ಯೋಜನಾ ರಹಿತ ನಗರೀಕರಣಕ್ಕೆ ಹಸಿರು, ಜಲಮೂಲ ನಾಶ; ಕೆರೆ ಅಭಿವೃದ್ಧಿಗಿಲ್ಲ ದೂರದೃಷ್ಟಿ

ಬೆಂಗಳೂರು: ಬೇಸಿಗೆಯ ಬೇಗೆ ಇನ್ನೂ ಉತ್ತುಂಗಕ್ಕೆ ಬರುವ ಒಂದು ತಿಂಗಳ ಮೊದಲೇ ಭಾರತದ ಐಟಿ ರಾಜಧಾನಿ ಬೆಂಗಳೂರು ನಗರವು ನೀರಿನ ಬರದಿಂದ ತಲ್ಲಣಿಸಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಈ ನಡುವೆ ಸಾಮಾನ್ಯ ಜನ ನೀರು ಸರಬರಾಜು ಟ್ಯಾಂಕರ್‌ಗಳ ದುಬಾರಿ ದರಗಳಿಗೆ ತತ್ತರಿಸಿದ್ದಾರೆ.

 

ನೀರು ಟ್ಯಾಂಕರ್‌ಗಳ ವಿರುದ್ಧ ಸರ್ಕಾರ ದರ ನಿಯಂತ್ರಿಸಿ ಆದೇಶವನ್ನು ಹೊರಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಟ್ಟಾರೆ ನಗರದ ಅರ್ಧದಷ್ಟು ನೀರಿನ ಪೂರೈಕೆ ಅಂತರಜಲದಿಂದ ಪೂರೈಕೆಯಾಗುತ್ತಿದೆ. ನಗರಕ್ಕೆ ದಿನವೊಂದಕ್ಕೆ 500 ದಶಲಕ್ಷ ಲೀಟರ್ ನೀರಿನ ಅಗತ್ಯವಿದೆ. ಈ ಕುರಿತು ಇಂಡಿಯಾ ಸ್ಪೆಂಡ್‌ ವಿಸ್ತೃತವಾಗಿ ವರದಿ ಪ್ರಕಟಿಸಿದೆ.

 

ಈ ಹಿಂದೆ ಬೆಂಗಳೂರು ಕೆರೆಗಳು ಮತ್ತು ರಾಜಕಾಲುವೆಗಳಿಂದ ತುಂಬಿತ್ತು. ಇದರಿಂದ ನೀರು ಯಥೇಚ್ಚವಾಗಿ ಸಿಗುತ್ತಿತ್ತು ಮತ್ತು ಅಂತರ್ಜಲ ರಕ್ಷಿಸುತ್ತಿತ್ತು. ಆದರೆ ಕಳೆದ ಐದು ದಶಕಗಳಲ್ಲಿ ಅಂದರೆ 1973ರಿಂದ ನಗರ ಶೇ.88ರಷ್ಟು ಹಸಿರು ಮತ್ತು ಜಲಮೂಲಗಳನ್ನು ಕಳೆದುಕೊಂಡಿವೆ ಎಂದು ಐಐಎಸ್ಸಿಯ ಪರಿಸರ ಎಂಜಿನಿಯರ್ ಟಿ.ವಿ.ರಾಮಚಂದ್ರ ಹೇಳಿದ್ದಾರೆ.

 

ಕಳೆದ ಐದು ದಶಕಗಳಲ್ಲಿ ಬೆಂಗಳೂರಿನ ಅರಣ್ಯ ವ್ಯಾಪ್ತಿ ಶೇ.28ರಿಂದ ಶೇ.1ಕ್ಕೆ ಕುಸಿದೆ ಎಂದು ಅವರ ಸಂಶೋಧನಾ ತಂಡದ ಅಧ್ಯಯನ ಮತ್ತು ವಿಶ್ಲೇಷಣೆ ಹೇಳಿದೆ. ಇದೇ ಸಂದರ್ಭದಲ್ಲಿ ನಗರೀಕರಣ ಪ್ರಮಾಣ ಶೇ.8ರಿಂದ 87ಕ್ಕೆ ಏರಿಕೆ ಕಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅಂತರ್ಜಲವನ್ನು ಹೆಚ್ಚಿಸುತ್ತಿದ್ದ ಹಸರೀಕರಣ ಮತ್ತು ಜಲಮೂಲಗಳನ್ನು ಆಪೋಷಣ ತೆಗೆದುಕೊಂಡ ಸಿಮೆಂಟ್ ನೆಲಹಾಸುಗಳ ಕಾರಣದಿಂದಾಗಿ ಅಂತರ್ಜಲ ಬತ್ತಿದೆ. ಜೊತೆಗೆ ಅಪಾರ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಈ ಅಂತರ್ಜಲ ಅಪಾರ ಪ್ರಮಾಣದಲ್ಲಿ ಕುಸಿಯಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

 

ಬೆಂಗಳೂರು ಕಳೆದ ತಿಂಗಳಿನಿಂದ ತೀವ್ರತರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಬೆಂಗಳೂರು ಸಮುದ್ರ ಮಟ್ಟದಿಂದ 900 ದಶಲಕ್ಷ ಮೀಟರ್ ಎತ್ತರದಲ್ಲಿದ್ದು ಯೋಜನಾ ರಹಿತ ನಗರೀಕರಣ ಬೆಂಗಳೂರನ್ನು ಇಂತಹ ಪರಿಸ್ಥಿತಿಗೆ ದೂಡಿದೆ ಎನ್ನುತ್ತಾರೆ.

 

ನಗರದ ಕಾಂಕ್ರೀಟ್ ಲ್ಯಾಂಡ್‌ಸ್ಕೇಪ್ 1055ರಷ್ಟು ಏರಿಕೆ ಕಂಡಿದ್ದು ಶೇ.88ರಷ್ಟು ಹಸಿರು ನಾಶವಾಗಿದೆ. ಜೊತೆಗೆ ಕಳೆದ ಐದು ದಶಗಳಲ್ಲಿ ಶೇ.79ರಷ್ಟು ಜಲಮೂಲಗಳನ್ನು ಬೆಂಗಳೂರು ಕಳೆದುಕೊಂಡಿದೆ. ಉತ್ತಮ ಆಡಳಿತದ ಕೊರತೆ, ದೂರದೃಷ್ಟಿ ಕೊರತೆಯ ಆಡಳಿತದಿಂದಾಗಿ ಹೀಗಾಗಿದೆ. ಜೊತೆಗೆ ಹಲವಾರು ಭ್ರಷ್ಟ ಸಂಸ್ಥೆಗಳು ಇದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

 

ಅಂದಾಜಿನ ಪ್ರಕಾರ ನಗರದ ಪ್ರಸ್ತುತ ನಗರದ ನೀರಿನ ಶೇ.45ರಷ್ಟು ಅಂತರ್ಜಲದಿಂದ ಪೂರೈಕೆಯಾಗುತ್ತಿದೆ. ಬೆಂಗಳೂರಿನ ಸದ್ಯದ ವಿಸ್ತೀರ್ಣ 740 ಚದರ ಕಿ.ಮೀ ಇದ್ದು 193 ವಾಟರ್ ಬಾಡಿಗಳಿವೆ. 1800ರಲ್ಲಿ 1452 ವಾಟರ್ ಬಾಡಿಗಳಿದ್ದವು. ಕೆರೆಗಳು ಒಂದಕ್ಕೊಂದು ಜೋಡನೆಗೊಂಡಿದ್ದವು.

 

ಅಂದು ಶೇ.80ಕ್ಕಿಂತಲೂ ಹೆಚ್ಚು ಹಸಿರು ಹೊದ್ದು ಹಾಸಿತ್ತು. ಆಗ ನಗರದ ವಾತಾವರಣ ಬೇಸಿಗೆ ಮತ್ತು ಮೇ ತಿಂಗಳಲ್ಲಿ 14ರಿಂದ 16 ಡಿಗ್ರಿ ಸೆಲ್ಸಿಯಷ್ ಇತ್ತು. ಕೆಲವೊಮ್ಮೆ ಡಿಸೆಂಬರ್‌ನಲ್ಲಿ ತಾಪಮಾನ ಶೂನ್ಯಕ್ಕೂ ಇಳಿದಿರುವ ಉದಾಹರಣೆಗಳಿವೆ. ಆ ಕಾಲದಲ್ಲಿ ಅರಮನೆ ಆವರಣದಲ್ಲಿ ಸೇಬುಗಳನ್ನು ಬೆಳೆಯುತ್ತಿದ್ದರು ಎಂತಲೂ ಹೇಳಲಾಗಿದೆ. ಈಗ ನಗರೀಕರಣದಿಂದಾಗಿ ಬೆಂಗಳೂರು ಬದುಕಲು ಯೋಗ್ಯವಿಲ್ಲದಂತ ನಗರವಾಗಿದೆ. ಆಮ್ಲಜನಕ ಮತ್ತು ನೀರಿನ ಕೊರತೆ ಎದುರಿಸುತ್ತಿದೆ ಎಂದು ವರದಿಯು ವಿವರಿಸಿದೆ.

 

ಸದ್ಯ ನಗರದಲ್ಲಿ 1372 ಎಂಎಲ್‌ಡಿ ಅಂತರ ಜಲವನ್ನು ಬಳಕೆ ಮಾಡಲಾಗುತ್ತಿದೆ. ಅಂತರ ಜಲ ನಗರದ ಅರ್ಧದಷ್ಟು ನೀರಿನ ಅಗತ್ಯತೆಯನ್ನು ಪೂರೈಸುತ್ತಿದೆ. ಉಳಿದ ನೀರಿನ ಅಗತ್ಯತೆಯನ್ನು ಕಾವೇರಿ ನೀರು ಪೂರೈಸುತ್ತಿದೆ. ಕಾವೇರಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲು ದಿನವೊಂದಕ್ಕೆ 3 ಕೋಟಿ ರೂ. ವೆಚ್ಚವಾಗುತ್ತಿದೆ.

 

ನಗರದಲ್ಲಿ ಶೇ.85ರಷ್ಟು ನೆಲ ಹಾಸುಗಳನ್ನು ಸಿಮೆಂಟ್ ಸ್ಲ್ಯಾಬ್‌ಗಳ  ಮೂಲಕ ತುಂಬಿರುವುದರಿಂದ ಮತ್ತು ಜೀವ ಜಲವಾಗಿದ್ದ ಜಲಮೂಲಗಳು ನಾಶವಾಗಿರುವುದರಿಂದ ಅಂತರ ಜಲ ತೀವ್ರವಾಗಿ ಕುಸಿಯತ್ತಿದೆ. ಅಂತರ ಜಲವನ್ನು ಮರುಪೂರಣ ಮಾಡಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಅಂತರ್ಜಲ ಮರುಪೂರಣ ಮಾಡಲು ಆಕ್ವಿಫರ‍್ಸ್ ಮ್ಯಾಪ್ ಮಾಡಬೇಕಾಗಿದೆ.

 

ಅಂತರ್ಜಲ ಕಾಲುವೆ ಜಾಲವನ್ನು ನಿರ್ಮಾಣ ಮಾಡಬೇಕು. ಮುಂದಿನ ಯೋಜನೆಯನ್ನು ರೂಪಿಸುವ ಮುನ್ನ ಅಂತರ ಜಲ ಸಾಗಿರುವ ಸಾಮರ್ಥ್ಯವನ್ನು ಲೆಕ್ಕ ಹಾಕಬೇಕು. ಲ್ಯಾಂಡ್‌ಸ್ಕೇಪ್‌ಗಳನ್ನು ಮಾಡುವಾಗ ಕನಿಷ್ಠ ಶೇ.33ರಷ್ಟು ಹಸಿರು ಇರಲೇಬೇಕು. ನಿಗದಿತ ಅವಧಿಯೊಳಗೆ ಕರೆಗಳ ಹೂಳು ತೆಗೆಯಬೇಕು ಮತ್ತು ಪುನರುಜ್ಜೀವನಗೊಳಿಸಬೇಕು ಎಂದು ಇಂಡಿಯಾ ಸ್ಪೆಂಡ್‌ ವರದಿಯಲ್ಲಿ ವಿವರಿಸಲಾಗಿದೆ.

 

ಕೆರೆಗಳು ಜೀವಂತವಾಗಿದ್ದಾಗಿನ ಅಧ್ಯಯನವೊಂದರ ಪ್ರಕಾರ ಬೆಂಗಳೂರಿನಲ್ಲಿ ಅಂತರ್ಜಲ  100 ಅಡಿಗಳಲ್ಲಿ ಸಿಗುತ್ತಿತ್ತು. ನಂತರ ಆರು ವರ್ಷಗಳಲ್ಲಿ ಅದು 600 ಅಡಿಗಳಿಗೆ ಕುಸಿಯಿತು. ಈಗ ಅಂದರೆ 23 ವರ್ಷಗಳ ನಂತರ 1800 ಅಡಿಗೆ ಕುಸಿದಿದೆ. ಕೆಲವೊಮ್ಮೆ ಇಷ್ಟು ಅಡಿಗಳಲ್ಲಿಯೂ ನೀರು ಸಿಗುವುದು ಅನುಮಾನವಾಗಿದೆ.

 

ನಗರದ ಸಾರಕ್ಕಿ ಕೆರೆಯನ್ನು ಮೂರು ವರ್ಷಗಳ ಹಿಂದೆ ಪುನರುಜ್ಜೀವನಗೊಳಿಸಲಾಯಿತು. ಇದರಿಂದ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ ಜಲ ಮಟ್ಟ 300 ಅಡಿಗಳಿಗೆ ಹೆಚ್ಚಿದೆ. ನಗರದಲ್ಲಿರುವ ಎಲ್ಲ ಕೆರೆಗಳನ್ನು ಪುನರುಜ್ಜೀವನಗೊಳಿಸಿದಲ್ಲಿ ಅಂತರ ಜಲ ಹೆಚ್ಚಲಿದ್ದು ನಗರದಲ್ಲಿ ಹಿತಕರ ಹವಾಮಾನ ಇರಲಿದೆ.

 

ಬೆಂಗಳೂರು ಕೆರೆಗಳ ಮಾಹಿತಿ ವ್ಯವಸ್ಥೆ (ಬಿಎಲ್‌ಐಎಸ್) ಪ್ರಕಾರ ಬೆಂಗಳೂರಿನಲ್ಲಿ ಕೆರೆಗಳನ್ನು ಪುನರುಜ್ಜೀವನಗೊಳಿಸಿರುವುದರಿಂದ ಪರಿಸರಕ್ಕೆ ವಾರ್ಷಿಕ 365 ಕೋಟಿ ಲಾಭವಾಗಲಿದೆ. ಕೆರೆಗಳು ಕೇವಲ ಅಂತರ್ಜಲವನ್ನು ಹೆಚ್ಚಿಸುವುದು ಮಾತ್ರವಲ್ಲ ಮೀನುಗಾರಿಕೆ, ಇಂಧನ, ಮೇವು, ಬೇಸಾಯಕ್ಕಾಗಿ ನೀರು, ಬಟ್ಟೆ ತೊಳೆಯುವುದು ಸೇರಿದಂತೆ ಹಲವು ರೂಪದಲ್ಲಿ ಉಪಯೋಗವಾಗಲಿದೆ.

 

picture credit;indiaspend

ರಾಚೇನಹಳ್ಳಿ ಮತ್ತು ಜಕ್ಕೂರು ಕೆರೆಗಳನ್ನು ಅಧ್ಯಯನ ಮಾಡಿದಾಗ ಈ ಕೆರೆಗಳು ಪ್ರತಿದಿನ ಪರಿಸರಕ್ಕೆ ಹೆಕ್ಟೇರ್‌ಗೆ ರೂ.10,500 ಕೊಡುಗೆ ನೀಡಲಿವೆ. ಅದೇರೀತಿ ವಿಪರೀತ ಮಾಲಿನ್ಯದಿಂದ ಕೂಡಿರುವ ಅಮೃತಹಳ್ಳಿ ಕೆರೆಯಿಂದ ಹೆಕ್ಟೇರ್‌ಗೆ ರೂ.20 ಮಾತ್ರ ಕೊಡುಗೆ ನೀಡಲಿದೆ.

 

ಐತಿಹಾಸಿಕವಾಗಿ ನಗರದ ನೀರಿನ ವ್ಯವಸ್ಥೆಯನ್ನು ಕೆರೆಗಳು, ಬಾವಿಗಳು ನೀತಿನಿಂದ ನಿರ್ಮಿಸಲಾಗಿತ್ತು. ನೀರಿನ ಕೊಳವೆ ವ್ಯವಸ್ಥೆ ಬಂದ ನಂತರ ಮೇಲಿನ ವ್ಯವಸ್ಥೆಗಳು ನಾಶವಾದವು. ಬೆಂಗಳೂರಿನ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಬಿಬಿಎಂಪಿ, ಭಾರತೀಯ ಸೇನೆ, ಜಿಲ್ಲಾ ಪಂಚಾಯತ್ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯವಾಗಿವೆ.

 

ವಸಾಹತುಶಾಹಿ ಆಡಳಿತಗಾರರು ಉದ್ದೇಶಪೂರ್ವಕವಾಗಿಯೇ ಕುಡಿಯುವ ನೀರನ್ನು ಕೊಳವೆಯಲ್ಲಿ ಸರಬರಾಜು ಮಾಡುವ ಮೂಲಕ ಕೇಂದ್ರೀಕೃತವಲ್ಲದ ನೀರಿನ ಕೊಯ್ಲನ್ನು ಕೇಂದ್ರೀಕೃತಗೊಳಿಸಿದರು. ಅದು ಅವರಿಗೆ ಲಾಭ ತಂದಿತು. ದುರದೃಷ್ಟ ಎಂದರೆ ಸ್ವತಂತ್ರ ನಂತರವೂ ಭಾರತದ ಅಧಿಕಾರಶಾಹಿಯಲ್ಲಿ ಅದೇ ಮನೋಭಾವ ಇದೆ.

 

ಕರ್ನಾಟಕ ಕೆರೆ ಅಭಿವೃದ್ಧಿ ರಕ್ಷಣಾ ಕಾಯ್ದೆಯನ್ನು ಪುನರುಜ್ಜೀವನಗೊಳಿಸಬೇಕು. ಕೆರೆಗಳನ್ನು ದೂರದೃಷ್ಟಿ ಇಟ್ಟುಕೊಂಡು ಬೆಳೆಯುವ ಸ್ವತಂತ್ರ ಸಂಸ್ಥೆಗೆ ಜವಾಬ್ದಾರಿ ಕೊಡಬೇಕು.

 

ಕೆರೆಗಳನ್ನು ಕರ್ನಾಟಕ ಕೆರೆ ರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಟಿಸಿಡಿಎ)ಗೆ ವಹಿಸಬೇಕು. ಇಲ್ಲಿನ ದೊಡ್ಡ ಪ್ರಮಾದ ಎಂದರೆ ಸಣ್ಣ ನೀರಾವರಿ ಇಲಾಖೆ ಸಿವಿಲ್ ಎಂಜಿನಿಯರುಗಳಿಂದ ತುಂಬಿದ್ದು ಕೆರೆಗಳನ್ನು ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

 

ನಗರದಲ್ಲಿ ವಾರ್ಷಿಕ 700-850 ಎಂಎಂಮಳೆ ಬೀಳಲಿದೆ. ಅಂದರೆ ೧೫ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ (ಟಿಎಂಸಿ) ಮಳೆಯಾಗಲಿದೆ. ಅಂದರೆ ನಾವು ನಮ್ಮ ಮಳೆ ಅಗತ್ಯತೆಯ ಶೇ.70ರಷ್ಟನ್ನು ಮಳೆ ನೀರಿನಿಂದಲೇ ಪೂರೈಸಿಕೊಳ್ಳಬಹುದಾಗಿದೆ.

 

ಮಳೆಕೊಯ್ಲು ಪದ್ಧತಿ ಅತ್ಯುತ್ತಮವಾಗಿದ್ದು ಶೇ.70ರಷ್ಟು ನೀರಿನ ಬೇಡಿಕೆಯನ್ನು ಪೂರೈಸಲಿದೆ. ಸ್ಥಳೀಯ ಸಂಸ್ಥೆಗಳು ಮತ್ತು ಜಲ ಸೇವಕರು, ಸಾರ್ವಜನಿಕರು ಇದನ್ನು ನಿರ್ವಹಿಸಬೇಕಾಗಿದೆ. ಆದರೆ ಪರಿಸರ ಕುರಿತ ಅರಿವು ಕಡಿಮೆ ಇರುವುದು ಪ್ರಮುಖ ಅಡ್ಡಿಯಾಗಿದೆ. ಇದರಿಂದ ಇರುವ ಒಂದೇ ದಾರಿ ಎಂದರೆ ನಗರವನ್ನು ಒತ್ತಡದಿಂದ ಮುಕ್ತಗೊಳಿಸುವುದು. ಮತ್ತು ಇನ್ನಷ್ಟು ಬೆಳೆಯುವುದನ್ನು ತಡೆಯುವುದು.

 

ನಗರದ ಕುರಿತು ಪರಿಣಿತಿ ಹೊಂದಿರುವವರ ಸಂಶೋಧನಾ ಸಂಸ್ಥೆಯೊಂದನ್ನು ಸರ್ಕಾರ ಸ್ಥಾಪಿಸಬೇಕು. ಆಕ್ವಿಫೆರ್ ಮ್ಯಾಪಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ (ಎನ್‌ಎಕ್ಯೂಯುಐಎಂ) ಸಂಸ್ಥೆಯನ್ನು ಸ್ಥಾಪಿಸಬೇಕು. ಈ ಸಂಸ್ಥೆ ಗುರಿಯಾಗಿರಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನು ವ್ಯಾಪಿಸಬೇಕು.

 

ಈಗಿನ ರಾಜಕಾರಣಿಗಳ ಉದ್ದಟತನ ಮತ್ತು ದೂರದೃಷ್ಟಿ ಇಲ್ಲದ ನಿರ್ಧಾರಗಳು ಸುಸ್ಥಿರ ಯೋಜನೆಗಳನ್ನು ರೂಪಿಸುವಲ್ಲಿ ಅಡ್ಡಗಳಾಗಿವೆ. ನಗರ ಅಡ್ಡಾದಿಡ್ಡಿಯಾಗಿ ಬೆಳೆಯುವಲ್ಲಿ ಆಡಳಿತಶಾಹಿ ಸಹ ಪ್ರಮುಖ ಕಾರಣವಾಗಿದೆ. ಉದಾಹರಣೆಗೆ ವ್ಯರ್ಥ ನೀರನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಕ್ಕೆ ಬಿಡಬ್ಲೂö್ಯಎಸ್‌ಎಸ್‌ಬಿಯನ್ನು ಹೊಣೆಗಾರನನ್ನಾಗಿ ಮಾಡಬೇಕು. ಕೆರೆಗಳನ್ನು ಮಲಿನಗೊಳಿಸಲು, ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆಗೂ ಅವರನ್ನೇ ಜವಾಬ್ದಾರರನ್ನಾಗಿ ಮಾಡಬೇಕು.

SUPPORT THE FILE

Latest News

Related Posts