ರೋಗಿಗಳಿಗೆ ಬರೆ; ಖಾಸಗಿ ಆಸ್ಪತ್ರೆಗಳ ದರದೊಂದಿಗೆ ಹೋಲಿಕೆ, ಶೇ.10ರಷ್ಟು ಅಧಿಕ ಶುಲ್ಕ ಹೆಚ್ಚಳ?

ಬೆಂಗಳೂರು; ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಹೊರ ಮತ್ತು ಒಳ ರೋಗಿಗಳ ಶುಲ್ಕವೂ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಶೇ.5ರಿಂದ ಶೇ.10ಕ್ಕೆ ಹೆಚ್ಚಳ ಮಾಡಲಿದೆ. ಈ ಮೂಲಕ ಶುಲ್ಕದ ಬರೆ ಹಾಕಲು  ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿದೆ.

 

ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದ ಶುಲ್ಕದಲ್ಲಿ ಹೆಚ್ಚಳ ಮಾಡಲು ಮುಂದಾಗಿ ಕಡೇಗಳಿಗೆಯಲ್ಲಿ ಅದನ್ನು ಕೈಬಿಟ್ಟಿದೆ. ಈ ಮಧ್ಯೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಎಲ್ಲಾ ಬಗೆಯ ಶುಲ್ಕಗಳನ್ನೂ ಹೆಚ್ಚಳ ಮಾಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.

 

ಈ ಅಂಶವನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧಿಕಾರಿಗಳು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗಮನಕ್ಕೂ ತಂದಿದ್ದರು. ಆದರೆ ಖಾಸಗಿ ಆಸ್ಪತ್ರೆಗಳು ವಿಧಿಸಿರುವ ದರಗಳೊಂದಿಗೆ ಹೋಲಿಕೆ ಮಾಡಿ ಮತ್ತು ಪ್ರತಿರೋಧಿಸುವವರಿಗೆ ಮನವರಿಕೆ ಮಾಡಿ ಎಂದು ಕಾರ್ಯದರ್ಶಿ ಸಲಹೆ ನೀಡಿದ್ದಾರೆ. ಇದೇ ಸಲಹೆಯನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರಿಗೂ ಅಧಿಕಾರಿಗಳು ನೀಡಿದ್ದಾರೆ ಎಂದು ಗೊತ್ತಾಗಿದೆ.

 

2024ರ ಏಪ್ರಿಲ್‌ 5 ಮತ್ತು 25ರಂದು ಮೈಸೂರು ಮತ್ತು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಈ ಸಲಹೆ ನೀಡಿರುವುದು ಗೊತ್ತಾಗಿದೆ. ಈ ಸಂಬಂಧ ‘ದಿ ಫೈಲ್‌’ಗೆ ಸಭೆ ನಡವಳಿಗಳು ಲಭ್ಯವಾಗಿವೆ.

 

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದಂತೆ 2024ರ ಏಪ್ರಿಲ್‌ 25ರಂದು ನಡೆದಿದ್ದ ಸಭೆಯಲ್ಲಿ ಬಳಕೆದಾರರ ನಿಧಿ ಕುರಿತು ವಿಸ್ತೃತವಾಗಿ (ಸಂಖ್ಯೆ; ಹಿಮ್ಸ್‌/ಪ್ರ.ಪರಿಶೀಲನೆ ಸಭೆಯ ನಡವಳಿಗಳು/2024/25) ಚರ್ಚೆಯಾಗಿದೆ. ಹಾಗೆಯೇ ಆಸ್ಪತ್ರೆಯ ಹೊರ ಮತ್ತು ಒಳ ರೋಗಿಗಳ ಶುಲ್ಕ, ಲ್ಯಾಬ್ ಪರೀಕ್ಷೆಗಳ ಶುಲ್ಕ, ರೇಡಿಯಾಲಜಿ ವಿಭಾಗಕ್ಕೆ ಸಂಬಂಧಪಟ್ಟ ಶುಲ್ಕ, ಶಸ್ತ್ರಚಿಕಿತ್ಸೆ ದರಗಳನ್ನು ಪರಿಷ್ಕೃತಗೊಳಿಸುವ ಬಗ್ಗೆಯೂ ಚರ್ಚೆ ನಡೆದಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಶುಲ್ಕ ಹೆಚ್ಚಳ ಮಾಡುವ ಬಗ್ಗೆ ಹಿಮ್ಸ್‌ನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ‘ದರಗಳನ್ನು ಹೆಚ್ಚಳ ಮಾಡಿದರೇ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರತರವಾದ ಪ್ರತಿರೋಧ ವ್ಯಕ್ತವಾಗಲಿದೆ,’ ಎಂದು ತಿಳಿಸಿದ್ದರು.

 

ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ‘ಆಸ್ಪತ್ರೆಯ ಹೊರಗಡೆ ಖಾಸಗಿ ಆಸ್ಪತ್ರೆಗಳ ದರಗಳನ್ನು ಹೋಲಿಕೆ ಮಾಡಿ ಪ್ರಸ್ತುತ ಆಸ್ಪತ್ರೆಯಲ್ಲಿರುವ ದರಗಳೊಂದಿಗೆ ಸಮಜಾಯಿಷಿ ನೀಡಿ. ಆಸ್ಪತ್ರೆ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ/ರೋಗಿಗಳಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸುವ ಸಲುವಾಗಿ ಈ ದರಗಳನ್ನು ಪರಿಷ್ಕೃತಗೊಳಿಸಲಾಗಿದೆ ಎಂದು ಮನವರಿಕೆ ಮಾಡಿಕೊಡಿ,’ ಎಂದು ಸಲಹೆ ನೀಡಿರುವುದು ನಡವಳಿಯಿಂದ ಗೊತ್ತಾಗಿದೆ.

 

 

 

ಹಿಮ್ಸ್‌ನೊಂದಿಗೆ ವಿಲೀನವಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಒಳರೋಗಿ ಮತ್ತು ಹೊರರೋಗಿ, ಹಾಗೂ ಮೇಜರ್‌, ಮೈನರ್‌ ಶಸ್ತ್ರಚಿಕಿತ್ಸೆಗಳ ವಿವರಣೆಯನ್ನು ಅಧಿಕಾರಿಗಳು ನೀಡಿದ್ದರು. ಇದರ ಪ್ರಕಾರ ಹಿಮ್ಸ್‌ ಬೋಧನಾ ಆಸ್ಪತ್ರೆಗೆ ಪ್ರತಿ ನಿತ್ಯ 1300ರಿಂದ 1400 ವರೆಗೆ ಹೊರರೋಗಿಗಳು, 120ರಿಂದ 150 ಒಳರೋಗಿಗಳು ದಾಖಲಾಗುತ್ತಿದ್ದಾರೆ. ದಿನಕ್ಕೆ 20-25ರಿಂದ ಮೇಜರ್‌, 40-50 ಮೈನರ್‌ ಶಸ್ತ್ರಚಿಕಿತ್ಸೆ ನಡೆಯುತ್ತಿವೆ ಎಂಬ ಮಾಹಿತಿಯನ್ನು ಒದಗಿಸಿರುವುದು ತಿಳಿದು ಬಂದಿದೆ.

 

ಬೋಧಕ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಮೇಜರ್‌ ಹಾಗೂ ಮೈನರ್‌ ಶಸ್ತ್ರಚಿಕಿತ್ಸೆಗಳು ಕಡಿಮೆಯಾಗಿರುವುದೇಕೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪ್ರಶ್ನಿಸಿದ್ದರು. ಇದಕ್ಕೆ ಅರವಳಿಕೆ ವಿಭಾಗದಲ್ಲಿ ವೈದ್ಯ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಶಸ್ತ್ರಚಿಕಿತ್ಸೆಗಳು ಕಡಿಮೆಯಾಗಿವೆ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

 

ಅದೇ ರೀತಿ ಸರ್ಕಾರದ ನಿಯಮಗಳನ್ನು ಪಾಲಿಸದೇ ಹಾಗೂ ಮೇಲಾಧಿಕಾರಿಗಳ ಗಮನಕ್ಕೂ ತಾರದೆಯೇ ದಂತ ಚಿಕಿತ್ಸೆ ಮತ್ತು ರೇಡಿಯೋಥೆರಪಿ ವಿಭಾಗಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿರುವ ಕುರಿತು ಚರ್ಚೆಯಾಗಿದೆ. ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ ನಂತರ ಈ ವೈದ್ಯರುಗಳ ನೇಮಕಾತಿಯನ್ನು ಹಿಂಪಡೆಯಲು ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts