ಅನುದಾನ ಕೊರತೆ, ಪಾಲನೆಯಾಗದ ಮಾನದಂಡ; ಪ್ರಸಕ್ತ ಸಾಲಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾತಿಗೂ ಕಷ್ಟ

ಬೆಂಗಳೂರು; ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಮಾನದಂಡಗಳ ಅನ್ವಯ ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಯ ಮತ್ತು ಸಂಶೋಧನಾ ಸಂಸ್ಥೆಗೆ ಇದೇ ಜುಲೈ ತಿಂಗಳ ಒಳಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸದೇ ಇದ್ದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪ್ರವೇಶಾತಿಗೆ ಅನುಮತಿ ದೊರಕುವುದಿಲ್ಲ.

 

ಹೀಗೆಂದು ಎನ್‌ಎಂಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಎನ್‌ಎಂಸಿ ಈಗಾಗಲೇ ನೋಟೀಸ್‌ ಕೂಡ ಜಾರಿಗೊಳಿಸಿದೆ. ಈ ಕುರಿತು ಸ್ಥಳೀಯ ಮಟ್ಟದಲ್ಲಿ ಸಭೆ ಕೂಡ ನಡೆದಿದೆ. ಆದರೂ ಸರ್ಕಾರ ಮಾತ್ರ ಮೂಲಸೌಕರ್ಯಗಳನ್ನು ಒದಗಿಸುವುದರತ್ತ ಗಮನ ಹರಿಸಿಲ್ಲ. ಹೀಗಾಗಿ ಎನ್‌ಎಂಸಿಗೆ ದಂಡದ ರೂಪದಲ್ಲಿ 15 ಲಕ್ಷ ರು.ಗಳನ್ನು ಪಾವತಿಸಬೇಕಿದೆ.

 

ಅಲ್ಲದೇ ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯನ್ನಾಗಿಸಿರುವ ಆದೇಶವನ್ನೂ ಎನ್‌ಎಂಸಿಗೆ ರವಾನಿಸಿಲ್ಲ. ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದಂತೆ ಇದೇ ಧೋರಣೆ ಮುಂದುವರೆದರೆ ಪ್ರಸಕ್ತ 2024-25ನೇ ಸಾಲಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯುವುದು ಕಷ್ಟಸಾಧ್ಯವಾಗಲಿದೆ. ಇದರಿಂದ ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಲಭಿಸುವುದಿಲ್ಲ. ಅವರು ವೈದ್ಯರಾಗುವ ಕನಸು ನುಚ್ಚು ನೂರಾಗಲಿದೆ.

 

ಈ ಸಂಬಂಧ ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷಾಧಿಕಾರಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 2024ರ ಮೇ 24ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಕಳೆದ ಒಂದು ವರ್ಷದಲ್ಲಿ ರಾಜ್ಯದ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಲು, ಮೂಲಸೌಕರ್ಯ ಅಭಿವೃದ್ದಿಪಡಿಸಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನೂರಾರು ಪ್ರಗತಿಯ ಹೆಜ್ಜೆಗಳನ್ನು ಇರಿಸಲಾಗಿದೆ ಎಂದು ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಸಿಎಂಸಿಆರ್‍‌ಐನ ವಿಶೇಷಾಧಿಕಾರಿ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ರಾಜ್ಯದಲ್ಲಿ ಆರೋಗ್ಯ ಮೂಲ ಸೌಕರ್ಯದ ಬಲವರ್ಧನೆಗಾಗಿ ಹೊಸದಾಗಿ ಮೆಡಿಕಲ್ ಕಾಲೇಜುಗಳನ್ನು ಹಿಂದಿನ ಸರ್ಕಾರವು ಆರಂಭಿಸಿತ್ತು. ಇದಕ್ಕೆ ಪೂರಕವಾಗಿ 500 ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ಹಿಂದಿನ ಬಿಜೆಪಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೂ ಎನ್‌ಎಂಸಿ ಮಾನದಂಡಗಳ ಅನ್ವಯ ಮೂಲಸೌಕರ್ಯಗಳನ್ನು ಒದಗಿಸಿರಲಿಲ್ಲ.

 

‘ಈ ಹಿಂದೆ ಕರ್ನಾಟಕ ಸರ್ಕಾರವು ಪತ್ರದಲ್ಲಿ ತಿಳಿಸಿರುವ ಅಂಶಗಳನ್ನೊಳಗೊಂಡಂತೆ ಸಂಕ್ಷಿಪ್ತ ವಿವರಣೆಯೊಂದಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಭರಿಸಿ ಎನ್‌ಎಂಸಿಗೆ ಒದಗಿಸಲು ಸೂಚಿಸಿರುತ್ತಾರೆ. ಅಲ್ಲದೇ ಜುಲೈ ತಿಂಗಳ ಕೊನೆ ವಾರದಲ್ಲಿ ಮತ್ತೊಮ್ಮೆ ನೇರ ಸಂದರ್ಶನ ಪರೀಕ್ಷೆ ಕೈಗೊಂಡು ಎನ್‌ಎಂಸಿಯ ಮಾನದಂಡಗಳ ಅನ್ವಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇದ್ದಲ್ಲಿ ಮುಂದಿನ 2024-25ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪ್ರವೇಶಾತಿಗೆ ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿರುತ್ತಾರೆ,’ ಎಂದು ವಿಶೇಷಾಧಿಕಾರಿ ಯುವರಾಜ್‌ ಅವರು ಸರ್ಕಾರದ ಗಮನಕ್ಕೆ ತಂದಿರುವುದು ಪತ್ರದಿಂದ ತಿಳಿದು ಬಂದಿದೆ.

 

ಎಸ್‌ಆರ್‍‌ ಟ್ಯೂಟರ್ಸ್‌ ಸೇರಿದಂತೆ ಇನ್ನಿತರೆ ವಿಭಾಗದಲ್ಲಿ ಬೋಧಕವರ್ಗವಿರುವುದಿಲ್ಲ. ಹಾಸಿಗೆ ಸಾಮರ್ಥ್ಯವು ಸಮರ್ಪಕವಾಗಿಲ್ಲ. ರಕ್ತ ನಿಧಿ ಬ್ಯಾಂಕ್‌ ಪರವಾನಿಗೆ ಮುಕ್ತಾಯಗೊಂಡಿದೆ. ಹೆಮಾಟಾಲಜಿ, ಕ್ಲಿನಿಕಲ್‌ ಪೆಥಾಲಜಿ, ಬಯೋ ಕೆಮಿಸ್ಟ್ರಿ, ಸಿರೋಲಜಿಗೆ ಸಂಬಂಧಿಸಿದಂತೆ ನೀಡಿರುವ ದತ್ತಾಂಶಗಳು ಅವಾಸ್ತವಿಕವಾಗಿವೆ. ಎಕ್ಸ್‌ರೇ, ಸಿಟಿ ಸ್ಕ್ಯಾನ್‌ ನಡೆಯುತ್ತಿದ್ದರೂ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೇ ಎಕ್ಸ್‌ ರೇ ಸೇವೆಗಳು ಹಲವು ಕೊರತೆಗಳಿಂದ ಕೂಡಿವೆ. ಎಂಆರ್‍‌ಐಗೆ ಸಂಬಂಧಿಸಿದಂತೆ ನೀಡಿರುವ ದತ್ತಾಂಶಗಳು ಅತ್ಯಂತ ಅವಾಸ್ತವಿಕತೆಯಿಂದ ಕೂಡಿವೆ ಎಂದು ಎನ್‌ಎಂಸಿಯು ನೋಟೀಸ್‌ ಜಾರಿಗೊಳಿಸಿತ್ತು.

 

ಈ ಕುರಿತು ಸ್ಥಳೀಯ ಮಟ್ಟದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿತ್ತು. 150 ವಿದ್ಯಾರ್ಥಿಗಳಿಗೆ ಪ್ರತಿ 10 ವಿದ್ಯಾರ್ಥಿಗಳಿಗೆ ತಲಾ 1 ಮೃತ ದೇಹದಂತೆ ಒಟ್ಟು 15 ಮೃತ ದೇಹಗಳನ್ನು ಬಳಸುವುದು. ಜಿಲ್ಲಾ ಆಸ್ಪ್ರೆಯನ್ನು ಸಿಎಂಸಿಆರ್‍‌ಐನ ಬೋಧಕ ಆಸ್ಪತ್ರೆಯಾಗಿ ಹಸ್ತಾಂತರಿಸಿ ಆದೇಶವನ್ನು ಎನ್‌ಎಂಸಿಗೆ ರವಾನಿಸುವುದರ ಕುರಿತು ಚರ್ಚೆಯಾಗಿದೆ.

 

ಅದೇ ರೀತಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿ ಬೋಧಕ ಸಿಬ್ಬಂದಿಗಳನ್ನು ಎಂಬಿಬಿಎಸ್‌ನಲ್ಲಿ ಬಯೋ ಮೆಟ್ರಿಕ್ಸ್‌ನಲ್ಲಿ ನೋಂದಾಯಿಸಬೇಕಿದೆ. ಸಮುದಾಯ ವೈದ್ಯಶಾಸ್ತ್ರ ವಿಭಾಗದಿಂದ ಕುಟುಂಬ ದತ್ತು ಕಾರ್ಯಕ್ರಮವನ್ನು ನಿಷ್ಠೆಯಿಂದ ಅಂಕಿ ಸಂಖ್ಯೆಯೊಂದಿಗೆ ಕಾರ್ಯರೂಪಗೊಳಿಸಬೇಕು. ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಪರವಾನಿಗೆಯನ್ನು ನವೀಕರಣ ಮಾಡಿಸಬೇಕು. ಎನ್‌ಎಂಸಿಗೆ ದಂಡದ ರೂಪದಲ್ಲಿ 15 ಲಕ್ಷ ರು.ಗಳನ್ನು ಕೂಡಲೇ ಪಾವತಿಸಬೇಕಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪೆಥಾಲಜಿ, ಮೈಕ್ರೋ ಬಯೋಲಜಿ, ಫಾರ್ಮಕೋಲಜಿ, ಫೋರೆನ್ಸಿಕ್‌ ಮೆಡಿಸಿನ್‌ ಮತ್ತು ಟಾಕ್ಸಿಕೋಲಜಿ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗಗಳ ಪ್ರಯೋಗಾಲಯಗಳನ್ನು ಅವಶ್ಯ ಯಂತ್ರೋಪಕರಣ ಮತ್ತು ಸಾಮಗ್ರಿಗಳೊಂದಿಗೆ ಸೃಜಿಸಬೇಕಿದೆ.

 

ಕೇಂದ್ರೀಯ ಗ್ರಂಥಾಲಯ, ವಿಭಾಗಗಳ ಗ್ರಂಥಾಲಯಗಳನ್ನು ಸೃಜಿಸಿ ಖರೀದಿಸಿರುವ ಪ್ರತಿಗಳನ್ನು ಎನ್‌ಎಂಸಿಗೆ ಒದಗಿಸಬೇಕು. ಕೌಶಲ್ಯ ಪ್ರಯೋಗಾಲಯವನ್ನು ಅವಶ್ಯ ಸಾಮಗ್ರಿಗಳೊಂದಿಗೆ ಸೃಜಿಸಬೇಕು. ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಗೊಳಿಸಿರುವುದು ಮತ್ತು ಪರೀಕ್ಷಾ ಕೊಠಡಿಗಳನ್ನು ಸುಸಜ್ಜಿತವಾಗಿ ಸೃಜಿಸಿ ಅಸೆಸ್‌ಮೆಂಟ್‌ ಫಾರ್ಮ್ ಸಿ ಅನ್ವಯ ಎನ್‌ಎಂಸಿಗೆ ಒದಗಿಸಬೇಕು ಎಂದೂ ಚರ್ಚೆಯಾಗಿದೆ.

 

‘ತಾವು ಸಾಧ್ಯವಾದಲ್ಲಿ ಸಿಎಂಸಿಎಂಆರ್‍‌ಐನ ಸಂಸ್ಥೆಗೆ ಮೇಲಾಧಿಕಾರಿಗಳ ತಂಡ ರಚಿಸಿ, ಪ್ರಗತಿ ಪರಿಶೀಲನೆ, ಸಂಸ್ಥೆಗೆ ಅವಶ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಲು ಸಹಕರಿಸಬೇಕು. ಎನ್‌ಎಂಸಿಯವರ ನಿರ್ದೇಶನದಂತೆ ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ 150 ವಿದ್ಯಾರ್ಥಿಗಳ ಪ್ರವೇಶಾತಿ ಪಡೆಯುವುದು ಕಷ್ಟಸಾಧ್ಯವಾಗಲಿದೆ,’ ಎಂದು ವಿಶೇಷಾಧಿಕಾರಿ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಚಿತ್ರದುರ್ಗದಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಹೊಂದಲಿರುವ ‘ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ಮಾಣಕ್ಕೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಸಿವಿಲ್ ಕಾಮಗಾರಿ ಸೇರಿ ಒಟ್ಟು 500 ಕೋಟಿ ರೂ. ಖರ್ಚಾಗಲಿದೆ ಎಂದು ಹಿಂದಿನ ಸಚಿವರು ತಿಳಿಸಿದ್ದರು.

 

2014-15 ಸಾಲಿನ ಆಯವ್ಯಯದಲ್ಲಿನ ಘೋಷಣೆಯಂತೆ ಚಿತ್ರದುರ್ಗದಲ್ಲಿ 150 ಸೀಟುಗಳ ಎಂಬಿಬಿಎಸ್ ಕಾಲೇಜನ್ನು 2015-16ರಲ್ಲೇ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಆದರೆ 2013-14 ರ ಆರ್ಥಿಕ ವರ್ಷದಲ್ಲಿ ಕಲಬುರ್ಗಿ, ಗದಗ, ಕೊಪ್ಪಳ, ಕಾರವಾರ, ಕೊಡಗು ಮತ್ತು ಚಾಮರಾಜನಗರದಲ್ಲಿ ಹೊಸ 6 ಮೆಡಿಕಲ್ ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಹೊಂದಿಸಿಕೊಳ್ಳಬೇಕಾಗಿತ್ತು. ಹೀಗಾಗಿ ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮುಂದೂಡಲಾಗಿತ್ತು.

 

2021-22ನೇ ಸಾಲಿನ ಬಜೆಟ್ ನಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಚಿತ್ರದುರ್ಗದ ಮೆಡಿಕಲ್ ಕಾಲೇಜನ್ನು 2023-24 ನೇ ಸಾಲಿನಿಂದ ಆರಂಭಿಸಲು ಅಗತ್ಯ ಪ್ರಕ್ರಿಯೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿತ್ತು. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆದಿತ್ತು.

the fil favicon

SUPPORT THE FILE

Latest News

Related Posts