219.16 ಎಕರೆ ಜಮೀನಿನ ಡಿ ನೋಟಿಫಿಕೇಷನ್‌ಗೆ ಕೈ ಹಾಕಿದ ಸರ್ಕಾರ; ವಸತಿ ಯೋಜನೆಗೆ ಕೊಕ್‌?

ಬೆಂಗಳೂರು;  ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ ಸ್ವಾಧೀನಗೊಂಡಿರುವ ಅಂದಾಜು 500 ಕೋಟಿ ಗೂ ಹೆಚ್ಚು ಬೆಲೆಬಾಳುವ  219 ಎಕರೆ 16 ಗುಂಟೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಸದ್ದಿಲ್ಲದೇ ತಯಾರಿ ನಡೆಸಿದೆ.

 

ಐವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತೆವಳುತ್ತಿದ್ದ ಈ ಕಡತಕ್ಕೆ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಬಿರುಸಿನ ಚಾಲನೆ ದೊರೆತಿದೆ. ಈಗಾಗಲೇ ಕಲಂ 6(1)ರ ಅಡಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರೂ ಸಹ 12 ವರ್ಷದ ಹಿಂದಿನ ಪ್ರಸ್ತಾವನೆಗೆ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಐದೇ ಐದು ತಿಂಗಳಲ್ಲಿ ಬಿರುಸಿನ ಚಾಲನೆ ಸಿಕ್ಕಿದೆ.

 

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅರ್ಕಾವತಿ ಹಗರಣದಲ್ಲಿ ಸಿಲುಕಿದ್ದರು. ಆ ಕಡತವೂ ಸಹ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಲನೆ ಸಿಕ್ಕಿರಲಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಂದಿರಿಸಿ ಡಿ ನೋಟಿಫಿಕೇಷನ್‌ಗೆ ಅಸ್ತು ಎಂದಿದ್ದರು. ಈ ಹಗರಣದ ಕುರಿತು ನ್ಯಾ ಎಚ್‌ ಎಸ್‌ ಕೆಂಪಣ್ಣ ಅವರ ನೇತೃತ್ವದಲ್ಲಿ ಆಯೋಗವೂ ರಚನೆಯಾಗಿತ್ತು.  ಡಿ ನೋಟಿಫಿಕೇಷನ್‌ ಹಗರಣ ಪ್ರಸ್ತಾಪವಾದಾಗಲೆಲ್ಲಾ ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರತ್ತಲೇ ಮುಗಿಬೀಳುತ್ತಾರೆ.

 

ತಾವರೆಕರೆ ಪ್ರಕರಣಕ್ಕೆ ಸಂಬಂಧಿಸಿದ ಕಡತವೂ ಸಹ ಹಿಂದಿನ 12 ವರ್ಷಗಳಿಂದಲೂ ತೆವಳುತ್ತಲೇ ಬಂದಿದೆ. ವಿಶೇಷವೆಂದರೇ ಅರ್ಕಾವತಿಯಂತೆಯೇ ತಾವರೆಕರೆ ಪ್ರಕರಣದ ಕಡತಕ್ಕೆ  ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಮರು ಜೀವ ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರು ಇದೀಗ ಡಿ ನೋಟಿಫಿಕೇಷನ್‌ಗೆ ಕೈ ಹಾಕಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.

 

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 219 ಎಕರೆ 16 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಸ್ತಾವನೆಯ ಕುರಿತಾದ ಮರು ಜೀವ ಪಡೆದಿರುವ ಕಡತವು, ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಪ್ರಾಥಮಿಕ ದಾಖಲೆಗಳು ಲಭ್ಯವಾಗಿವೆ.

 

ಮತ್ತೊಂದು ವಿಶೇಷವೆಂದರೇ 219 ಎಕರೆ 19 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಸ್ತಾವನೆಯು ಸಿದ್ಧಗೊಂಡಿದ್ದ ಅವಧಿಯಲ್ಲಿ ಜಗದೀಶ್‌ ಶೆಟ್ಟರ್‍‌ ಅವರು ಮುಖ್ಯಮಂತ್ರಿಯಾಗಿದ್ದರು. ಶೆಟ್ಟರ್‍‌ ಅವಧಿ ನಂತರ ಸಿದ್ದರಾಮಯ್ಯ, ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು.

 

ಪ್ರಕರಣದ ವಿವರ

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್‍‌ 81/1 ಸೇರಿದಂತೆ ಇತರೆಡೆಗಳಲ್ಲಿ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ 216 ಎಕರೆ 16 ಗುಂಟೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಂಡಿತ್ತು.

 

ಭೂ ಸ್ವಾಧೀನಕ್ಕೆ ಒಳಪಟ್ಟ 71 ರೈತರು ಜಮೀನನ್ನು ಭೂ ಸ್ವಾಧೀನತೆಯಿಂದ ಕೈ ಬಿಡಲು ಮನವಿ ಸಲ್ಲಿಸಿದ್ದರು. ಈ ಮನವಿ ಕುರಿತು 2012ರ ಅಕ್ಟೋಬರ್‍‌ 17ರಂದು ನಡೆದಿದ್ದ ಮಂಡಳಿ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಈ ಜಮೀನಿಗೆ ಕಲಂ 6(1)ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ಈ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದರು.

 

ಸುಮಾರು 71 ಜನ ರೈತರು ಸಲ್ಲಿಸಿದ್ದ ಮನವಿ ಪರವಾಗಿ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು ಮಂಡಳಿ ಅಧ್ಯಕ್ಷರು ಮತ್ತು ಅಂದಿನ ವಸತಿ ಸಚಿವರ ಗಮನಕ್ಕೆ ತಂದಿದ್ದರು. ಆ ನಂತರ ಈ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ 2012ರ ಅಕ್ಟೋಬರ್‍‌ 17ರಂದು ನಡೆದಿದ್ದ ಮಂಡಳಿ ಸಭೆಯು ನಿರ್ಣಯಿಸಿತ್ತು. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ 12 ವರ್ಷದ ಹಿಂದೆಯೇ ಸಲ್ಲಿಕೆಯಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಈ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಜಮೀನುಗಳನ್ನು ಕೈಬಿಡಲು ಭೂ ಸ್ವಾಧೀನ ಕಾಯ್ದೆ ಕಲಂ 48 (1) ಅನ್ವಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ಹೀಗಾಗಿ ಈ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಿತ್ತು ಎಂಬುದು ಮಂಡಳಿಯ ಟಿಪ್ಪಣಿಯಿಂದ ಗೊತ್ತಾಗಿದೆ.

 

ಮಂಡಳಿ ಸಭೆಯ ನಿರ್ಣಯದಂತೆ 219 ಎಕರೆ 16 ಗುಂಟೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡುವ ಸಂಬಂಧ ಕಾಯ್ದೆ 48(1) ಅಡಿಯಲ್ಲಿ ಸರ್ಕಾರಕ್ಕೆ 2012ರ ನವೆಂಬರ್‍‌ 30ರಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಭೂ ಸ್ವಾಧೀನಕ್ಕೆ ಒಳಪಟ್ಟ ಜಮೀನಿನ ಭೂ ಮಾಲೀಕರ ಪೈಕಿ ಸಂಜೀವಯ್ಯ ಹಾಗೂ ಇತರ ನಾಲ್ಕು ಜನರು ಉಚ್ಛ ನ್ಯಾಯಾಲಯದಲ್ಲಿ ರಿಟ್‌ (ಸಂಖ್ಯೆ; ಸಂಖ್ಯೆ; 28069-28073/2013) ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.

 

2014ರ ಫೆ.20ರಲ್ಲಿ ಕಲಂ 4(4)ರ ಅಡಿಯಲ್ಲಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಮತ್ತು ಕಲಂ 6(1) ರ ಘೋಷಣೆಯನ್ನು ವಜಾಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಹೊರಬಿದ್ದು 10 ವರ್ಷವಾದರೂ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಸ್ತಾವನೆಗೆ ಚಾಲನೆ ದೊರೆತಿರಲಿಲ್ಲ.

 

ಕರ್ನಾಟಕ ಗೃಹ ಮಂಡಳಿ ಆಯುಕ್ತರು 2023ರ ಮಾರ್ಚ್‌ 16ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ನಂತರ ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳು ನಡೆದಿದ್ದರಿಂದಾಗಿ ನೆನೆಗುದಿಗೆ ಬಿದ್ದಿತ್ತು. ಹೀಗಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಿವರವಾದ ವರದಿ ಕೇಳಿ 2023ರ ನವೆಂಬರ್‍‌ 2ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

 

‘ಪ್ರಸ್ತಾವನೆಯಲ್ಲಿನ ಸರ್ವೆ ನಂಬರ್‍‌ಗಳ ಸ್ಥಳಗಳ ಸ್ಥಿತಿಗತಿ ಹಾಗೂ ಕಂದಾಯ ದಾಖಲೆಗಳ ಖಚಿತತೆಯ ಬಗ್ಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ನಿರ್ದೇಶಿಸಿದ್ದರು.

 

ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಯಾವುದೇ ವರದಿ ನೀಡಿರಲಿಲ್ಲ. ಹೀಗಾಗಿ 2024ರ ಜೂನ್‌ 10ರಂದು ಮತ್ತೊಂದು ಪತ್ರವನ್ನು ಬರೆದಿದ್ದರು.

 

ಪ್ರಸ್ತುತ ಹಂತದ ಮಾಹಿತಿ ಹಾಗೂ ಸ್ಥಳ ತನಿಖಾ ವರದಿಯೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದರು ಎಂದು ಗೊತ್ತಾಗಿದೆ. ಈ ಕುರಿತು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಶಿವಲಿಂಗೇಗೌಡ ಮತ್ತು ವಸತಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts