ಜೆಎಸ್‌ಎಸ್‌ ಹೌಸಿಂಗ್‌ ಸೊಸೈಟಿಗೆ ಬದಲಿ ಜಾಗ; 20 ವರ್ಷ ಬಾಕಿ ಇದ್ದ ಪ್ರಸ್ತಾವನೆಗೆ ಅಸ್ತು, ನಿಯಮಮೀರಿ ಮಂಜೂರು

ಬೆಂಗಳೂರು; ಪ್ರಾಧಿಕಾರದಿಂದ ಭೂ ಸ್ವಾಧೀನಪಡಿಸಿಕೊಂಡು ಬಡಾವಣೆ, ವರ್ತುಲ ರಸ್ತೆ ರಚಿಸಿ ಅಭಿವೃದ್ಧಿಪಡಿಸಿದ ಪ್ರಕರಣಗಳಲ್ಲಿ ಬದಲಿ ಜಮೀನು ನೀಡಲು ಅವಕಾಶವಿರದೇ ಇದ್ದರೂ ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬದಲಿ ಜಾಗವನ್ನು ನಿಯಮಬಾಹಿರವಾಗಿ ನೀಡಿತ್ತು ಎಂದು ತಾಂತ್ರಿಕ ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಕಳೆದೆರಡು ವರ್ಷಗಳ ಹಿಂದೆ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಬಹುದೊಡ್ಡ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್‌ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಹೊತ್ತಿನಲ್ಲಿಯೇ ಜೆಎಸ್‌ಎಸ್‌ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪ್ರಕರಣವೂ ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಜೆಎಸ್‌ಎಸ್‌ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮನವಿಯು ಕಳೆದ 20 ವರ್ಷಗಳಿಂದಲೂ ಬಾಕಿ ಇತ್ತು. ಈ ಮನವಿ, ಪ್ರಸ್ತಾವನೆಯನ್ನು ಪುರಸ್ಕರಿಸಲು ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂದು ಸರ್ಕಾರವು ನೀಡಿದ್ದ ಅಭಿಪ್ರಾಯ, ನಿರ್ದೇಶನವನ್ನೂ ಮೀರಿ ಮೂಡಾವು ಬದಲಿ ಜಾಗ ನೀಡಲು ನಿರ್ಣಯ ಕೈಗೊಂಡಿತ್ತು.

 

ಈ ಪ್ರಕರಣ  ಸಂಬಂಧ ನೌಕರರ ಸಂಘದ ಪದಾಧಿಕಾರಿಗಳು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಗೂ ಮಾಹಿತಿ ನೀಡಿದ್ದರು ಎಂದು ಗೊತ್ತಾಗಿದೆ.

 

ಇದರ ಪ್ರಕಾರ 32 ನಿವೇಶನಗಳನ್ನು ಮಂಜೂರಾಗಿತ್ತು. ಈ ನಿವೇಶನಗಳನ್ನು ಮೂಡಾ ನೋಂದಣಿ ಮಾಡಿಕೊಟ್ಟಿತ್ತು  ಎಂಬುದು ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

 

ತಾಂತ್ರಿಕ ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ವಿವರ

 

ಮೈಸೂರು ತಾಲೂಕಿನ ಕುಪ್ಪಲೂರು ಗ್ರಾಮದ ಸರ್ವೆ ನಂಬರ್‍‌ 39/1 ಬಿ ಯಲ್ಲಿ 5 ಎಕರೆ 2 ಗುಂಟೆ ಖರಾಬು ಸೇರಿ ಒಟ್ಟು 5.08 ಎಕ್ರೆ ಜಮೀನಿನಲ್ಲಿ ಪ್ರಾಧಿಕಾರವು ವರ್ತುಲ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಂಡಿತ್ತು. ಇದೇ ಜಮೀನಿನ ವಾರಸುದಾರರಾಗಿದ್ದ ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಈ ಜಮೀನನ್ನು ಬಿಟ್ಟುಕೊಡಲು ಸಿದ್ಧವಿತ್ತು. ಆದರೆ ಈ ಜಮೀನಿಗೆ ಇಷ್ಟೇ ವಿಸ್ತೀರ್ಣದ ಜಮೀನುಗಳ ಪಕ್ಕದಲ್ಲಿ ಸಂಘಕ್ಕೆ ಸ್ವಾಧೀನವಹಿಸಿಕೊಡಬೇಕು ಎಂದು ಸಂಘದ ಕಾರ್ಯದರ್ಶಿಯು ಮೂಡಾ ಆಯುಕ್ತರಿಗೆ 2022ರ ಮಾರ್ಚ್‌ 15ರಂದು ಪತ್ರದಲ್ಲಿ ಕೋರಿತ್ತು.

 

ಈ ಕುರಿತು 2003ರ ಜನವರಿ 10ರಂದು ಪ್ರಾಧಿಕಾರದ ಸಭೆಯಲ್ಲಿ (ಹೆಚ್ಚುವರಿ ವಿಷಯ ಸಂಖ್ಯೆ.02) ಚರ್ಚೆಯಾಗಿತ್ತು. ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದ ನಂತರ ಸಂಘವು ಕೋರಿದ್ದ 05.08 ಎಕರೆ ಜಮೀನನ್ನು ಬದಲಿಯಾಗಿ ನೀಡಲು ತೀರ್ಮಾನಿಸಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾಧಿಕಾರದ ಅಧ್ಯಕ್ಷ ಮತ್ತು ಆಯುಕ್ತರಿಗೆ ಅಧಿಕಾರ ನೀಡಲು ಸರ್ವಾನುಮತದಿಂದ ತೀರ್ಮಾನಿಸಿತ್ತು.

 

ಈ ನಿರ್ಣಯದ ನಂತರ 2023ರ ಮಾರ್ಚ್‌ 26ರಂದು ಸಂಘದ ಕಾರ್ಯದರ್ಶಿ ಅವರು ಬದಲಿ ಜಮೀನನ್ನು ಸ್ವಾಧಿನಕೊಡಿಸಿಕೊಡಬೇಕು ಎಂದು ಕೋರಿದ್ದರು. ಈ ಮಧ್ಯೆ ಚಲುವಯ್ಯ ಅವರು ಪ್ರಶ್ನಿತ 05.08 ಎಕರೆ ಜಮೀನಿನ ಪೈಕಿ 04.34 ಎಕೆರೆ ವಿಸ್ತೀರ್ಣದ ಜಮೀನನ್ನು ಜೆಎಸ್‌ಎಸ್‌ ಮಹಾವಿದ್ಯಾಪೀಠದವರು ಬರೆಸಿಕೊಂಡಿದ್ದಾರೆ ಎಂದು ತಕರಾರು ತೆಗೆದಿದ್ದರು.

 

ಉಳಿಕೆ 08 ಗುಂಟೆ ಜಮೀನು ಮಾತ್ರ ಉಳಿದಿದ್ದು ಈ ಜಮೀನೂ ಸಹ ವರ್ತುಲ ರಸ್ತೆ ಮತ್ತು ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನವಾಗಿರುವುದರಿಂದ ತಮಗೂ ಬದಲಿ ಜಮೀನು ಅಥವಾ ಬದಲಿ ನಿವೇಶನ ನೀಡಬೇಕು ಎಂದು 2003ರ ಅಕ್ಟೋಬರ್‍‌ 20ರಂದು ಕೋರಿದ್ದರು.

 

ಚಲುವಯ್ಯ ಅವರ ಮನವಿಗೆ ಸಂಬಂಧಿಸಿದಂತೆ 2003ರ ನವೆಂಬರ್‍‌ 12ರಂದು ಹಿಂಬರಹ ನೀಡಿತ್ತು. ಪರಿಹಾರದ ಚೆಕ್‌ನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಲಾಗಿದೆ, ಪರಿಹಾರವನ್ನು ನ್ಯಾಯಾಲಯದಲ್ಲಿ ಪಡೆಯಬೇಕು ಹಾಗೂ ನಿವೇಶನ ನೀಡಲು ಅವಕಾಶವಿಲ್ಲ ಎಂದು ವಿಶೇ‍ಷ ಭೂ ಸ್ವಾಧೀನಾಧಿಕಾರಿಯವರು ಹಿಂಬರಹ ನೀಡಿದ್ದರು.

 

ಇದಾಧ ನಂತರ ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು 2005ರ ಅಕ್ಟೋಬರ್‍‌ 18ರಂದು ಪ್ರಾಧಿಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಿತ್ತು. 2003ರ ಜನವರಿ 10ರಂದು ಪ್ರಾಧಿಕಾರವು ಕೈಗೊಂಡಿರುವ ನಿರ್ಣಯದಂತೆ ಬದಲಿ ಜಮೀನನ್ನು ಕುಪ್ಪಲೂರು ಗ್ರಾಮದಲ್ಲಿ ನೀಡದಿದ್ದಲ್ಲಿ ಲಲಿತಾದ್ರಿಪುರ/ಯಾನದಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಬಡಾವಣೆಯ ಮಧ್ಯಭಾಗದಲ್ಲಿ ಬಾಕಿ ಉಳಿದಿರುವ ವಿವಿಧ ಸರ್ವೆ ನಂಬರ್‍‌ಗಳಲ್ಲಿದ್ದ 03.17 ಎಕರೆ ಜಮೀನನ್ನು ಸಂಘಕ್ಕೆ ವಹಿಸಿಕೊಡಬೇಕು ಎಂದು ಕೋರಿತ್ತು.

 

ಈ ಮನವಿಯಂತೆ 2009ರ ಜನವರಿ 5ರಂದು ಯಾಂದಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಲಲಿತಾದ್ರಿಪುರ ಮತ್ತು ಕುಪ್ಪಲೂರು ಗ್ರಾಮದ ಸರ್ವೆ ನಂಬರ್‍‌ಗಳಲ್ಲಿ ಒಟ್ಟು 4-34 ಎಕರೆ ಜಮೀನನ್ನು ಹಸ್ತಾಂತರ ಮಾಡುವ ಬಗ್ಗೆ ಅನುಮೋದನೆ ಕೋರಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಕೋರಿದ್ದರು. ಈ ಬಗ್ಗೆ ಸರ್ಕಾರವು 2009ರ ಫೆ.10ರಂದೇ ಪ್ರಾಧಿಕಾರದ ಆಯುಕ್ತರಿಂದ ಕೆಲವು ಮಾಹಿತಿ ಪಡೆದಿತ್ತು.

 

ಪ್ರಾಧಿಕಾರ ಸಲ್ಲಿಸಿದ್ದ ಮಾಹಿತಿಯನ್ನು ಪರಿಶೀಲಿಸಿದ್ದ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಪ್ರಕಾರ ಸಗಟು ಹಂಚಿಕೆಗೆ ಅವಕಾಶ ಕಲ್ಪಿಸಿಲ್ಲದೇ ಇರುವುದರಿಂದ ಪ್ರಾಧಿಕಾರದ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನಿರ್ದೇಶಿಸಿತ್ತು.

 

ಅಲ್ಲದೇ ಇದೇ ಉತ್ತರವನ್ನು ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿಗೂ ಸಹ ‘ಪ್ರಾಧಿಕಾರದ ವಶದಲ್ಲಿರುವ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಸಗಟಾಗಿ ಹಂಚಿಕೆ ಮಾಡಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರಲ್ಲಿ ಅವಕಾಶವಿಲ್ಲ,’ ಎಂದು ಸ್ಪಷ್ಟವಾಗಿ ತಿಳಿಸಿತ್ತು.

 

ಸರ್ಕಾರವು ಕೈಗೊಂಡಿದ್ದ ಈ ನಿರ್ಣಯವನ್ನು ಮರು ಪರಿಶೀಲಿಸಬೇಕು ಎಂದು ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಮತ್ತೊಮ್ಮೆ ಮನವಿ ಸಲ್ಲಿಸಿತ್ತು. ಈ ಮನವಿಯು ಸುಮಾರು 21 ವರ್ಷಗಳಿಂದ ಸರ್ಕಾರದ ಬಳಿಯೇ ಬಾಕಿ ಉಳಿದಿತ್ತು. ತಮ್ಮ ಅಧಿಕಾರವಾಧಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಮೂಲಕ ಸಂಘದ ಸದಸ್ಯರುಗಳಿಗೆ ನಿವೇಶನ ಹಂಚಿಕೆ ಮಾಡಲು ನೆರವಾಗಬೇಕು ಎಂದು ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಸಲ್ಲಿಸಿತ್ತು.

 

ಈ ಪತ್ರದ ಮೇಲೆ ಪ್ರಾಧಿಕಾರವು 50;50 ಅನುಪಾತದಲ್ಲಿ ಅಭಿವೃದ್ಧಪಡಿಸಿದ ನಿವೇಶನ ಹಂಚಿಕೆ ಮಾಡುವ ಸಂಬಂಧ 2021ರ ಆಗಸ್ಟ್‌ 13ರಂದು ಪ್ರಾಧಿಕಾರದ ಸಭೆಯಲ್ಲಿ (ವಿಷಯ ಸಂಖ್ಯೆ 7(1)ರಲ್ಲಿ ಮಂಡಿಸಲಾಗಿತ್ತು. ಚರ್ಚೆಯ ನಂತರ ಅಂತಿಮವಾಗಿ ಪ್ರಸ್ತಾವನೆಯನ್ನು ಸಭೆಯಲ್ಲಿ ಅನುಮೋದಿಸಲಾಗಿತ್ತು.

 

ಆದರೆ ಈ ತೀರ್ಮಾನವೇ ನಿಯಮಬಾಹಿರ ಎಂದು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ.

 

ತಾಂತ್ರಿಕ ಸಮಿತಿಯ ಅಭಿಪ್ರಾಯವಿದು

 

ಪ್ರಶ್ನಿತ ಜಮೀನು ಪ್ರಾಧಿಕಾರದಿಂದ ಭೂಸ್ವಾಧೀನಗೊಂಡಿರುವುದು ಮತ್ತು ಇದಕ್ಕಾಗಿ ಅವಾರ್ಡ್‌ ರಚಿಸಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿದೆ ಎಂಬ ವರದಿ ಇದೆ. ನ್ಯಾಯಾಲಯಕ್ಕೆ ಠೇವಣಿ ಇರಿಸಿದ ಪ್ರಕರಣಗಳಲ್ಲಿ ಮತ್ತು ಭೂ ಸ್ವಾಧೀನಪಡಿಸಿಕೊಂಡು ಬಡಾವಣೆ, ವರ್ತುಲ ರಸ್ತೆ ರಚಿಸಿ ಅಭಿವೃದ್ಧಪಡಿಸಿದ ಇಂತಹ ಪ್ರಕರಣಗಳಲ್ಲಿ ಬದಲಿ ಜಮೀನು ನೀಡಲು ಅವಕಾಶವಿರುವುದಿಲ್ಲ ಎಂದು ಸಮಿತಿಯು ಅಭಿಪ್ರಾಯಿಸಿದೆ.

 

ಅಲ್ಲದೇ ಪ್ರಾಧಿಕಾರದ ವಶದಲ್ಲಿರುವ ಜಮೀನನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಸಗಟಾಗಿ ಹಂಚಿಕೆ ಮಾಡಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರಲ್ಲಿ ಅವಕಾಶವಿಲ್ಲ, ಆದದರಿಂದ ಈ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು 2009 ಮತ್ತು 2010ರಲ್ಲೇ ಸರ್ಕಾರವು ಸ್ಪಷ್ಟವಾಗಿ ನಿರ್ದೇಶಿಸಿದೆ. ಆದರೂ ನಿಯಮಬಾಹಿರವಾಗಿ ಪ್ರಾಧಿಕಾರವು ನಿರ್ಣಯ ಕೈಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಹಾಗೆಯೇ ‘ಬದಲಿ ಜಾಗದ ಬದಲಾಗಿ ಜೆಎಸ್‌ಎಸ್‌ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಮಧ್ಯದಲ್ಲಿ ಪ್ರಾಧಿಕಾರ ಅಧಿಸೂಚನೆಯಾಗಿ ಉಪಯೋಗಿಸಿದ ಖಾಲಿಯಿರುವ ಯಾಂದಳ್ಳಿ ಗ್ರಾಮದ ಸರ್ವೆ ನಂಬರ್‍‌ 127ರಲ್ಲಿರುವ 1089 ಚ.ಮೀ ಹಾಗೂ ಸರ್ವೆ ನಂಬರ್‍‌ 123/1ರಲ್ಲಿರುವ 48000 ಚ ಮೀ ಸೇರಿ ಒಟ್ಟು 5,889 ಚ ಮೀ ಗಳನ್ನು ಕ್ರಯಪತ್ರದ ಮೂಲಕ ಬದಲಿಯಾಗಿ ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಿದಲ್ಲಿ ಅಧಿಸೂಚನೆಯಾಗಿ ಬಳಕೆಯಾಗದ ಸರ್ವೆ ನಂಬರ್‍‌ಗಳನ್ನು ಪ್ರಾಧಿಕಾರವು ಬಳಸಿಕೊಂಡಂತಾಗುತ್ತದೆ,’ ಎಂದು ಮೂಡಾ ಅಭಿಪ್ರಾಯಿಸಿತ್ತು.

 

ಹಾಗೆಯೇ ಕುಪ್ಪಲೂರು ಗ್ರಾಮದ ಸರ್ವೆ ನಂಬರ್‍‌ 39/1ರಲ್ಲಿ 8100 ಚ ಮೀ ಭೂಮಿಯನ್ನು ಪ್ರಾಧಿಕಾರವು ಬಳಸಿಕೊಳ್ಳುವುದರಿಂದ ಅರ್ಥಿಕವಾಗಿ ಲಾಭ ಆಗಲಿದೆ. ಅದರಂತೆ ಬದಲಿ ಭೂಮಿ ನೀಡಲು ಅಧಿಕೃತ ಜ್ಞಾಪನ ಪತ್ರ ಸಿದ್ಧಪಡಿಸಿ ಮಂಡಿಸಬೇಕು ಎಂದು ಆಯುಕ್ತರು ಸೂಚಿಸಿದ್ದರು.

 

ಈ ಸೂಚನೆಯಂತೆ ಮತ್ತು ಅರ್ಜಿದಾರರು 2022ರ ಮಾರ್ಚ್‌ 3ರಲ್ಲಿ ಕೋರಿದ್ದ ಮನವಿಯಂತೆ ಅಧಿಕೃತ ಜ್ಞಾಪನ ಪತ್ರ (ಸಂಖ್ಯೆ ಮೈನಪ್ರಾ/ಎಲ್‌ಎಸಿ(4)15/98/99- ದಿ.19.02.2022) ಹೊರಡಿಸಿತ್ತು. ಬದಲಿಯಾಗಿ ಅಭಿವೃದ್ಧಿಪಡಿಸಿದ್ದ ಭೂಮಿ ರೂಪದಲ್ಲಿ 5,890 ಚ ಮೀ ಜಾಗವನ್ನು ಹಂಚಿಕೆ ಮಾಡಿ ಆದೇಶವನ್ನೂ ಹೊರಡಿಸಿತ್ತು ಎಂದು ವರದಿಯಿಂದ ತಿಳಿದು ಬಂದಿದೆ.

 

ಈ ಆದೇಶವನ್ನೂ ತಾಂತ್ರಿಕ ಸಮಿತಿಯು ಪರಿಶೀಲಿಸಿದೆ. ‘ 2022ರ ಏಪ್ರಿಲ್‌ 8ರಂದು ಕುಪ್ಪಲೂರು ಗ್ರಾಮದ ಸರ್ವೆ ನಂಬರ್‍‌ 39/1ರಲ್ಲಿನ 4.34 ಎಕರೆ ಜಮೀನನ್ನು ನೋಂದಾಯಿತ ಪರಿತ್ಯಜನ ಪತ್ರದ ಮುಖಾಂತರ ಹಸ್ತಾಂತರಿಸಿಕೊಂಡಿರುವುದು ನಿಯಮಬಾಹಿರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದ್ದರೂ ಸಹ ನಿಯಮಬಾಹಿರವಾಗಿ ಕ್ರಮ ವಹಿಸಿರುವುದು ಕಂಡುಬಂದಿದೆ,’ ಎಂದು ವಿವರಿಸಿದೆ.

 

ಅಲ್ಲದೇ ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ರಚಿಸಿರುವ ಬಡಾವಣೆ ಮಧ್ಯದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಒಟ್ಟು 5,890 ಚ ಮೀ ಜಾಗಕ್ಕೆ ಬದಲಿಯಾಗಿ ಹಂಚಿಕೆ ಮಾಡಿರುವ ಬಗ್ಗೆಯೂ ಸಮಿತಿಯು ಸ್ಪಷ್ಟೀಕರಣ ಕೋರಿತ್ತು.

 

‘ಸದರಿ ಜಾಗೆ/ನಿವೇಶನಗಳು ಹಂಚಿಕೆಯಾಗದೇ ಬಾಕಿ ಇರುವ ನಿವೇಶನಗಳೇ? ಬಾಕಿ ಉಳಿದುಕೊಂಡಿದ್ದಲ್ಲಿ ಅರ್ಹರಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ 1991ರ ನಿಯಮಗಳ ಅನ್ವಯ ಹಂಚಿಕೆ ಮಾಡದೇ ಇರಲು ಕಾರಣವೇನು,’ ಎಂದು ಮಾಹಿತಿ ಕೋರಿತ್ತು.

the fil favicon

SUPPORT THE FILE

Latest News

Related Posts