ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್‌ ಲಾಭಾಂಶ!

ಬೆಂಗಳೂರು; ಕರ್ನಾಟಕ ರಾಜ್ಯ ಅನಿಲ ವಿತರಣೆ ಜಾಲ ಅಭಿವೃದ್ಧಿ ನೀತಿಯು ಒಂದು ಕಡೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಇನ್ನೊಂದು ಕಡೆ ಅನುಷ್ಠಾನದ ಏಜೆನ್ಸಿಗೆ ಬೇಷರತ್ತಾಗಿ ಲಾಭಾಂಶವನ್ನು ಒದಗಿಸಿದೆ.

 

 

ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭ ಮತ್ತು ಉಳಿತಾಯವಾಗುವ ಮೊತ್ತದ ವರ್ಗಾವಣೆಯ ಕುರಿತಾಗಿ ಸಚಿವ ಎಂ ಬಿ ಪಾಟೀಲ್‌ ಮತ್ತು ಅಂದು ಮುಖ್ಯ ಕಾರ್ಯದರ್ಶಿಗಳಾಗಿದ್ದ ವಂದಿತಾ ಶರ್ಮಾ ಅವರು ಟಿಪ್ಪಣಿಯಲ್ಲಿ ದಾಖಲಿಸಿರುವ ಅಂಶಗಳೂ ಚರ್ಚೆಗೆ ಗ್ರಾಸವಾಗಿವೆ.

 

 

ಕರ್ನಾಟಕ ರಾಜ್ಯ ಅನಿಲ ವಿತರಣೆ ಜಾಲ ಅಭಿವೃದ್ಧಿ ನೀತಿಯ ಕುರಿತಾಗಿ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

 

ಎಂ ಬಿ ಪಾಟೀಲ್‌ ಅವರ ಟಿಪ್ಪಣಿಯಲ್ಲೇನಿದೆ?

 

 

‘ನಗರ ಅನಿಲ ವಿತರಣೆ ಯೋಜನೆ ಅಭಿವೃದ್ಧಿ ರಾಜ್ಯ ನೀತಿಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸುವುದು ಹಾಗೂ ಪ್ರಸ್ತಾಪಿತ ನೀತಿಯಲ್ಲಿ The permission and supervision charges for laying of gas pipeline along the roads shall be Rs.1000 per Kilometre  ಎಂದು ನಿಗದಿಪಡಿಸಲಾಗಿದ್ದು ಇದರಿಂದ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಯಲ್ಲಿ ಉಳಿತಾಯವಾಗುವ ಮೊತ್ತವು ಅಂತಿಮ ಬಳಕೆದಾರರಿಗೆ ವರ್ಗಾವಣೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು,’ ಎಂದು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

 

 

ವಿಶೇಷವೆಂದರೇ ಈ ನೀತಿಗೆ ಸಚಿವ ಸಂಪುಟದ ಅನುಮೋದನೆಯ ನಂತರ ಮುಖ್ಯ ಕಾರ್ಯದರ್ಶಿಗಳು ತಮ್ಮ ವಿಶೇಷ ಟಿಪ್ಪಣಿಯನ್ನು ಸೇರಿಸಿರುವುದು ಕಡತದಿಂದ ಗೊತ್ತಾಗಿದೆ.

 

 

 

ವಂದಿತಾ ಶರ್ಮಾ ಅವರ ಟಿಪ್ಪಣಿಯಿದು

 

 

“ಈ ಬಗ್ಗೆ ಚರ್ಚಿಸಲಾಗಿದೆ” ಮತ್ತು “ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆಡಳಿತ ಶಾಖೆ ಕ್ರಮ ಕೈಗೊಳ್ಳಬೇಕು” ಸೂಚಿಸಿದ್ದಾರೆ.

 

 

 

 

ಅಂತಿಮ ಬಳಕೆದಾರರಿಗೆ ಅಂದರೆ ಸಾರ್ವಜನಿಕರಿಗೆ ಯಾವುದೇ ಒಂದು ಆರ್ಥಿಕ ಪ್ರಯೋಜನವನ್ನು ತಲುಪಿಸುವ ಜವಾಬ್ದಾರಿಯು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಸರ್ಕಾರದ ಈ ಆದ್ಯ ಕರ್ತವ್ಯವನ್ನು ಸರ್ಕಾರವೇ ಒಂದು ಖಾಸಗಿ ಅನುಷ್ಠಾನ ಏಜೆನ್ಸಿಗೆ ಸಂಪೂರ್ಣ ಲಾಭಾಂಶವನ್ನು ಒದಗಿಸುವ ರೀತಿಯಲ್ಲಿಯೇ ಸಿಜಿಡಿ ನೀತಿಯನ್ನು ರೂಪಿಸಿದಂತಿದೆ. ಇದು ಸರ್ಕಾರದ ಪ್ರಾಥಮಿಕ ಕರ್ತವ್ಯಗಳಿಗೆ ತದ್ವಿರುದ್ಧವಾಗಿರುತ್ತದೆ ಎಂಬ ಅಭಿಪ್ರಾಯಗಳೂ ಅಧಿಕಾರಿಶಾಹಿ ವಲಯದಲ್ಲಿ ವ್ಯಕ್ತವಾಗಿವೆ.

 

 

ಬಳಕೆದಾರರಿಗೆ ಲಾಭ ವರ್ಗಾವಣೆ ಆಗಲಿದೆಯೇ?

 

 

ಅನಿಲ ಸರಬರಾಜು ದರ ಕೇಂದ್ರ ಮಟ್ಟದಲ್ಲಿ ಎಲ್ಲರಿಗೂ ಅನ್ವಯವಾಗುವ ರೀತಿ ನಿರ್ಧರಿತವಾಗುವಾಗ ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳ ಟಿಪ್ಪಣಿಯಲ್ಲಿದ್ದಂತೆ ಬಳಕೆದಾರರಿಗೆ ಹೇಗೆ ಅದು ವರ್ಗಾಯಿಸಲ್ಪಡಬಹುದು ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

 

 

ಉದಾಹರಣೆಗೆ ಶುಲ್ಕದಲ್ಲಿ ಇಳಿಕೆ ಆಗಿರುವುದರಿಂದ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ 1,788 ಕೋಟಿ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರವು ಗುತ್ತಿಗೆದಾರ ಸಂಸ್ಥೆಗಳಿಗೆ ಆಗಿರುವ ಲಾಭವನ್ನು ಲೆಕ್ಕಹಾಕಿ ನಿರ್ಣಯಿಸಿ ದಾಖಲಿಸಿಲ್ಲ. ಹೀಗಾಗಿ ಈ ಲಾಭವನ್ನು ಹೇಗೆ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯ, ಅದೇ ರೀತಿ ಎಷ್ಟು ವರ್ಷಗಳ ಅವಧಿಯಲ್ಲಿ ಈ ಲಾಭ ವರ್ಗಾವಣೆ ಆಗಲು ಸಾಧ್ಯ ಎಂಬ ಪ್ರಶ್ನೆಯೂ ಉದ್ಭವಿಸಿದೆ.

 

 

ಒಂದೇ ಏಟಿಗೆ ಶುಲ್ಕ ಪಾವತಿಯಲ್ಲಿ 1,788 ಕೋಟಿ ಲಾಭ ಮಾಡಿಕೊಳ್ಳಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರಲಿರುವ ಸಂಸ್ಥೆಯು ಗ್ರಾಹಕರಿಗೆ ಪ್ರತಿ ಕೆಜಿ ಅನಿಲಕ್ಕೆ ಹತ್ತು ಪೈಸೆ ವಿನಾಯಿತಿ ನೀಡಿದರೆ ಅದರಿಂದ ಸಾರ್ವಜನಿಕರಿಗೆ ಯಾವ ಲಾಭ ಆಗಲಿದೆ ಎಂಬ ಪ್ರಶ್ನೆಗೆ ಕಡತದ ಯಾವ ಹಾಳೆಯಲ್ಲಿಯೂ ಉತ್ತರವಿಲ್ಲ ಮತ್ತು ಅದಕ್ಕೆ ಸೂಕ್ತ ಸಮರ್ಥನೆಯೂ ಇಲ್ಲ.

 

 

‘ಈ ಶುಲ್ಕ ಇಳಿಕೆಯಿಂದಾಗಿ ಹೆಚ್ಚಿಗೆ ಅನಿಲ ಮಾರಾಟ ಆಗಿ ಅನಿಲ ಮಾರಾಟದ ತೆರಿಗೆ ಹಣ ಹೆಚ್ಚಿಗೆ ಆಕರಗೊಳ್ಳುವುದು ಎಂದು  ಮೂಲಸೌಕರ್ಯ ಇಲಾಖೆ ನೀಡುವ ಸಮರ್ಥನೆಯೇ ಹಾಸ್ಯಾಸ್ಪದವಾಗಿದೆ.ಕೆಜಿ ಅನಿಲಕ್ಕೆ ಹತ್ತು ಪೈಸೆ ಇಳಿಕೆಯಾದರೆ ಸಾರ್ವಜನಿಕರೇನು ಅನಿಲವನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡಿ ಅದನ್ನು ತಮ್ಮ ಮನೆಯ ಗಿಡಗಳಿಗೆ ಹಾಕಲು ಆಗುತ್ತದೆಯೇ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

 

‘ಪ್ರಸ್ತಾಪಿತ ಸಿಜಿಡಿ ನೀತಿಯಲ್ಲಿ ಈ ಅಂಶವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.   ಅನುಷ್ಠಾನದ ಏಜೆನ್ಸಿಗೆ ಒದಗಿಸುತ್ತಿರುವ ಲಾಭಾಂಶವನ್ನು ಅಂತಿಮ ಬಳಕೆದಾರರಾದ ಸಾರ್ವಜನಿಕರಿಗೆ ತಲುಪಿಸುವುದರಲ್ಲಿ ಸರ್ಕಾರದ ಚಿತ್ತ ಶುದ್ದಿಯನ್ನು ಪ್ರಶ್ನಿಸಲು ಅವಕಾಶ ನೀಡಿದಂತಾಗುತ್ತದೆ,’ ಎಂದೂ ತಮ್ಮ ಅಭಿಪ್ರಾಯನ್ನು ವಿಸ್ತರಿಸುತ್ತಾರೆ.

 

 

ಕೇಂದ್ರ ಸರ್ಕಾರದ ಎಂಒಪಿಎನ್‌ಜಿ ಮತ್ತು ಪಿಎನ್‌ಜಿಆರ್‍‌ಬಿ ಅವರು ಸಿಜಿಡಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಅನುಷ್ಠಾನದ ಏಜೆನ್ಸಿಗಳಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಲು ಕೋರಿದ್ದರು.

 

ಅವರ ಕೋರಿಕೆ ಮೇರೆಗೆ ಮಾತ್ರ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸಿಜಿಡಿ ನೀತಿಯಲ್ಲಿ ಅನುಷ್ಠಾನದ ಏಜೆನ್ಸಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿದೆ. ಇದರಿಂದ ವಿನಾಯಿತಿಗೆ ಸಮಾನವಾದ ಲಾಭಾಂಶವನ್ನು ಅಂತಿಮ ಬಳಕೆದಾರರಾದ ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಎಂಒಪಿಎನ್‌ಜಿ ಮತ್ತು ಪಿಎನ್‌ಜಿಆರ್‍‌ಬಿರವರೇ ವಹಿಸಬೇಕೆಂದು ಪ್ರಸ್ತಾಪಿಸುವುದು ಸಮಂಜಸವಲ್ಲ ಎಂದು  ಅಧಿಕಾರಿಯೊಬ್ಬರು ವಾದವನ್ನೂ  ಮುಂದಿಡುತ್ತಾರೆ.

 

‘ಏಕೆಂದರೇ ರಾಜ್ಯ ಸರ್ಕಾರವು ಸಿಜಿಡಿ ನೀತಿಯಲ್ಲಿ ಅನುಷ್ಠಾನದ ಏಜೆನ್ಸಿಗೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿರುವುದರಿಂದ ರಾಜ್ಯದ ಸಂಚಿತ ನಿಧಿಗೆ ನಷ್ಟವಾಗುತ್ತದೆಯೇ ಹೊರತು ಕೇಂದ್ರ ಸರ್ಕಾರದ ಸಂಚಿತ ನಿಧಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ,’ ಎಂದು ವಿಶ್ಲೇಷಿಸುತ್ತಾರೆ  ಹಿರಿಯ ಅಧಿಕಾರಿಯೊಬ್ಬರು.

 

 

ಒಂದು ವೇಳೆ ಪ್ರಸ್ತಾಪಿತ ಅನುಷ್ಠಾನದ ಏಜೆನ್ಸಿಯಿಂದ ರಾಜ್ಯ ಸರ್ಕಾರವು ರಾಜ್ಯದ ಸಿಜಿಡಿ ನೀತಿ ಮೂಲಕ ಗರಿಷ್ಠ ಮೊತ್ತ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕವನ್ನು ವಸೂಲು ಮಾಡಿದಲ್ಲಿ ರಾಜ್ಯ ಸರ್ಕಾರವೇ ಸದರಿ ಲಾಭಾಂಶವನ್ನು ಅಂತಿಮ ಬಳಕೆದಾರರಿಗೆ ತಲುಪಿಸಬಹುದಾಗಿತ್ತು.

 

 

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದ ರೆಗ್ಯುಲೆಟರಿ ಸಂಸ್ಥೆಗಳನ್ನು ಕೋರಿರುವುದರಿಂದ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಕ್ಕೆ ರಿಯಾಯಿತಿ/ವಿನಾಯಿತಿ ನೀಡಿ ಒಂದು ಕಡೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಇನ್ನೊಂದು ಕಡೆ ಅನುಷ್ಠಾನದ ಏಜೆನ್ಸಿಗೆ ಬೇಷರತ್ತಾಗಿ ಲಾಭಾಂಶವನ್ನು ಒದಗಿಸಿದಂತಾಗಿದೆ.

 

 

ಕೊನೆಗೆ ಈ ಲಾಭಾಂಶವನ್ನು ಅಂತಿಮ ಬಳಕೆದಾರರಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರದ ರೆಗ್ಯುಲೆಟರಿ ಸಂಸ್ಥೆಗಳು ನೋಡಿಕೊಳ್ಳಬೇಕೆಂದು ಪ್ರಸ್ತಾಪಿಸುವುದು ರಾಜ್ಯ ಜನತೆಯ ಹಿತಾಸಕ್ತಿಯನ್ನು ಕಾಪಾಡಬೇಕಾದ ರಾಜ್ಯ ಸರ್ಕಾರದ ಆದ್ಯ ಕರ್ತವ್ಯವನ್ನು ತಳ್ಳಿ ಹಾಕಿದಂತಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

 

ಶುಲ್ಕ ಇಳಿಕೆ ಮತ್ತು ಅಂತಿಮ ಬಳಕೆದಾರರಿಗೆ ಇದರ ಲಾಭಾಂಶ ದೊರೆಯಲಿದೆ ಎಂಬ ಬಗ್ಗೆಯೂ ಹಲವು ಪ್ರಶ್ನೆಗಳು ಉದ್ಭವಿಸಿವೆ.

 

1. ನೂತನ ನಗರ ಅನಿಲ ಸರಬರಾಜು ನೀತಿಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನೇ ಪಡೆಯದೇ ಇದ್ದರೂ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳ ವಿರುದ್ಧವಾಗಿ  ನೂತನ ಅನಿಲ ಸರಬರಾಜು ನೀತಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಮುಖ್ಯ ಕಾರ್ಯದರ್ಶಿಗಳು ಏಕೆ  ಒಪ್ಪಿದರು?

 

2. ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟದ ಅನುಮೋದನೆಯ ನಂತರ ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆಡಳಿತ ಶಾಖೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ವಿಶೇಷ ಟಿಪ್ಪಣಿಯಲ್ಲಿ ದಾಖಲಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿತ್ತೆ?

 

3. ಇದೇ ವಿಷಯ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಲವಾರು ಬಾರಿ ಸಚಿವ ಸಂಪುಟದ ಮುಂದೆ ಬಂದು ಬದಿಗಿಡಲಾಗಿತ್ತು. ಈ  ವಿಷಯವನ್ನು ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಈ ಸರ್ಕಾರಕ್ಕೆ/ ಸಚಿವಸಂಪುಟಕ್ಕೆ ತಿಳಿಸಿದ್ದರೇ?

 

4. ನೂತನ ನೀತಿಯಿಂದ ಅನಿಲ ಸರಬರಾಜು ಸಂಸ್ಥೆಗಳಿಗೆ ಲಾಭ ಆಗುತ್ತಿರುವುದು ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳಿಗೆ ಅರಿವಿದ್ದರೆ ಅನಿಲ ಸರಬರಾಜು ಸಂಸ್ಥೆಗಳಿಗೆ ಒಟ್ಟೂ ಎಷ್ಟು ಮೊತ್ತದ ಲಾಭ ಆಗುತ್ತಿದೆ ಮತ್ತು ಇದರಿಂದಾಗಿ ಸರ್ಕಾರಕ್ಕೆ ಎಷ್ಟು ಆದಾಯ ಖೋತಾ ಆಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ತಿಳಿಸಲು ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದರೇ?

 

5. ಅನಿಲ ಸರಬರಾಜು ಸಂಸ್ಥೆಗಳಿಗೆ ಒಟ್ಟೂ ಎಷ್ಟು ಮೊತ್ತದ ಲಾಭ ಆಗುತ್ತಿದೆ ಎನ್ನುವುದನ್ನು ಲೆಕ್ಕ ಹಾಕಿಲ್ಲವಾದಲ್ಲಿ ಸಾರ್ವಜನಿಕರಿಗೆ ಒಟ್ಟೂ ಎಷ್ಟು ಮೊತ್ತ ವರ್ಗಾವಣೆ ಆಗಬೇಕಿದೆ ಎಂದು ಯಾರು ತೀರ್ಮಾನಿಸುವುದು?

 

6. ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭ ಸಾರ್ವಜನಿಕರಿಗೆ ದೊರೆಯುವುದೇ ಅನಿಶ್ಚಿತವಾಗಿರುವಾಗ ಶುಲ್ಕ ಕಡಿಮೆ ಮಾಡಿ ಸರ್ಕಾರಕ್ಕೆ ನಷ್ಟವಾಗುವ ಕ್ರಮಕ್ಕೆ ಏಕೆ ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳು ಮೌನವಾಗಿದ್ದರು?

SUPPORT THE FILE

Latest News

Related Posts