ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಹೆಚ್ಚುವರಿ ನಿಧಿಯನ್ನು ಲೆಕ್ಕಾಚಾರ ಮಾಡದೇ ಮತ್ತು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ  250 ಕೋಟಿ ರು.ಗಳನ್ನು ಮೂಡಾ  ಅಧಿಕಾರಿಗಳು ಎಸ್‌ಬಿಐನಲ್ಲಿ ನಿಶ್ಚಿತ ಠೇವಣಿಯಲ್ಲಿರಿಸಿದ್ದರು ಎಂಬ ಸಂಗತಿಯನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಮೂಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್‌ ಅವರ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವ ನಡುವೆಯೇ ಮೂಡಾದಲ್ಲಿನ 250 ಕೋಟಿ ರು ಗಳನ್ನು ನಿಯಮಬಾಹಿರವಾಗಿ ಬ್ಯಾಂಕ್‌ನಲ್ಲಿ ಇರಿಸಿದ್ದ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ತಾಂತ್ರಿಕ ಸಮಿತಿಯು ನಗರಾಭಿವೃದ್ಧಿ ಇಲಾಖೆಗೆ ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಮಾರ್ಗಸೂಚಿಗಳಿಗೆ ವಿರುದ್ಧವಾಗಿ 250 ಕೋಟಿ ರು.ಗಳನ್ನು ಎಸ್‌ಬಿಐನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಇರಿಸಲಾಗಿದೆ ಎಂಬ ಪ್ರಕರಣವನ್ನು ಮೂಡಾದ ಹಿಂದಿನ ಅಧ್ಯಕ್ಷರೇ ಹೊರಗೆಳೆದಿದ್ದರು. ಅಷ್ಟೇ ಅಲ್ಲದೇ ಈ ಸಂಬಂಧ ದೂರನ್ನೂ ಸಲ್ಲಿಸಿದ್ದರು.

 

ಈ ದೂರನ್ನು ವಿಸ್ತೃತವಾಗಿ ಪರಿಶೀಲಿಸಿ ವರದಿ ನೀಡಿರುವ ತಾಂತ್ರಿಕ ಸಮಿತಿಯು, ಮೂಡಾ ಆಯುಕ್ತರು ಮಾರ್ಗಸೂಚಿಗಳಿಗೆ ವಿರುದ್ಧವಾಗಿ 250 ಕೋಟಿ ರು.ಗಳನ್ನು ಎಸ್‌ಬಿಐನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದರು ಎಂಬುದನ್ನು ದೃಢಪಡಿಸಿದೆ.

 

ಏಕ ಪಕ್ಷೀಯವಾಗಿ ಎಸ್‌ಬಿಐ ಬ್ಯಾಂಕ್‌ನಲ್ಲಿ 250 ಕೋಟಿ ರು.ಗಳನ್ನು ಠೇವಣಿ ಇಟ್ಟಿರುವುದು ಹಲವು ಅಕ್ರಮಗಳ ವ್ಯವಸ್ಥೆಯಾಗಿರುತ್ತದೆ. ಕಾನೂನು ಪಾಲಿಸದೇ ಎಸ್‌ಬಿಐ ಬ್ಯಾಂಕ್‌ಗೆ ನೀಡಿರುವ 250 ಕೋಟಿ ರು.ಗಳನ್ನು ಹಿಂಪಡೆಯಬೇಕು ಎಂದು ಮೂಡಾದ ಹಿಂದಿನ ಅಧ್ಯಕ್ಷ ಹೆಚ್‌ ವಿ ರಾಜೀವ್‌ ಅವರು ದೂರು ನೀಡಿದ್ದರು.

 

ಈ ಕುರಿತು ತಾಂತ್ರಿಕ ಸಮಿತಿಯು ತನಿಖೆ ನಡೆಸಿತ್ತು. ಆರ್ಥಿಕ ಇಲಾಖೆಯ ಸುತ್ತೋಲೆ (ಸಂಖ್ಯೆ ಎಫ್‌ಡಿ/ಟಿಎಆರ್‍‌/2018, ದಿನಾಂಕ 27.08.2018) ಮರು ಪರಿಶೀಲಿಸಿ 2020ರ ಮಾರ್ಚ್ 12ರಂದು ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಹಾಲಿ ಚಾಲ್ತಿಯಲ್ಲಿರುವ ಈ ಮಾರ್ಗಸೂಚಿಗಳ ಅನ್ವಯವೇ ತಾಂತ್ರಿಕ ಸಮಿತಿಯು ಈ ಪ್ರಕರಣವನ್ನು ಪರಿಶೀಲಿಸಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಯಾವುದೇ ಸಂದರ್ಭದಲ್ಲಿ ನಿಶ್ಚಿತ ಠೇವಣಿ ಇಡಲು ಮೂಡಾದಲ್ಲಿ ಮಾರ್ಗಸೂಚಿ ಇದೆ. ಅದರ ಅನ್ವಯ ಟೆಂಡರ್‍‌ ಕರೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ.70ರಷ್ಟು ಮತ್ತು ಷೆಡ್ಯೂಲ್‌ ಬ್ಯಾಂಕ್‌ಗಳಲ್ಲಿ ಶೇ. 30ರಷ್ಟು ಠೇವಣಿ ಇಡಲು ಅವಕಾಶವಿರುತ್ತದೆ. ಟೆಂಡರ್‍‌ ಕರೆದ ನಂತರ ಉಪ ಸಮಿತಿಯಲ್ಲಿ ಚರ್ಚಿಸಿ ಗರಿಷ್ಠ ಬಡ್ಡಿ ನೀಡುವ ಬ್ಯಾಂಕ್‌ಗಳಿಗೆ ಈ ಠೇವಣಿ ಇಡಲು ಅವಕಾಶವಿದೆ. ಆದರೆ ಮೂಡಾದಲ್ಲಿ ಆಂತರಿಕ ಹೂಡಿಕೆ ಸಮಿತಿ ರಚನೆಯಾಗಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ತಾಂತ್ರಿಕ ಸಮಿತಿಯ ಅಭಿಪ್ರಾಯದಲ್ಲೇನಿದೆ?

 

ಪ್ರಾಧಿಕಾರದ ಉಳಿತಾಯ ಖಾತೆ ( ಸಂಖ್ಯೆ; 8960100004660) ಯಲ್ಲಿ 2022 ಮಾರ್ಚ್‌ 2ರಂದು 25,421.12 ಲಕ್ಷ ರು.ಗಳು ಲಭ್ಯವಿದ್ದವು. ಸರ್ಕಾರದ ಆರ್ಥಿಕ ಇಲಾಖೆಯ 2022ರ ಮಾರ್ಚ್‌ 12ರ ಸುತ್ತೋಲೆ ಅನ್ವಯ ಪ್ರಾಧಿಕಾರಗಳು ಒಳಗೊಂಡಂತೆ ನಿಗಮ, ಮಂಡಳಿಗಳು ಹೆಚ್ಚುವರಿ ನಿಧಿಯನ್ನು ಹೂಡಿಕೆ ಮಾಡಲು ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ವಿವರಿಸಿ ಸೂಚನೆ ನೀಡಿದೆ.

 

ಈ ಸುತ್ತೋಲೆಯ ಕ್ರಮ ಸಂಖ್ಯೆ 3 ಮತ್ತು 4 ರಲ್ಲಿ ಪ್ರಾಧಿಕಾರವು ಲಭ್ಯವಿರುವ ಹೆಚ್ಚುವರಿ ನಿಧಿಯನ್ನು ಲೆಕ್ಕ ಹಾಕಿ ಪರಿಗಣಿಸಲು ವಿವರವಾದ ನಿರ್ದೇಶನ ನೀಡಿದೆ. ನಿಶ್ಚಿತ ಠೇವಣಿಯಲ್ಲಿ ಹೆಚ್ಚುವರಿ ನಿಧಿ ಹೂಡಿಕೆ ಮಾಡಲು ಪ್ರಾಧಿಕಾರವು ಸಕ್ಷಮ ಪ್ರಾಧಿಕಾರವಾಗಿದೆ. ಪ್ರಾಧಿಕಾರವು ತನ್ನ ವಿವೇಚನಾಧಿಕಾರ ಬಳಸಿ ಆಂತರಿಕ ಹೂಡಿಕೆ ಸಮಿತಿ ರಚಿಸಲು ಅವಕಾಶವಿದೆ. ಹಾಗೂ ಈ ಸಮಿತಿಗೆ ಸೂಕ್ತವಾಗಿ ಅಧಿಕಾರ ನೀಡಲು ಅವಕಾಶವಿದೆ. ಆದರೆ ಪ್ರಾಧಿಕಾರ ಸಭೆಯ ತೀರ್ಮಾನದ ಅನ್ವಯ ಆಂತರಿಕ ಹೂಡಿಕೆ ಸಮಿತಿಯನ್ನು ರಚಿಸಿಲ್ಲ ಎಂದು ಕಂಡುಬಂದಿದೆ ಎಂದು ತಾಂತ್ರಿಕ ಸಮಿತಿಯು ವಿವರಿಸಿದೆ.

 

ಸುತ್ತೋಲೆ ಕ್ರಮ ಸಂಖ್ಯೆ 4(ii) ಅನ್ವಯ ಕಡ್ಡಾಯವಾಗಿ ಇ-ಪೋರ್ಟಲ್‌ ಮುಖಾಂತರವೇ ಬಿಡ್‌ಗಳ ಮೂಲಕ ನಿಶ್ಚಿತ ಠೇವಣಿ ಇಡಲು ಕ್ರಮ ವಹಿಸಬೇಕಿತ್ತು. ಈ ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಗಳು ತಮ್ಮ ಟಿಪ್ಪಣಿಯಲ್ಲಿ ಈ ಕುರಿತು ವಿವರಿಸಿದ್ದರೂ ಕಡತದ ಟಿಪ್ಪಣಿ ಕಂಡಿಕೆ (11)ರಲ್ಲಿ ಪ್ರಾಧಿಕಾರದ ಆಯುಕ್ತರು ದೀರ್ಘವಾದ ಆದೇಶ ಹೊರಡಿಸಿದ್ದಾರೆ.

 

‘ಸದ್ಯ ಎಫ್‌ಡಿಗೆ ವರ್ಗಾಯಿಸಲು ಕ್ರಮವಹಿಸಿ, ಮಾರ್ಗಸೂಚಿಗಳಾನ್ವಯ ಇ ಟೆಂಡರ್‍‌ ಕರೆಯಲು ಕ್ರಮ ವಹಿಸಿ, ಸದರಿ ಬ್ಯಾಂಕ್‌ನ್ನು ಇ ಟೆಂಡರ್‍‌ನಲ್ಲಿ ಭಾಗವಹಿಸಲು ಸೂಚಿಸಬಹುದು,’ ಎಂದು ಆಯುಕ್ತರು ಆದೇಶ ಹೊರಡಿಸಿದ್ದರು ಎಂದು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಅಲ್ಲದೇ ಕಡತದ ಟಿಪ್ಪಣಿ ಕಂಡಿಕೆ (12ರಿಂದ 18)ಯಲ್ಲಿ ಸರ್ಕಾರದ ಆರ್ಥಿಕ ಇಲಾಖೆಯ ಅಂಶಗಳನ್ನು ಪುನರುಚ್ಛರಿಸಿ ಮಾರ್ಗಸೂಚಿಗಳನ್ನು ಅನ್ವಯ ಕೈಗೊಳ್ಳಬೇಕಾದ ಅಂಶಗಳನ್ನು ಟಿಪ್ಪಣಿಯಲ್ಲಿ ಮಂಡಿಸಲಾಗಿತ್ತು. ಕಡತದ ಟಿಪ್ಪಣಿ ಸಂಖ್ಯೆ 19ರಲ್ಲಿ ಹೆಚ್ಚುವರಿ ನಿಧಿಯ ನಿಶ್ಚಿತ ಠೇವಣಿಯಾಗಿ ಹೂಡಿಕೆ ಮಾಡದೇ ಇರುವುದರಿಂದ ಅಗಿರುವ ನಷ್ಟ ಮತ್ತು ಇತರೆ ವಿವರಗಳೊಂದಿಗೆ ಕಡತದಲ್ಲಿ ಮಂಡಿಸುವಂತೆ ಪ್ರಾಧಿಕಾರದ ಆಯುಕ್ತರು ಆದೇಶ ನೀಡಿದ್ದರು. ಆಯುಕ್ತರ ಸೂಚನೆಯಂತೆ ಕಂಡಿಕೆ (31)ರಲ್ಲಿ ತುಲನಾತ್ಮಕ ಪಟ್ಟಿ ಮಾಡಿ ಪ್ರಾಧಿಕಾರಕ್ಕೆ ಯಾವುದೇ ನಷ್ಟ ಆಗಿಲ್ಲದಿರುವ ಬಗ್ಗೆ ಕಡತದದಲ್ಲಿ ವಿವರಿಸಿ ಆಯುಕ್ತರಿಗೆ ಕಡತ ಮಂಡಿಸಲಾಗಿತ್ತು.

 

ಆ ನಂತರ ಕಡತದ ಟಿಪ್ಪಣಿ ಕಂಡಿಕೆ ಸಂಖ್ಯೆ (35)ರಲ್ಲಿ ಆಯುಕ್ತರು ‘ಚರ್ಚಿಸಿ’ ಎಂದು ಸಿಎಒ ಅವರಿಗೆ ನಮೂದಿಸಿದ್ದಾರೆ. ಕೃಷ್ಣಮೂರ್ತಿಪುರಂ ಶಾಖೆಯಲ್ಲಿರುವ ಎಸ್‌ಬಿಎಂ ಮುಖ್ಯ ವ್ಯವಸ್ಥಾಪಕರಿಗೆ 2022ರ ಮಾರ್ಚ್‌ 2ರಂದು ಪತ್ರ ಬರೆದಿದ್ದರು. ಹೊಸದಾಗಿ ಖಾತೆ ತೆರೆಯಲು ಹಾಗೂ ನಿರ್ವಹಣೆ ಮಾಡಲು ಮುಖ್ಯ ಲೆಕ್ಕಾಧಿಕಾರಿಗಳಿಗೆ ಪ್ರಾಧಿಕಾರದ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದ್ದರು ಎಂದು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಆಯುಕ್ತರು ಸೂಚನೆಯಂತೆ ಹೊಸದಾಗಿ ಖಾತೆ ತೆರೆದು ಅದೇ ದಿನ ಅಂದರೆ 2022ರ ಮಾರ್ಚ್‌ 2ರಂದ ಪತ್ರದಲ್ಲಿ 365 ದಿನಗಳಿಗೆ ಶೇ. 3.75 ಬಡ್ಡಿ ದರದಲ್ಲಿ 250 ಕೋಟಿ ರುಗ.ಳನ್ನು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಪ್ರಾಧಿಕಾರದ ಚೆಕ್‌ (ಚೆಕ್‌ ಸಂಖ್ಯೆ; 015118/2021-22) ನೀಡಲಾಗಿತ್ತು. ಈ ಮೊತ್ತವನ್ನು ನಿಶ್ಚಿತ ಠೇವಣಿ ಹೂಡಲು ಕೋರಿ ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿತ್ತು ಎಂದು ತಾಂತ್ರಿಕ ಸಮಿತಿಯು ಬಯಲು ಮಾಡಿದೆ.

 

ಲಭ್ಯವಿರುವ ಹೆಚ್ಚುವರಿ ನಿಧಿಯನ್ನು ಲೆಕ್ಕಾಚಾರ ಮಾಡಬೇಕು ಎಂದು ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟ ನಿರ್ದೇಶನವಿದೆ. ಅದರಂತೆ ಮೂಡಾ ಅಧಿಕಾರಿಗಳು ಲೆಕ್ಕಾಚಾರ ಮಾಡಿಲ್ಲ. ಹಾಗೂ ಪ್ರಾಧಿಕಾರದ ಸಭೆಯ ತೀರ್ಮಾನದಂತೆ ಆಂತರಿಕ ಹೂಡಿಕೆ ಸಮಿತಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸುತ್ತೋಲೆಯಂತೆ ಕ್ರಮವಹಿಸಿಲ್ಲ.

 

‘ಇ ಪೋರ್ಟಲ್‌ ಮುಖಾಂತರ ಬಿಡ್‌ಗಳನ್ನು ಆಹ್ವಾನಿಸದೇ ನೇರವಾಗಿ ಬ್ಯಾಂಕ್‌ ಶಾಖೆಗೆ 250 ಕೋಟಿ ರು.ಗಳನ್ನು ನಿಶ್ಚಿತ ಠೇವಣಿಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ. ಇದು ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿನ ಸೂಚನೆಗಳಿಗೆ ವ್ಯತಿರಿಕ್ತ ಪ್ರಾಧಿಕಾರದ ಆಯುಕ್ತರು ಆದೇಶ ನೀಡಿ ಕ್ರಮವಹಿಸಿರುವುದು ಕಂಡು ಬರುತ್ತದೆ,’ ಎಂದು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

 

ಅಲ್ಲದೇ ನಿಶ್ಚಿತ ಠೇವಣಿ ಹೂಡಿಕೆದಾರರು ಯಾವುದೇ ಬ್ಯಾಂಕ್‌ನ ಶಾಖೆಯನ್ನು ನೇರವಾಗಿ ಸಂಪರ್ಕಿಸದಂತೆ ಹಾಗೂ ನವೀಕರಣ,ಹೊಸದಾಗಿ ನಿಶ್ಚಿತ ಠೇವಣಿ ಸಂಬಂಧ ಕಡ್ಡಾಯವಾಗಿ ಸರ್ಕಾರದ ಇ-ಪೋರ್ಟಲ್‌ ಮುಖಾಂತರವೇ ಬಿಡ್‌ಗಳನ್ನು ಕರೆಯಬೇಕು ಎಂದು ಕಡ್ಡಾಯಪಡಿಸಿತ್ತು. ಆದರೂ ಸಹ ಪ್ರಸ್ತುತ ಪ್ರಕರಣದಲ್ಲಿ ಸರ್ಕಾರದ ಸುತ್ತೋಲೆಗಳಿಗೆ ವ್ಯತಿರಿಕ್ತವಾಗಿ ನೇರವಾಗಿ ನಿಧಿಯನ್ನು ವರ್ಗಾಯಿಸಲು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಪ್ರಾಧಿಕಾರದ ಆಯುಕ್ತರು ಆದೇಶಿಸಿ ಕ್ರಮವಹಿಸಿದ್ದರು.

SUPPORT THE FILE

Latest News

Related Posts