ಅನಿಲ ನೀತಿ ಶುಲ್ಕ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ; ಪಿಡಬ್ಲ್ಯೂಡಿ ಟಿಪ್ಪಣಿ ಹಾಳೆಗಳು ಬಹಿರಂಗ

ಬೆಂಗಳೂರು;  ನಗರ ಅನಿಲ ವಿತರಣೆ ಅಭಿವೃದ್ಧಿ ಜಾಲ ರಾಜ್ಯ ನೀತಿಯಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಪ್ರಸ್ತಾಪಿಸಿದ್ದ ಶುಲ್ಕ ಇಳಿಕೆಯು ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯು ಸ್ಪಷ್ಟವಾಗಿ ಎರಡು ವರ್ಷಗಳ ಹಿಂದೆಯೇ ಎಚ್ಚರಿಸಿತ್ತು.

 

ಶುಲ್ಕ ಇಳಿಕೆಯಿಂದಾಗಿ ಬೊಕ್ಕಸಕ್ಕೆ ಧಕ್ಕೆಯಾಗಲಿದೆ ಎಂದು ಸ್ಪಷ್ಟ ಮತ್ತು ನಿಖರವಾಗಿ ಪಿಡಬ್ಲ್ಯೂಡಿ ನೀಡಿದ್ದ ಅಭಿಪ್ರಾಯವನ್ನೂ ಬದಿಗೊತ್ತಿದ್ದ ಇಲಾಖೆ ಸಚಿವ ಎಂ ಬಿ ಪಾಟೀಲ್‌ ಅವರು ಪ್ರತಿ ಕಿ ಮೀ ಗೆ 19.57 ಲಕ್ಷ ರು ನಿಂದ 1,000 ರು. ಇಳಿಸಲು (ಪ್ರತಿ ಮೀಟರ್‍‌ಗೆ 1,957 ರು ನಿಂದ 1 ರು.ಗೆ) ಅನುಮೋದಿಸಿದ್ದರು ಎಂಬುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಸಿಜಿಡಿ ನೀತಿ ಕುರಿತು ಪಿಡಬ್ಲ್ಯೂಡಿ ನೀಡಿರುವ ಅಭಿಪ್ರಾಯದ ಕುರಿತು 400ಕ್ಕೂ ಹೆಚ್ಚು ಪುಟಗಳುಳ್ಳ ಕಡತವನ್ನು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಸಿಜಿಡಿ ನೀತಿಯಿಂದಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಂದಾಜು 5,000 ಕೋಟಿಯಷ್ಟು ಆದಾಯ ಖೋತಾ ಆಗಲಿದೆ ಎಂದು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳಿಗೆ ಸ್ಪಷ್ಟೀಕರಣ ನೀಡಿದ್ದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಮಂಜುಳ ಎನ್‌ ಅವರು ಆದಾಯ ಖೋತಾ ಆಗಲಿದೆ ಎಂಬುದನ್ನು ತಳ್ಳಿ ಹಾಕಿದ್ದರು.

 

ಆದರೀಗ ಪಿಡಬ್ಲ್ಯೂಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಎನ್‌ ರಾಮಚಂದ್ರಪ್ಪ ಅವರು ಶುಲ್ಕ ಇಳಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಆಗಲಿದೆ ಎಂದು ಎರಡು ವರ್ಷದ ಹಿಂದೆಯೇ ನೀಡಿದ್ದ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ಬಂದಂತಾಗಿದೆ.

 

ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಪ್ರಸ್ತಾಪಿಸಿದ್ದ ನಗರ ಅನಿಲ ವಿತರಣೆ ಅಭಿವೃದ್ಧಿ ಜಾಲ ನೀತಿ ಸಂಬಂಧ ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕ ಕುರಿತು ಲೋಕೋಪಯೋಗಿ ಇಲಾಖೆಯು ಸ್ಪಷ್ಟ ಹಾಗೂ ನಿಖರತೆಯಿಂದ ಕೂಡಿದ್ದ ಅಭಿಪ್ರಾಯ ನೀಡಿತ್ತು.

 

ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಎನ್‌ ರಾಮಚಂದ್ರಪ್ಪ ಅವರು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಪ್ರಸ್ತಾಪಿಸಿದ್ದ ಶುಲ್ಕದಲ್ಲಿನ ಇಳಿಕೆ ಪ್ರಸ್ತಾಪವನ್ನು ಪರಿಶೀಲಿಸಿದ್ದರು. ಇಲಾಖೆಯ ಪ್ರಸ್ತಾಪಿಸಿರುವ ಶುಲ್ಕ ಇಳಿಕೆಯ ಕ್ರಮವನ್ನು ಒಪ್ಪಿಕೊಂಡಲ್ಲಿ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು 2022ರ ಅಕ್ಟೋ ಬರ್‍‌ 31ರಂದೇ ಖಚಿತ ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅಭಿಪ್ರಾಯದಲ್ಲೇನಿದೆ?

 

ಐಡಿಡಿ ಇಲಾಖೆಯಿಂದ ತಯಾರಿಸಿ ಸಲ್ಲಿಸಿರುವ ಸಿಜಿಡಿ (ನಗರ ಅನಿಲ ವಿತರಣೆ) ನೀತಿಯಲ್ಲಿ ರಾಜ್ಯದಲ್ಲಿನ ರಸ್ತೆಗಳಲ್ಲಿ Right of Way (RoW) ಪರಿಮಿತಿಯಲ್ಲಿ ರಸ್ತೆಗಳನ್ನು ಕತ್ತರಿಸಲು ನಿಗದಿಪಡಿಸಿರುವ ದರವು ಪ್ರತಿ ಕಿ ಮೀ ಗೆ 1,000 ರು. ಆಗಿದ್ದು ಈಗಾಗಲೇ ಇಲಾಖಾ ವತಿಯಿಂದ ನಿಗದಿಪಡಿಸಿರುವ ದರಗಳಿಗೆ ಹೋಲಿಸಿದಾಗ ತೀರಾ ಕಡಿಮೆಯಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ ಉಂಟಾಗುತ್ತದೆ. ಈಗಾಗಲೇ ಪಾಲಿಸಿ ಅನುಸಾರ ನಿಗದಿಪಡಿಸಿರುವ ಪ್ರತಿ ಕಿ ಮೀ ಗೆ 1,000 ರು. ದರಗಳಿಗೆ ಯಾವುದೇ ನಿರ್ದಿಷ್ಟ time limit ನ್ನೂ ಸಹ ನಿಗದಿಪಡಿಸಿರುವುದಿಲ್ಲ ಎಂದು ಟಿಪ್ಪಣಿಯಲ್ಲಿ ದಾಖಲಿಸಿದ್ದರು.

 

ಅನಿಲ ವಿತರಣೆ ಪೈಪ್‌ಗಳನ್ನು ಅಳವಡಿಸುವ ಸಮಯದಲ್ಲಿ ಹಾಗೂ ಅಳವಡಿಸಿದ ನಂತರ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನಿಯಮಾನುಸಾರ ರಸ್ತೆಗಳ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಒಳಗೊಂಡಿದ್ದು ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ತಯಾರಿಸಲಾದ ಕರಡು ಸಿಜಿಡಿ ಬಗ್ಗೆ ಇಲಾಖಾ ಅಭಿಪ್ರಾಯ ನೀಡುವ ಬಗ್ಗೆ ಮುಂದಿನ ಆದೇಶ ಕೋರಿ ಕಡತವನ್ನು ಮಂಡಿಸಿದ್ದರು.

 

2022ರ ಅಕ್ಟೋಬರ್‍‌ 31ರಂದು ಕೆ ಎನ್‌ ರಾಮಚಂದ್ರಪ್ಪ ಅವರು ನೀಡಿದ್ದ ಅಭಿಪ್ರಾಯವನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್‌ ಸೆಲ್ವಕುಮಾರ್‍ ಮತ್ತು ಕಾರ್ಯದರ್ಶಿ ಕೆ ಎಸ್‌ ಕೃಷ್ಣಾರೆಡ್ಡಿ ‌ ಅವರು 2022ರ ನವೆಂಬರ್‍‌ 8ರಂದು ಗಮನಿಸಿದ್ದರು. ಈ ಅಂಶವನ್ನೇ ಇಲಾಖೆಯು 2022ರ ನವೆಂಬರ್‍‌ 22ರಂದು ಆಡಳಿತ ಇಲಾಖೆಗೂ ಕಳಿಸಿತ್ತು. ಇದನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಸ್‌ ಸೆಲ್ವಕುಮಾರ್‍‌ ಅವರು ಅನುಮೋದಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಆದರೆ ಆಡಳಿತ ಇಲಾಖೆಯು ಪ್ರಸ್ತಾಪಿಸಿದ್ದ ಶುಲ್ಕ ಇಳಿಕೆ ಕ್ರಮವನ್ನೇ ಸಚಿವ ಎಂ ಬಿ ಪಾಟೀಲ್‌ ಅವರು ಒಪ್ಪಿಕೊಂಡಿದ್ದರು.

 

ಎಂ ಬಿ ಪಾಟೀಲ್‌ ಅವರ ಟಿಪ್ಪಣಿಯಲ್ಲೇನಿತ್ತು?

 

‘ನಗರ ಅನಿಲ ವಿತರಣೆ ಯೋಜನೆ ಅಭಿವೃದ್ಧಿ ರಾಜ್ಯ ನೀತಿಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವುದು ಹಾಗೂ ಪ್ರಸ್ತಾಪಿತ ನೀತಿಯಲ್ಲಿ The permission and supervision charges for laying of gas pipeline along the roads shall be Rs.1000 per Kilometre  ಎಂದು ನಿಗದಿಪಡಿಸಲಾಗಿದ್ದು ಇದರಿಂದ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಯಲ್ಲಿ ಉಳಿತಾಯವಾಗುವ ಮೊತ್ತವು ಅಂತಿಮ ಬಳಕೆದಾರರಿಗೆ ವರ್ಗಾವಣೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು,’ ಎಂದು ಟಿಪ್ಪಣಿಯಲ್ಲಿ ದಾಖಲಿಸಿದ್ದರು.

 

 

 

 

ಅನಿಲ ಕಂಪನಿಗಳಿಗೆ ಬೇಷರತ್‌ ಲಾಭಾಂಶ ದೊರೆಯಲಿದೆ ಎಂದು ಗೊತ್ತಿದ್ದರೂ ಸಹ ಈ ನೀತಿಗೆ ಸಚಿವ ಸಂಪುಟವು ಅನುಮೋದಿಸಿತ್ತು.

ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್‌ ಲಾಭಾಂಶ!

 

ಮತ್ತೊಂದು ವಿಶೇಷವೆಂದರೇ ಗ್ರಾಹಕರಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡಲು ಅಗತ್ಯ ಗ್ಯಾಸ್‌ ಪೈಪ್‌ಲೈನ್ ಶುಲ್ಕ ಅಳವಡಿಸಲು ಅನುಮತಿ ಶುಲ್ಕ ಹಾಗೂ ಮೇಲ್ವಿಚಾರಣೆ ಶುಲ್ಕ ನಿಗದಿಪಡಿಸುವ ಕುರಿತು 2020ರ ಜನವರಿ 4ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯು ಸಹ ನಿರ್ದಿಷ್ಟ ಶುಲ್ಕಗಳನ್ನು ವಿಧಿಸಿತ್ತು.

 

ರಾಜ್ಯದ ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗೈಲ್‌ ಗ್ಯಾಸ್‌ ಲಿಮಿಟೆಡ್‌ ಮತ್ತು ಗೈಲ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಗಳು ಗ್ರಾಹಕರಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡಲು ಅಗತ್ಯ ಗ್ಯಾಸ್‌ ಪೈಪ್‌ಲೈನ್ ಶುಲ್ಕ ಅಳವಡಿಸಲು ಅನುಮತಿ ಶುಲ್ಕ ಹಾಗೂ ಮೇಲ್ವಿಚಾರಣೆ ಶುಲ್ಕ ನಿಗದಿಪಡಿಸುವ ಕುರಿತು 2020ರ ಜನವರಿ 4ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯ ಸಭೆಯ ನಂತರ ಆದೇಶವೂ ಹೊರಬಿದ್ದಿತ್ತು.

 

ಈ ಕುರಿತು ಚರ್ಚೆ ನಡೆಸಿದ್ದ ಉನ್ನತಾಧಿಕಾರ ಸಮಿತಿಯ ನಿರ್ಣಯದಂತೆ ಗ್ರಾಹಕರಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡಲು ಅಗತ್ಯ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಸ್ಥಳೀಯ ಸಂಸ್ಥೆಗಳಿಗೆ ಭರಿಸಬೇಕಾದ ಅನುಮತಿ ಶುಲ್ಕ ಹಾಗೂ ಮೇಲ್ವಿಚಾರಣೆ ಶುಲ್ಕ ನಿಗದಿಪಡಿಸುವ ಸಂಬಂಧ 2021ರ ಫೆ.8ರಂದು ಆದೇಶ ಹೊರಡಿಸಿತ್ತು.

 

ಈ ಆದೇಶದ ಪ್ರಕಾರ ಓಪನ್‌ ಟ್ರೆಂಚ್‌ ವಿಧಾನ ಮೂಲದ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಪ್ರತ ಮೀಟರ್‍‌ಗೆ 1,857 ರು ಅನುಮತಿ ಶುಲ್ಕ, ಹೆಚ್‌ಡಿಡಿ ವಿಧಾನದಲ್ಲಿ ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸಲು ಪ್ರತಿ ಮೀಟರ್‍‌ಗೆ 700 ರು., ಈ ಎರಡೂ ಪ್ರಕರಣಗಳಲ್ಲಿ ಪ್ರತಿ ಮೀಟರ್‍‌ಗೆ ರ00 ರು.ನಂತೆ ಮೇಲ್ವಿಚಾರಣೆ ಶುಲ್ಕ ನಿಗದಿಪಡಿಸಿತ್ತು.

 

ಸಿಜಿಡಿ ನೀತಿ ಕುರಿತಾಗಿ ಕಳೆದ ಎರಡು ವರ್ಷಗಳಿಂದಲೂ ಸಚಿವ ಸಂಪುಟಕ್ಕೆ ಮಂಡನೆಯಾಗಿದ್ದ ಅವಧಿಯಲ್ಲಿಯೂ ಪಿಡಬ್ಲ್ಯೂಡಿ ನೀಡಿದ್ದ ಅಭಿಪ್ರಾಯವನ್ನೇ ಮುಂದಿರಿಸಿತ್ತು. 2023ರಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ ಇದೇ ಅಭಿಪ್ರಾಯವನ್ನು ಕಡತದಲ್ಲಿ ಇರಿಸಲಾಗಿತ್ತು. ಆದರೆ ಈ ಅಭಿಪ್ರಾಯವನ್ನು ಆಡಳಿತ ಇಲಾಖೆಯಾದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಇದನ್ನು ಒಪ್ಪಿರಲಿಲ್ಲ.

ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ

 

 

ಪಿಡಬ್ಲ್ಯೂಡಿ ಅಭಿಪ್ರಾಯವನ್ನು ಮೀರಿದ್ದೇಕೆ?

 

ಲೋಕೋಪಯೋಗಿ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಒಪ್ಪಿರಲಿಲ್ಲ.

 

‘ತೆರೆದ ಕಂದಕಕ್ಕೆ ಅನುಮತಿ ಶುಲ್ಕ ಪ್ರತಿ ಮೀಟರ್‍‌ಗೆ 1,857, ಎಚ್‌ಡಿಡಿಗೆ ರು. 700 ಮತ್ತು ಮೇಲ್ವಿಚಾರಣೆ ಶುಲ್ಕಗಳಿಗಾಗಿ ಪ್ರತಿ ಮೀಟರ್‍‌ಗೆ 100 ರು.ಗಳ ಪ್ರಸ್ತಾವಿತ ಶುಲ್ಕಗಳನ್ನು ಆಡಳಿತ ಇಲಾಖೆಯು ಒಪ್ಪುವುದಿಲ್ಲ. ಹಾಗೂ ಇದನ್ನು ನೀತಿಯಲ್ಲಿ ಅಳವಡಿಸಿಲ್ಲ. ಕೊಳವೆ ಅನಿಲ ವಿತರಣೆ ಎಲ್ಲಾ ಜಿಲ್ಲೆಗಳ ಪ್ರತಿ ಮನೆ ಮನೆಗೂ ತಲುಪಬೇಕು ಎಂಬ ಉದ್ದೇಶದಿಂದ ಆಡಳಿತ ಇಲಾಖೆಯು ಪ್ರತಿ ಕಿ ಮೀ ಗೆ ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ 1,000 ರು.ಗಳನ್ನು ಪ್ರಸ್ತಾಪಿಸಿತ್ತು. ನಗರ ಅನಿಲ ವಿತರಣೆ ಸಂಸ್ಥೆಗಳು ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿಯೊಂದು ಮನೆಗೆ ಅನಿಲ ಕೊಳವೆಗಳನ್ನು ಅಳವಡಿಸಬೇಕು. ಇದು ದೊಡ್ಡ ಹೂಡಿಕೆಯಾಗಿದೆ.

 

 

 

ರಾಜ್ಯ ಅನಿಲ ನೀತಿಯಿಂದಾಗಿ  ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ 1,979 ಕಿ ಮೀಗಳಲ್ಲಿ ಅನಿಲ ವ ಅನಿಲ ವಿತರಣಾ ಜಾಲ ಅಭಿವೃದ್ಧಿಪಡಿಸಲು ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ ಗುತ್ತಿಗೆ ಪಡೆದುಕೊಂಡಿದೆ. ನೂತನ ನೀತಿಯಿಂದಾಗಿ 367.30 ಯಷ್ಟು ಲಾಭ ಆಗಿರುವುದು ಗೊತ್ತಾಗಿದೆ.

 

ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ 1, 187 ಕಿ ಮೀ ಗೆ 220.30 ಕೋಟಿ ರು., ಕಲ್ಬಗುಇF ಮತ್ತು ವಿಜಯಪುರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,395 ಕಿ ಮೀ ಗೆ 258.91 ಕೋಟಿ ರು., ಮೈಸೂರುಕ ಮಂಡ್ಯ,ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,293 ಕಿ ಮೀ ಗೆ 239.98 ಕೋಟಿ ರು. , ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,993 ಕಿ ಮೀ ಗೆ 369.90 ಕೋಟಿ ರು. ಗಳಷ್ಟು ಆರ್ಥಿಕ ಲಾಭವಾಗಿರುವುದು ತಿಳಿದು ಬಂದಿದೆ.

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 999 ಕಿ ಮೀ ಗೆ 185.41 ಕೋಟಿ ರು., ತುಮಕೂರು (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) ಜಿಲ್ಲೆಯಲ್ಲಿ 1,800 ಕಿ ಮೀ ಗೆ 334.08 ಕೋಟಿ ರು., ಧಾರವಾಡ ಜಿಲ್ಲೆಯಲ್ಲಿ ( ಇಂಡಿಯನ್‌ ಆಯಿಲ್‌ ಅದಾನಿ ಗ್ಯಾಸ್‌ ಲಿಮಿಟೆಡ್‌)1,520 ಕಿ ಮೀ ಗೆ 282.11 ಕೋಟಿ ರು., ಬೆಳಗಾವಿ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 1,800 ಕಿ ಮೀ ಗೆ 334.08 ಕೋಟಿ ರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 75 ಕಿ ಮೀ ಗೆ (ಯುನಿಸನ್‌ ಎನ್ವಾರ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌) 13.92 ಕೋಟಿ ರು. ಆರ್ಥಿಕ ಲಾಭವು ಕಂಪನಿಗಳಿಗೆ ತಂದುಕೊಟ್ಟಿರುವುದು ಗೊತ್ತಾಗಿದೆ.

 

ಉಡುಪಿ ಜಿಲ್ಲೆಯಲ್ಲಿ (ಅದಾನಿ ಗ್ಯಾಸ್‌ ಲಿಮಿಟೆಡ್‌) 569 ಕಿ ಮೀ ಗೆ 105.60 ಕೋಟಿ ರು., ಬಳ್ಳಾರಿ ಮತ್ತು ಗದಗ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ ಲಿಮಿಟೆಡ್‌) 1,365 ಕಿ ಮೀ ಗೆ 253.34 ಕೋಟಿ ರು., ಬೀದರ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ 143 ಕಿ ಮೀ ಗೆ 26.54 ಕೋಟಿ ರು., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಗೈಲ್‌ ಗ್ಯಾಸ್‌ ಇಂಡಿಯಾ ಲಿಮಿಟೆಡ್‌) 1,250 ಕಿ ಮೀ ಗೆ 232.00 ಕೋಟಿ ರು., ರಾಮನಗರ ಜಿಲ್ಲೆಯಲ್ಲಿ (ಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿಮಿಟೆಡ್‌) 354 ಕಿ ಮೀ ಗೆ 65.70 ಕೋಟಿ ರು ಸೇರಿದಂತೆ ಒಟ್ಟಾರೆ 3,289.20 ಕೋಟಿಯಷ್ಟು ಲಾಭವು ಅನಾಯಸವಾಗಿ ಕಂಪನಿಗಳ ಬೊಕ್ಕಸ ಸೇರಲಿದೆ.

SUPPORT THE FILE

Latest News

Related Posts