ಲ್ಯಾಪ್‌ಟಾಪ್‌ ಖರೀದಿಯಲ್ಲಿ 25 ಕೋಟಿ ರು ಅವ್ಯವಹಾರ ಆರೋಪ; ಲೋಕಾಯುಕ್ತ ಮೆಟ್ಟಿಲೇರಿದ ಪ್ರಕರಣ

ಬೆಂಗಳೂರು; ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ  ಮಂಡಳಿಯು ದುಪ್ಪಟ್ಟು ದರದಲ್ಲಿ 7,000 ಲ್ಯಾಪ್‌ಟಾಪ್‌ಗಳ ಖರೀದಿಸಿರುವುದರಲ್ಲಿ ನಡೆದಿದೆ ಎನ್ನಲಾಗಿರುವ  ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಹನುಮಂತರಾಯ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಲ್ಯಾಪ್‌ಟಾಪ್‌ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಲವಾಗಿ ಆರೋಪಿಸುತ್ತಲೇ ಬಂದಿದ್ದ ಕಾಂಗ್ರೆಸ್‌ ಪಕ್ಷವು ಇದೀಗ ತನ್ನದೇ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ  ಮುಕ್ತ  ಮತ್ತು ಆನ್‌ಲೈನ್‌ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ  ಲ್ಯಾಪ್‌ ಟಾಪ್‌ ಖರೀದಿಸಿತ್ತು. ಇದರಲ್ಲಿ ವ್ಯಾಪಕ ಅಕ್ರಮಗಳಾಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈ ಪ್ರಕರಣವು ಲೋಕಾಯುಕ್ತ ಮೆಟ್ಟಿಲೇರಿದೆ.

 

2024ರ ಜೂನ್‌ 6ರಂದು ಹನುಮಂತರಾಯ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ. ಇದರಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿಸಲಾಗಿದೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲ್ಯಾಪ್‌ಟಾಪ್‌ ಖರೀದಿಗಾಗಿ ಹಿಂದಿನ ಸರ್ಕಾರವು 2023ರಲ್ಲಿ ಟೆಂಡರ್ ಕರೆದಿತ್ತು. ಟೆಂಡರ್‍‌ ಪ್ರಕ್ರಿಯೆಯನ್ನು ಅತ್ಯಲ್ಪ ಅವಧಿಯನ್ನು ನಿಗದಿಪಡಿಸಿತ್ತು. ತಮಗೆ ಬೇಕಾದವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದಾರೆ. ಕರ್ನಾಟಕ ಪಾರದರ್ಶಕ ಅಧಿನಿಯಮ ಅನ್ವಯ 02 ಕೋಟಿ ರು ಮೇಲ್ಪಟ್ಟ ಟೆಂಡರ್‍‌ ಮೌಲ್ಯಕ್ಕೆ ಕನಿಷ್ಠ 60 ದಿನಗಳ ಕಾಲ ಟೆಂಡರ್‍‌ ಅವಧಿ ನಿಗದಿಪಡಿಸಬೇಕು ಆದರೆ ಮಂಡಳಿ ಅಧಿಕಾರಿಗಳು ಕರೆದಿದ್ದ ಟೆಂಡರ್‍‌ ಅವಧಿಯು ಅಲ್ಪ ಅವಧಿ ಅಂದರೇ 10 ದಿನಗಳ ಆಗಿದೆ. ಈ ಮೂಲಕ ಕೆಟಿಪಿಪಿ ನಿಯಮ 2000ನ್ನು ಉಲ್ಲಂಘಿಸಿದ್ದಾರೆ ಎಂದು ಹನುಮಂತರಾಯ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ತಿ ವಿಭಾಗಕ್ಕೆ 1,400 ಲ್ಯಾಪ್‌ಟಾಪ್‌ ನಂತೆ ವಿಭಾಗವಾರು ಟೆಂಡರ್‍‌ ಕರೆಯಲಾಗಿತ್ತು.  ಒಟ್ಟು 7,000 ಲ್ಯಾಪ್‌ಟಾಪ್‌ಗಳನ್ನು ನೈನ್ ರಿಚ್‌ ಸಂಸ್ಥೆಯ ಮೂಲಕ ಖರೀದಿಸಲಾಗಿದೆ. 2023ರ ಆಗಸ್ಟ್‌ 17ರಂದು ಸರಬರಾಜು ಆದೇಶ ನೀಡಲಾಗಿದೆ. ಪ್ರತಿ ಲ್ಯಾಪ್‌ಟಾಪ್‌ಗೆ 09.96 ಕೋಟಿ ರು. ಟೆಂಡರ್‍‌ ಮೊತ್ತ ನಿಗದಿಪಡಿಸಲಾಗಿತ್ತು. ಇದು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

 

‘ಲ್ಯಾಪ್‌ಟಾಪ್‌ ಖರೀದಿಯಲ್ಲಿ ಅಂದಾಜು 25 ಕೋಟಿ ರು. ಅವ್ಯವಹಾರ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕಾರ್ಮಿಕ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗೆ ಈ ಮೊದಲು ಲಿಖಿತ ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಟೆಂಡರ್‍‌ ಹಗರಣದಲ್ಲಿ ಭಾಗಿಯಾಗಿರುವ ವಿವಿಧ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ಸರ್ಕಾರಕ್ಕೆ ಆಗಿರುವ ಆರ್ಥಿಕ ನಷ್ಟಕ್ಕೆ ಕಾರಣರಾಗಿರುವವರಿಂದಲೇ ವಸೂಲಿ ಮಾಡಲು ಕ್ರಮ ಜರುಗಿಸಬೇಕು,’ ಎಂದು ಹನುಮಂತರಾಯ ಅವರು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ  ಮಂಡಳಿಯ  ಬೆಳಗಾವಿ, ಕಲ್ಬುರ್ಗಿ, ಹಾಸನ, ಬೆಂಗಳೂರು-1, ಬೆಂಗಳೂರು-2  ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400  ಲ್ಯಾಪ್‌ಟಾಪ್‌ಗಳಂತೆ ಒಟ್ಟು  7,000 ಲ್ಯಾಪ್‌ಟಾಪ್‌ಗಳನ್ನು 49.75 ಕೋಟಿ ರು. ದರದಲ್ಲಿ ಖರೀದಿಸಿತ್ತು. ಎಲ್‌-1 ಆಗಿ ಹೊರಹೊಮ್ಮಿದ್ದ ಕಂಪನಿಯು ನಮೂದಿಸಿದ್ದ ದುಪ್ಪಟ್ಟು  ದರವನ್ನೇ ಅನುಮೋದಿಸುವ ಮೂಲಕ 23.15 ಕೋಟಿ ರು.  ಹಗರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ಹನುಮಂತ ಪೂಜಾರಿ ಎಂಬುವರು ಆರ್‍‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಾಸ್ತವದಲ್ಲಿ ಈ ಟೆಂಡರ್‍‌ ಪ್ರಕ್ರಿಯೆಯು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹುತೇಕ ಅಂತಿಮಗೊಂಡಿತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಆರ್ಥಿಕ ಬಿಡ್‌ ನಡವಳಿ ಅನುಮೋದನೆಗೊಂಡಿರಲಿಲ್ಲ. ಆದರೆ  ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ  ಕೆಲವೇ ಕೆಲವು ತಿಂಗಳಲ್ಲಿ ಮಂಡಳಿಯು  ಆರ್ಥಿಕ ಬಿಡ್‌ ತೆರೆದಿತ್ತು. 2023ರ ಜುಲೈ 24ರಂದು ಮಂಡಳಿ ಅಧಿಕಾರಿಗಳು ಅನುಮೋದಿಸಿದ್ದರು. ಇದಕ್ಕೆ  ಸಚಿವ ಸಂತೋಷ್‌ ಲಾಡ್‌ ಅವರ ಒಪ್ಪಿಗೆ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.

 

ಡೆಲ್‌, ಲೆನವೋ, ಹೆಚ್‌ಪಿಯಂತಹ ಮತ್ತಿತರ ಕಂಪನಿಗಳು ತಯಾರಿಸಿರುವ ಲ್ಯಾಪ್‌ಟಾಪ್‌ಗಳ ದರಕ್ಕೂ ಮತ್ತು ಎಲ್‌-1 ಆಗಿ ಹೊರಹೊಮ್ಮಿರುವ ನೈನ್‌ರಿಚ್‌ ಇನ್ಫೋಟೆಕ್‌ ಕಂಪನಿಯು ನಮೂದಿಸಿರುವ ದರದ ಮಧ್ಯೆ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬಂದಿದೆ.

 

ಮಂಡಳಿಯು ನಿಗದಿಪಡಿಸಿದ್ದ ತಾಂತ್ರಿಕ ನಿರ್ದಿಷ್ಟತೆಗಳನ್ನೇ ಹೊಂದಿರುವ ಪ್ರತಿಷ್ಠಿತ ಕಂಪನಿಗಳು ತಲಾ ಲ್ಯಾಪ್‌ಟಾಪ್‌ಗೆ ಕನಿಷ್ಟ 27,999 ರು.ಗಳಿಂದ ಗರಿಷ್ಠ 35,999 ರು ವರೆಗೆ ದರ  ನಿಗದಿಪಡಿಸಿದೆ.

 

ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳು ತಲಾ ಲ್ಯಾಪ್‌ಟಾಪ್‌ ಬೆಲೆಯನ್ನು ನಮೂದಿಸಿಲ್ಲ. ನೈನ್ ರಿಚ್‌ ಇನ್ಫೋಟೆಕ್‌ ಕಂಪನಿಯು  ಒಟ್ಟಾರೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರು. ಎಂದು ನಮೂದಿಸಿದೆ. ಇದರ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 71,046 ರು. ನಂತೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರು ನಂತೆ 5 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ  49.75 ಕೋಟಿ ರು. ಆಗಲಿದೆ.

 

ಹನುಮಂತ ಪೂಜಾರಿ ಅವರು 2024ರ ಜನವರಿ 16ರಂದು ಖಾಸಗಿ ಕಂಪನಿಯೊಂದರಿಂದ ಪಡೆದಿರುವ ದರಪಟ್ಟಿ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 38,000 ರು. ಇದೆ.

 

ಈ ದರದ ಪ್ರಕಾರ 1,400 ಲ್ಯಾಪ್‌ಟಾಪ್‌ಗಳಿಗೆ  5.32 ಕೋಟಿ ರು. ನಂತೆ 7,000 ಲ್ಯಾಪ್‌ಟಾಪ್‌ಗಳಿಗೆ  26.60 ಕೋಟಿ ರು ಆಗಲಿದೆ.  ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 33,046 ರು. ನಂತೆ ಒಟ್ಟಾರೆ 23.15 ಕೋಟಿ ರು. ಅಧಿಕ ದರ ಪಾವತಿಸಿ ಖರೀದಿಸಿತ್ತು.

7,000 ಲ್ಯಾಪ್‌ಟಾಪ್‌ ಖರೀದಿ; ಕಟ್ಟಡ ಕಾರ್ಮಿಕರ ಕಲ್ಯಾಣ  ಮಂಡಳಿಯಲ್ಲಿ 23 ಕೋಟಿ ರು. ಹಗರಣ

9,94,64,499 ರು. ನಮೂದಿಸಿ ಎಲ್‌-1 ಆಗಿರುವ ನೈನ್‌ರಿಚ್‌ ಇನ್ಫೋಟೆಕ್‌ ಕಂಪನಿ ಜತೆ ಮಂಡಳಿಯು 2023ರ ಆಗಸ್ಟ್‌ 11ರಂದು ಕರಾರು ಮಾಡಿಕೊಂಡಿದೆ. ಆಗಸ್ಟ್‌ 17ರಂದು ಪೂರೈಕೆ ಆದೇಶ ನೀಡಿತ್ತು.

 

ಲ್ಯಾಪ್‌ಟಾಪ್‌ ಖರೀದಿ ಸಂಬಂಧ ಕರೆದಿದ್ದ ಟೆಂಡರ್‍‌ನಲ್ಲಿ ಒಟ್ಟು ಮೂರು ಕಂಪನಿಗಳು ಭಾಗವಹಿಸಿದ್ದವು. ಅದರಲ್ಲಿ ನೈನ್‌ ರಿಚ್‌ ಇನ್ಫೋಟೆಕ್‌ ಕಂಪನಿಯು 9,94,64,499 ರು., ಎನ್‌ ಡಿ ಮ್ಯಾನೇಜ್‌ಮೆಂಟ್‌ 10,04,99,999 ರು., ವಾಂಟೇಜ್‌ ನೆಟ್‌ವರ್ಕ್ ಸಲ್ಯೂಷನ್ಸ್‌ 10,25,99,000 ರು.ಗಳನ್ನು ನಮೂದಿಸಿತ್ತು. ಆದರೆ ಈ ಮೂರು ಕಂಪನಿಗಳೂ ತಲಾ ಲ್ಯಾಪ್‌ಟಾಪ್‌ ದರವನ್ನು ನಮೂದಿಸಿರಲಿಲ್ಲ.

 

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ ಖರೀದಿ ಪ್ರಕ್ರಿಯೆಯಲ್ಲಿಯೂ ಹಿಂದಿನ ಸರ್ಕಾರದ ಅವಧಿಯಲ್ಲಿ  ತಾಂತ್ರಿಕ ಶಿಕ್ಷಣ ಇಲಾಖೆಯು  ಖಾಸಗಿ ಏಜೆನ್ಸಿಗಳ ಲಾಬಿಗೆ ಮಣಿತ್ತು ಟೆಂಡರ್‌ ಪ್ರಕ್ರಿಯೆ ಮತ್ತು ಸಚಿವ ಸಂಪುಟದ  ಅನುಮೋದನೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಖರೀದಿಯ ಒಟ್ಟು ಮೊತ್ತವನ್ನು ವಿಭಜಿಸಿ ತುಂಡು ಗುತ್ತಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದರು.

 

ಖಾಸಗಿ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನೇ ಗಾಳಿಗೆ ತೂರಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ(ಎಸ್‌ಸಿಪಿ, ಎಸ್‌ಟಿಪಿ)ಯಡಿಯಲ್ಲಿ ಲಭ್ಯ ಇರುವ 18.34 ಕೋಟಿ ರು. ಸೇರಿದಂತೆ ಒಟ್ಟು 27.86 ಕೋಟಿ ರು. ಅನುದಾನ ಬಳಸಿಕೊಂಡಿದ್ದರು. ಅಲ್ಲದೇ  ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಟೆಂಡರ್‌ ಕರೆದಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಸಂಪುಟವನ್ನೂ ಕತ್ತಲಲ್ಲಿಟ್ಟಿದ್ದರು.

 

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಖರೀದಿ; ತುಂಡು ಗುತ್ತಿಗೆ ಹಿಂದಿದೆ ಅವ್ಯವಹಾರದ ವಾಸನೆ!

ರಾಜ್ಯದ ಒಟ್ಟು 8 ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ 9,52,41,000 ರು.ಮೊತ್ತದಲ್ಲಿ  ಡೆಸ್ಕ್‌ಟಾಪ್‌ ಖರೀದಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ 25.00 ಲಕ್ಷ ರು.ಗಳ ಮಿತಿಯಲ್ಲಿ ಖರೀದಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನೇ ತಾಂತ್ರಿಕ ಶಿಕ್ಷಣ ಇಲಾಖೆ  ಗಾಳಿಗೆ  ತೂರಿತ್ತು.

the fil favicon

SUPPORT THE FILE

Latest News

Related Posts