ಮ್ಯಾನ್‌ಹೋಲ್‌, ಸೆಪ್ಟಿಂಕ್‌ ಟ್ಯಾಂಕ್‌, ಒಳಚರಂಡಿಗಳಲ್ಲಿ ವಿಷಪೂರಿತ ಗಾಳಿ; 94 ಕಾರ್ಮಿಕರು ಮೃತ

ಬೆಂಗಳೂರು; ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮ್ಯಾನ್‌ಹೋಲ್‌, ಸೆಪ್ಟಿಂಕ್‌ ಟ್ಯಾಂಕ್‌, ಒಳಚರಂಡಿಗಳನ್ನು ಸ್ವಚ್ಛತೆಗೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನೂ ಬಳಕೆ ಮಾಡುತ್ತಿಲ್ಲ. ಹೀಗಾಗಿ ವಿಷಪೂರಿತ ಗಾಳಿ ಸೇವಿಸಿ ಸಾವುಗಳು ಸಂಭವಿಸುತ್ತಿವೆ.

 

ರಾಜ್ಯದಲ್ಲಿ ಇದುವರೆಗೂ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡದ ಕಾರಣ ಇದುವರೆಗೂ 87 ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಪೈಕಿ 47 ಪ್ರಕರಣಗಳಲ್ಲಿ 94 ಕಾರ್ಮಿಕರು ಮೃತರಾಗಿದ್ದಾರೆ.

 

ಇದುವರೆಗೂ ಮೃತ ಹೊಂದಿದ ಪ್ರಕರಣಗಳಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಹೊರಗುತ್ತಿಗೆ ಸಂಸ್ಥೆಯ ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ  ಎಫ್‌ಐಆರ್‌  ದಾಖಲಿಸಿಲ್ಲ.

 

ಮ್ಯಾನ್‌ ಹೋಲ್‌ ಮತ್ತು ಸೆಪ್ಟಿಂಕ್‌ ಟ್ಯಾಂಕ್‌ ಸ್ವಚ್ಛ ಮಾಡುವಾಗ ಮೃತಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳು ಕೈ ಕಟ್ಟಿ ಕುಳಿತಿವೆ.

 

ಮ್ಯಾನ್ಯುಯಲ್‌ ಸ್ಕಾವೆಂಜಿಂಗ್‌ ಪದ್ಧತಿಯನ್ನು ನಿಷೇಧಗೊಳಿಸುವುದು, ಬಿಡಬ್ಲ್ಯೂಎಸ್‌ಎಸ್‌ಬಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ 2024ರ ಫೆ.3ರಂದು ನಡೆದಿದ್ದ ಸಭೆಯಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಕುರಿತು ದೀರ್ಘವಾಗಿ ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಸಂದರ್ಭದಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಉಳಿದೆಡೆ ನಿಗದಿತ ಅವಧಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿವೆ. ಚಾಮರಾಜನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಯುಡಿಆರ್‌ ಪ್ರಕರಣ ದಾಖಲಾಗಿದೆ. ಕೆಲವು ವರದಿಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. ಹೀಗಾಗಿ ಆರೋಪಿತರು ಖುಲಾಸೆಗೊಂಡಿದ್ದಾರೆ ಎಂಬುದು ಸಭೆಯ ನಡವಳಿಯಿಂದ ಗೊತ್ತಾಗಿದೆ.

 

ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಉಲ್ಲಂಘನೆ ಮತ್ತು ಮೃತ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸುವ ಸಂದರ್ಭದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯು ಎಸ್‌ಸಿ, ಎಸ್‌ಟಿಗೆ ಸೇರಿದ್ದಲ್ಲಿ ಅಂತಹ ಪ್ರಕರಣಗಳನ್ನು ಕಲಂ 3(1) (ಜೆ) ಪಿಒಎ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಬೇಕು.

 

ಹಾಗೂ ಮೃತ ವ್ಯಕ್ತಿಯು ಬೇರೆ ಜನಾಂಗದವರಾಗಿದ್ದಲ್ಲಿ ಕಲಂ 7.9 ಎಂ ಎಸ್‌ ಕಾಯ್ದೆ 2013ರಡಿ ಪ್ರಕರಣ ದಾಖಲಿಸಬೇಕು. ಈ ಪ್ರಕರಣಗಳನ್ನು ಡಿವೈಎಸ್‌ಪಿ ಹಂತದ ಅಧಿಕಾರಿಗಳು ತನಿಖೆ ಮಾಡಬೇಕು. ಅದೇ ರೀತಿ ಎಂಎಸ್‌ ಕಾಯ್ದೆ 2013ರ ಸೆಕ್ಷನ್‌ 20ರ ಅಡಿ ನೇಮಕಗೊಂಡ ಅಧಿಕಾರಿಗಳು ತನಿಖೆ ಮಾಡಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವಿಚಾರಣೆಗೆ ಸಲ್ಲಿಸಬೇಕು.

 

ಆದರೆ ಎಂ ಎಸ್‌ ಕಾಯ್ದೆ ಉಲ್ಲಂಘನೆಯಾದ ಪ್ರಕರಣಗಳು ನೇರವಾಗಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿವೆ. ಎಂಎಸ್‌ ಕಾಯ್ದೆ 20ರಲ್ಲಿ ಕಾಯ್ದೆ ಉಲ್ಲಂಘನೆಯಾಗುವ ಪ್ರಕರಣಗಳನ್ನು ಪೊಲೀಸ್‌ ಠಾಣೆಗಳಲ್ಲಿ ನೇರವಾಗಿ ದಾಖಲಿಸುವ ಬಗ್ಗೆ ಹಾಗೂ ಸೆಕ್ಷನ್‌ 10ರಲ್ಲಿ ಅಪರಾಧವು ಸಂಭವಿಸಿದ ದಿನಾಂಕದಿಂದ 3 ತಿಂಗಳೊಳಗೆ ಯಾರೇ ವ್ಯಕ್ತಿಯು ದೂರನ್ನು ಸಲ್ಲಿಸದ ಹೊರತು ಯಾವುದೇ ನ್ಯಾಯಾಲಯವು ಅದನ್ನು ವಿಚಾರಣೆಗೆ ತೆಗೆದುಕೊಳ್ಳತಕ್ಕದ್ದಲ್ಲ ಎಂದಿದೆ. ಇದನ್ನು ತಿದ್ದುಪಡಿ ಮಾಡುವ ಸಂಬಂಧ ರಾಷ್ಟ್ರೀಯ ಕಾನೂನು ಶಾಲೆಯೊಂದಿಗೆ ಚರ್ಚಿಸಲು ಸಭೆಯು ತೀರ್ಮಾನಿಸಿರುವುದು ತಿಳಿದು ಬಂದಿದೆ.

 

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಮೃತ ಹೊಂದಿದ ಪ್ರಕರಣಗಳಲ್ಲಿ ಒಂದು ಪ್ರಕರಣ ತನಿಖಾ ಹಂತದಲ್ಲಿದೆ. ಉಳಿದ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಒಂದು ಪ್ರಕರಣದಲ್ಲಿ ನಿಗದಿತ ಅವಧಿಯಲ್ಲಿ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಒಂದು ಯುಡಿಆರ್‌ ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ನಗರದ ಅಪರಾಧ ವಿಭಾಗದ ಡಿಸಿಪಿ ಅವರು ಸಭೆಯಲ್ಲಿ ಮಾಹಿತಿ ನೀಡಿರುವುದು ಗೊತ್ತಾಗಿದೆ.

 

ಮತ್ತೊಂದು ಸಂಗತಿ ಎಂದರೇ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಮೃತ ಹೊಂದುತ್ತಿರುವ ಪ್ರಕರಣಗಳಲ್ಲಿ ಹೊರಗುತ್ತಿಗೆ ಸಂಸ್ಥೆ, ಇಲಾಖೆ ಅಧಿಕಾರಿಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ. ಅವರನ್ನು ಆರೋಪಿಗಳನ್ನಾಗಿಯೂ ಹೆಸರಿಸಿಲ್ಲ ಎಂಬುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts