848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ಬೆಂಗಳೂರು; ಅನುಮೋದಿತ ಖಾಸಗಿ ಬಡಾವಣೆಯಲ್ಲಾಗಲೀ ಅಥವಾ ಪ್ರಾಧಿಕಾರವೇ ಅಭಿವೃದ್ಧಿಪಡಿಸಿರುವ ನಿವೇಶನಗಳ ಬಿಡುಗಡೆಗಾಗಿ ಖಾತೆ ತೆರೆಯಲು ಯಾವುದೇ ಅವಕಾಶಗಳಿಲ್ಲದಿದ್ದರೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 848 ನಿವೇಶನಗಳಿಗೆ ಖಾತೆ ತೆರೆದಿತ್ತು ಎಂಬುದನ್ನು ತಾಂತ್ರಿಕ ಸಮಿತಿಯ ತನಿಖೆಯಿಂದ ಬೆಳಕಿಗೆ ಬಂದಿದೆ.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ ತಾಂತ್ರಿಕ ಸಮಿತಿಯು ಹೊರಗೆಡವಿರುವ ಈ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ತಾಂತ್ರಿಕ ಸಮಿತಿಯು ನೀಡಿರುವ ತನಿಖಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಯಾವುದೇ ಅಧಿಕಾರವಿಲ್ಲದಿದ್ದರೂ ಮತ್ತು ಸರ್ಕಾರದ ಪೂರ್ವಾನುಮೋದನೆಯಿಲ್ಲದೆಯೇ 848 ನಿವೇಶನಗಳಿಗೆ ಖಾತೆ ತೆರೆದಿದ್ದ ಮೂಡಾ, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನೂ ಅತಿಕ್ರಮಿಸಿತ್ತು ಎಂಬುದನ್ನೂ ತಾಂತ್ರಿಕ ಸಮಿತಿಯು ವಿವರಿಸಿದೆ.

 

ಅದೇ ರೀತಿ ಸೂಕ್ತ ಅಧಿಕಾರವಿಲ್ಲದಿದ್ದರೂ ಪ್ರಾಧಿಕಾರದ ಅಧಿಕಾರಿಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದರಿಂದಾಗಿ ಆಡಳಿತಾತ್ಮಕ ವೆಚ್ಚವಾಗಿತ್ತು ಮತ್ತು ಪ್ರಾಧಿಕಾರದ ಆರ್ಥಿಕ ಸಂಪನ್ಮೂಲದ ಅನಗತ್ಯ ವೆಚ್ಚಕ್ಕೆ ಅವಕಾಶ ಮಾಡಿಕೊಟ್ಟಂತಾಗಿತ್ತು ಎಂಬುದು ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಮೈಸೂರು ತಾಲೂಕು ನಗರ್ತಹಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಒಟ್ಟು 51 ಎಕರೆ 39 ಗುಂಟೆಯಲ್ಲಿ ಬಡಾವಣೆ ರಚನೆಯಾಗಿತ್ತು. ಇಲ್ಲಿನ 220 ನಿವೇಶನಗಳಿಗೆ ಸಂಬಂಧಿಸಿದಂತೆ 2022ರ ಜನವರಿ 16ರಂದು ಖಾತೆ ತೆರೆಯಲು ಅರ್ಜಿ ಸ್ವೀಕೃತಿಯಾಗಿತ್ತು. ಇದಕ್ಕಾಗಿ 2022ರ ಜನವರಿ 20ರಂದು ಶುಲ್ಕ ಪಾವತಿಗಾಗಿ ಚಲನ್‌ ನೀಡಲಾಗಿತ್ತು. 2022ರ ಜನವರಿ 24ರಂದು ಶುಲ್ಕ ಪಾವತಿಯಾಗಿತ್ತು. ಅದೇ ದಿನದಂದೇ ಖಾತೆ ತೆರೆಯಲಾಗಿತ್ತು. 9 ದಿನದೊಳಗೇ ಖಾತೆ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಿದೆ.

 

ಮೈಸೂರು ತಾಲೂಕು ಬಲ್ಲಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ ಒಟ್ಟು 66 ಎಕರೆ 19.75 ಗುಂಟೆ ಜಮೀನಿನಲ್ಲಿ 288 ನಿವೇಶನಗಳಿಗಾಗಿ 2022ರ ಜನವರಿ 23ರಂದು ಖಾತೆ ತೆರೆಯಲು ಅರ್ಜಿ ಸ್ವೀಕೃತವಾಗಿತ್ತು. 2022ರ ಜನವರಿ 27ರಂದು ಶುಲ್ಕ ಪಾವತಿಗಾಗಿ ಚಲನ್‌ ನೀಡಲಾಗಿತ್ತು. 2022ರ ಜನವರಿ 29ರಂದು ಶುಲ್ಕ ಪಾವತಿಯಾಗಿತ್ತು. 2022ರ ಜನವರಿ 29ರಂದು ಖಾತೆ ತೆರೆಯಲಾಗಿತ್ತು. 7 ದಿನದೊಳಗೇ ಖಾತೆ ನೀಡಲಾಗಿತ್ತು.

 

ಮೈಸೂರು ತಾಲೂಕು ಬಲ್ಲಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ 53 ಎಕರೆ 12.5 ಗುಂಟೆಯಲ್ಲಿ 181 ನಿವೇಶನಗಳ ಬಿಡುಗಡೆಗಾಗಿ 2022ರ ಜನವರಿ 2ರಂದು ಖಾತೆ ತೆರೆಯಲು ಅರ್ಜಿ ಸ್ವೀಕೃತವಾಗಿತ್ತು. 2022ರ ಜನವರಿ 26ರಂದು ಶುಲ್ಕ ಪಾವತಿಗಾಗಿ ಚಲನ್ ನೀಡಲಾಗಿತ್ತು. 2022ರ ಜನವರಿ 27ರಂದು ಶುಲ್ಕ ಪಾವತಿಯಾಗಿತ್ತು. ಅದೇ ದಿನದಂದು ಖಾತೆ ತೆರೆಯಲಾಗಿತ್ತು. 6 ದಿನದೊಳಗೇ ಖಾತೆ ನೀಡಲಾಗಿತ್ತು.

 

ಮೈಸೂರು ತಾಲೂಕು ಕೇರ್ಗಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಬಿಡುಗಡೆಯಾಗಿದ್ದ 179 ನಿವೇಶನಗಳಿಗಾಘಿ 2022ರ ಜನವರಿ 29ರಂದು ಖಾತೆ ತೆರೆಯಲು ಅರ್ಜಿ ಸ್ವೀಕೃತವಾಗಿತ್ತು. 2022ರ ಜನವರಿ 29ರಂದು ಶುಲ್ಕ ಪಾವತಿಗಾಗಿ ಚಲನ್ ನೀಡಲಾಗಿತ್ತು. 2022ರ ಜನವರಿ 31ರಂದು ಶುಲ್ಕ ಪಾವತಿಸಲಾಗಿತ್ತು. ಅದೇ ದಿನದಂದು ಅಂದರೆ 2022ರ ಜನವರಿ 31ರಂದೇ ಖಾತೆ ತೆರೆಯಲಾಗಿತ್ತು. 3 ದಿನದೊಳಗೇ ಖಾತೆ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ತಾಂತ್ರಿಕ ಸಮಿತಿ ವರದಿಯಲ್ಲೇನಿದೆ?

 

ಬಿಡುಗಡೆಯಾದ ನಿವೇಶನಗಳಿಗೆ ಖಾತೆ ತೆರೆಯುವ ಸಂಬಂಧ ಸಲ್ಲಿಕೆಯಾದ ಅರ್ಜಿಗಳು ಮತ್ತು ಕೈಗೊಂಡಿರುವ ಕ್ರಮದ ಕುರಿತು ತಾಂತ್ರಿಕ ಸಮಿತಿಯು ವಿವರವಾಗಿ ಪರಿಶೀಲಿಸಿದೆ. ಅರ್ಜಿದಾರರು ಶುಲ್ಕ ಪಾವತಿಸಿದ ನಂತರ ಒಂದೇ ದಿನದಲ್ಲಿ ಖಾತೆಯನ್ನು ವಿತರಿಸಿರುವುದು ಕಂಡುಬಂದಿದೆ. ಆದರೆ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ಕನಿಷ್ಠ 03ರಿಂದ 9 ದಿನಗಳವರೆಗೆ ಖಾತೆ ತೆರೆಯಲು ಸಮಯ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದೆ.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಕಲಂ 29(1) ಮತ್ತು (2) ನ್ನು ಜಾರಿಗೆ ತರುವ ಪೂರ್ವದಲ್ಲಿ ಸರ್ಕಾರವು ಈ ಅವಕಾಶದಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ಅಧಿಸೂಚನೆಯ ಮೂಲಕ ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿ ಆದೇಶ ಹೊರಡಿಸಬೇಕಿತ್ತು. ಅದರಂತೆ ಕ್ರಮವಹಿಸಬೇಕಾಗಿತ್ತು. ಆದರೆ ಈ ಪ್ರಕರಣದಲ್ಲಿ ಯಾವುದೇ ಅಧಿಕಾರವನ್ನೂ ಸರ್ಕಾರವು ಪ್ರತ್ಯಾಯೋಜಿಸಿಲ್ಲ ಮತ್ತು ಈ ಸಂಬಂಧ ಯಾವುದೇ ಅಧಿಸೂಚನೆಯನ್ನೂ ಹೊರಡಿಸಿಲ್ಲ ಎಂಬುದನ್ನು ಸಮಿತಿಯ ತನಿಖೆ ವೇಳೆ ಪತ್ತೆಯಾಗಿದೆ.

 

ಕೆಟಿಸಿಪಿ ಕಾಯ್ದೆ ಕಲಂ 12(2-ಬಿ) ಮತ್ತು 17 (2-ಸಿ) ರಂತೆ ವಿವಿಧ ಹಂತಗಳಲ್ಲಿ ಬಿಡುಗಡೆ ಮಾಡುವ ನಿವೇಶನಗಳಿಗೆ ಹಾಗೂ ಅಂತಿಮ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿದ ನಂತರ ನಿವೇಶನಗಳನ್ನು ನೋಂದಣಿ ಮಾಡಬೇಕು. ಹಾಗೂ ಸ್ಥಳೀಯ ಸಂಸ್ಥೆಯಿಂದ ಖಾತೆ ಮಾಡಲು ಸ್ಥಳೀಯ ಸಂಸ್ಥೆಗೆ  ಅಧಿಕಾರ ಕಲ್ಪಿಸಲಾಗಿದೆ.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ಹಾಗೆಯೇ ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ 1976 ಕರ್ನಾಟಕ ಪೌರ ಕಾಯ್ದೆ, 1964 ಹಾಗೂ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ 1993ರ ಪರಿಧಿಗೆ ಒಳಪಡುತ್ತವೆ. ಈಗಾಗಲೇ ಸಂಬಂಧಿತ ಸ್ಥಳೀಯ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಈ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ. ಆದರೂ ಸಮನಾಂತರವಾಗಿ ಮತ್ತೊಂದು ವ್ಯವಸ್ಥೆ ಮೂಲಕ ವಿನ್ಯಾಸದಲ್ಲಿನ ನಿವೇಶನಗಳಿಗೆ ಖಾತೆ ತೆರೆಯುವ ಮತ್ತು ನಿರ್ವಹಣೆ ಮಾಡುವ ವಿಷಯವು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ.

 

ಹೀಗಾಗಿ ಪ್ರಾಧಿಕಾರವು ಈ ಸಂಬಂಧ ತೀರ್ಮಾನಿಸಿ ಕೈಗೊಳ್ಳುತ್ತಿರುವ ಕ್ರಮವು ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿದಂತಾಗುತ್ತದೆ. ಪ್ರಾಧಿಕಾರದಿಂದ ಖಾತೆ ತೆರೆಯುವ ಮತ್ತು ನಿರ್ವಹಣೆ ಕ್ರಮಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಬಹುದು ಎಂದು ಸರ್ಕಾರಕ್ಕೆ ಶಿಫಾರಸ್ಸನ್ನೂ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

ಅಲ್ಲದೇ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರಲ್ಲಿ ಯೋಜನಾ ಪ್ರಾಧಿಕಾರವು ಆದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅನುಮೋದಿತ ಖಾಸಗಿ ಬಡಾವಣೆಯಲ್ಲಾಗಲೀ ಅಥವಾ ಪ್ರಾಧಿಕಾರವೇ ಅಭಿವೃದ್ಧಿಪಡಿಸಿರುವ ನಿವೇಶನಗಳಿಗೆ ಖಾತೆ ತೆರೆಯಲು ಯಾವುದೇ ಅವಕಾಶಗಳನ್ನು ಕಲ್ಪಿಸಿರುವುದಿಲ್ಲ.

 

ಆದರೂ ಪ್ರಾಧಿಕಾರವು ಕೈಗೊಳ್ಳುತ್ತಿರುವ ಕ್ರಮವು ಕಾಯ್ದೆ ಮತ್ತು ನಿಯಮಗಳಿಗೆ ವ್ಯತಿರಿಕ್ತವಾಗಿದೆ. ಕಾಯ್ದೆಯಡಿ ಪ್ರದತ್ತವಾದ ಅಧಿಕಾರವಿಲ್ಲದೇ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿ, ಸಿಬ್ಬಂದಿಗಳ ಆಡಳಿತಾತ್ಮಕ ವೆಚ್ಚಗಳಿಂದಾಗಿ ಪ್ರಾಧಿಕಾರದ ಆರ್ಥಿಕ ಸಂಪನ್ಮೂಲದ ಅನಗತ್ಯ ವೆಚ್ಚಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಸರ್ಕಾರದ ಪೂರ್ವಾನುಮತಿಯಿಲ್ಲದೇ ಸದರಿ ಕ್ರಮವನ್ನು ವಹಿಸುತ್ತಿರುವುದು ವಿವರಣೆ ಪಡೆಯಬೇಕು ಎಂದು ವರದಿ ಹೇಳಿದೆ.

the fil favicon

SUPPORT THE FILE

Latest News

Related Posts