ರೂಟ್‌ಸ್ಟಾಕ್‌ನಲ್ಲಿ ಬಹುಕೋಟಿ ಅಕ್ರಮ; ‘ದಿ ಫೈಲ್‌’ ವರದಿ ಬೆನ್ನಲ್ಲೇ ವಾರದೊಳಗೆ ವರದಿ ನೀಡಲು ಸೂಚನೆ

ಬೆಂಗಳೂರು; ದಟ್ಟಾರಣ್ಯಕ್ಕೆ ಮುಳ್ಳು ತಂತಿ, ಕಾಂಕ್ರಿಟ್‌ ಬೇಲಿ ಹಾಕುವ ಸಂಬಂಧ ಜಾರಿಯಾಗಿದ್ದ ರೂಟ್‌ ಸ್ಟಾಕ್‌ ಯೋಜನೆಯಲ್ಲಿ ಅನುದಾನ ದುರ್ಬಳಕೆ ಆಗಿದೆ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆಯು ರಾಜ್ಯಾದ್ಯಂತ ವರದಿ ಪಡೆಯಲು ಮುಂದಾಗಿದೆ.

 

ರೂಟ್‌ ಸ್ಟಾಕ್‌ ಯೋಜನೆಗೆ ಬಿಡುಗಡೆ ಮಾಡಿದ್ದ ಅನುದಾನವು ದುರ್ಬಳಕೆಯಾಗಿತ್ತು ಎಂದು ಸುರೇಂದ್ರ ಉಗಾರೆ ಎಂಬುವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಇದೀಗ ಸಚಿವ ಈಶ್ವರ್‍‌ ಖಂಡ್ರೆ ಅವರ ಸೂಚನೆ ಮೇರೆಗೆ ರೂಟ್‌ ಸ್ಟಾಕ್‌ ಯೋಜನೆಯಲ್ಲಿ ಅನುದಾನ ದುರ್ಬಳಕೆ ಆಗಿರುವುದು ಮತ್ತು ಇಡೀ ಯೋಜನೆ ಸಂಬಂಧ ರೂಪಿಸಿದ್ದ ಕ್ರಿಯಾ ಯೋಜನೆ, ರೂಟ್‌ ಸ್ಟಾಕ್‌ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳೂ  ಸೇರಿದಂತೆ ಮತ್ತಿತರೆ ಅಂಶಗಳನ್ನೊಳಗೊಂಡಂತೆ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು    ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು  ಸೂಚಿಸಿದ್ದಾರೆ.

 

ಪಿಸಿಸಿಎಫ್‌ ಅವರು ರಾಜ್ಯದ ಎಲ್ಲಾ ಮುಖ್ಯ  ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಎಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 2024ರ ಜೂನ್‌ 4ರಂದು ಪತ್ರ ಬರೆದಿದ್ದಾರೆ.

 

ಪತ್ರದಲ್ಲೇನಿದೆ?

 

ರೂಟ್‌ ಸ್ಟಾಕ್‌ ಯೋಜನೆಯಲ್ಲಿ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ದೂರು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವಾರಗಳಲ್ಲಿ ಸಮಗ್ರ ವರದಿ ನೀಡಬೇಕು. ಮತ್ತು 24 ಗಂಟೆಗಳ ಒಳಗಾಗಿ ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು ಎಂದು ಸಚಿವ ಈಶ್ವರ್‍‌ ಖಂಡ್ರೆ ಅವರು ಸೂಚಿಸಿದ್ದಾರೆ.

 

ಈ ಪ್ರಕರಣದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ರೂಟ್‌ ಸ್ಟಾಕ್‌ ಕಾರ್ಯಕ್ರಮದಡಿಯಲ್ಲಿ 2020-21ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಕೈಗೊಂಡ ಮುಳ್ಳು ತಂತಿ ಬೇಲಿ ನಿರ್ಮಾಣ ಕಾಮಗಾರಿ ವಿವರಗಳನ್ನು ಒದಗಿಸಬೇಕು. ವರ್ಷವಾರು ಮಾಹಿತಿಯೊಂದಿಗೆ ಸಲ್ಲಿಸಬೇಕು. ಇದರೊಂದಿಗೆ ಆಯಾ ವರ್ಷದಲ್ಲಿ ಮಂಜೂರಾದ ಕ್ರಿಯಾ ಯೋಜನೆ, ಅಂದಾಜುಪಟ್ಟಿಗಳು, ನೆಡುತೋಪು ಜರ್ನಲ್‌ಗಳ ನಕಲು ಪ್ರತಿ, ಮುಳ್ಳು ತಂತಿ ಬೇಲಿ ನಿರ್ಮಾಣ ಮಾಡಲಾದ ನಕಾಶೆ ಮತ್ತು ಇತರೆ ದಾಖಲಾತಿಗಳನ್ನು ವಿಭಾಗಗಳಿಂದ ಪಡೆದು ಕ್ರೋಢಿಕರಿಸಿ ವೃತ್ತವಾರು ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ರೂಟ್‌ ಸ್ಟಾಕ್‌ ಯೋಜನೆಗೆ ಸಂಬಂಧದ ನೂರಾರು ಕೋಟಿ ರು ಮೊತ್ತದ ಅನುದಾನವನ್ನು ಅರಣ್ಯಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.  ಈ ಸಂಬಂಧ ಬೆಳಗಾವಿ ಮೂಲದ ಸುರೇಂದ್ರ ಉಗಾರೆ  ಎಂಬುವರು ಲೋಕಾಯುಕ್ತ, ಅರಣ್ಯ ಸಚಿವ ಈಶ್ವರ್‍‌ ಖಂಡ್ರೆ ಅವರಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರು.

 

ನೆಡು ತೋಪು ನಿರ್ಮಾಣ, ಜಿಪಿಎಸ್ ಆಧರಿತ ಗಡಿ ನಿಗದಿ, ತಂತಿ ಬೇಲಿ, ಸಿಮೆಂಟ್‌ ಕಂಬ ಮತ್ತು ಮುಳ್ಳು ತಂತಿ ಅಳವಡಿಕೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಲ್ಲಿ ಅರಣ್ಯ ಇಲಾಖೆಯ ಯಾವೊಂದು ನಿಯಮವೂ ಪಾಲನೆಯಾಗಿಲ್ಲ. ಅಧಿಕಾರಿಗಳು ಅರಣ್ಯ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ ಸರ್ಕಾರದ ಅನುದಾನವನ್ನು ಕಬಳಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ನೀಡಿದ್ದ ದೂರಿನಲ್ಲಿ ಉಗಾರೆ ಅವರು ವಿವರಿಸಿದ್ದರು.

 

‘ಇಲಾಖೆಯ ಸಂಪೂರ್ಣ ಅನುದಾನ ದುರುಪಯೋಗವಾಗಿದೆ. ಸರ್ಕಾರಿ ಹಣವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಲ್ಲ. ಬದಲಿಗೆ ಕಬಳಿಸಿಕೊಂಡು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ,’ ಎಂದು ದೂರಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ಹೆಸರುಗಳನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದರು.  2022-23ನೇ ಸಾಲಿನಲ್ಲಿ ಕಲಕೇರಿ ಬ್ಲಾಕ್‌ ನಂ 7, ಸರ್ವೆ ನಂಬರ್‍‌ 114, 112, 49,96,700 ರು., 11, 61, 248 ರು., 4,88, 419 ರು., ಮೊತ್ತದ ಕಾಮಗಾರಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.

 

 

2023-24ರಲ್ಲಿ ಇದೇ ಬ್ಲಾಕ್‌ನಲ್ಲಿ 17, 44,500 ರು., ಸೇರಿ ಒಟ್ಟಾರೆ 83, 90, 867 ರು ಮೊತ್ತದ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು.

 

ಈ ಅನುದಾನವನ್ನು ಬಳಸಿಕೊಂಡಿರುವ ಅರಣ್ಯಾಧಿಕಾರಿಗಳು ನಿಯಮಗಳ ಪ್ರಕಾರ ಕಾಮಗಾರಿ ನಡೆಸದೇ ಲೂಟಿಗೈದಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದರು.

 

ಜಿಪಿಎಸ್‌ ಅಧಾರಿತ ಕೆಎಂಎಲ್‌ ಫೈಲ್‌ ನಕಾಶೆ ಪ್ರಕಾರ ಬೌಂಡರಿ ನಿಗದಿಪಡಿಸಿ ಸಿಮೆಂಟ್‌ ಕಂಬ ಹಾಕಿ ಮುಳ್ಳುತಂತಿ ಬೇಲಿ ಅಳವಡಿಸಿಲ್ಲ. ನೆಡುತೋಪು ನಿರ್ಮಾಣ ಮಾಡಲು ಸಲ್ಲಿಸಿದ ಪ್ರಸ್ತಾವನೆಯಂತೆ 5600 ಮೀಟರ್‍‌ ಅಳತೆಗನುಣವಾಗಿ ಮುಳ್ಳು ತಂತಿ ಅಳವಡಿಸಿಲ್ಲ. ತಂತಿ ಬೇಲಿ ಕಾಮಗಾರಿ ಅಪೂರ್ಣವಾಗಿರುವ ಕಾರಣ ದನಕರುಗಳು ಪ್ರತಿ ದಿನ ನೆಡುತೋಪಿಗೆ ದಾಳಿಯಿಟ್ಟಿವೆ.

 

ಸ್ವಾಭಾವಿಕ ಅರಣ್ಯ ಸಂರಕ್ಷಿಸಿ ಬೆಳೆಸುವ ಉದ್ದೇಶದಿಂದಲೇ ನಿರ್ಮಾಣ ಮಾಡುವ ನೆಡುತೋಪಿನಲ್ಲಿ ನಾಟಿ ಮಾಡಿದ ಸಸಿಗಳು ಹಾಳಾಗುತ್ತಿವೆ. ನೆಡುತೋಪು ಪ್ರಸ್ತಾವನೆಯಂತೆ 150 ಹೆಕ್ಟೇರ್‍‌ ಕ್ಷೇತ್ರಕ್ಕೆ ಅನುಮೋದನೆ ನೀಡಿದ್ದರೂ ವಾಸ್ತವದಲ್ಲಿ 150 ಹೆಕ್ಟೇರ್‍‌ ಕ್ಷೇತ್ರವಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಪ್ರತಿ 3 ಮೀಟರ್‍‌ಗೆ ಒಂದು ಸಿಮೆಂಟ್‌ ಕಂಬ ಒಟ್ಟು 2,603 ಕಂಬಗಳನ್ನು ಉಪಯೋಗಿಸಿ ಅದರಲ್ಲಿ ಪ್ರತಿ 6 ಕಂಬಳಿಗೆ ಸಪೋರ್ಟ್‌ ಕಂಬಗಳಿರಬೇಕು. ನಾಲ್ಕು ಸಾಲ ಉದ್ದ ಮತ್ತು ಕ್ರಾಸ್‌ ಮಾಡಿದ ಮುಳ್ಳು ತಂತಿಗಳು ಇರಬೇಕು ಎಂಬ ನಿಯಮವಿದೆ. ಆದರೆ ಇದನ್ನು ಪಾಲಿಸಿಲ್ಲ.  ಕೇವಲ 1500 ಕಂಬಗಳನ್ನು ಮಾತ್ರ ಹಾಕಿದ್ದಾರೆ. ಸಪೋರ್ಟ್‌ ಕಂಬಗಳನ್ನು 10 ಮಾತ್ರ ಹಾಕಿರುತ್ತಾರೆ. ಕ್ರಾಸ್‌ ಮುಳ್ಳು ತಂತಿಗಳನ್ನು ಅಳವಡಿಸಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ರೂಟ್‌ಸ್ಟಾಕ್‌ ಯೋಜನೆ ಅನುದಾನ ದುರ್ಬಳಕೆ; ಜಿಪಿಎಸ್‌ ಇಲ್ಲ, ಮುಳ್ಳುಬೇಲಿಯಿಲ್ಲ, ಲೂಟಿಯೇ ಎಲ್ಲ!

4.88 ಲಕ್ಷ ರು ಮೊತ್ತದ ಯೋಜನೆಯ ಪ್ರಕಾರ ನೆಡತೋಪು ಪ್ರದೇಶದಲ್ಲಿ 432 ನೀರು ಇಂಗು ಗುಂಡಿಗಳ ನಿರ್ಮಾಣ ಮಾಡಬೇಕಿತ್ತು. ಆದರೆ 200 ಇಂಗು ಗುಂಡಿಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. 150 ಹೆಕ್ಟೇರ್‍‌ ನೆಡುತೋಪು ಪ್ರದೇಶದಲ್ಲಿ 50 ಹೆಕ್ಟೇರ್‍‌ ಪ್ರದೇಶ ಆಯ್ಕೆ ಮಾಡಲಾಗಿದೆ. ಅದರಲ್ಲಿ 6000 ಸಸಿಗಳನ್ನು ನೆಡಬೇಕಾಗಿದ್ದರೂ ಕದರಲ್ಲಿ 3,000 ಸಸಿಗಳನ್ನು ಮಾತ್ರ ನೆಡಲಾಗಿತ್ತು.

 

‘ನೆಡುತೋಪು ಮಾಡಲು ಯೋಗ್ಯ ಇಲ್ಲದ 1ರಿಂದ 2 ಅಡಿ ಎತ್ತರದ ಸಸಿಗಳನ್ನು ನೆಟ್ಟು ಯೋಜನೆ ರೂಪು ರೇಷೆಗಳನ್ನು ಹಾಳು ಮಾಡಿದ್ದಾರೆ. ನೆಡು ತೋಪು ನಿರ್ಮಾಣ ಮಾಡುವ ಮೊದಲು ಮಣ್ಣು ಪರೀಕ್ಷೆ, ಪೋಷಕಾಂಶ ಪರೀಕ್ಷೆ ಮಾಡಿಸಬೇಕು ಎಂಬ ನಿಯಮವಿದೆ. ಆದರೆ ಇದನ್ನು ಪಾಲಿಸಿಲ್ಲ,’ ಎಂದು ಹೂಗಾರೆ ಅವರು ಆರೋಪಿಸಿದ್ದರು.

 

ಕಾಮಗಾರಿ ಉಸ್ತುವಾರಿ ವಹಿಸಿದ ಉಪ ವಲಯ ಅರಣ್ಯಾಧಿಕಾರಿ ಸಹಿ ಇಲ್ಲದೇ ಬಿಲ್‌ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರ ಸಹಿ ಇಲ್ಲದೇ ಬಿಲ್‌ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರು ಒಡಂಬಡಿಕೆ ಪತ್ರ ಮಾಡಿಕೊಳ್ಳದೇ ಬಿಲ್‌ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರ ಸಭೆ ನಡವಳಿ ಇಲ್ಲ, ಈ ಸಭೆಯಲ್ಲಿ ತೀರ್ಮಾನಿಸಿದ ಸಂಧಾನ ಮಾಡಿ ಮಂಜೂರಾದ ಮೊತ್ತವನ್ನು ನೇರವಾಗಿ ಗುತ್ತಿಗೆದಾರರಾರಿಗೆ ಬಿಲ್‌ ಮಾಡಲಾಗಿದೆ ಎಂದು ದೂರಿದ್ದರು.

 

 

ಎಫ್‌ಎನ್‌ಬಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಶೇ. 10 ಚೆಕ್‌ ಮೆಜರ್‍‌ಮೆಂಟ್‌ ಮಾಡದೇ ಕ್ಷೇತ್ರ ತಪಾಸಣೆ ಮಾಡದೇ ಬಿಲ್‌ ಮಂಜೂರು ಮಾಡಿದೆ. ನೆಡುತೋಪು ಕಾಮಗಾರಿಯಲ್ಲಿ ಸಂಬಂಧಿಸಿದ ಉಪ ವಲಯ ಅರಣ್ಯಾಧಿಕಾರಿ ಕಲಕೇರಿ ಶಾಖೆ ಇವರು ಶೇ 100ರಷ್ಟು ಕೆಲಸ ನೋಡಿ ಖಾತ್ರಿಪಡಿಸಿಕೊಂಡು ಅರಣ್ಯ ಅಳತೆ ಪುಸ್ತಕದಲ್ಲಿ ದಾಖಲಿಸಿ ಸಹಿ ಮಾಡಬೇಕು. ನಂತರ ವಲಯ ಅರಣ್ಯಾಧಿಕಾರಿಯವರು ಶೇ. 100ರಷ್ಟು ಕೆಲಸ ನೋಡಿ ಖಾತರಿಪಡಿಸಿಕೊಂಡು ಪುಸ್ತಕದಲ್ಲಿ ಸಹಿ ಮಾಡಬೇಕಕು. ಈ ರೀತಿ ನಿಯಮವಿದ್ದರೂ ಅಧಿಕಾರಿಗಳು ಇದಾವುದನ್ನೂ ಮಾಡದೇ ಅರಣ್ಯ ಗುತ್ತಿಗೆದಾರನಿಗೆ ಇಲಾಖೆಯ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಆಪಾದಿಸಿದ್ದರು.

 

 

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಷ್ಣಿ, ಉಪ ವಲಯ ಅರಣ್ಯಾಧಿಕಾರಿ ಪರಶುರಾಮ ಮಣಕೂರು, ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ, ರಾಮಲಿಂಗಪ್ಪ ಉಪ್ಪಾರ, ಪರಿಮಳ ಹುಲಗಣ್ಣವರ ಮತ್ತಿತರರು ಅರಣ್ಯ ಗುತ್ತಿಗೆದಾರರ ಜೊತೆ ಕೈಗೂಡಿಸಿ ಅಪೂರ್ಣ ನೆಡುತೋಪು ಕಾಮಗಾರಿಯನ್ನು ಮಾಡಿದ್ದಾರೆ. ಇವರು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ. ಈ ಎಲ್ಲ ಅಕ್ರಮಗಳಲ್ಲಿ ಭಾಗಿಯಾದ ಅರಣ್ಯ ಅಧಿಕಾರಿಗಳು ಪ್ರಭಾವಿಗಳು ಆಗಿರುವುದರಿಂದ ಈ ಕೂಡಲೇ ತನಿಖೆ ನಡೆಸಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts