಸ್ ಗೋಪಾಲಗೌಡ ಅಥವಾ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಂತಹ ಜಸ್ಟೀಸ್ ನಾಗಮೋಹನ್ ದಾಸ್ ಅವರಂತಹ ಹಿರಿಯ ನ್ಯಾಯಾಧೀಶರನ್ನಾಗಲೀ ಅಥವಾ ಸೂಕ್ತ ಕಾನೂನು ತಜ್ಞರನ್ನು ನೇಮಕ ಮಾಡುವುದು ಅತ್ಯವಶ್ಯ. ಇಂತಹ ನೇಮಕಗಳಾದ ಪಕ್ಷದಲ್ಲಿ ಆಯೋಗದ ಘನತೆಯೂ ಹೆಚ್ಚಲಿದೆ,’ ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನ ರಾಜ್ಯ ಸರ್ಕಾರಿ ಅಭಿಯೋಜಕರಾಗಿದ್ದ ಬಿ ಟಿ ವೆಂಕಟೇಶ್.
ಹಿಂದುಳಿದ ವರ್ಗಗಳ ಆಯೋಗ ಕಳೆದ ಅರ್ಧ ಶತಮಾನಕ್ಕೂ ಹೆಚ್ಚಿನ ವರ್ಷಗಳಲ್ಲಿ ಅದ್ಬುತವಾದ ಕೆಲಸವನ್ನು ಮಾಡಿರುವುದು ನಾವು ಕಂಡಿದ್ದೇವೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ, ದೇಶಕ್ಕೆ ಒಂದು ಮಾದರಿ ಆಯೋಗವಾಗಿರುವಂತದ್ದು. ಜಸ್ಟೀಸ್ ಓ ಚಿನ್ನಪ್ಪರೆಡ್ಡಿ, ಎಲ್ ಜಿ ಹಾವನೂರ್, ರವಿವರ್ಮ ಕುಮಾರ್, ದ್ವಾರಕನಾಥ್ ಮತ್ತು ಕಾಂತರಾಜ ಅವರಂತಹ ಹಿರಿಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯವಾದಿಗಳು ಅಲಂಕರಿಸಿದ್ದರು. ಅವರು ಆಯೋಗವನ್ನು ಅತ್ಯಂತ ಕ್ಷಮತೆಯಿಂದ ನಡೆಸಿಕೊಟ್ಟಿದ್ದಾರೆ. ಹೀಗಾಗಿ ಆಯೋಗಕ್ಕೆ ಅದರ ಘನತೆಯನ್ನು ಹೆಚ್ಚಿಸಲು ಒಬ್ಬ ನಿವೃತ್ತ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಲೀ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನಾಗಲೀ ಅಥವಾ ಅತ್ಯಂತ ಹಿರಿಯ ನ್ಯಾಯವಾದಿಗಳನ್ನಾಗಲೀ ನೇಮಿಸುವುದು ಆಯೋಗದ ಘನತೆಗೆ ತಕ್ಕುದಾಗಿದೆ. ಆಯೋಗದ ಕೆಲಸ ಅತ್ಯಂತ ಸೂಕ್ಷ್ಮವಾಗಿರುವಂತದ್ದರಿಂದ ಕಾನೂನಿನ ಹೆಚ್ಚಿನ ತಿಳಿವಳಿಕೆ, ಜ್ಞಾನ ಮತ್ತು ವಿವೇಕ ಇರುವ ಅವಶ್ಯಕತೆ ಇರುತ್ತದೆ,’ ಎಂದೂ ಅಭಿಪ್ರಾಯಿಸುತ್ತಾರೆ ಬಿ ಟಿ ವೆಂಕಟೇಶ್.
ಆಯೋಗದ ಸದಸ್ಯ ಸ್ಥಾನಕ್ಕೆ ನೇಮಕ ಮಾಡುವುದಕ್ಕೂ ನಿಯಮಗಳನ್ನು ರೂಪಿಸಲಾಗಿದೆ. ಸದಸ್ಯ ಸ್ಥಾನಕ್ಕೆ ನೇಮಕ ಆಗುವವರು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ವಿಶೇಷ ಜ್ಞಾನವುಳ್ಳ “ಐವರು ವ್ಯಕ್ತಿಗಳು, ಇವರ ಪೈಕಿ ಒಬ್ಬರು ಮಹಿಳೆಯಾಗಿರತಕ್ಕದ್ದು ಮತ್ತು ಒಬ್ಬರು ಸಮಾಜ ವಿಜ್ಞಾನಿಯಾಗಿರಬೇಕು,’ ಎಂದು ನಿಯಮದಲ್ಲಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ 1995ರ ನಿಯಮ 9 ರಲ್ಲಿನ ಆಯೋಗವಿ ನಾಗರೀಕರ ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸಲಿದೆ. ಮತ್ತು ಯಾವುದೇ ಹಿಂದುಳಿದ ವರ್ಗವನ್ನು ಅಂಥ ಪಟ್ಟಿಯಲ್ಲಿ ಹೆಚ್ಚಾಗಿ ಸೇರಿಸಲಾಗಿದೆ ಎಂದು ಅಥವಾ ಸೇರಿಸಲಾಗಿಲ್ಲವೆಂದು ಬಂದ ದೂರುಗಳ ವಿಚಾರಣೆ ಮಾಡಲಿದೆ. ಮತ್ತು ಸರ್ಕಾರಕ್ಕೆ ಸಲಹೆಯನ್ನು ನೀಡಲಿದೆ.
ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಮತ್ತು ಸಮಸ್ಯೆಗಳ ಬಗ್ಗೆ ಸಮೀಕ್ಷೆ, ಹಿಂದುಳಿದ ವರ್ಗಗಳಿಗಾಗಿ ಇರುವ ಅನೇಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಮಾಡಲಿದೆ.
ಮಂಡಲ್ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಪ್ರತಿಯೊಂದು ರಾಜ್ಯದಲ್ಲೂ ಶಾಶ್ವತವಾಗಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಬೇಕು. ಜಾತಿವಾರು ಸಮೀಕ್ಷೆ ಆಯೋಗದ ಒಂದು ಮುಖ್ಯ ಕಾರ್ಯಭಾಗವಾಗಬೇಕು ಎಂದು ಆದೇಶಿಸಿದೆ. ಅದಕ್ಕನುಗುಣವಾಗಿ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ (ಆಧಿನಿಯಮ 1995, ದಿನಾಂಕ ಈ 01.12.1997) ಜಾರಿಯಲ್ಲಿದೆ. ಈ ಆಧಿನಿಯಮದ ಆಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಕೆಲಸ ಮಾಡುತ್ತಿರುವುದನ್ನು ಸ್ಮರಿಸಬಹುದು.