ಬೆಂಗಳೂರು; ತುಮಕೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ನಿಲಯದಲ್ಲಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರೊಂದಿಗೆ ಕೈಕೈ ಹಿಡಿದು ಡ್ಯಾನ್ಸ್ ಮಾಡಿದ್ದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಮತ್ತು ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದು ಸಾಬೀತಾಗಿದೆ.
ತುಮಕೂರಿನ ಹಿಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದ ಈ ಪ್ರಕರಣದಲ್ಲಿ ಮಕ್ಕಳ ಹಕ್ಕು, ಘನತೆ, ಗುರುತು, ಸ್ವಾತಂತ್ರ್ಯ, ಗೌಪ್ಯತೆ, ನಂಬಿಕೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದನ್ನು ತ್ರಿಸದಸ್ಯ ಸಮಿತಿಯ ಸತ್ಯಶೋಧನಾ ವರದಿಯು ಖಚಿತಪಡಿಸಿದೆ.
ಅಲ್ಲದೇ ಇದು ಯಾವುದೂ ಒಂದು ರೀತಿಯ ಸ್ವ ಹಿತಾಸಕ್ತಿಯ ಉದ್ದೇಶದಿಂದಲೇ ಮಾಡಿರುವ ಕಾರ್ಯಕ್ರಮ ಮತ್ತು ಅಪ್ರಾಪ್ತ ಬಾಲಕಿಯರು ಇರುವಾಗ ಸಂಜೆ, ರಾತ್ರಿ ವೇಳೆ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಸ್ಪಷ್ಟ ನಿಯಮ ಮತ್ತು ಕ್ರಮ ಬದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ಸಮಿತಿಯು ತನಿಖೆ ವೇಳೆಯಲ್ಲಿ ಬಯಲು ಮಾಡಿದೆ.
ತುಮಕೂರು ಜಿಲ್ಲೆಯ ನಗರ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ತೆಳರಿ ವಿದ್ಯಾರ್ಥಿನಿಯರೊಂದಿಗೆ ಸಭ್ಯತೆ ಮೀರಿ ಡ್ಯಾನ್ಸ್ ಮಾಡಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದ್ದರು ಎಂಬ ಅರೋಪ ಕೇಳಿ ಬಂದಿತ್ತು. ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಸೇರಿದಂತೆ ಹಲವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸರ್ಕಾರದ ಮೆಟ್ಟಿಲೇರಿದ್ದರು.
ಆ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಬಳ್ಳಾರಿ ಜಿಲ್ಲೆಯ ಸದಸ್ಯ ಎಚ್ ಸಿ ರಾಘವೇಂದ್ರ, ಮಕ್ಕಳ ಕಲ್ಯಾಣ ಸಮಿತಿಯ ಅಂಜಲಿ ರಾಮಣ್ಣ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ತಿರುಮಲರಾವ್ ಅವರನ್ನೊಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿರುವ ವರದಿಯು, ಜಿಲ್ಲಾಧಿಕಾರಿಗಳೂ ಸೇರಿದಂತೆ ಇಲಾಖೆಯ ಅಧಿಕಾರಿಗಳ ಮುಖವಾಡವನ್ನೂ ಕಳಚಿ ಹಾಕಿದೆ.
ಸತ್ಯಶೋಧನಾ ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ನಿಲಯದ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಮಕ್ಕಳ ಹಕ್ಕುಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ನಡತೆ ನಿಯಮ 2021 ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ), ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ರ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ,’ ಎಂದು ಸತ್ಯಶೋಧನಾ ವರದಿಯು ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.
ವಿದ್ಯಾರ್ಥಿನಿಲಯದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಾವೊಬ್ಬ ಅಧಿಕಾರಿಗಳು ಕೂಡ ಕಾರ್ಯಕ್ರಮ ಆಯೋಜನೆ ಮತ್ತು ಆ ದಿನದಂದು ಜರುಗಿದ ವಿವಿಧ ಕಾರ್ಯಕ್ರಮಗಳನ್ನು ಬಿಂಬಿಸುವ ಒಂದೇ ಒಂದು ಫೋಟೋ ಕೂಡ ಲಭ್ಯವಿಲ್ಲ.
ಕಾರ್ಯಕ್ರಮ ಆಯೋಜನೆಯ ಯಾವುದೇ ಸ್ಪಷ್ಟ ರೂಪುರೇಷೆಗಳು ಹಾಗೂ ಕಾರ್ಯಕ್ರಮದ ಪ್ರಾರಂಭದಿಂದ ಅಂತ್ಯದವರೆಗೆ ಏನು ಜರುಗಿತು ಎಂಬುದನ್ನೂ ತನಿಖಾ ಸಮಿತಿ ಮುಂದೆ ಸ್ಪಷ್ಟವಾಗಿ ಮಾಹಿತಿ ನೀಡುವಲ್ಲಿ ವಿಫಲರಾಗಿ ಅನೇಕ ಅಂಶಗಳನ್ನು ಮರೆ ಮಾಚಿರುವುದನ್ನು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
‘2023ರ ನವೆಂಬರ್ 16ರಂದು ಈ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ, ದೀಪಾವಳಿ ಅಥವಾ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಎಂದ ಒಬ್ಬಬ್ಬರು ಒಂದೊಂದು ತರಹದ ಹೇಳಿದ್ದಾರೆ. ಇದು ಎಲ್ಲಾ ಮಕ್ಕಳೇ ಆಯೋಜಿಸಿದ್ದು ಎಂದು ವಿಭಿನ್ನ ಹೇಳಿಕೆ ನೀಡಿರುವುದನ್ನು ಸಮಿತಿಯು ಒರೆಗೆ ಹಚ್ಚಿದೆ.
‘ಇವು ಯಾವುದೇ ಆಗಿದ್ದಲ್ಲಿ 18 ವರ್ಷದೊಳಗಿನ ಬಾಲಕಿಯರು ಇರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಹಗಲು ಅಥವಾ ಸಂಜೆ 6 ಗಂಟೆ ಒಳಗೇ ಆಯೋಜಿಸಬೇಕಿತ್ತು. ಆದರೆ ಈ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೇ ಕಾರ್ಯಕ್ರಮವನ್ನು ಸಂಜೆ 6.30ರ ನಂತರ ಮಾಡಿರುವುದು ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ರಕ್ಷಣಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ,’ ಎಂದು ವರದಿಯಲ್ಲಿ ಸಮಿತಿಯು ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಈ ಕಾರ್ಯಕ್ರಮಗಳ ಆಯೋಜನೆಯ ಯಾವುದೇ ಕುರುಹುಗಳು ಅಥವಾ ವ್ಯವಸ್ಥೆಗಳು ಮಾಡಿರುವುದು ಕಿಂಚಿತ್ತೂ ಕಂಡುಬಂದಿಲ್ಲ. ಕೇವಲ ಕೆಲವು ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಹಿಂದೆ ಜಿಲ್ಲಾಧಿಕಾರಿಗಳು ಮಾಡಿದ ಉತ್ತಮ ಕೆಲಸಕ್ಕಾಗಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಾಲಕಿಯರ ವಸತಿ ನಿಲಯದಲ್ಲಿ ಸಂಜೆ 6 ಗುಂಟೆಯ ನಂತರ ಈ ತರಹದ ಕಾರ್ಯಕ್ರಮಗಳನ್ನು ಮಾಡುವುದು ತಪ್ಪು ಎಂಬ ಕನಿಷ್ಟ ಅರಿವು ಇರುವ ಜಿಲ್ಲೆಯ ಹಿರಿಯ ಅಧಿಕಾರಿಗಳು ಅಥವಾ ಇದರಲ್ಲಿ ಭಾಗವಹಿಸಿದ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ತಪ್ಪಿಸಬಹುದಿತ್ತು ಎಂದು ಸಮಿತಿಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಲವು ಬೆಳವಣಿಗೆಗಳನ್ನು ಗಮನಿಸಿರುವ ಸಮಿತಿಯು ‘ಈ ವಸತಿ ನಿಲಯಕ್ಕೆ ಯಾವುದೇ ಮಕ್ಕಳ ರಕ್ಷಣಾ ನಿಯಮ ಇಲ್ಲದಿರುವುದು ಕಂಡು ಬಂತು. ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ನಿಯಮ, ಕಾನೂನು ಇರುವ ಬಗ್ಗೆ ಸ್ವಲ್ಪವೂ ಅರಿವಿನ ಜ್ಞಾನ ಇಲ್ಲದಿರುವುದು ಕಂಡು ಬಂದಿದೆ. ಇದರಿಂದ ಈ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಕ್ಕು, ಘನತೆ, ಗುರುತು, ಸ್ವತಂತ್ರತೆ, ಗೌಪ್ಯತೆ,ನಂಬಿಕೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ,’ ಎಂದು ವರದಿಯಲ್ಲಿ ವಿವರಿಸಿದೆ.
ಈ ವರದಿಯ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.