ಬೆಂಗಳೂರು; ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇದ್ದ 250 ಕಿರಿಯ ಪಶು ವೈದ್ಯಕೀಯ ಪರೀಕ್ಷಕರು (ಪಶು ವೈದ್ಯ ಸಹಾಯಕರು) ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ, ನೇಮಕಾತಿ ನಿಯಮಗಳ ಉಲ್ಲಂಘನೆ ಮತ್ತು ಹಲವು ರೀತಿಯ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಈ ನೇಮಕಾತಿ ಸಂಬಂಧ ಪ್ರಕಟಿಸಿದ್ದ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆಪಟ್ಟಿಯಲ್ಲಿ ಹಲವು ನ್ಯೂನತೆಗಳು ಕಂಡುಬಂದಿವೆ. ಈ ಪಟ್ಟಿಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಖುದ್ದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು ಪತ್ರ ಬರೆದಿದ್ದರು. ಈ ಪತ್ರಕ್ಕೂ ಸರ್ಕಾರವು ಯಾವುದೇ ಕಿಮ್ಮತ್ತು ನೀಡಿಲ್ಲ.
ಈ ಕುರಿತು ಕೂಡ್ಲಿಗಿ ತಾಲೂಕಿನ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಶಿರಿನ್ ತಾಜ್, ಮಹೇಶ್ವರ್ ಸೇರಿದಂತೆ ಹಲವರು ಸರ್ಕಾರಕ್ಕೆ 2024ರ ಫೆ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆದರೂ ಯಾವುದೇ ಕ್ರಮವಾಗಿಲ್ಲ. ಈ ಪ್ರಕರಣದ ಕುರಿತು ಸಚಿವ ಕೆ ವೆಂಕಟೇಶ್ ಅವರ ಗಮನಕ್ಕೂ ಕೆಲ ಅಭ್ಯರ್ಥಿಗಳು ತಂದಿದ್ದರು. ಆದರೂ ಈ ಪ್ರಕರಣದ ಕುರಿತು ಸಚಿವರು ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.
ಶಿರಿನ್ ತಾಜ್ ಸೇರಿದಂತೆ ಹಲವರು ನೀಡಿದ್ದ ದೂರಿನ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯ ಸಹಾಯಕರು ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದ್ದ ಆಯ್ಕೆಪಟ್ಟಿಗೆ ಹಲವರು ಆಕ್ಷೇಪಣೆ ಸಲ್ಲಿಸಿದ್ದರು.
ಈ ಯಾವ ಆಕ್ಷೇಪಣೆಗಳಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಲೀ ಮತ್ತು ಇಲಾಖೆಯಾಗಲೀ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಮತ್ತು ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂದು ತಿಳಿದು ಬಂದಿದೆ.
ನಿಯಮ ಉಲ್ಲಂಘನೆ
ಕೆಸಿಎಸ್‌ಆರ್ (ನೇರ ನೇಮಕಾತಿ) ನಿಯಮ 2021ರ ಅನ್ವಯ ನಿಯಮ ಕಂಡಿಕೆ 6(2)2(ಬಿ) ಅನ್ವಯ ಡಿಪ್ಲೋಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಮತ್ತು ತತ್ಸಮಾನ ವಿದ್ಯಾರ್ಹತೆ ಅಥವಾ ಪದವಿ ದರ್ಜೆಗಿಂತ ಕಡಿಮೆ ಇರುವ ಇನ್ಯಾವುದೇ ವಿದ್ಯಾರ್ಹತೆಗಳು ಅಗತ್ಯವಿರುವ ಹುದ್ದೆಗಳಿಗಾಗಿ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರಬೇಕು.
ಪ್ರತಿಯೊಂದು ಪತ್ರಿಕೆಯು 100 ಅಂಕಗಳನ್ನು ಒಳಗೊಂಡಿದೆ. ಮತ್ತು ಒಟ್ಟು 200 ಅಂಕಗಳನ್ನು ಒಳಗೊಂಡಿರಬೇಕು. ಮತ್ತು ಸದರಿ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳು ನಾಲ್ಕನೇ ಒಂದು ಭಾಗದಷ್ಟು ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕಾಗಿ ಕಡಿತಗೊಳಿಸಬೇಕು ಎಂದು ಕಂಡಿಕೆ 6(2)2 (ಸಿ)ಯಲ್ಲಿ ಹೇಳಲಾಗಿದೆ.
ಅಭ್ಯರ್ಥಿಯು ಅರ್ಹತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು ಅಂಕಗಳಲ್ಲಿ ಕನಿಷ್ಟ ಪಕ್ಷ ಶೇ.35 ಅಂಕಗಳನ್ನು ಕಡ್ಡಾಯವಾಗಿ ಗಳಿಸಿರಬೇಕು ಎಂದು ನಿಯಮದಲ್ಲಿ ತಿದ್ದುಪಡಿ ಆದೇಶ ಮಾಡಲಾಗಿದೆ.
ಆದರೆ ಈ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೇಪರ್-1 ವಿಷಯ 1ರಲ್ಲಿ 100 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ವಿಷಯ 2 ಪರೀಕ್ಷೆ ನಡೆಸಿದ್ದಲ್ಲಿ ಅರ್ಹತೆ ಪಡೆಯಲು ಹಲವರಿಗೆ ಅವಕಾಶವಿತ್ತು. ವಿಷಯ 2 ಪರೀಕ್ಷೆ ನಡೆಸಿಲ್ಲ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
250 ಹುದ್ದೆಗಳಿಗೆ ಕೇವಲ 255 ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗೆ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ದಾಖಲಾತಿ ಪರಿಶೀಲನೆಗೆ 1;2 ರಂತೆ ಪರಿಗಣಿಸಿಲ್ಲ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ತಾತ್ಕಾಲಿಕ ಅಂಕಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ (https;//docs.google.com/forms/d/e 1FAIpQLSfH14RWinJjhBOWaWe1qxSgtBJJJTQz5xpFQCIeWWZEGkU2 )ಲಿಂಕ್ ಮುಖಾಂತರ 2023ರ ಏಪ್ರಿಲ್ 10ರಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ ಈ ಆಕ್ಷೇಪಣೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.
250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆದರೆ 2,227 ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ 255 ಅಭ್ಯರ್ಥಿಗಳಷ್ಟೇ ಅರ್ಹತೆ ಪಡೆದಿದ್ದರು. ಹಾಗೂ ದಾಖಲಾತಿ ಪರಿಶೀಲನೆ ನಡೆಸಿ ತಾತ್ಕಾಲಿಕ ಪಟ್ಟಿಯಲ್ಲಿ 216 ಅಭ್ಯರ್ಥಿಗಳು ಪಟ್ಟಿಯಲ್ಲಿದ್ದರು.
ಪ್ರಕಟಿಸಿದ್ದ ಪಟ್ಟಿಯಲ್ಲಿ ವರ್ಗವಾರು ಅಭ್ಯರ್ಥಿಗಳನ್ನು ಪರಿಗಣಿಸಿದಾಗ ಕೆಲವು ವರ್ಗಕ್ಕೆ ಅಭ್ಯರ್ಥಿಗಳೇ ಆಯ್ಕೆಯಾಗಿರುವುದಿಲ್ಲ. 64 ಖಾಲಿ ಹುದ್ದೆಗಳಿಗೆ ವರ್ಗವಾರು ಅಭ್ಯರ್ಥಿಗಳೇ ಲಭ್ಯವಾಗಿರಲಿಲ್ಲ. ಹಾಗೂ ಕೆಲವು ವರ್ಗಕ್ಕೆ ಅಭ್ಯರ್ಥಿಗಳು ಸಿಕ್ಕರೂ ಕೂಡ 20 ಹುದ್ದೆಗಳಿಗೆ ಅಭ್ಯರ್ಥಿಗಳು ಸಿಕ್ಕಿರುವುದಿಲ್ಲ. ಒಟ್ಟು 84 ಹುದ್ದೆಗಳು ಖಾಲಿಯೇ ಉಳಿಯುತ್ತದೆ. ಇದರಿಂದ ಶೇ.40ರಷ್ಟು ಹುದ್ದೆಗಳು ಖಾಲಿಯೇ ಇರುತ್ತವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ ಆಯುಕ್ತಾಲಯವು 113 ಜನರಿಗೆ ಆದೇಶ ಪ್ರತಿ ನೀಡಿತ್ತು. ಆದರೆ ಹುದ್ದೆಗಳ ವರ್ಗೀಕರಣ ವೇಳೆ ಸಾಮಾನ್ಯ ಅಭ್ಯರ್ಥಿಗಳಿಗೆ 21 ಮಾತ್ರ ಮೀಸಲಿರಿಸಿತ್ತು. ಆದರೆ ಅಂತಿಮ ಆಯ್ಕೆ ಪಟ್ಟಿ ಮತ್ತು ಆದೇಶದಲ್ಲಿ 42 ಅಭ್ಯರ್ಥಿಗಳಿಗೆ ಸಾಮಾನ್ಯ ಕೋಟಾದಲ್ಲಿ ನೇಮಕಾತಿ ಆದೇಶ ನೀಡಲಾಗಿದೆ.
ಅಧಿಸೂಚನೆ ಪ್ರಕಾರ ಕಿರಿಯ ಪಶುವೈದ್ಯಕೀಯ ಪರೀಕ್ಷಕರ ನೇಮಕಾತಿ ಪ್ರಾಧಿಕಾರ ಹಾಘೂ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರೂ ಸಹ ಜಂಟಿ ನಿರ್ದೇಶಕರು ಆದೇಶ ಪ್ರತಿಯನ್ನು ವಿತರಿಸಿದ್ದರು.
‘250 ಸ್ಥಾನಗಳಿಗೆ ನೇಮಕಾತಿ ನಡೆಸಿದ್ದರೂ ಸಹ ತರಾತುರಿಯಲ್ಲಿ ಮೀಸಲಾತಿ ಪ್ರಕಟಿಸದೇ 113 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಮೀಸಲಾತಿ ಅನುಗಣವಾಗಿ ನೇಮಕಾತಿ ಮಾಡಿಲ್ಲ. ಹಾಗೂ ಕೆಸಿಎಸ್‌ಆರ್ ನಿಯಮ 2021ರ ನೇರ ಉಲ್ಲಂಘನೆಯಾಗಿದೆ,’ ಎಂದು ಕೂಡ್ಲಿಗಿ ತಾಲೂಕಿನ ಶಿರಿನ್ ತಾಜ್ ಅವರು ಆರೋಪಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕಿರಿಯ ಪಶುವೈದ್ಯಕೀಯ ಪರೀಕ್ಷಕರು ವರ್ಗದಲ್ಲಿ ಖಾಲಿ ಇದ್ದ 250 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2022ರ ಸೆ.23ರಂದು ಅಧಿಸೂಚನೆ ಹೊರಡಿಸಿತ್ತು.
2023ರ ಜನವರಿ 29ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಅರ್ಹತಾ ಪಟ್ಟಿಯನ್ನು 2023ರ ಏಪ್ರಿಲ್ 20ರಂದು ಪ್ರಕಟಿಸಿತ್ತು. 2023ರ ಮೇ 4ರಂದು ಆಯ್ಕೆ ಪಟ್ಟಿ ಪ್ರಕಟವಾಗಿತ್ತು. 2023ರ ಮೇ 30ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. 2023ರ ಜೂನ್ 16ರಂದು ಅಂತಿಮ ಪಟ್ಟಿ ಪ್ರಕಟವಾಗಿತ್ತು.