ಬೆಂಗಳೂರು; ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಆಳ್ವಾಸ್ ಶಿಕ್ಷಣ ಸಂಸ್ಥೆಯು ರಾಜ್ಯ ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕ್ಯಾಪಿಟೇಷನ್ ಶುಲ್ಕ ಮತ್ತು ಸ್ಟಡಿ ಮೆಟಿರಿಯಲ್ಸ್‌ಗಳಿಗಾಗಿ ಶುಲ್ಕ ಪಡೆದಿರುವುದನ್ನು ತನಿಖಾ ತಂಡವು ದೃಢಪಡಿಸಿರುವುದು ಇದೀಗ ಬಹಿರಂಗವಾಗಿದೆ.
ತನಿಖಾ ತಂಡವು ನೀಡಿದ್ದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನೂ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಪ್ರಥಮ ಮತ್ತು ದ್ವಿತೀಯ ಪದವಿಪೂರ್ವ ಪ್ರವೇಶಕ್ಕೆ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿದೆ ಎಂದು ರಮೇಶ್ ಬೆಟ್ಟಯ್ಯ ಎಂಬುವರು 2020ರ ಫೆ.7ರಂದು ದೂರು ಸಲ್ಲಿಸಿದ್ದರು.
ಈ ದೂರನ್ನಾಧರಿಸಿ ತನಿಖೆ ನಡೆಸಲು ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ನಿರ್ದೇಶಕರಾದ ಕುಸುಮಾಕುಮಾರಿ (ಪ್ರಭಾರ) ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿತ್ತು.
ಈ ತನಿಖಾ ತಂಡವು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತಪಾಸಣೆ ನಡೆಸಿತ್ತು. ಹೆಚ್ಚುವರಿ ಶುಲ್ಕವೂ ಸೇರಿದಂತೆ ಮತ್ತಿತರೆ ಉಲ್ಲಂಘನೆಗಳ ಕುರಿತು ಆಡಳಿತ ಮಂಡಳಿಯು ಸಮಜಾಯಿಷಿ ಮತ್ತು ಸ್ಪಷ್ಟೀಕರಣ ನೀಡಿತ್ತು.
ದೂರಿನಲ್ಲಿದ್ದ ಅಂಶ ಮತ್ತು ಆಡಳಿತ ಮಂಡಳಿಯ ಸಮಜಾಯಿಷಿ, ಸ್ಪಷ್ಟೀಕರಣ ಪರಿಶೀಲಿಸಿದ ನಂತರ ತನಿಖಾ ತಂಡವು ಆಳ್ವಾಸ್ ಶಿಕ್ಷಣ ಸಂಸ್ಥೆಯು ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿರುವುದನ್ನು ದೃಢಪಡಿಸಿದೆ.
ಆಳ್ವಾಸ್ ಪದವಿ ಪೂರ್ವ ಕಾಲೇಜು 2016-17ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಮತ್ತು ಶುಲ್ಕಗಳ ಪಟ್ಟಿಯನ್ನು ತನಿಖಾ ತಂಡವು ಪರಿಶೀಲಿಸಿದೆ. ಇದರ ಪ್ರಕಾರ ಪ್ರಥಮ ಪಿಯುಸಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಇನ್ನಿತರೆ ಶುಲ್ಕಗಳೆಂದು 1,252 ರು. ಎಂದು ಸರ್ಕಾರವು ನಿಗದಿಪಡಿಸಿತ್ತು. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆ 19,900 ರು.ಗಳನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿರುವುದು ತನಿಖಾ ತಂಡದ ವರದಿಯಿಂದ ತಿಳಿದು ಬಂದಿದೆ.
ಆಳ್ವಾಸ್ ಕಾಲೇಜಿನಿಂದ ಹೆಚ್ಚುವರಿ ಶುಲ್ಕ, ಮಾರ್ಗಸೂಚಿ ಉಲ್ಲಂಘನೆ; ಮಾನ್ಯತೆ ಹಿಂಪಡೆಯಲು ನಿರ್ದೇಶನ
ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 18,64 ರು . ವಸೂಲು ಮಾಡಿತ್ತು. ಅಲ್ಲದೇ ಇಲಾಖೆ ನಿಗದಿಪಡಿಸಿರುವ ಶುಲ್ಕಗಳ ಜತೆಯಲ್ಲಿಯೇ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 4,000 ರು. ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ.
ಪ್ರಥಮ ಪಿಯುಸಿಗೆ ವಸೂಲು ಮಾಡಿದ ಶುಲ್ಕದ ಪಟ್ಟಿ
ಪ್ರವೇಶ ಅರ್ಜಿಗೆ 25 ರು., ನೋಂದಣಿಗೆ 35 ರು., ಪ್ರವೇಶ ಶುಲ್ಕ 50 ರು., ಕ್ರೀಡಾ ಶುಲ್ಕ 34 ರು., ಗ್ರಂಥಾಲಯ ಶುಲ್ಕ 120 ರು., ಸಾಂಸ್ಕೃತಿಕ ಚಟುವಟಿಕೆಗಳಿಗೆ 67 ರು., ಟಿಡಬ್ಲ್ಯೂಎಫ್ 25 ರು., ಎಸ್‌ಡಬ್ಲ್ಯೂಎಫ್ 25 ರು., ತರಗತಿ ಪರೀಕ್ಷೆಗೆ 168 ರು., ಟಿಎಂಎಫ್‌ಗೆ 24 ರು., ವಿದ್ಯುಚ್ಛಕ್ತಿ ಶುಲ್ಕ 24 ರು., ಫ್ಲಾಗ್ 20 ರು, ರೋವರ್ಸ್ ರೇಂಜರ್ಸ್ 50 ರು., ಎನ್‌ಎಸ್‌ಎಸ್‌ಗೆ 5 ರು., ಸ್ಕೌಟ್ಸ್ 10 ರು., ಲ್ಯಾಬ್ 336 ರು., ಪ್ರಾಕ್ಟಿಕಲ್‌ಗೆ 150 ರು., ಐಡಿ ಕಾರ್ಡ್‌ಗೆ 100 ರು., ಕಾಲೇಜ್ ಮ್ಯಾಗಜೀನ್‌ಗೆ 600 ರು., ಮೆಡಿಕಲ್ 150 ರು., ಸಮವಸ್ತ್ರ ಬಟ್ಟೆಗೆ 3,000 ರು., ಕ್ಯಾಪಿಟಲ್ ಫೀ 14,494 ರು. ಸೇರಿ ಒಟ್ಟಾರೆ 19,900 ರು. ವಸೂಲಿ ಮಾಡಿರುವುದು ಪಟ್ಟಿಯಿಂದ ಗೊತ್ತಾಗಿದೆ.
ಅದೇ ರೀತಿ ದ್ವಿತೀಯ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ಸರ್ಕಾರವು 1,252 ರು. ನಿಗದಿಪಡಿಸಿತ್ತು. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆ 49,000 ರು ವಸೂಲಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ಕ್ಯಾಪಿಟಲ್ ಫೀ ಎಂದು 14,494 ರು.ವಸೂಲು ಮಾಡಿದ್ದರೆ ದ್ವಿತೀಯ ಪಿಯುಸಿಗೆ 15,400 ರು. ವಸೂಲಿ ಮಾಡಿತ್ತು.
ಪ್ರಥಮ ಪಿಯುಸಿಯಲ್ಲಿ ಪಠ್ಯಪುಸ್ತಕಗಳಿಗೆ ಶುಲ್ಕ ವಸೂಲು ಮಾಡದ ಆಳ್ವಾಸ್ ಶಿಕ್ಷಣ ಸಂಸ್ಥೆಯು ದ್ವಿತೀಯ ಪಿಯುಸಿಗೆ 4,250 ರು. ವಸೂಲು ಮಾಡಿರುವುದು ತನಿಖಾ ತಂಡವು ನೀಡಿರುವ ವರದಿಯಿಂದ ತಿಳಿದು ಬಂದಿದೆ.
ಇಲಾಖೆ ಮಾರ್ಗಸೂಚಿಗಳ ಪ್ರಕಾರ ದ್ವಿತೀಯ ಪಿಯುಸಿಗೆ 1,252 ರು. ಒಟ್ಟಾರೆ ಶುಲ್ಕ ನಿಗದಿಪಡಿಸಿತ್ತು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ 49,000 ರು. ವಸೂಲಿ ಮಾಡಿದೆ. ಇಲಾಖೆಯು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ತಲಾ ವಿದ್ಯಾರ್ಥಿಯಿಂದ 47,748 ರು. ವಸೂಲು ಮಾಡಿರುವುದು ತನಿಖಾ ತಂಡವು ನೀಡಿರುವ ವರದಿಯಿಂದ ಗೊತ್ತಾಗಿದೆ.
ಹಾಗೆಯೇ ಇಲಾಖೆಯು ನಿಗದಿಪಡಿಸಿರುವ ಶುಲ್ಕದ ಜತೆಯಲ್ಲಿಯೇ ಹೆಚ್ಚುವರಿಯಾಗಿ 21,150 ರು. ಪಡೆದಿದೆ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ. ಇದರಲ್ಲಿ ಹೆಚ್ಚುವರಿಯಾಗಿ ಲೀವ್ ಕಾರ್ಡ್ ಕ್ಯಾಲೆಂಡರ್, ಐ ಡಿ ಕಾರ್ಡ್, ಕಾಲೇಜ್ ಮ್ಯಾಗಜೀನ್, ವೈದ್ಯಕೀಯ, ಸಮವಸ್ತ್ರ, ಕ್ಯಾಪಿಟಲ್, ಚಾರಿಟಬಲ್ ಟ್ರಸ್ಟ್, ಎನ್ ಫಂಡ್, ಪಠ್ಯಪುಸ್ತಕದ ಶುಲ್ಕವೂ ಸೇರಿದೆ.
‘ವೈದ್ಯಕೀಯ ಶುಲ್ಕ, ರಜಾ ದಾಖಲೆ, ಕ್ಯಾಲೆಂಡರ್ ಹಾಗೂ ಮ್ಯಾಗ್‌ಜಿನ್ ಶುಲ್ಕಗಳನ್ನು ವಸೂಲು ಮಾಡಲು ಮಾರ್ಗಸೂಚಿಗಳಲ್ಲಿ ಇರುವುದಿಲ್ಲ. ಆದರೆ ಇತರೆ ಶುಲ್ಕಗಳಡಿಯಲ್ಲಿ ಈ ಮೇಲಿನ ಶುಲ್ಕಗಳನ್ನು ಪಡೆದಿರುತ್ತಾರೆ, ‘ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ.
‘ಮೂಡಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಸ್ಟಡಿ ಮೆಟರೀಯಲ್ ಶುಲ್ಕವೆಂದು ಮೊತ್ತವನ್ನು ಪಡೆಯಲಾಗುತ್ತಿರುವುದನ್ನು ತನಿಖಾ ತಂಡವು ಗುರುತಿಸಿರುತ್ತದೆ. ಸ್ಟಡಿ ಮೆಟಿರಿಯಲ್ಸ್‌ಗಳಿಗಾಗಿ 4,500 ರು.ಗಳನ್ನು ಕಾಲೇಜಿನ ಆಡಳಿತ ಮಂಡಳಿಯವರು ಪಡೆದಿರುತ್ತಾರೆ. ಈ ರೀತಿಯಾಗಿ ಹೆಚ್ಚುವರಿಯಾಗಿ ಶುಲ್ಕವನ್ನು ಪಡೆದಿರುವುದು ಇಲಾಖಾ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವುದಿಲ್ಲ. ಆದರೂ ಸಹ ಆಡಳಿತ ಮಂಡಳಿಯವರು ಹೆಚ್ಚುವರಿ ಶುಲ್ಕವನ್ನು ಪಡೆದಿರುವ ಬಗ್ಗೆ ವರದಿ ಸಲ್ಲಿಸಿರುತ್ತಾರೆ,’ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.
ಅದೇ ರೀತಿ ಆಡಳಿತ ಮಂಡಳಿಯು ಕ್ಯಾಪಿಟೇಷನ್ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವುದನ್ನೂ ತನಿಖಾ ತಂಡವು ಪತ್ತೆ ಹಚ್ಚಿದೆ. ಸರ್ಕಾರದ ಆದೇಶದಲ್ಲಿ ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಂದ ಕ್ಯಾಪಿಟೇಷನ್ ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಕ್ಯಾಪಿಟೇಷನ್ ಶುಲ್ಕವನ್ನು ವಸೂಲಿ ಮಾಡಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್ ಸೇರಿದಂತೆ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಹೆಚ್ಚುವರಿ ಶುಲ್ಕ ಪಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾರ್ಗಸೂಚಿಗಳಿಲ್ಲ. ಆದರೆ ವಿದ್ಯಾರ್ಥಿಗಳ ಪಾಲಕರ ಒಪ್ಪಿಗೆ ಪಡೆದು ಹೆಚ್ಚುವರಿ ಶುಲ್ಕವನ್ನು ಪಡೆದಿದೆ ಎಂದು ತನಿಖಾ ತಂಡದ ತಪಾಸಣೆ ವರದಿಯಲ್ಲಿ ಉಲ್ಲೇಖಿಸಿದೆ.
‘ಹೊರರಾಜ್ಯದ ವಿದ್ಯಾರ್ಥಿಗಳು ಹಾಗೂ ಬೇರೆ ತಾಲೂಕು ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ತಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿದೆ. ಆದರೆ ಹಾಸ್ಟೆಲ್ ನಡೆಸಲು ಇಲಾಖೆಯಿಂದ ಯಾವುದೇ ಅನುಮತಿ ನೀಡಲು ಅವಕಾಶ ಕಲ್ಪಿಸಿಲ್ಲ ,’ ಎಂದೂ ತನಿಖಾ ತಂಡವು ತನ್ನ ವರದಿಯಲ್ಲಿ ಪ್ರಸ್ತಾವಿಸಿದೆ.
ಈ ವರದಿಯನ್ನಾಧರಿಸಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರವು ನಿರ್ದೇಶನ ನೀಡಿತ್ತು.
ಆಳ್ವಾಸ್ ಕಾಲೇಜಿನಿಂದ ಹೆಚ್ಚುವರಿ ಶುಲ್ಕ, ಮಾರ್ಗಸೂಚಿ ಉಲ್ಲಂಘನೆ; ಮಾನ್ಯತೆ ಹಿಂಪಡೆಯಲು ನಿರ್ದೇಶನ
ಮಾನ್ಯತೆ ರದ್ದುಗೊಳಿಸಬೇಕು ಎಂದು ಸರ್ಕಾರವು ನೀಡಿದ್ದ ನಿರ್ದೇಶನ ಇನ್ನೂ ಪಾಲನೆಯಾಗಿಲ್ಲ ಎಂದು ತಿಳಿದು ಬಂದಿದೆ.