‘ನಿನಗೆಷ್ಟೋ ಧೈರ್ಯ, ಜೀವಂತ ಸುಡಿಸುತ್ತೇನೆ’; ಹಲ್ಲೆ ನಡೆಸಿದ್ದ ಕೆಎಸ್‌ಆರ್‍‌ಟಿಸಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‍‌

ಬೆಂಗಳೂರು; ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ರಾಯಸಂದ್ರ ರವಿಕುಮಾರ್‍‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗುಬ್ಬಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರ ವಿರುದ್ದ ಎಫ್‌ಐಆರ್‍‌ ದಾಖಲಾಗಿದೆ.

 

ರಾಯಸಂದ್ರ ರವಿಕುಮಾರ್‍‌ ಅವರ ಮೇಲೆ ಶಾಸಕ ಹಾಗೂ ಕೆಎಸ್‌ಆರ್‍‌ಟಿಸಿ ಅಧ್ಯಕ್ಷ   ಶ್ರೀನಿವಾಸ್‌ ಮತ್ತು ಅವರ ಸಂಗಡಿಗರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಸಹ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಘಟನೆ ನಡೆದು 2 ದಿವಸದ ನಂತರ ಎಫ್‌ಐಆರ್‍‌ ದಾಖಲಿಸಿರುವುದು ಗೊತ್ತಾಗಿದೆ.

 

ಶಾಸಕ ಶ್ರೀನಿವಾಸ್‌ ಅವರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್‍‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಮತ್ತು ಹಲ್ಲೆ, ಕೊಲೆ, ಅತ್ಯಾಚಾರ ಪ್ರಕರಣಗಳಂತಹ ಅಪರಾಧಗಳ ಸಂಖ್ಯೆಯೂ ಹೆಚ್ಚಿವೆ ಎಂದು ಸದನದಲ್ಲಿ ಪ್ರತಿಪಕ್ಷಗಳು ಆರೋಪಿಸಿದ್ದವು. ಇದರ ಬೆನ್ನಲ್ಲೇ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆಯೇ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ಮತ್ತವರ ಗುಂಪೊಂದು ಹಲ್ಲೆ ನಡೆಸಿರುವುದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹಳಿ ತಪ್ಪಿದೆ ಎಂಬ ಆರೋಪಕ್ಕೆ ಮತ್ತೊಂದು ಸಾಕ್ಷ್ಯ ಲಭಿಸಿದಂತಾಗಿದೆ.

 

ವಿಶೇಷವೆಂದರೇ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರ ಸ್ವಕ್ಷೇತ್ರದಲ್ಲಿಯೇ ಈ ಹಲ್ಲೆ ನಡೆದಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

 

ಎಫ್‌ಐಆರ್‍‌ನಲ್ಲೇನಿದೆ?

 

ರಸ್ತೆ, ಚರಂಡಿ ಮತ್ತಿತರ ನಾಗರಿಕ ಮೂಲಭೂತ ಸೌಲಭ್ಯಗಳ ಕಾಮಗಾರಿ ನಡೆಸುವ ಸಂಬಂಧ ಪಂಚಾಯತ್‌ರಾಜ್‌ ಇಲಾಖೆಯು ಕರೆದಿದ್ದ ಟೆಂಡರ್‍‌ನಲ್ಲಿ ಪ್ರಥಮದರ್ಜೆ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‍‌ ಅವರು ಕಡಿಮೆ ದರ ನಮೂದಿಸಿದ್ದರಿಂದಾಗಿ ಸಿವಿಲ್‌ ಕಾಮಗಾರಿಯ ಗುತ್ತಿಗೆ ದೊರೆತಿತ್ತು.

 

ಈ ಸಂಬಂಧ ಕಾರ್ಯಪಾಲಕ ಇಂಜಿನಿಯರ್‍‌ ಅವರು 2024ರ ಫೆ.21ರಂದು ಅಂಚೆ ಮೂಲಕ ರವಿಕುಮಾರ್‍‌ ಅವರಿಗೆ ಗುತ್ತಿಗೆಯ ಸಮ್ಮತಿ ದಾಖಲೆಗಳನ್ನು ರವಾನಿಸಿದ್ದರು. 2024ರ ಫೆ.27ರಿಂದ ಈ ಗುತ್ತಿಗೆ ಸಮ್ಮತಿ ಪತ್ರವು ಜಾರಿಯಾಗಿತ್ತು.

 

ಗುತ್ತಿಗೆ ಸಮ್ಮತಿ ಪತ್ರ ಕೈ ಸೇರಿದ ನಂತರ ರವಿಕುಮಾರ್‍‌ ಅವರು 2024ರ ಮಾರ್ಚ್‌ 14ರಂದು ಮಧ್ಯಾಹ್ನ ಕುಣಿಗಲ್‌ ಮುಖ್ಯ ರಸ್ತೆಯಲ್ಲಿರುವ ಕೆ ಲಕ್ಕಪ್ಪ ವೃತ್ತದ ಬಳಿ ಇರುವ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ಭೇಟಿ ನೀಡಿದ್ದರು. ಗುತ್ತಿಗೆ ಕರಾರನ್ನು ಮಾಡಿಕೊಳ್ಳುವ ಸಂಬಂಧ ಸಹಾಯಕ ಇಂಜಿನಿಯರ್‍‌ ಲಿಂಗರಾಜು ಅವರು ತಕರಾರು ತೆಗೆದಿದ್ದರು.

 

ಈ ಕುರಿತು ಅಧಿಕಾರಿಗಳಿಗೆ ರವಿಕುಮಾರ್‍‌ ಅವರು ಚರ್ಚಿಸಿದ್ದರು. ಆದರೆ ಕಡೇ ಗಳಿಗೆಯಲ್ಲಿ ಈ ಕಾಮಗಾರಿಯು ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದು ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿ ಕೂಡಿದೆ ಎಂದು ರವಿಕುಮಾರ್‍‌ ಅವರು ಸ್ಥಳದಲ್ಲಿಯೇ ಆರೋಪಿಸಿದ್ದರು. ಅಲ್ಲದೇ ಅನಿರ್ದಿಷ್ಟಾವಧಿಯ ಪ್ರತಿಭಟನೆಯನ್ನೂ ನಡೆಸಿದ್ದರು.

 

ಇದೇ ಹೊತ್ತಿನಲ್ಲಿ ಗುಬ್ಬಿ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಮತ್ತು ಅವರ 10 ಮಂದಿ ಬೆಂಬಲಿಗರು ಏಕಾಏಕೀ ಧರಣಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.

 

‘ಮಾನಸಿಕ ಸ್ಥಿಮಿತ ಕಳೆದುಕೊಂಡ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಅವರು ಯಾವನೋ ಅವನು ರಾಯಸಂದ್ರ ರವಿ ಎಂದು ಕಿರುಚಾಡಿ ನನ್ನ ಕ್ಷೇತ್ರದಲ್ಲಿ ನನ್ನ ಅನುಮತಿ ಇಲ್ಲದೇ ಕಾಮಗಾರಿ ಮಂಜೂರು ಮಾಡಿಸಿಕೊಳ್ಳಲು ಎಷ್ಟು ಧೈರ್ಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನಗೆ ತಾಕತ್ತಿದ್ದರೆ ಕೆಲಸ ಮಾಡು ನಿನ್ನೊಂದಿಗೆ ನಿನ್ನ ಕೆಲಸ ಮಾಡಿಸುವ ಯಂತ್ರೋಪಕರಣದೊಂದಿಗೆ ಜೀವಂತ ಸುಡಿಸುತ್ತೇನೆ ಎಂದು ಕೂಗಾಡಿದರು,’ ಎಂದು ರವಿಕುಮಾರ್‍‌ ಅವರು ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾರೆ.

 

ಹಲ್ಲೆಗೊಳಗಾಗಿರುವ ರಾಯಸಂದ್ರ ರವಿಕುಮಾರ್‍‌

 

ಈ ವೇಳೆ ‘ನನ್ನ ಮೇಲೆ ಏಕಾಏಕೀ ಕೈಗಳಿಂದ ಮನಸೋ ಇಚ್ಛೆ ಗುದ್ದಿ ಜೋರಾಗಿ ಹಿಮ್ಮುಖನಾಗಿ ಬೀಳುವಂತೆ ತಳ್ಳಿದಾಗ ಕತ್ತಿನ ಹಿಂಭಾಗ ಹಾಗೂ ಬೆನ್ನಿನ ಮೇಲೆ ರಕ್ತ ಹೆಪ್ಪುಗಟ್ಟಿದ ಗಾಯಗಳಾದವು. ನಂತರ ಅವರ ಜೊತೆ ಬಂದಿದ್ದವರು ಸಹ ಕೈ ಕಾಲುಗಳಿಂದ ತುಳಿದು ಕಾಲಿನಿಂದ ಒದ್ದರು. ದೇಹದ ಹಲವಾರು ಕಡೆ ಮೂಗೇಟು ಗಾಯಗಳನ್ನು ಮಾಡಿದರು. ನಂತರ ನನ್ನನ್ನು ಎತ್ತಿ ಕಾರಿಗೆ ಎತ್ತಿ ಹಾಕಿಕೊಳ್ಳಿರೋ ಎಲ್ಲಿಯಾದರೂ ತೆಗೆದುಕೊಂಡು ಹೋಗಿ ಸಾಯಿಸಿ ಬಿಡೋಣ ಎಂದು ಕೊಲೆ ಮಾಡುವ ಉದ್ದೇಶದಿಂದ ಧರಣಿ ನಡೆಯುತ್ತಿದ್ದ ಸ್ಥಳದಿಂದ ಎಳೆದುಕೊಂಡು ಹೋಗಿದ್ದರು,’ ಎಂದು ರವಿಕುಮಾರ್‍‌ ಅವರು ಘಟನೆಯನ್ನು ಮತ್ತಷ್ಟು ವಿವರಿಸಿರುವುದ ಗೊತ್ತಾಗಿದೆ.

 

ಈ ಸಂಬಂಧ ರವಿಕುಮಾರ್‍‌ ಅವರು ನೀಡಿದ್ದ ದೂರಿನ ಮೇರೆಗೆ 48 ಗಂಟೆಗಳ ನಂತರ ಗುಬ್ಬಿ ಶಾಸಕ ಎಸ್‌ ಆರ್‍‌ ಶ್ರೀನಿವಾಸ್‌ ಮತ್ತು ಅವರ ಸಂಗಡಿಗರ ವಿರುದ್ಧ ಐಪಿಸಿ ಸೆಕ್ಷನ್‌ 1860, 511, 506, 504, 143, 149, 323, 363 ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

Your generous support will help us remain independent and work without fear.

Latest News

Related Posts