ಬೆಂಗಳೂರು; ನವದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೆ ಹೊಸದಾಗಿ 7 ಕಾರುಗಳನ್ನು ಖರೀದಿಸಲು ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಡೆಯನ್ನು ರಾಜ್ಯ ಬಿಜೆಪಿಯು ಟೀಕಿಸಿದೆ. ಈ ಕುರಿತು ‘ದಿ ಫೈಲ್’ ಪ್ರಕಟಿಸಿದ್ದ ವರದಿಯನ್ನು ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿಯು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂಈ ಜುಟ್ಟಿಗೆ ಮಲ್ಲಿಗೆ ಹೂ ಎಂದು ಜರಿದಿದೆ.
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ ಪರಿಸ್ಥಿತಿ ನಿಭಾಯಿಸಲು ಹಣದ ಕೊರತೆ ಮತ್ತು ಕೇಂದ್ರ ಸರ್ಕಾರವು ನೀಡುತ್ತಿರುವ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ ಎಂದು ಪದೇ ಪದೇ ಬೀದಿಗಿಳಿಯುತ್ತಿರುವ ಹೊತ್ತಿನಲ್ಲೇ ಇದೀಗ ನವದೆಹಲಿಯ ಕರ್ನಾಟಕ ಭವನಕ್ಕೆ ಹೊಸದಾಗಿ 7 ಕಾರುಗಳನ್ನು ಖರೀದಿಸಲು ಅಧಿಸೂಚನೆ ಹೊರಡಿಸಿತ್ತು. ಈ ಕುರಿತು ರಾಜ್ಯ ಬಿಜೆಪಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟೀಕಿಸಿದೆ.
‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು” ಇದು ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತಿರುವ ಪರಿ. ಶತಮಾನದಲ್ಲಿಯೇ ಕಂಡು ಕೇಳರಿಯದಂತಹ ಭೀಕರ ಬರ ಎದುರಾದರೂ ರೈತರಿಗೆ ಬರ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಿದ ಸಿಎಂ ಅವರು, ದೆಹಲಿಯ ಕರ್ನಾಟಕ ಭವನಕ್ಕೆ ಹೊಸದಾಗಿ 7 ದುಬಾರಿ ಕಾರುಗಳನ್ನು ಖರೀದಿಸಲು ಅನುಮೋದನೆ ನೀಡಿದ್ದಾರೆ. ಕೋಟಿಗಟ್ಟಲೆ ಹಣ ವ್ಯಯಿಸಿ ದುಬಾರಿ ಕಾರುಗಳನ್ನು ಖರೀದಿಸುವ ಬದಲು, ಅದೇ ದುಡ್ಡಿನಲ್ಲಿ ರೈತರಿಗೆ ಬರ ಪರಿಹಾರ ನೀಡಲು ರೈತ ವಿರೋಧಿ ಸಿದ್ದರಾಮಯ್ಯನವರ ಮನಸ್ಥಿತಿ ಒಪ್ಪುತ್ತಿಲ್ಲ. ಇಂತಹ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಮೇ 7 ರಂದು ಪ್ರತಿಯೊಬ್ಬ ನಾಡಿನ ಹೆಮ್ಮೆಯ ರೈತರು ತಕ್ಕ ಉತ್ತರ ನೀಡಬೇಕು,’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲೇ ಸಚಿವರಿಗೆ 9.90 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಕಾರುಗಳನ್ನು ಖರೀದಿಸಿತ್ತು. ಅದೇ ಸಂದರ್ಭದಲ್ಲೂ ನವದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೂ ಕಾರುಗಳನ್ನು ಖರೀದಿಸಿತ್ತು.
ನವದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೆ ಅವಶ್ಯಕವಿರುವ 7 ವಾಹನಗಳನ್ನು ಪ್ರತಿ ವಾಹನಕ್ಕೆ 19,46,421 ರು.ಗಳಂತೆ ಒಟ್ಟಾರೆ 1,36,24,947 ರು.ಗಳ ವೆಚ್ಚದಲ್ಲಿ ಖರೀದಿಸಲು ಕೆಟಿಪಿಪಿ ಕಾಯ್ದೆ ಅಡಿ 4(ಜಿ) ವಿನಾಯಿತಿ ನೀಡಿತ್ತು.
ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮತ್ತು ಸದ್ಯ ಎದುರಾಗಿರುವ ಬರ ಪರಿಸ್ಥಿತಿ, ಬರ ಪರಿಹಾರಕ್ಕೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಟ್ರಾಮಾ ಕೇರ್ ಕೇಂದ್ರಕ್ಕೆ ಅನುದಾನವನ್ನೂ ಕಡಿತಗೊಳಿಸಿತ್ತು.
ಟ್ರಾಮಾ ಕೇರ್ ಕೇಂದ್ರಕ್ಕೆ ಶೇ.60ರಷ್ಟು ಅನುದಾನ ಕಡಿತ; ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಣವಿಲ್ಲವೇ?
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಓಡಾಟ ನಡೆಸಲು 2023ರಲ್ಲೇ ಹೊಸ ಕಾರನ್ನು ಖರೀದಿಸಲಾಗಿತ್ತು. ಅಲ್ಲದೇ ಅನುದಾನ ಲಭ್ಯವಿಲ್ಲದಿದ್ದರೂ ಎಲ್ಲಾ ಸಚಿವರಿಗೆ ಹೊಸ ಕಾರು ಖರೀದಿಸಲು ಹೆಚ್ಚುವರಿಯಾಗಿ ಅನುದಾನ ಒದಗಿಸಿತ್ತು. ಅಲ್ಲದೇ ಹಳೆಯ ವಾಹನಗಳನ್ನು ಬದಲಾಯಿಸುವುದನ್ನು ಒಳಗೊಂಡಂತೆ ಹೊಸ ವಾಹನಗಳನ್ನು ಖರೀದಿಸಲು ಸಂಪೂರ್ಣವಾಗಿ ತಡೆಹಿಡಿಯಲಾಗಿತ್ತು. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಅನುದಾನವಿಲ್ಲದಿದ್ದರೂ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಲು 9.90 ಕೋಟಿ ರು. ಅನುದಾನ ಒದಗಿಸಿತ್ತು.
ಸಚಿವರಿಗೆ ಹೊಸ ಕಾರುಗಳು; ಹೆಚ್ಚುವರಿ ಅನುದಾನ, ಖರೀದಿ ಮೊತ್ತ ಮಿತಿಯೂ ಹೆಚ್ಚಳ, ಸುತ್ತೋಲೆ ಉಲ್ಲಂಘನೆ
ಈ ಲೆಕ್ಕ ಶೀರ್ಷಿಕೆ ( 4070-00-800-0-10ಯಲ್ಲಿ )ಯಲ್ಲಿ 500.00 ಲಕ್ಷ ರು. ಮಾತ್ರ ಅನುದಾನವಿತ್ತು. ಆದರೆ 2023ರ ಆಗಸ್ಟ್ 13ರವರೆಗೆ 64.94 ಲಕ್ಷ ರು. ವೆಚ್ಚವಾಗಿ 435.06 ಲಕ್ಷ ರು. ಮಾತ್ರ ಲಭ್ಯವಿತ್ತು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕರೂ ಆಗಿರುವ ಎ ಎಸ್ ಪೊನ್ನಣ್ಣ ಅವರಿಗೆ ಹೊಸ ವಾಹನ ಒದಗಿಸಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು.
ಇದಕ್ಕಾಗಿ 30.00 ಲಕ್ಷ ರು.ಗಳನ್ನು ಕಾಯ್ದಿರಿಸಿದ್ದಲ್ಲಿ ಈ ಲೆಕ್ಕ ಶೀರ್ಷಿಕೆಯಲ್ಲಿ 405.06 ಲಕ್ಷ ರು. ಮಾತ್ರ ಲಭ್ಯವಿತ್ತು. ಹೀಗಾಗಿ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಲು ಅನುದಾನವೇ ಇರಲಿಲ್ಲ.