ಬೆಂಗಳೂರು; ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನಲ್ಲಿರುವ ಕೃಷಿ ಇಲಾಖೆಯ ಆವರಣದಲ್ಲಿ ಕ್ರಿಡಿಲ್ ಅಧೀನದಲ್ಲಿ ಕಾಮಗಾರಿ ನಡೆಸಿದ್ದರ ಹಣ ಬಂದಿಲ್ಲ ಎಂಬುದು ಸೇರಿದಂತೆ ಇನ್ನಿತರೆ ಕಾರಣಗಳನ್ನು ಮುಂದೊಡ್ಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವು ರಾಜಕೀಯದಲ್ಲಿ ತಲ್ಲಣ ಎಬ್ಬಿಸಿರುವ ಬೆನ್ನಲ್ಲೇ ಸಂತೆಬೆನ್ನೂರಿ ಗುತ್ತಿಗೆದಾರ ಪಿ ಎಸ್ ಗೌಡರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.
ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘವು ಇತ್ತೀಚೆಗಷ್ಟೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಹಣ ಬಂದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಗುತ್ತಿಗೆದಾರ ಪಿ ಎಸ್ ಗೌಡರ್ ಎಂಬಾತನ ಆತ್ಮಹತ್ಯೆ ಪ್ರಕರಣವು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ನೀಡಿದಂತಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗುತ್ತಿಗೆದಾರ ಪಿ ಎಸ್ ಗೌಡರ್ ಎಂಬಾತ ಡೆತ್ ನೋಟ್‌ವೊಂದನ್ನು ಬರೆದಿಟ್ಟಿದ್ದಾರೆ. ಕಾಮಗಾರಿ ನಡೆಸಿದ್ದರ ಹಣ ಬಂದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಇದನ್ನಾಧರಿಸಿ ಗೌಡರ್ ಅವರ ಪತ್ನಿ ವಸಂತಕುಮಾರಿ ಅವರು ಠಾಣೆಗೆ ದೂರು ನೀಡಿದ್ದಾರೆ. ಇದನ್ನಾಧರಿಸಿ ಕ್ರಿಡಿಲ್‌ನ ಗೌಡರ್ ಶ್ರೀನಿವಾಸ್ ಸೇರಿದಂತೆ 5 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧೀನದಲ್ಲಿ ಕ್ರಿಡಿಲ್ ಕಾರ್ಯನಿರ್ವಹಿಸುತ್ತಿದೆ. ಪಿ ಎಸ್ ಗೌಡರ್ ಆತ್ಮಹತ್ಯೆ ಪ್ರಕರಣದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪಿ ಎಸ್ ಗೌಡರ್ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಮತ್ತು ಎಫ್‌ಐಆರ್ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಡೆತ್ ನೋಟ್‌ನಲ್ಲೇನಿದೆ?
ನನ್ನ ಸಾವಿಗೆ ಕಾರಣರಾದವರ ಬಗ್ಗೆ ಸೂಕ್ತ ಕ್ರಮ ಕೈಗಳ್ಳಬೇಕು. ಜಿ ಎಸ್ ನಾಗರಾಜ, ಗೌಡರ್ ಶ್ರೀನಿವಾಸ, (KRIDL (Land Army), ಇಂದುಮತಿ, ಚಿತ್ರಶೇಖರಪ್ಪ ಮತ್ತು ಜಿ ಎಸ್ ನಾಗರಾಜನಿಂದ ಆರ್ಥಿಕ ಮಾನಸಿಕ ಹಿಂಸೆಗೆ ಒಳಪಟ್ಟಿರುತ್ತೇನೆ. ತಮ್ಮ ಶ್ರೀನಿವಾಸನಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ.
ಈತನು ಮನೆಯ ಆಡಳಿತ ಮಾಡುವಾಗ ಸುಮಾರು 30 ರಿಂದ 40 ಲಕ್ಷ ಹಣ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ನನಗೆ ಮೋಸ ಮಾಡಿರುತ್ತಾನೆ. ಇಂದುಮತಿ ಮತ್ತು ಚಿತ್ರಶೇಖರಪ್ಪ ಇವರಿಂದ ಆಸ್ತಿ ವಿಚಾರವಾಗಿ ನಮ್ಮ ಕುಟುಂಬವು ಜೀವಶ್ಚವಾಗಿ ಬದುಕುತ್ತಿದ್ದೇವೆ. ಮತ್ತು KRIDL ಸಂಸ್ಥೆ ಕಾಮಗಾರಿಯ ಮೊತ್ತ ನೀಡಿದೇ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ಗುತ್ತಿಗೆದಾರ ಪಿ ಎಸ್ ಗೌಡರ್ ಡೆತ್‌ನೋಟ್‌ನಲ್ಲಿ ಬರೆದಿರುವುದು ಗೊತ್ತಾಗಿದೆ.
‘ಕ್ರಿಡಿಲ್ ಅಡಿಯಲ್ಲಿ ಒಂದು ಕಾಮಗಾರಿ ನಿರ್ವಹಿಸಿದ್ದು (ಕೃಷಿ ಇಲಾಖೆ ಆವರಣ, ಸಂತೆಬೆನ್ನೂರು) ಇದನ್ನು 2023-24ನೇ ಸಾಲಿನಲ್ಲಿ ಕೆಲಸ ಪೂರ್ಣಗೊಂಡಿದೆ. ಆದರೆ ಇದುವರೆಗೂ ನನಗೆ ಕಾಮಗಾರಿ ಮೊತ್ತವನ್ನು ನೀಡದೇ ಮಾನಸಿಕವಾಗಿ ಹಿಂಸೆ ಹಿಂಸೆ ನೀಡಿರುತ್ತಾರೆ. ಹಾಗೂ ಈ ಸಂಸ್ಥೆಯಿಂದ ನನ್ನ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಒದಗಿಸಿಕೊಡಬೇಕು,’ ಎಂದು ಡೆತ್ ನೋಟ್‌ನಲ್ಲಿ ಕೋರಿರುವುದು ತಿಳಿದು ಬಂದಿದೆ.
ಎಫ್‌ಐಆರ್‍ನಲ್ಲೇನಿದೆ?
‘ನನ್ನ ಗಂಡ ಕ್ರಿಡಿಲ್ (KRIDL (Land Army) ಅಧೀನದಲ್ಲಿ ಸಂತೆಬೆನ್ನೂರಿನ ಕೃಷಿ ಇಲಾಖೆಯ ಆವರಣದಲ್ಲಿ ಕಾಮಗಾರಿ ನಡೆಸಿದ್ದರು. ಇದರ ಬಾಬ್ತು ಹಣ ಬಂದಿರಲಿಲ್ಲ. ಈ ಬಗ್ಗೆ ನನ್ನ ಗಂಡ ಮಾನಸಿಕವಾಗಿ ನೊಂದಿದ್ದರು,’ ಎಂದು ಪಿ ಎಸ್ ಗೌಡರ್ ಅವರ ಪತ್ನಿ ವಸಂತಕುಮಾರಿ ಅವರು ಸಹ ಡೆತ್‌ನೋಟ್‌ನಲ್ಲಿನ ಅಂಶಗಳನ್ನೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗೌಡರ್ ಶ್ರೀನಿವಾಸ, (ಕ್ರಿಡಿಲ್, ಲ್ಯಾಂಡ್ ಅರ್ಮಿ) ಇಂದುಮತಿ, ಚಿತ್ರಶೇಖರಪ್ಪ, ಜಿ ಎಸ್ ನಾಗರಾಜ ಎಂಬುವರಿಂದ ಆರ್ಥಿಕ, ಮಾನಸಿಕ ಹಿಂಸೆಗೆ ಒಳಪಟ್ಟಿರುತ್ತೇನೆ. ಕ್ರಿಡಿಲ್ ಸಂಸ್ಥೆಯ ಕಾಮಗಾರಿಯ ಮೊತ್ತ ನೀಡಿದೇ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕೌಟುಂಬಿಕ ವ್ಯಾಜ್ಯವೂ ಇತ್ತು
ಗುತ್ತಿಗೆದಾರ ಪಿ ಎಸ್ ಗೌಡರ್ ಅವರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಸಿದ್ದಲಿಂಗಪ್ಪ ಅವರ ಮಗ. ಆಸ್ತಿ ಹಂಚಿಕೆ ವಿಚಾರದಲ್ಲಿ ಸೋದರರ ನಡುವೆ ಮನಸ್ತಾಪವಿತ್ತು. ಈ ಬಗ್ಗೆ ಹಲವು ಬಾರಿ ಸ್ಥಳೀಯ ಮಟ್ಟದಲ್ಲಿ ಪಂಚಾಯ್ತಿ ನಡೆದಿತ್ತು. ಅಲ್ಲದೇ ದೈಹಿಕ ಹಲ್ಲೆಯೂ ನಡೆದಿತ್ತು ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಿ ಎಸ್ ನಾಗರಾಜ ಮೊದಲ ಆರೋಪಿಯಾಗಿದ್ದರೇ, ಗೌಡರ್ ಶ್ರೀನಿವಾಸ, ಇಂದುಮತಿ, ಚಿತ್ರಶೇಖರಪ್ಪ, ಕ್ರಿಡಿಲ್ ಸಂಸ್ಥೆಯನ್ನೂ ಆರೋಪಿಯನ್ನಾಗಿಸಲಾಗಿದೆ.