ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ; ಪ್ರಧಾನಿ ಕಚೇರಿ ಬರೆದಿದ್ದ ಪತ್ರಕ್ಕೆ 6 ತಿಂಗಳಾದರೂ ಕ್ರಮವಿಲ್ಲ

ಬೆಂಗಳೂರು; ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಮರಣ ಹೊಂದಿದ ಮತ್ತು ಗಾಯಗೊಂಡವರಿಗೆ ಪರಿಹಾರ ಪಾವತಿಸುವ ಸಂಬಂದ ಪ್ರಧಾನ ಮಂತ್ರಿ ಕಚೇರಿ ಬರೆದಿದ್ದ ಪತ್ರವನ್ನು ಆಧರಿಸಿ ಕಂದಾಯ ಇಲಾಖೆಯ ಶಾಖೆಯು 6 ತಿಂಗಳಿನಿಂದ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ಭೂ ಕುಸಿತ, ಪ್ರವಾಹ, ಬೆಂಕಿ ದುರಂತ ಸೇರಿದಂತೆ ಇನ್ನಿತರೆ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಮರಣ ಹೊಂದಿದವರಿಗೆ 2 ಲಕ್ಷ ಮತ್ತು ಗಾಯಗೊಂಡ ಸಂತ್ರಸ್ತರಿಗೆ ತಲಾ 50,000 ರು.ನಂತೆ ಪರಿಹಾರ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸಬೇಕು.

 

ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿಯು ನಿರ್ದಿಷ್ಟ ಸೂಚನೆಗಳನ್ನು ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2023ರ ಸೆ.23ರಂದು ಪತ್ರ ಬರೆದಿತ್ತು. ಆದರೆ ಈ ಪತ್ರವು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯೊಂದರಲ್ಲೇ 6 ತಿಂಗಳವರೆಗೆ ಬಾಕಿ ಇತ್ತು. ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ ಮಹೇಶ್‌ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಪ್ರಧಾನ ಮಂತ್ರಿ ಕಚೇರಿ ಬರೆದಿದ್ದ ಪತ್ರ ಮತ್ತು ಕಂದಾಯ ಇಲಾಖೆಯ ಕೆಲವು ಟಿಪ್ಪಣಿ (RD/135/TNR/2024-DM-REVENUE DEAPARTMENT COMPUTER NUMBER 1361677) ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪಿಎಂಒ ಕಚೇರಿ ಪತ್ರದಲ್ಲೇನಿತ್ತು?

 

2023ನೇ ಸಾಲಿನಲ್ಲಿ ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂ ಕುಸಿತ, ಸೈಕ್ಲೋನ್‌, ಬೆಂಕಿ ದುರಂತಗಳಿಂದ ಮರಣ ಹೊಂದಿದ ವಾರಸುದಾರರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‍‌ಎಫ್‌)ದಂತೆ ತಲಾ 2.00 ಲಕ್ಷದಂತೆ ಹಾಗೂ ಗಾಯಗೊಂಡವರಿಗೆ ತಲಾ 50,000 ರು.ನಂತೆ ಪರಿಹಾರ ಪಾವತಿಸಲು ತೀರ್ಮಾನಿಸಲಾಗಿದೆ. ಪರಿಹಾರ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಆಡುವ ಉದ್ದೇಶದಿಂದ https;//exgratia.nic.in ರಡಿ ಲಾಗಿನ್‌ ಆಗಿ ಮಾಹಿತಿಗಳನ್ನು ಅಳವಡಿಸಬೇಕು.

 

ಸಂತ್ರಸ್ತ, ಗಾಯಗೊಂಡವರ ಹೆಸರು, ವಯಸ್ಸು ಮತ್ತು ಲಿಂಗ, ಮೊಬೈಲ್‌ ನಂಬರ್‍‌, ಸಂತ್ರಸ್ತ, ಗಾಯಗೊಂಡವರ ತಂದೆ/ಹೆಂಡತಿ/ ಸಂಬಂಧಿ ಹೆಸರು, ಅಂಚೆ ವಿಳಾಸ, ಆಧಾರ್‍‌ ನಂಬರ್‍‌, ಬ್ಯಾಂಕ್‌ ಖಾತೆ ವಿವರಗಳನ್ನು https;//exgratia.nic.in ನಲ್ಲಿ ಮಾಹಿತಿಗಳನ್ನು ಅಳವಡಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿಯು 2023ರ ಸೆ.23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ಸೂಚಿಸಿದ್ದರು.

 

ಇದಕ್ಕೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಇಲಾಖೆಯ ಕಾರ್ಯದರ್ಶಿಗಳು ನೋಡಲ್‌ ಅಧಿಕಾರಿಗಳಾಗಿದ್ದಾರೆ. ಫಲಾನುಭವಿಗಳಿಗೆ ಆನ್‌ ಲೈನ್‌ ಮೂಲಕ ಪರಿಹಾರ ಪಾವತಿಸುವ ಸಲುವಾಗಿ ಜಿಲ್ಲೆಗಳಿಂದ ಮಾಹಿತಿ ಪಡೆಯಬೇಕು. ಈ ಮಾಹಿತಿಯನ್ನು ಪರಿಶೀಲಿಸಿ ಆನ್‌ ಲೈನ್‌ ನಲ್ಲಿ ಅಪ್‌ ಲೋಡ್‌ ಮಾಡಿ ಲಾಗಿನ್ ಒದಗಿಸಬೇಕು. ಆದರೆ ಈ ಯಾವ ನಿರ್ದೇಶನಗಳನ್ನೂ ಕಂದಾಯ ಇಲಾಖೆಯು 6 ತಿಂಗಳಾದರೂ ಯಾವುದೇ ಕ್ರಮವಹಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಪ್ರಧಾನ ಮಂತ್ರಿ ಕಚೇರಿಯು 2023ರ ಸೆಪ್ಟಂಬರ್‍‌ನಲ್ಲಿ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿ 2024ರ ಮಾರ್ಚ್‌ 16ರಂದು ಪತ್ರ ವ್ಯವಹಾರ ಶುರುವಾಗಿದೆ. ಮಾರ್ಚ್‌ 25ರಂದು ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರು ಇ-ಆಫೀಸ್‌ ಟಿಪ್ಪಣಿ ಹಾಳೆಯಲ್ಲಿ ವಿಳಂಬಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದ್ದಾರೆ.

 

Pl speak to the concerned official in Government of India and find out whether the letter is currently relevant? why was it pending in Section for so long? ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ.

 

ಈ ಪತ್ರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts