ಕುಲಪತಿಗಳ ಕಾರ್ಯಾಲಯದ ವಿಶೇ‍ಷಾಧಿಕಾರಿಯಿಂದಲೇ ಕುಲಸಚಿವರಿಗೆ ಬೆದರಿಕೆ ಆರೋಪ

ಬೆಂಗಳೂರು; ನಿಯಮ ಮತ್ತು ಕಾಯ್ದೆ ಉಲ್ಲಂಘಿಸಿ ಪುಸ್ತಕಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ವಿವಿ ಕುಲಸಚಿವರಿಗೇ ಕುಲಪತಿಗಳ ವಿಶೇಷಾಧಿಕಾರಿಯು ಬೆದರಿಕೆ ಹಾಕಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಪುಸ್ತಕಗಳ ಖರೀದಿಯಲ್ಲಿನ ಪ್ರಕ್ರಿಯೆಗಳ ಕುರಿತು ಕುಲಸಚಿವರಾದ ಕೆಎಎಸ್‌ ಅಧಿಕಾರಿ ಅನುರಾಧ ವಸ್ತ್ರದ ಅವರು ನೀಡಿದ್ದ ನೋಟೀಸ್‌ಗೆ ನೀಡಿದ್ದ ಉತ್ತರದಲ್ಲೇ ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿಯಾದ ಐ ಬಿ ಬಿರಾದಾರ್‍‌ ಅವರು ಅವರು ಬೆದರಿಕೆಯ ಹೇಳಿಕೆ  ನೀಡಿರುವುದು ವಿಶ್ವವಿದ್ಯಾಲಯದ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಈ ಸಂಬಂಧ ಕುಲಸಚಿವರು ನೀಡಿದ್ದ ನೋಟೀಸ್‌, ಐ ಬಿ ಬಿರಾದಾರ ಅವರು ನೀಡಿದ್ದ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಕುಲಸಚಿವರಾದ ಅನುರಾಧ ವಸ್ತ್ರದ ಅವರು ಐ ಬಿ ಬಿರಾದಾರ ಅವರಿಗೆ ಕಾರಣ ಕೇಳಿ 2023ರ ಡಿಸೆಂಬರ್‍‌ 27ರಂದು ನೋಟೀಸ್‌ ಜಾರಿಗೊಳಿಸಿದ್ದರು.

 

ನೋಟೀಸ್‌ನಲ್ಲೇನಿತ್ತು?

 

2022-23ನೇ ಸಾಲಿನ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಕಲ್ಯಾಣ ನಿಧಿ ಅಡಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ 5 ಲಕ್ಷ ರು.ಗಳ ಮೊತ್ತದ ಪುಸ್ತಕಗಳನ್ನು ಖರೀದಿಸಲು 2023ರ ಫೆ.23ರಂದು ಕುಲಪತಿಗಳಿಗೆ ಕಡತ ಮಂಡಿಸಲಾಗಿತ್ತು. ಈ ಕಡತಕ್ಕೆ ಕೆಟಿಪಿಪಿ ನಿಯಮ ಟೆಂಡರ್‍‌, ದರಪಟ್ಟಿ ಪ್ರಕಟಣೆ ಮುಖಾಂತರ ಪುಸ್ತಕಗಳನ್ನು ಖರೀದಿಸಲು ಉಪಕುಲಪತಿಗಳು 2023ರ ಮಾರ್ಚ್‌ 16ರಂದು ಅನುಮೋದನೆ ನೀಡಿದ್ದರು.

 

2023ರ ಡಿಸೆಂಬರ್‍‌ 14ರಂದು ಖರೀದಿಗೆ ಸಂಬಂಧಿಸಿದಂತೆ ತಾವು ಖರೀದಿ ಪ್ರಕ್ರಿಯೆಯನ್ನು ಜರುಗಿಸಿರುವುದಾಗಿ ಕಡತವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದೀರಿ. ಪೂರೈಕೆದಾರರಿಗೆ ಮೌಖಿಕ ಆದೇಶ ನೀಡಿ ಪುಸ್ತಕಗಳನ್ನು ಸರಬರಾಜು ಮಾಡಿಸಿರುವುದಾಗಿ ಈಗ ಸದರಿ ಸಂಗ್ರಹಣಾ ಪ್ರಕ್ರಿಯೆಗೆ ಘಟನೋತ್ತರ ಮಂಜೂರಾತಿಗಾಗಿ ಕಡತವನ್ನು ಉಪ ಗ್ರಂಥಪಾಲಕರು ಮಂಡಿಸಿರುತ್ತಾರೆ ಎಂದು ನೋಟೀಸ್‌ನಲ್ಲಿ ವಿವರಿಸಲಾಗಿತ್ತು.

 

ಅನುಮೋದನೆ ನಂತರ ತಾವು ಕಡತವನ್ನು ಸಂಬಂಧಿಸಿದ ಗ್ರಂಥಾಲಯ ಶಾಖೆಗೆ ಹಿಂದಿರುಗಿಸದೇ ತಮ್ಮ ಬಳಿಯೇ ಇಟ್ಟುಕೊಂಡಿರುತ್ತೀರಿ. ಹಾಗೂ ಕರ್ನಾಟಕ ಪಾರದರ್ಶಕ ಸಂಗ್ರಹಣೆ ಅಧಿನಿಯಮ ಹಾಗೂ ನಿಯಮಗಳಾನ್ವಯ ದರಪಟ್ಟಿ ಕರೆಯದೇ ಅತೀ ಹೆಚ್ಚಿನ ವಿನಾಯಿತಿ, ರಿಯಾಯಿತಿ ನೀಡುವ ಕುರಿತಂತೆ ದರಪಟ್ಟಿಗಳ ತುಲನಾತ್ಮಕ ಪಟ್ಟಿಯನ್ನು ತಯಾರಿಸಿಲ್ಲ ಎಂದು ನೋಟೀಸ್‌ ಮೂಲಕ ಗಮನಕ್ಕೆ ತಂದಿದ್ದರು.

 

ಪುಸ್ತಕಗಳ ಖರೀದಿಗೆ ದರಪಟ್ಟಿಯಿಲ್ಲ, ನಿಯಮವಿಲ್ಲ, ಕಾನೂನು ವಿವಿಯಲ್ಲಿ ಉಲ್ಲಂಘನೆಯೇ ಎಲ್ಲ

ಪುಸ್ತಕಗಳ ಪೂರೈಕೆಗಾಗಿ ಕಾರ್ಯಾದೇಶ ನೀಡದೇ ನಿಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನೇರವಾಗಿ ಎಂಪಿಪಿ ಬುಕ್‌ ಹೌಸ್‌ನವರೊಂದಿಗೆ ಮೌಖಿಕವಾಗಿ ವ್ಯವಹರಿಸಿ ಅವರಿಗೆ ಪುಸ್ತಕಗಳನ್ನು ಪೂರೈಕೆ ಮಾಡಲು ಮೌಖಿಕ ಆದೇಶ ನೀಡಿರುತ್ತೀರಿ. ಈ ರೀತಿ ಕೆಟಿಪಿಪಿ ಕಾಯ್ದೆ, ನಿಯಮಗಳನ್ನು ಉಲ್ಲಂಘಿಸಲಾಗಿದೆ. ಮತ್ತು ಗ್ರಂಥಾಲಯ ಸಲಹಾ ಸಮಿತಿ ಮತ್ತು ಸಮಿತಿಗೆ ನೋಂದಾಯಿತ ಮಾರಾಟಗಾರರಿಂದ ಪುಸ್ತಕ ಖರೀದಿ ಮಾಡಬಹುದಾಗಿದೆ. ಆದರೆ ಇವೆರಡನ್ನೂ ಕೂಡ ಇಲ್ಲಿ ಪಾಲನೆಯಾಗಿರುವುದರ ಕುರಿತು ಕಡತದಲ್ಲಿ ಕಂಡುಬರುವುದಿಲ್ಲ ಎಂದು ನೋಟೀಸ್‌ನಲ್ಲಿ ಪ್ರಸ್ತಾವಿಸಲಾಗಿತ್ತು.

 

ಈ ಕುರಿತಂತೆ  ಎಂಪಿಪಿ ಬುಕ್‌ ಹೌಸ್‌ ಅವರು ದೂರವಾಣಿ ಕರೆಯಲ್ಲಿ ತಾವು ಮೌಖಿಕವಾಗಿ ಪುಸ್ತಕಗಳ ಸರಬರಾಜು ಆದೇಶ ನೀಡಿರುತ್ತೀರಿ ಎಂದು, ಸದರಿ ಪುಸ್ತಕಗಳ ಬಿಲ್‌ ಪಾವತಿ ಮಾಡಲು ಹಾಗೂ ಅನಗತ್ಯವಾಗಿ ಈ ಬಿಲ್‌ ಪಾವತಿಸಲು ಸುಮಾರು 3 ತಿಂಗಳು ವಿಳಂಬವಾಗಿದೆ ಎಂದು ದೂರಿ ಕೂಡಲೇ ಬಿಲ್‌ ಪಾವತಿಸಲು ಒತ್ತಾಯಿಸಿದ್ದರು.

 

ಪುಸ್ತಕಗಳನ್ನು ಪೂರೈಸಲು ಯಾವುದೇ ದರಪಟ್ಟಿ ಪ್ರಕಟಣೆ ಮಾಡಿಲ್ಲ, ತುಲಾನಾತ್ಮಕ ಪಟ್ಟಿ ತಯಾರಿಸಿಲ್ಲ. ಹಾಗೂ ಕಾರ್ಯಾದೇಶ ನೀಡದೇ ಪುಸ್ತಕಗಳನ್ನು 12 ಪೆಟ್ಟಿಗೆಗಳಲ್ಲಿ ಗ್ರಂಥಾಲಯಕ್ಕೆ 2034 ಜುಲೈ 16ರಂದು ಪೂರೈಸಲಾಗಿದೆ. ಈ ಬಿಲ್‌ನ ರುಜು ಮಾಡಿದ ಪ್ರತಿಯೊಂದನ್ನು ನೀಡಿ ಪುಸ್ತಕಗಳನ್ನು ಸ್ವೀಕರಿಸುವಂತೆ ಸೂಚಿಸಿದ್ದರಿಂದಾಗಿ ಅವರುಗಳನ್ನು ಗ್ರಂಥಾಲಯ ದಾಸ್ತಾನು ವಹಿಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಗ್ರಂಥಾಲಯದ ಉಪ ಗ್ರಂಥಪಾಲಕರು  ತಿಳಿಸಿರುತ್ತಾರೆ ಎಂಬ ಅಂಶವನ್ನು ನೋಟೀಸ್‌ನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಈ ಪುಸ್ತಕ ಖರೀದಿ ಕಡತವನ್ನು ತಮ್ಮ ಶಾಖೆಯಿಂದ ಈವರೆಗೂ ಸ್ವೀಕರಿಸಿಲ್ಲ ಎಂದು ತಿಳಿಸಿರುತ್ತಾರೆ. ಈ ಕಡತವನ್ನು ಹುಡುಕಿಸಲು ಕುಲಪತಿಗಳ ಆಪ್ತ ಶಾಖೆಯ ಸ್ವಾತಿ ಅವರಿಗೆ ಸೂಚಿಸಲಾಗಿತ್ತು. ಈ ಕಡತ ತಮ್ಮ ಬಳಿ ಲಭ್ಯವಿದೆ ಎಂದು ಹೇಳಿಕೆ ನೀಡಿರುತ್ತಾರೆ ಎಂದು ಗಮನಕ್ಕೆ ತಂದಿದ್ದರು. ಈ ನೋಟೀಸ್‌ಗೆ ಬಿರಾದಾರ್‍‌ ಅವರು 2024ರ ಜನವರಿ 1ರಂದು ಲಿಖಿತ ಉತ್ತರ ನೀಡಿದ್ದರು.

 

 

ನೋಟಿಸ್‌ಗೆ ನೀಡಿದ್ದ ಉತ್ತರದಲ್ಲೇನಿದೆ?

 

ಪುಸ್ತಕಗಳ ಸಂಗ್ರಹಣೆಗೆ ಕೆಟಿಪಿಪಿ ನಿಯಮಗಳೂ ಅನ್ವಯವಾಗುವುದಿಲ್ಲ ಎಂದೂ ದರಪಟ್ಟಿ ಕರೆಯದೇ ನೇರವಾಗಿ ಪುಸ್ತಕ ಖರೀದಿಸಬಹು. ತಾವೇ ಖುದ್ದಾಗಿ ಎಂಪಿಪಿ ಬುಕ್‌ ಹೌಸ್‌ ಅವರನ್ನು ಸಂಪರ್ಕಿಸಿ ಮೌಖಿಕವಾಗಿ ಪುಸ್ತಕಗಳನ್ನು ಪೂರೈಕೆ ಮಾಡುವಂತೆ ಸೂಚಿಸಲಾಗಿತ್ತು.

 

 

ಈ ವಿಷಯದ ವಿಚಾರಣೆ ಕೈಬಿಡಬೇಕು ಇಲ್ಲವಾದಲ್ಲಿ ಕುಲಸಚಿವರ ವಿರುದ್ಧವೇ ದೂರು ಸಲ್ಲಿಸಲಾಗುವುದು ಎಂದು ಬೆದರಿಕೆ ಹೇಳಿಕೆ ನೀಡಿದ್ದು ಬಿರಾದಾರ್‍‌ ಅವರು ನೀಡಿದ್ದ ಉತ್ತರದಿಂದ ತಿಳಿದು ಬಂದಿದೆ.

 

 

ಬಿರಾದಾರ್‍‌ ಅವರು ನೀಡಿದ್ದ ಲಿಖಿತ ಉತ್ತರದಲ್ಲಿ ಬೆದರಿಕೆ ಹೇಳಿಕೆ ಇದೆ ಎಂಬ ಅಂಶವನ್ನು ಕುಲಸಚಿವರಾದ ಅನುರಾಧ ವಸ್ತ್ರದ ಅವರು ಸರ್ಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts