ಭೂ ಒಡೆತನ; ಅನುದಾನ ಕೊರತೆ ನೀಗಿಸಲು ಬಳಕೆಯಾಗದೇ ಬಾಕಿ ಇದ್ದ 78.53 ಕೋಟಿ ರು ಬಳಸಿದ್ದ ಸರ್ಕಾರ

ಬೆಂಗಳೂರು; 2023-24ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ ಜಿಲ್ಲೆಗಳಲ್ಲಿ ಬಳಕೆಯಾಗದೇ ಬಾಕಿ ಇದ್ದ ಅನುದಾನವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಳಸಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

2023-24ನೇ ಸಾಲಿನಲ್ಲಿಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದಾಗಿ ವಿವಿಧ ಇಲಾಖೆಗಳಲ್ಲಿ ಅನುದಾನ ಕೊರತೆಯಾಗಿತ್ತು ಎಂದು ಪ್ರತಿಪಕ್ಷಗಳು ಆರೋಪಿಸಿದ್ದರ  ಬೆನ್ನಲ್ಲೇ ಭೂ ಒಡೆತನ ಯೋಜನೆ ಅನುಷ್ಠಾನಗೊಳಿಸಲು ಬಳಕೆಯಾಗದೇ ಬಾಕಿ ಇದ್ದ ಅನುದಾನ ಬಳಸಿತ್ತು  ಎಂಬುದು ಮುನ್ನೆಲೆಗೆ ಬಂದಿದೆ.

 

ಈ ಕುರಿತು ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ; ADCL/LPS/OTH/21/-2024-COMPUTER NUMBER 1337091) ಲಭ್ಯವಾಗಿವೆ.

 

ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಸಮೃದ್ಧಿ, ಐರಾವತ, ಮೈಕ್ರೋ ಕ್ರೆಡಿಟ್‌, ಪ್ರೇರಣ, ಭೂ ಒಡೆತನ ಯೋಜನೆ ಸಾಲ ಮತ್ತು ಸಹಾಯಧನಕ್ಕೆಂದು ನೀಡಿದ್ದ ಅನುದಾನವನ್ನು 2023-24ನೇ ಸಾಲಿನಲ್ಲಿ ಸಂಪೂರ್ಣವಾಗಿ ಖರ್ಚು ಮಾಡಿರಲಿಲ್ಲ. 2024ರ ಫೆ.15ರ ಅಂತ್ಯಕ್ಕೆ ಒಟ್ಟಾರೆ 78.53 ಕೋಟಿ ರು. ಸರ್ಕಾರಕ್ಕೆ ವಾಪಸ್‌ ಬಂದಿತ್ತು ಎಂಬುದು ತಿಳಿದು ಬಂದಿದೆ.

 

ಭೂ ಒಡೆತನ ಯೋಜನೆ ಅಡಿಯಲ್ಲಿ ಈಗಾಗಲೇ ಮಂಜೂರಾತಿಯಾಗಿದ್ದ 331 ಪ್ರಸ್ತಾವನೆಗಳಿಗೂ ಅನುದಾನ ಹೊಂದಿಸಲು ಹರಸಾಹಸ ಪಟ್ಟಿತ್ತು. ಈ 331 ಪ್ರಸ್ತಾವನೆಗಳಿಗೆ 36.37 ಕೋಟಿ ರು. ಬಿಡುಗಡೆ ಮಾಡಬೇಕಿತ್ತು. ಇದರಲ್ಲಿ ಶೇ.20ರಷ್ಟು ಹಣ ಬಿಡುಗಡೆ ಮಾಡುವ ಪ್ರಸ್ತಾವನೆಗಳಿಗೆ 2.35 ಕೋಟಿಗಳಾದರೂ ಬೇಕಿತ್ತು.

 

ಅಲ್ಲದೇ ಮಂಜೂರಾತಿಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿಗೆ 290 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡಲು 127.83 ಕೋಟಿ ರು ಅನುದಾನದ ಅವಶ್ಯಕತೆ ಇತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಒಟ್ಟಾರೆಯಾಗಿ ಈ ಯೋಜನೆಯಡಿ 166.55 ಕೋಟಿ ರು. ಮೊತ್ತದ ಪ್ರಸ್ತಾವನೆಗಳು ಕೇಂದ್ರ ಕಚೇರಿಗೆ ಸಲ್ಲಿಕೆಯಾಗಿದ್ದವು. ಹಣ ಲಭ್ಯವಿಲ್ಲದಿದ್ದ ಕಾರಣದಿಂದಲೇ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಅದೇ ರೀತಿ 2023-24ನೇ ಸಾಲಿನಲ್ಲಿ 20.00 ಕೋಟಿ ರು. ಅನುದಾನ ನಿಗದಿಪಡಿಸಿತ್ತಾದರೂ ಅದರಲ್ಲಿ 2024ರ ಫೆ.17ರವರೆಗೆ ಸ್ವಯಂ ಉದ್ಯೋಗ ಯೋಜನೆಯಡಿ 10.00 ಕೋಟಿ ರು. ಲಭ್ಯವಿತ್ತು.

 

ಅಲ್ಲದೇ ಜಿಲ್ಲೆಗಳಲ್ಲಿ ಬಳಕೆಯಾಗದೇ ಬಾಕಿ ಇರುವ ಅನುದಾನವು ವಾಪಸ್‌ ಬಂದಿತ್ತು. ಮತ್ತು ಕೇಂದ್ರ ಕಚೇರಿಯಲ್ಲಿ ಖರ್ಚಾಗದೇ ಬಾಕಿ ಇದ್ದ ಅನುದಾನವನ್ನು ಬಳಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ತಿಳಿದು ಬಂದಿದೆ.

 

ಗಂಗಾ ಕಲ್ಯಾಣ ಯೋಜನೆಯಡಿ 19.02 ಕೋಟಿ ರು., ಸ್ವಯಂ ಉದ್ಯೋಗ ಯೋಜನೆಯಡಿ 35.60 ಕೋಟಿ, ಸಮೃದ್ಧಿ ಯೋಜನೆ 3.38 ಕೋಟಿ, ಐರಾವತಾ ಯೋಜನೆ 3.42 ಕೋಟಿ, ಮೈಕ್ರೋ ಕ್ರೆಡಿಟ್‌ ಪ್ರೇರಣ ಕಿರು ಸಾಲದಡಿ 6.45 ಕೋಟಿ, ಮತ್ತೊಂದು ಲೆಕ್ಕ ಶೀರ್ಷಿಕೆಯಿಂದ ಇದೇ ಯೋಜನೆಯಲ್ಲಿ 4.52 ಕೋಟಿ, ಭೂ ಒಡೆತನ ಯೋಜನೆಯ ಸಹಾಯಧನದಡಿ ಇದ್ದ 2.98 ಕೋಟಿ, ಭೂ ಒಡೆತನ ಯೋಜನೆಯ ಸಾಲ ನೀಡುವ 3.12 ಕೋಟಿ ರು ಸೇರಿ ಒಟ್ಟಾರೆ 78.53 ಕೋಟಿ ರು. ಸರ್ಕಾರಕ್ಕೆ ವಾಪಸ್‌ ಬಂದಿತ್ತು ಎಂಬುದು ಗೊತ್ತಾಗಿದೆ.

 

ಅದೇ ರೀತಿ 2018-19 ಮತ್ತು 2019-20ನೇ ಸಾಲಿನಲ್ಲಿಯೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನವನ್ನೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿರಲಿಲ್ಲ. ಹೀಗಾಗಿ ಈ ಸಾಲಿನಲ್ಲಿ ಖರ್ಚು ಮಾಡದೇ ಬಾಕಿ ಉಳಿದಿದ್ದ 35.41 ಕೋಟಿ ರು.ಗಳನ್ನೂ ಬಳಸಿಕೊಳ್ಳಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಒಟ್ಟಾರೆ ಜಿಲ್ಲೆಗಳಿಂದ ಒಂದೇ ಲೆಕ್ಕಶೀರ್ಷಿಕೆಯಡಿಯಲ್ಲಿ 48.52 ಕೋಟಿ ಹಾಗೂ ಕೇಂದ್ರ ಕಚೇರಿಯಲ್ಲಿ ವಿವಿಧ ಯೋಜನೆಗಳಡಿ ಬಳಕೆಯಾಗದೇ ಉಳಿಕೆಯಾಗಿದ್ದ ಅನುದಾನ 35.41 ಕೋಟಿ ರು ಸೇರಿ ಒಟ್ಟಾರೆಯಾಗಿ 83.93 ಕೋಟಿ ರು.ಗಳು ಲಭ್ಯವಿತ್ತು. ಈ ಯೋಜನೆಗೆ ಅನುದಾನ ಹೊಂದಿಸುವುದಕ್ಕೆ  ಸಂಬಂಧಿಸಿದಂತೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ವಾಸ್ತವ ಪರಿಸ್ಥಿತಿ ಕುರಿತು ವಿವರಿಸಿದ್ದರು ಎಂದು ಗೊತ್ತಾಗಿದೆ.

 

ಈ ಮಧ್ಯೆ ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮವು ಭೂ ಒಡೆತನ ಯೋಜನೆ, ನೇರ ಸಾಲ, ಗಂಗಾ ಕಲ್ಯಾಣ ಯೋಜನೆಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ನಿಗಮದಲ್ಲಿ ಲಭ್ಯವಿದ್ದ ನಾನ್‌ ಕಮಿಟಡ್‌ ರೂಪದಲ್ಲಿದ್ದ 100.00 ಕೋಟಿ ರು ಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಾಕಿ ಇದ್ದ ಭೂ ಒಡೆತನ ಯೋಜನೆಯ 60 ಫಲಾನುಭವಿಗಳಿಗೆ 7.65 ಕೋಟಿ ರು. ಮಂಜೂರು ಮಾಡಿತ್ತು.

 

ಬಾಕಿ ಉಳಿದ 92.35 ಕೋಟಿ ರು.ಗಳನ್ನು ಉಳಿದ ಜಿಲ್ಲೆಗಳಿಗೆ ಭೂ ಒಡೆತನ ಯೋಜನೆಗೆ 27.71 ಕೋಟಿ ರು., ಗಂಗಾ ಕಲ್ಯಾಣ ಯೋಜನೆಗೆ 27.71 ಕೋಟಿ, ಸ್ವಾವಲಂಬಿ ಸಾರಥಿ ಯೋಜನೆಗೆ 13.85 ಕೋಟಿ ರು., ಸ್ವಯಂ ಉದ್ಯೋಗ ಯೋಜನೆಗೆ ನೇರ ಸಾಲ 13.85 ಕೋಟಿ ರು., ಐಇಸಿ ಚಟುವಟಿಕೆಗಳಿಗೆ 9.23 ಕೋಟಿ ರು. ಮಂಜೂರು ಮಾಡಿ 2024ರ ಮಾರ್ಚ್‌ 13ರಂದು ಆದೇಶ ಹೊರಡಿಸಿತ್ತು ಎಂಬುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts